ಶಾಸ್ತ್ರೀಯ ಭಾಷೆ: ಕನ್ನಡದ ಮುಂದಿರುವ ಸವಾಲು
ಕನ್ನಡಕ್ಕೆ ಶಾಸ್ತ್ರೀಯ(ಅಭಿಜಾತ) ಭಾಷೆಯ ಸ್ಥಾನ ಸಿಕ್ಕಿರುವುದು ಸಂತೋಷದ ಮತ್ತು ಸಂಕಟದ ವಿಷಯ. ಸಂತೋಷ ಏಕೆಂದರೆ ಕನ್ನಡದ ಹಿರಿಮೆ. ಹಳಮೆ, ಉತ್ಕ್ರುಷ್ಟತೆಗಳನ್ನು ಭಾರತ ಸರಕಾರವು ಕೊನೆಗೂ ಗುರುತಿಸಿರುವುದು ಸಂಕಟದ ವಿಷಯವೇಕೆಂದರೆ ಕಾನೂನಿನ ನೆವ ಓದಿ ಶಾಸ್ತ್ರೀಯ ಸ್ಥಾನವನ್ನು ತಡೆಗತ್ತಿರುವುದು. ಈ ಸಂದಿಗ್ದ ಪರಿಸ್ಥಿಯಲ್ಲಿ ಈಗ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಹೋರಾಡಿದ ವಿದ್ವಾಂಸರ ಮತ್ತು ಕರ್ನಾಟಕ ಸರಕಾರದ ಕೈಗೆ ಸಕ್ಕೆ ಕಡ್ಡಿಯನ್ನು ಚೀಪಲು ಕೊಟ್ಟಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ.
ಒಂದು ಸಂಗತಿಯನ್ನು ನಾನಿಲ್ಲಿ ಸ್ಪಷ್ಟಪಡಿಸಬೇಕು, ಶಾಸ್ತ್ರೀಯ ಭಾಷೆ ಎಂದರೆ ಸಾಹಿತ್ಯ, ಅದರಲ್ಲೂ ಹಳೆಗನ್ನಡ ಸಾಹಿತ್ಯ ಎಂಬ ಸಾಮಾನ್ಯ ನಂಬಿಕೆಯೊಂದು ನಮ್ಮ ವಿದ್ವಾಂಸರಲ್ಲಿ ಮನೆಮಾಡಿದಂತೆ ತೋರುತ್ತಿದೆ. ಇನ್ನೊಂದಿಷ್ಟು ಹಿದಕ್ಕೆ ಹೋಗಿ ಶಾಸನಗಳ ಮೂಲಕ ನಮ್ಮ ಭಾಷೆಯ ಹಳಮೆಯನ್ನು ಗುರುತಿಸಿಯಾರು. ಆದರೆ ಇಷ್ಟಕ್ಕೆ ನಮ್ಮ ಚಿಂತನೆ ನಿಂತುಬಿಡಬಾರದು. ನಮ್ಮ ಚಿಂತನೆಯನ್ನು ಇನ್ನೂ ವಿಸ್ತಾರಕ್ಕೆ ಕೊಂಡೊಯ್ಯುವ ಮತ್ತು ಆ ಮೂಲಕ ಕನ್ನಡ ಸಂಸ್ಕೃತಿಯನ್ನು ಸಂಪೂರ್ಣವಾಗಿ ಪುನರ್ ರಚಿಸುವ ಕೆಲಸವಾಗಬೇಕಾಗಿದೆ. ಇದಕ್ಕಾಗಿ ನಮ್ಮ ಸಂಶೋಧನಾ ನೆಲೆಗಳು ಬೆರೆಯಬೇಕಾಗಿದೆ.
ಹೊಸ ಚಾರಿತ್ರಿಕತೆಯ ಹಿನ್ನೆಲೆಯಲ್ಲಿ ಕನ್ನಡದ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಪರಿಕಲ್ಪನೆಗಳು ಪುನರ್ ಸ್ಥಾಪಿಸಬೇಕಾಗಿದೆ. ಪ್ರಮುಖವಾಗಿ ಭೂತವನ್ನು ವರ್ತಮಾನದ ಜೀವನ ಕ್ರಮಕ್ಕೆ ಲೋಕದೃಷ್ಟಿಗೆ ಅನ್ವಯವಾಗುವಂತೆ ನಾವು ಸಂಶೋಧನೆ ಕೈಗೊಳ್ಳದಿದ್ದರೆ ಹಲಮೆಯ ಗರಿಮೆಗೆ ಯಾವ ಬೆಲೆಯೂ ಇರುವುದಿಲ್ಲ. ಇವೆರಡು ದೃಷ್ಟಿಕೋನಗಳು ಸೇರಿದಾಗ ನಾವು ಭವಿಷ್ಯದ ಕಡೆಗೆ ಮುನ್ನೋಟ ಹರಿಸಬಹುದು, ಇದಾಗದಿದ್ದರೆ ಈ ಸಂಶೋಧನೆಗಳು ಕೇವಲ ಶೈಕ್ಷಣಿಕ ಕವಾಯತು ಮಾತ್ರವಾಗುವ ಸಂಭವವೇ ಹೆಚ್ಚು. ಇದಕ್ಕಾಗಿ ನಾವು ಕನ್ನಡದ್ದೇ ಆದ ಜ್ಞಾನ ಶಾಖೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಅಲ್ಲದೆ ಅವುಗಳನ್ನು ಸಮಗ್ರ ಬದುಕಿನ ಪರಿಕಲ್ಪನೆಯೊಂದಿಗೆ ಬೆಸೆಯಬೇಕಾಗುತ್ತದೆ.
ಶಾಸ್ತ್ರೀಯ ಭಾಷಾ ಅಧ್ಯಯನವೆಂದರೆ ಕನ್ನಡದ ಬರಹ ಸಂಸ್ಕೃತಿಯನ್ನು ಅಧ್ಯಯನ ಮಾಡುವಷ್ಟೇ ಮುಖ್ಯವಾಗಿ ಮೌಖಿಕ ಸಂಪ್ರದಾಯವನ್ನು ಅಧ್ಯಯನ ಮಾಡಬೇಕಾಗುತ್ತದೆ. ಏಕೆಂದರೆ ಕನ್ನಡ ಸಾಹಿತ್ಯ ದೃಷ್ಟಿ ಈ ಎರಡೂ ಪ್ರಕಾರಗಳಲ್ಲಿ ಆಗಿದೆ. ಹಾಗಾಗಿ ಮೌಖಿಕ ಮತ್ತು ಲಿಖಿಕ ಸಾಂಸ್ಕೃತಿಕ ಪಠ್ಯಗಳ ಪೂರಕ ಅಧ್ಯಯನ ಅಗತ್ಯ. ನಮ್ಮಲಿ ವಿಶ್ವವಿದ್ಯಾಲಯಗಳು ಬರುವವರೆಗೂ ಈ ಭೇದ ಇರಲಿಲ್ಲ. ಬರಹ ಸಂಸ್ಕೃತಿಯು ಮೌಖಿಕ ಸಂಸ್ಕೃತಿಯ ಒಂದು ಅಂಗವಾಗಿಯೇ ಕೆಲಸ ಮಾಡುತ್ತಿತ್ತು.
ನಮ್ಮ ಹೆಚ್ಚಿನ ಜ್ಞಾನ ಶಾಖೆಗಳಾದ ಜ್ಯಾಮಿತಿ ಶಾಸ್ತ್ರ, ವೈದ್ಯ ಶಾಸ್ತ್ರ, ಖಗೋಳ ಶಾಸ್ತ್ರ ಇವೆಲ್ಲವೂ ಕನ್ನಡದಲ್ಲಿರುವುದು ನಮಗೆ ಗೊತ್ತಿದೆ. ತಲೆ ತಲಾಂತರದಿಂದ ಇವು ಮೌಖಿಕ ಪರಂಪರೆಯಲ್ಲಿ ಗುರುವಿನಿಂದ ಶಿಷ್ಯನಿಗೆ ಹರಿದು ಬಂದಿದೆ. ಆ ರೀತಿಯ ಜ್ಞಾನ ಪ್ರಸಾರ ಹೇಗೆ ಆಗುತ್ತಿತ್ತು ಎಂಬುದನ್ನು ನಾವು ಕಂಡುಹಿಡಿದುಕೊಳ್ಳಬೇಕಾಗಿದೆ. ಇದರ ಜತೆಗೆ ಹಲವಾರು ಬರಹ ರೂಪದಲ್ಲಿರುವ ಪುಸ್ತಕಗಳು ಲಭ್ಯವಿದೆ. ಅವುಗಳನ್ನು ಅಧ್ಯಯನ ಮಾಡಲು ಹಳೆಗನ್ನಡದ ಪ್ರವೇಶ ಅತ್ಯಂತ ಜರೂರಿನಲ್ಲಿ ಆಗಬೇಕಾಗಿದೆ. ಏಕೆಂದರೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಈಗ ಹಳೆಗನ್ನಡ ಕಲಿಸುವ ಅಧ್ಯಾಪಕರು ಸಿಗುವುದೇ ದುಸ್ತರ.
ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳು ನಡೆಯುತ್ತಲೇ ಇಲ್ಲ. ಇಷ್ಟೇ ಅಲ್ಲದೆ ವೈದ್ಯಕೀಯ, ಇಂಜಿನಿಯರಿಂಗ್ ವ್ಯಾಸಗದಲ್ಲಿ ಸಂಬಂಧ ಸ್ಥಳೀಯ ಜ್ಞಾನ ಶಾಖೆಗಳ ಅಧ್ಯಯನಕ್ಕೆ ಅವಕಾಶ ಕೊಡಬೇಕು, ಒಬ್ಬ ಇಂಜಿನಿಯರ್ ನಮ್ಮ ಪುರಾತನರ ನಗರ ಯೋಜನೆ, ದೇವಸ್ಥಾನಗಳನ್ನು ಕಟಲು ಬಳಸುತ್ತಿದ್ದ ತಂತ್ರಜ್ಞಾನ , ಕೋಟೆ ಕೊತ್ತಲೆಗಳನ್ನು ರೂಪಿಸಿರುವುದರ ಹಿಂದಿರುವ ಪ್ರಭುದ್ದ ತಿಳುವಳಿಕೆ ಮಾತು ತಾಂತ್ರಿಕ ಕೌಶಲ ಇವುಗಳನ್ನು ಅಹ್ದ್ಯಯನ ಮಾಡಲು ಸಾಧ್ಯವಾಗಲು ಹಳೆಗನ್ನಡ ಅಧ್ಯಯನ ಮಾಡಬೇಕಾಗುತ್ತದೆ. ಈ ರೀತಿ ಅಧ್ಯಯನ ಮಾಡಿ ಸಂಶೋಧನೆಗಳನ್ನು ನಡೆಸಿ ಸದ್ಯಕ್ಕೆ ಅದನ್ನು ಹೇಗೆ ಬಳಸಬಹುದು ಎಂಬುದನ್ನು ಕಂಡುಕೊಂಡರೆ ಆಗ ಕನ್ನಡದ ಇಂಜಿನಿಯರಿಂಗ್ ಸಾಧ್ಯವಾಗುತ್ತದೆ. ಅಲ್ಲದೆ ಕನ್ನಡದ್ದೇ ಪದಗಳು, ಪರಿಕಲ್ಪನೆಗಳು ನಮಗೆ ದೊರೆಯುತ್ತವೆ. ಅಂತೆಯೇ ವೈದ್ಯಕೀಯ ಶಾಸ್ತ್ರದಲ್ಲಿ ಗಜಶಾಸ್ತ್ರ, ಅಶ್ವಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಮುಂತಾದುವುಗಳ ಅಧ್ಯಯನವೂ ಹೆಚ್ಚು ಪ್ರಯೋಜನಕಾರಿಯಾಗಬಲ್ಲದು.
ಇತ್ತೀಚಿಗೆ ನಡೆಯುತ್ತಿರುವ ಸಂಶೋಧನೆಗಳಲ್ಲಿ ಪುರಾತತ್ವ ಶಾಸ್ತ ಮುಂಚೂಣಿಯಲ್ಲಿದೆ. ಕರ್ನಾಟಕದ ನೆಲದಲ್ಲಿ ಅದರಲ್ಲೂ ಬಾದಾಮಿಯಿಂದ ರಾಯಚೂರಿನವರೆಗೂ ಇರುವ ಪದೆಶದಲ್ಲಿ ಆಗುತ್ತಿರುವ ಸಂಶೋಧನೆಯಂತೆ ಕನ್ನಡ ನೆಲದಲ್ಲಿ ಸುಮಾರು ಇಪ್ಪತ್ತು ಸಾವಿರ ವರ್ಷಗಳಿಗಿಂತಲೂ ಹಿಂದೆ ಜನರು ವಾಸಿಸುತ್ತಿದ್ದರು. ಗುಹಾಂತರ ಕಲೆಗಳಿಂದ ಬೂದಿ ಗುಡ್ದರ ಅಧ್ಯಯನದಿಂದ ಈ ಅಂಶ ತುಂಬಾ ಸ್ಪಷ್ಟವಾಗಿಯೇ ತಿಳಿದುಬಂದಿದೆ. ಇಷ್ಟು ಹಳೆಯ ಸಂಸ್ಕೃತಿ ದಕ್ಷಿಣ ಭಾರದಲ್ಲಿ ಎಲ್ಲೂ ಇನ್ನು ಕಂಡುಬಂದಿಲ್ಲ. ಅಂದರೆ ಪ್ರಾಯಶಃ ಕರ್ನಾಟಕ ಈ ಭಾಗ ಇಡೀ ದಕ್ಷಿಣ ಭಾರತದ ಸಂಸ್ಕೃತಿಯ ಕೇಂದ್ರ ಸ್ಥಾನದಲ್ಲಿ ನಿಲ್ಲುವ ಸಾಧ್ಯತೆ ಇದೆ. ಇಲ್ಲಿಂದ ದಕ್ಷಿಣ ಪ್ರಸ್ತಭೂಮಿಯ ಬೇರೆ ಬೇರೆ ಭಾಗಗಳಿಗೆ ಜನರು ವಲಸೆ ಹೋಗಿರಬಹುದು. ಇವೆಲ್ಲವೂ ಬೂದಿಗುಡ್ದೆಯಲ್ಲಿದೊರೆತ ರಾಗಿ , ಹುರುಳಿ ಮುಂತಾದ ಕಾಲುಗಳನ್ನು ಡಿಏನಎ ಪರೀಕ್ಷೆಗೆ ಒಳಪಡಿಸಿರುವುದರಿಂದ ಖಚಿತವಾಗಿದೆ. ಈ ಸಂಶೋಧನಾ ಫಲಿತಾಂಶ ನಮ್ಮ ಮುಂದೆ ಇನ್ನೂ ಅನೇಕ ಮಹತ್ವ ಸಂಗತಿಗಳನ್ನು ಮಂಡಿಸುವ ಸಾಧ್ಯತೆಯೂ ಇದೆ. ಮನುಷ್ಯನು ಮೂಲದಲ್ಲಿ ಪ್ರಕೃತಿಯನ್ನು ಸಂಸ್ಕ್ರುತಿಯನ್ನಾಗಿ ಪರಿವರ್ತಿಸಿಕೊಳ್ಳುವ ಕಲೆಯನ್ನು ಅರಿತಿದ್ದ ಎಂಬುದಂತೂ ಸ್ಪಷ್ಟ. ಇದು ಸಣ್ಣ ಸಂಗತಿಯೇನೂ ಅಲ್ಲ.
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯನ್ನೂ ಕೊಡುವಲ್ಲಿ ಅಡ್ಡಿಯಾಗಿರುವ ಕಾನೂನಿನ ತೊಡಕುಗಳು ನಿವಾರಣೆಯಾಗುತ್ತದೆ ಎಂಬುದಲ್ಲಿ ಸಂದೇಹವೇ ಇಲ್ಲ. ಆದರೆ ನಮ್ಮ ಉತ್ಸಾಹ ಅಲ್ಲಿಗೆ ನಿಲ್ಲಬಾರದು. ಕನ್ನಡ ಶಾಸ್ತ್ರೀಯ ಭಾಷೆಯ ಕೆಲಸ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ವಿವರವಾಗಿ ವಿಶ್ಲೇಷಿಸಿ ಸಂಶೋಧನೆ ಹಾದಿಯನ್ನು ಕಂಡುಕೊಳ್ಳಬೇಕಾದುದು ನಮ್ಮ ವಿದ್ವಾಂಸರ, ಚಿಂತಕರ ಮುಂದಿರುವ ಮಹತ್ವದ ಸವಾಲು. ಹಾಗೆಯೇ ಉಪೋಅಭಾಷಾ ನಿಘಂಟುಗಳು, ವೃತ್ತಿ ನಿಘಂಟುಗಳು ಹೀಗೆ ಕೆಲವು ಮುಖ್ಯ ನಿಘಂಟುಗಳು ರೂಪುಗೊಳ್ಳಬೇಕು. ನಮ್ಮ ಪುರಾತನ ಸಮ್ಸ್ಕ್ರುತಿಯಲ್ಲಿಉ ಅಡಗಿರುವ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಅರಿತು ವಿಶ್ಲೇಷಿಸುವ ದಿಕ್ಕಿನಲ್ಲಿಯೂ ಕೆಲಸವಾಗಬೇಕು. ಈ ಜ್ಞಾನವನ್ನು ಕುರಿತಂತ ಹೊತ್ತಗೆಗಳೂ ಕನ್ನಡದಲ್ಲಿ ಪ್ರಕಟವಾಗಬೇಕು. ಹಾಗಾದಾಗಲೇ ಕನ್ನಡದ ಭವ್ಯ ಸೌಧವನ್ನು ಕಟ್ಟಲು ಸಾಧ್ಯವಾಗುವುದು. ಮುಂದಿನ ತಲೆಮಾರು ಸಹ ಉತ್ಶಾಹದಿಂದ ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗುವುದಕ್ಕೂ ಈ ಬಗೆಯ ಕಾರ್ಯಗಳು ನೆರವು ನೀಡುತ್ತವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮಹತ್ವವ್ದ ಯೋಜನೆಗಳು ರೂಪುಗೊಳ್ಳಬೇಕು. ಹತ್ತಾರು ಮನಸ್ಸುಗಳು ಒಂದು ಗೂಡಿ ಸೃಜನಶೀಲವಾಗಿ ಕೆಲಸ ಮಾಡಬೇಕು. ಹಾಗಾದಾಗಲೇ ಕನ್ನಡ ಮುನ್ನೆಗೆ ಹೊಸ ಆಯಾಮ ದೊರಕುತ್ತದೆ. ಪಂಪನೇ ಒಂದು ಮಾತನ್ನು ಉಲ್ಲೇಖಿಸುವುದಾದರೆ ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳ್ ತಳ್ವುದು…
ದೇಸೀ – ಮಾರ್ಗ ಒಂದಾದಾಗಲೇ ಕನ್ನಡಕ್ಕೆ ಕಿರೀಟ, ಗರಿಮೆ.