ಜೇನುಕುರುಬ ಶಮಣರು(ಗುಡ್ಡರು) ಭಾಗ -೨
Aruhu Kuruhu
ಫಲವಂತಿಕೆಯ ಪೂಜೆಗೆ ಸುಮಾರು ಮುವತ್ತು ಸಾವಿರ ವರ್ಷಗಳ ಇತಿಹಾಸವಿದೆ. ಪ್ರಾಗ್ ಇತಿಹಾಸಕಾರರು ತಮ್ಮ ವೈಜ್ಞಾನಿಕ ವಿಧಾನದಿಂದ ಇದನ್ನು ಖಚಿತಪಡಿಸಿದ್ದಾರೆ. ಆದಿಮಾನವನ ಗುಹಾಂತರ್ಗತ ಚಿತ್ರಗಳೆ ಇದಕ್ಕೆ ಸಾಕ್ಷಿ.
ಪ್ರಪಂಚದಾದ್ಯಂತ, ಅದರಲ್ಲೂ ಮಧ್ಯ ಮತ್ತು ಉತ್ತರ ಏಷ್ಯಾದಲ್ಲಿ, ಉತ್ತರ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ, ಯೂರೋಪ್ ದೇಶಗಳಲ್ಲಿ ಚೈನಾ ಮತ್ತು ಟಿಬೆಟ್ಗಳಲ್ಲಿ ಈ ಫಲವಂತಿಕೆಯ ಕ್ರಿಯಾವಿಧಿ ಕಂಡುಬರುತ್ತದೆ. ಕರ್ನಾಟಕದಲ್ಲಿ ಕಂಡುಬರುವ ಬಾದಾಮಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಪಕ್ಕಿಹಾಳ, ತೆಕ್ಕಲಕೋಟೆ ಮತ್ತು ಸಂಗನಕಲ್ಲುಗಳಲ್ಲಿ ಕಂಡುಬರುವ ಗವಿಗಳಲ್ಲಿ ಇರುವ ಕಲ್ಲಾಸರೆಯ ಬಣ್ಣದ ಚಿತ್ರಗಳು ಇಲ್ಲಿಯೂ ಸಹ ಫಲವಂತಿಕೆಯ ಕ್ರಿಯಾವಿಧಿಯನ್ನು ಆಚರಿಸುವ ಕ್ರಮವಿತ್ತೆಂದು ಕಂಡುಬರುತ್ತದೆ. ಇಂತಹ ಚಿತ್ರಗಳನ್ನ ವಿಶ್ಲೇಷಿಸಿರುವ ಮಿರ್ಸಿಯ ಎಲಿಯೆಡ್’ 1964ರಲ್ಲಿ ಮೊದಲ ಬಾರಿಗೆ ಮೇಲೆ ಕೊಟ್ಟಿರುವ ಚಿತ್ರವನ್ನು (ಚಿತ್ರ-1) ವಿಶ್ಲೇಷಿಸಿ ಇದು ಶಮಣರ (ಜೇನುಕುರುಬ ಭಾಷೆಯಲ್ಲಿ ಗುಡ್ಡರು ಎಂದು ಓದಿಕೊಳ್ಳಬೇಕು) ಆಚರಣೆ ಎಂದು ತೋರಿಸಿಕೊಟ್ಟಿದ್ದಾನೆ. ಇದಕ್ಕೆ ಮೂವತ್ತು ಸಾವಿರ ವರ್ಷಗಳ ಇತಿಹಾಸವಿದೆ. ಇಲ್ಲಿ ಮಲಗಿರುವ ವ್ಯಕ್ತಿಯ ನಿಮಿರಿದ ಶಿಶ್ನವನ್ನು ಗಮನಿಸಬಹುದು ಮತ್ತು ಅಲ್ಲಿಯ ಪ್ರಾಣಿಗಳು ಆತ ಗುಡ್ಡನಾಗಿ ತನ್ನ ಮಾನಸಿಕ ಪ್ರಪಂಚದಲ್ಲಿ ವಿಹರಿಸುತ್ತಿರುವುದನ್ನು ಮತ್ತು ಗೂಳಿಯಂತೆ ಕಂಡುಬರುವ ಪ್ರಾಣಿ ಫಲವಂತಿಕೆಯ ಸಂಕೇತವೆಂಬಂತೆ ಓದಿಕೊಳ್ಳಬೇಕು. ಕಡ್ಡಿಯ ಮೇಲೆ ನಿಂತಿರುವ ಹಕ್ಕಿಯನ್ನು ಪ್ರಾಣವೆಂದು ಓದಿಕೊಳ್ಳಬೇಕೆಂದು ಎಲಿಯೆಡ್ ಹೇಳಿದ್ದಾನೆ. ಇದನ್ನು ಸಂಪೂರ್ಣವಾಗಿ ನಮ್ಮ ಸಂಸ್ಕೃತಿಯಲ್ಲಿ ಆಚರಣೆಯಲ್ಲಿರುವ ಜೇನುಕುರುಬ ಫಲವಂತಿಕೆಯ ಕ್ರಿಯಾವಿಧಿಯನ್ನು ವಿಶ್ಲೇಷಿಸಿ ನೋಡಿದರೆ ಕರ್ನಾಟಕದ ಗುಹಾಂತರ್ಗತ ವರ್ಣಚಿತ್ರಗಳ ಆಚರಣೆಯನ್ನು ವಿಶ್ಲೇಷಿಸಬಹುದು ಮತ್ತು ಅದು ಹೇಗೆ ಆಚರಿಸಲ್ಪಡುತ್ತಿತ್ತು ಎಂಬುದರ ಪುನಾರಚನೆ ಸಾಧ್ಯವಾಗಬಹುದು. ಈಗಲೂ ಸಹ ನಮ್ಮಲ್ಲಿ ಈಶ್ವರನ ದೇವಸ್ಥಾನದ ಸುತ್ತ ಮಕ್ಕಳಿಲ್ಲದವರು ನಾಗರಕಲ್ಲನ್ನು ಪ್ರತಿಷ್ಠಾಪನೆ ಮಾಡುವುದು ಫಲವಂತಿಕೆಯ ಸಂಕೇತವಾಗಿ ಉಳಿದುಬಂದಿದೆ. ಈ ಉದ್ದೇಶದಿಂದ ನನ್ನ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಕಂಡ ಮತ್ತು ವಿಡಿಯೋ ಚಿತ್ರೀಕರಣದ ಆಧಾರದ ಮೇಲೆ ವಿಶ್ಲೇಷಣೆ ನಡೆಸಲಾಗಿದೆ. ಈ ಫಲವಂತಿಕೆಯ ಆಚರಣೆಯ ಮಹೆಂಜೋದಾರೋ-ಹರಪ್ಪ ಸಂಸ್ಕೃತಿಯಲ್ಲೂ ಕಾಣಬಹುದು. ಈ ಕ್ರಿಯಾವಿಧಿಯು ಒಂದು ಜನಾಂಗದ ಆದಿಯಲ್ಲಿ ಗಂಡು – ಹೆಣ್ಣು ಎಂಬ ಭೇದ ಕಲ್ಪನೆಯೂ ಉಂಟಾಗಿರದ ಕಾಲದಲ್ಲಿ ಆದಿ ಮಾನವನ ಮನಸ್ಸು ಗ್ರಹಿಸಿದ ಮೊದಲ ಸೃಷ್ಟಿಯನ್ನು ಪುನರ್ ಸೃಷ್ಟಿಸಿಕೊಳ್ಳುವ ಆಚರಣೆಯಾಗಿದೆ ಮತ್ತು ಅದನ್ನು ನಟಿಸುವ ಕ್ರಿಯೆಯೆಂದು ಗ್ರಹಿಸಬಹುದು, ಈಗ ಜೇನುಕುರುಬರಲ್ಲಿ ಸೃಷ್ಟಿಪುರಾಣದ ಕ್ರಿಯಾವಿಧಿಯನ್ನು ವಿಶ್ಲೇಷಿಸಿ ನೋಡಬಹುದು.
ಕೊಂತ ಷೂಜೆ (ಶಿಶ್ನ ಷೂಜೆ):
ಜೇನು ಕುರುಬರಲ್ಲಿ ಮತಾಚರಣೆಯ ತಾಣ ಬಹಳ ಮಹತ್ವದಾಗಿದೆ. ಲೌಕಿಕದ ಅನೇಕ ಕಾರ್ಯಗಳಿಗೆ ದಿನ ಬೆಳಗಾದರೆ ಬಳಕೆಯಾಗುವ ಅಗ್ನಿಕುಂಡ ಅನೇಕ ಸಂದರ್ಭಗಳಲ್ಲಿ ಮತಾಚರಣೆಯ ಕಾರ್ಯಗಳಿಗೂ ಬಳಕೆಯಾಗುತ್ತದೆ. ಹೀಗೆ ಲೌಕಿಕದ ಕ್ರಿಯೆಗಳಿಗಿಂತ ಭಿನ್ನವಾದ ತಾಣವಾಗಿ ಅದು ಮಾರ್ಪಡುತ್ತದೆ.
ಕೊಂತ ಪೂಜೆಯ ಸಮಯದಲ್ಲಿ ನಡೆಯುವ ಶಿಶ್ನ ಪೂಜೆಯ ಆಚರಣೆಗಳಿಂದಾಗಿ ಏರ್ಪಡುವ ಕ್ರಿಯಾವಿಧಿಯ ತಾಣ ಮಹತ್ವದ್ದು. ಸೃಷ್ಟಿ ಶಕ್ತಿಯ ಚಿಹ್ನೆಯ ಆರಾಧನೆಯನ್ನು ಸಂಕೇತಿಸುವ ಈ ಹಬ್ಬ ಏಪ್ರಿಲ್, ಮೇ ತಿಂಗಳಲ್ಲಿ ವರ್ಷಕ್ಕೆ ಒಮ್ಮೆ ಆಚರಿಸಲಾಗುತ್ತದೆ.
ಈ ಕ್ರಿಯಾವಿಧಿಯ ಸಂದರ್ಭದಲ್ಲಿ ತಾಣದ ಗಡಿಯನ್ನು ಕಣ್ಣಿಗೆ ಕಾಣುವ ಗುರುತುಗಳ ಮೂಲಕ ತೋರಿಸಲಾಗುವುದಿಲ್ಲ. ವ್ಯಕ್ತಿ ವ್ಯಕ್ತಿಗಳ ನಡುವಿನ ಸನಿಹ ಅಥವಾ ದೂರದ ಅಂತರವನ್ನು ಮಾನಸಿಕವಾಗಿ ಇದು ಸೂಚಿಸುತ್ತದೆ. ಈ ಅಂತರ ಆತ್ಮೀಯದ್ದಾಗಿ ಆಗಾಗ್ಗೆ ಬದಲಾಗುತ್ತಿರುತ್ತದೆ. ಈ ಆಚರಣೆಯನ್ನು ವೃತ್ತಾಕಾರದಲ್ಲಿ ನಡೆಸಲಾಗುತ್ತದೆ.
ಈ ಸಂದರ್ಭದಲ್ಲಿ ಜಾನಪದ ಸೊಲ್ಲ ಹೇಳುವ ಮಹಿಳೆ ಸಾಮಾನ್ಯವಾಗಿ ಪುರುಷಕೊಂತದ ಬಳಿ ಕುಳಿತಿರುತ್ತಾಳೆ. ನಂತರ ವಯಸ್ಸಾದ, ಮದುವೆಯಾದ ಮಹಿಳೆ ಹಾಗೂ ಮದುವೆಯಾಗದ ಹುಡುಗಿಯರು, ಸಣ್ಣ ವಯಸ್ಸಿನ ಹೆಣ್ಣು ಮಕ್ಕಳು ಕುಳಿತಿರುತ್ತಾರೆ. ಇವರೆಲ್ಲ ಹೀಗೆ ಅರ್ಧ ವೃತ್ತಾಕಾರದ ಮಾದರಿಯಲ್ಲಿರುತ್ತಾರೆ. ಇದೇ ಮಾದರಿಯಲ್ಲಿ ಸ್ತ್ರೀಕೊಂತಿಯಿಂದ ಪ್ರಾರಂಭಿಸಿ ಪುರುಷಗುಂಪು ಕುಳಿತಿರುತ್ತದೆ. ಮೊದಲಿಗೆ ಯಜಮಾನ, ವಯಸ್ಸಾದ ಮದುವೆಯಾದ ಗಂಡಸರು, ಮದುವೆಯಾಗದ ಹುಡುಗರು, ನಂತರ ಚಿಕ್ಕ ವಯಸ್ಸಿನ ಗಂಡುಮಕ್ಕಳು ಮುಂಭಾಗದಲ್ಲಿ ಕ್ರಿಯಾಚರಣೆಗೆ ತಾಣವನ್ನು ಬಿಟ್ಟು ವಿದ್ಯುಕ್ತವಾದ ಅಂತರವನ್ನು ನಿರ್ಮಿಸಿರುತ್ತಾರೆ. ಆಚರಣೆಯ ಸೀಮೆಯನ್ನು ಇದು ತೋರುತ್ತದೆ. ಅಲ್ಲದೇ ದೃಶ್ಯ ಹಾಗೂ ಶ್ರವ್ಯಗಳ ಜಾಡಿನಲ್ಲಿ ಎಲ್ಲರಿಗೂ ಇದು ಗೋಚರವಾಗುವಂತದ್ದಾಗಿರುತ್ತದೆ. ಸ್ತ್ರೀಪುರುಷ, ಚಿಕ್ಕವ, ವಯಸ್ಸಾದವ, ವಿವಾಹಿತ-ಅವಿವಾಹಿತ ಹೀಗೆ ವೈರುಧ್ಯಗಳು ಆಚರಣೆಯ ಪ್ರಾರಂಭದಲ್ಲಿರುತ್ತವೆ. ಒಂದು ರೀತಿಯಿಂದ ಇದು ವ್ಯಕ್ತಿಗಳ ಮನೋಭೂಮಿಕೆಯನ್ನಾಧರಿಸಿ ಅಂತರವನ್ನು ಗುರುತಿಸುವುದಾಗಿದೆ.
ಜೇನುಕುರುಬ ಜನಾಂಗದ ಸೃಷ್ಟಿ ಪುರಾಣ – ಫಲವಂತಿಕೆಯ ಕ್ರಿಯಾವಿಧಿ:
ಪ್ರತಿಯೊಂದು ಜನಾಂಗವೂ ಸೃಷ್ಟಿಕ್ರಿಯೆಯ ಬಗೆಗೆ ತನ್ನದೇ ಆದ ಮಿಥ್ಗಳನ್ನು ಸೃಷ್ಟಿಸಿಕೊಂಡಿರುತ್ತವೆ. ಅದು ಕೇವಲ ಅವರಿಗೆ ಪುರಾಣವಾಗಿ ಕಂಡುಬರದೆ ಅವರ ಜೀವನಕ್ರಮ, ಲೋಕದೃಷ್ಟಿಗಳನ್ನು ನಿರ್ಧರಿಸುತ್ತಿರುತ್ತದೆ, ಬದಲಾಯಿಸುತ್ತಿರುತ್ತದೆ.
ಎಲ್ಲಕ್ಕೂ ಮೊದಲು ಈ ಪ್ರಪಂಚ ಪ್ರಳಯದಲ್ಲಿ ಮುಳುಗಿ ಬರೇ ನೀರಿನಿಂದ ತುಂಬಿತ್ತು. ಅಲ್ಲಿ ಒಂದು ಕ್ರಿಮಿ ಕೀಟದ ಜೀವರಾಶಿಯೂ ಇರಲಿಲ್ಲ. ಆ ನೀರಿನಲ್ಲಿ ಒಂದು ಕಹಿ ಸೋರೆ ಬುರುಡೆ ತೇಲುತ್ತಾ ಇತ್ತು ಅದು ತೇಲುತ್ತಾ ತೇಲುತ್ತಾ ಒಂದು ಅಂಗೈ ಅಗಲ ಭೂಮಿಯ ಮೇಲೆ ಬಂದು ಕೂತಿತು. ಈ ಬಂಡೆಯನ್ನು ಒಡೆದುಕೊಂಡು ಇಬ್ಬರು ಹೊರಗೆ ಬಂದರು.ಅದರಲ್ಲಿ ಒಂದು ಗಂಡು ಮತ್ತೊಂದು ಹೆಣ್ಣು., ಅವರಿಬ್ಬರೂ ಅಣ್ಣ ತಂಗಿಯರು. ಅವರಿಬ್ಬರೂ ತಮ ಕೈ ಮುಷ್ಟಿಯಲ್ಲಿ ಮಣ್ಣನ್ನು ಹಿಡಿದು ಗಂಡನ್ನು ಸೃಸ್ಥಿಸಿದರು. ಅವರಿಂದ ಹುಟ್ಟಿ ಬಂದವರೇ ಜೇನುಕುರುಬ ಜನಾಂಗ.
ಜೇನುಕುರುಬರು ಮರಗಿಡಗಳೆಲ್ಲಾ ಹೊಸದಾಗಿ ಚಿಗಿತು, ಹೂವು ಹಣ್ಣು ಬಿಡುವ ಕಾಲದಲ್ಲಿ ಈ ಗಂಡು ಕೊಂತ ಮತ್ತು ಕೊಂತಿ ಹುಟ್ಟಿದರಂತೆ. ಅದರು ಹುಟ್ಟಿದ ನೆನಪಿಗಾಗಿ ಕೊಂತ ಪೂಜೆಯನ್ನು ಈ ಕಾಲದಲ್ಲಿ ಆಚರಿಸುತ್ತಾರೆ. ಸಂಪದೂರ್ಣ ಸೃಷ್ಟಿಕ್ರಿಯೆ ನಡೆಯಲು ನಲವತ್ತು ದಿನಗಳು ಬೇಕಾಯಿತಂತೆ. ಆದ್ದರಿಂದ ವಸಂತಕಾಲದಲ್ಲಿ ನಲವತ್ತು ದಿನಗಳವರೆಗೆ ಈ ಸೃಷ್ಟಿಕ್ರಿಯೆಯ ಹಬ್ಬವನ್ನು ಪ್ರತೀ ವರ್ಷವೂ ಆಚರಿಸುತ್ತಾರೆ.
ಕೊಂತೀಯ ಗುಡಿಗೆ ಎಂತವರೂ ಬಂದಲ್ಲದೆ
ಕೊಂತಿ ನಿನ ಷೂಜೆ ಕಲಿವಿಲ್ಲ ಕೊಣಣೆ ನಂದನಾವನವೆ ||
ಉಚ್ಚೆಳ್ಳು ಹೂವ ನಮುಚ್ಚಣ್ಣ ಕೂಯಿತಂದಾ
ಉಚ್ಛಿಸ್ತು ಕ್ವಾಂತಿ ಮುಡಿಬಾರೋ
ಉಚ್ಚಿಸ್ತು ಕ್ವಾಂತಿ ಮುಡಿಬಾರೋ ಈ ಹೂವಾ ||
ಉಳ್ಳಿಯ ಹೂವಾ ನಮ ಉಳ್ಳಣ್ಣ ಕುಯಿತಂದಾ
ಉಳ್ಳೆಸ್ತು ಕ್ವಾಂತೀ ಮುಡಿ ಬಾರೋ
ನಮ್ ಉಳ್ಳಣ್ಣ ತಾಂದಾವನೇ.ಹೊಸಾ..ಹೂವಾ ||
ಅಣ್ಣಿಯ ಹೂವಾ ನಮ್ ಅಣ್ಣಯಾ ಕೂಯಿ ತಂದೆನೋ…
ಅಣ್ಣಿಸ್ತು ಕ್ವಾಂತೀ ಮುಡಿ ಬಾರೋ
ನಮ್ ಅಣ್ಣಯ್ಯ ತಾಂದಾವುನೇ ಹೊಸಾ..ಹೂವಾ ||
ಮುತ್ತಿಯ ಹೂವ ನಮುತ್ತಣ್ಣ ಕೂಯಿ ತಂದೋ
ಮುತ್ತೆಸ್ತು ಕ್ವಾಂತೀ ಮುಡಿ ಬಾರೋ
ನಮುತ್ತಣ್ಣ ತಾಂದಾವನೇ.ಹೊಸಾ..ಹೂವಾ ||
ಹೊನ್ನೆಯ ಹೂವಾ ನಮ್ ಹೊನ್ನಣ್ಣ ಕೂಯಿ ತಂದೋ
ಹೊನ್ನೆಸ್ತು ಕ್ವಾಂತಿ ಮುಡಿ ಬಾರೋ
ನಮ್ ಹೊನ್ನಣ್ಣ ತಾಂದ್ಯಾವನೇ.ಹೊಸಾ..ಹೂವಾ ||
ಸಂಪೂರ್ಣವಾಗಿ ಮೌಖಿಕ ಸಂಪ್ರದಾಯದ ಆಧಾರದ ಮೇಲೆ ನಿಂತಿರುವ ಜೇನುಕುರುಬರಂಥ ಬುಡಕಟ್ಟು ಜನಾಂಗಗಳ ಕ್ರಿಯಾವಿಧಿ ಹಬ್ಬ ಹರಿದಿನಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ವಿವಿಧ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಇಲ್ಲಿಯ ಸಾಂಸ್ಕೃತಿಕ ಪಠ್ಯಗಳು ಒಂದೇ ಬಾರಿಗೆ ತಮ್ಮ ಸಂಬಂಧ-ವ್ಯತ್ಯಾಸಗಳನ್ನು ಬಿಟ್ಟುಕೊಡುವುದಿಲ್ಲ. ಕ್ರಿಯಾವಿಧಿಗೂ, ಹಬ್ಬದ ಆಚರಣೆಗೂ , ಪುರಾಣಗಳಿಗೂ ಮೇಲ್ನೋಟಕ್ಕೆ ಸ೦ಬ೦ಧ ಕಂಡುಬರದೇ ಇದ್ದರೂ ಅಂತರ್ಗತವಾಗಿ ಕೆಲವು ಪರಿಕಲ್ಪನೆಗಳು ಹಬ್ಬಿಕೊಂಡಿರುತ್ತವೆ. ವ್ಯಕ್ತಿಗಳು ನೇರವಾಗಿ ಅವುಗಳ ಸಂಬಂಧವನ್ನು ಹೇಳದೇ ಇರಬಹುದು, ಮತ್ತೆ ಕೆಲವು ವೇಳೆ ಕ್ರಿಯಾವಿಧಿ ಮೌಕಿಕವಾಗಿ ಇರಬಹುದು, ಅಥವಾ ಆಚರಣೆಯಲ್ಲಿ ಇರಬಹುದು, ಅಥವಾ ಎರಡೂ ಒಂದನ್ನೋದು ಅವಲಂಬಿಸಿರಬಹುದು. ಆಚರಣೆ ಬೇರೆ ಕಾಲ-ದೇಶಗಳಲ್ಲಿ ಆಚರಿಸಿ, ಅದಕ್ಕೆ ಸಂಬಂಧಪಟ್ಟ ಪುರಾಣ ಅಥವಾ ಕಥಾನಕಗಳನ್ನು ಬೇರೆ ಕಾಲ-ದೇಶಗಳ ಸಂದರ್ಭದಲ್ಲಿ ಹೇಳಬಹುದು. ಹೀಗೆ ಬೇರೆ ಬೇರೆಯಾಗಿದ್ದ ಕ್ರಿಯಾವಿಧಿ ಆಚರಣೆ ಮತ್ತು ಪುರಾಣಗಳ ಸಂಬಂಧವನ್ನು ಕೊಂಡಿಹಾಕಿ ನೋಡಿ ವಿಶ್ಲೇಷಿಸಿರುವ ಜೇನುಕುರುಬ ಜನಾಂಗದ ಅತಿಮುಖ್ಯವಾದ ಒಂದೇ ಒಂದು ಹಬ್ಬ-ಆಚರಣೆಯ ಬಗ್ಗೆ ಅರ್ಥಮಾಡಿಕೊಂಡಿರುವ ರೀತಿ ಕೆಳಗಿನದು.
ಹಾಡಿಯ ಯಜಮಾನ, ಗುಡ್ಡ, ಹೆಂಗಸರು ಗಂಡಸರು ಮಕ್ಕಳು ಸೇರಿ ನಿಸರ್ಗದಲ್ಲಿ ಮರಗಿಡಗಳು ಚಿಗುರೊಡೆಯುವ ಕಾಲವನ್ನು ಗಮನಿಸಿ ತಮ್ಮ ಹಾದಿಯಲ್ಲಿ ಎಂದು ಕೊಂತ್ಹ್ಪೂಜೆ ಪ್ರಾರಂಭ ಮಾಡಬೇಕೆಂದು ನಿರ್ಧರಿಸುತ್ತಾರೆ. ನನಿರ್ಧಾರಿತ ದಿನದಂದು ರಾತ್ರಿ ತಮ್ಮ ಹಾಡಿಯ ಕೆರೆಯಲ್ಲೋ, ಹಳ್ಳದಲ್ಲೋ, ನದಿಯಲ್ಲೋ ಹೋಗಿ ಯಜಮಾನನ ಸಮ್ಮುಖದಲ್ಲಿ ಯಾರೂ ತುಳಿಯದೇ ಇರುವ ನೀರಿನ ತಳದಲ್ಲಿರುವ ಮಣ್ಣನ್ನು ದೇವರಗುಡ್ಡ ಬೊಗಸೆಯಲ್ಲಿ ಎತ್ತಿಕೊಳ್ಳುತ್ತಾನೆ. ಇದು ಕತ್ತಲೆಯಲ್ಲಿ ನಡೆಯುವ ಕ್ರಿಯೆ. ಹೇಗೆ ತಂದ ಮಣ್ಣನ್ನು ದೇವರಗುಡ್ಡ ಹಾಡಿಯ ಮಧ್ಯದಲ್ಲಿರುವ ‘ಬಿಕ್ಕಿಗುಂಡಿಯ’ ಪಕ್ಕದಲ್ಲಿ ಇಟ್ಟು ಎರಡು ಭಾಗವಾಗಿ ಮಾಡುತ್ತಾನೆ. ಅದರ ಒಂದು ಭಾಗವನ್ನು ಗಂಡುಗೊಂಬೆಯಂತೆ ತಿದ್ದುತ್ತಾನೆ. ಇದಕ್ಕೆ ಗಂಡು ಕೊಂತವೆಂದು ಹೆಸರು. ಅದಕ್ಕೆ ಗಂಡಿನಂತೆ ಶೃಂಗಾರ
ಮಾಡುತ್ತಾನೆ. ಇನ್ನೊಂದು ಭಾಗವನ್ನು ಹೆಣ್ಣುಗೊಂಬೆಯಂತೆ ತಿದ್ದಿ ಅರಿಶಿನ ಕುಂಕುಮ, ಇಟ್ಟು ಹಳದಿ ಅಥವಾ ಕೆಂಪು ಬಣ್ಣದ ಹೂವಿನಿಂದ ಶೃಂಗಾರ ಮಾಡುತ್ತಾನೆ. ಅಷ್ಟಹೊತ್ತಿಗಾಗಲೆ ಉಳಿದ ಗಂಡಸರಲ್ಲಿ ಕೆಲವರು ಕವೆಗೋಲು ನೆಟ್ಟು ಚಪ್ಪರ ಹಾಕಿ, ಎಲೆಗಳಿಂದ ಕವುಚುತ್ತಾರೆ. ಹೆಂಗಸರು ಸಗಣಿಯಿಂದ ಚಪ್ಪರದ ಕೆಳಗಿನ ಜಾಗವನ್ನು ಸಾರಿಸುತ್ತಾರೆ. ಆಗ ದೇವರಗುಡ್ಡ ಚಪ್ಪರದ ಸುತ್ತ ನೀರನ್ನು ಸುರಿದು ‘ಸಾಮಾನ್ಯ ಸ್ಥಳ’ವನ್ನು ‘ಪವಿತ್ರಸ್ಥಳವನಾಗಿ’ ಪರಿವರ್ತಿಸುತ್ತಾನೆ, ಚಪ್ಪರದ ಮುಂಭಾಗದಿಂದ ಬಲಗಡೆಗೆ ಗಂಡು ಕೊಂತವನ್ನು ಎಡಗಡೆಗೆ ಹೆಣ್ಣಕೊಂತವನ್ನು ಕೂರಿಸುತ್ತಾನೆ. ಗಂಡು ಬೊಂಬೆಯನ್ನು “ಕೊಂತ”ವೆಂದೂ ಹೆಣ್ಣ ಗೊಂಬೆಯನ್ನು “ಕೊಂತಿ” ಎಂದೂ ಕರೆಯುತ್ತಾರೆ. ಈ ಕಾರ್ಯಕ್ರಮಕ್ಕೆ ಹಾಡಿಯ ಎಲ್ಲ ಜನರೂ, ಮಕ್ಕಳು ಮರಿ, ಹೆಂಗಸರು, ಗಂಡಸರೂ ಎಲ್ಲರೂ ಸೇರಲೇಬೇಕು. ಆಗ ಐದಾರು ಜನ ಹೆಂಗಸರು ಕಾಂತಿಯನ್ನು ಕುರಿತ ಹಾಡನ್ನು ಹಾಡುತ್ತಾರೆ. ಮೂರು ನಾಲ್ಕು ಜನ ಹೆಂಗಸರು ‘ಸೊಲ್ಲು’ ಹಿಡಿಯುತ್ತಾರೆ. ಹಾಡುಹೇಳುವುದು, ಹರೆಯದ, ಮದುವೆಯಾಗದ ಹುಡುಗರು ಹುಡುಗಿಯರು ಹಾಡು ಹೇಳಿಕೊಂಡು ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ, ಈ ರೀತಿಯಾಗಿ ದಿನಾ ಸಾಯಂಕಾಲ ಹೊತ್ತು ಮುಳುಗಿದ ಮೇಲೆ ಹೆಂಗಸರು ಹೊಸ ಹೊಸ ಹೂವು ಹಣ್ಣುಗಳನ್ನು ತಂದಿಟ್ಟು ಪೂಜೆ ಮಾಡುತ್ತಾ, ಹಾಡುಗಳನ್ನು ಹಾಡುತ್ತಾರೆ. ಹೀಗೆ ಮುವ್ವತ್ತೊಂಬತ್ತು ದಿನಗಳು ಕೊಂತಿಯನ್ನು ಪೂಜಿಸಿದ ಮೇಲೆ ನಲವತ್ತನೆಯ ದಿನ ಬಹಳ ಮುಖ್ಯವಾದದು. ಈ ದಿನ ಸೃಷ್ಟಿಕ್ರಿಯೆಯನ್ನು ಅಭಿನಯಿಸುವ ದಿನ.
ಈ ನಲವತ್ತನೆಯ ದಿನ ಪುನಃ ಹಾಡಿಯ ಎಲ್ಲ ಜನರೂ ಸೇರುತ್ತಾರೆ. ಇಲ್ಲಿ ಸ್ಥಳವನ್ನು ಆವರಣಗೊಳಿಸುವ ಕ್ರಿಯೆ ಬಹಳ ಮುಖ್ಯವಾದುದು. ಗಂಡು ಕೊಂತದ ಕಡೆ ವಯಸ್ಸಾದ ಹೆಂಗಸರು ಕುಳಿತುಕೊಳ್ಳುತ್ತಾರೆ, ಅವರ ಪಕ್ಕದಲ್ಲಿ ಮಧ್ಯವಯಸ್ಸಿನ ಹೆಂಗಸರು ಕುಳಿತುಕೊಳ್ಳುತ್ತಾರೆ. ಅವರ ಪಕ್ಕದಲ್ಲಿ ಆಗತಾನೆ ಮದುವೆಯಾದ ಹೆಣ್ಣುಮಕ್ಕಳು ಕುಳಿತುಕೊಳ್ಳುತ್ತಾರೆ, ಅವರ ಪಕ್ಕ ಮೈನರೆಯದ ಹೆಣ್ಣುಮಕ್ಕಳು ಕುಳಿತುಕೊಳ್ಳುತ್ತಾರೆ. ಇದು ಅರ್ಧ ವೃತ್ತಾಕಾರವಾಗಿರುತ್ತದೆ. ಹೆಣ್ಣು ಕೊಂತದ ಕಡೆಯಿಂದ ವಯಸ್ಸಾದ ಗಂಡಸರು ಕುಳಿತುಕೊಳ್ಳುತ್ತಾರೆ. ಅವರ ನಂತರ ನಡುವಯಸ್ಸಿನವರೂ, ಆಗತಾನೇ ಮದುವೆಯಾದವರೂ, ನ೦ತರ ಮದುವೆಯಾಗದ ಗಂಡು ಮಕ್ಕಳು, ನಂತರ ಚಿಕ್ಕ ಗಂಡು ಹುಡುಗರು ಕುಳಿತುಕೊಂಡು ಇನ್ನರ್ಧ ವೃತ್ತವನ್ನು ರಚಿಸುತ್ತಾರೆ. ಒಟ್ಟಿನಲ್ಲಿ ಒಂದು ಸಂಪದೂರ್ಣವೃತ್ತ ಸೃಷ್ಟಿಯಾಗುತ್ತದೆ.
ಇವೆಲ್ಲವೂ ಬಹಳ ಸ್ವಾಭಾವಿಕವಾಗಿಯೇ ರಚಿತವಾಗಿರುತ್ತದೆ, ಏಕೆಂದರೆ ಕೆಲವು ಹಾಡಿಗಳಲ್ಲಿ ಈ ದಿನಗಳ ಸಂಖ್ಯೆ ಹೆಚ್ಚು ಕಡಿಮೆಯಾಗುವುದು ಗಮನಕ್ಕೆ ಬಂದಿದೆ. ಅದು ಅವರ ಅನುಕೂಲವನ್ನು ಅವಲಂಬಿಸುತ್ತದೆಂದು ತಿಳಿದು ಬಂದಿದೆ. ಅವರ ಸಂಸ್ಕೃತಿಯ ಅಂತರ್ಗತ ನಿಯಮ. ಹೊರಗಿನವರು ಇದನ್ನು ಗವುನಿಸಿ ತಿಳಿದುಕೊಳ್ಳಬೇಕಾಗುತ್ತದೆ.
ಚಪ್ಪರದ ಹಿಂದೆ ‘ಸೊಲ್ಲು’ ಹೇಳುವ ಹೆಂಗಸರು ಕುಳಿತು ತಮ್ಮ ಕಂಠದಿಂದ ವಿವಿಧ ಬಗೆಯ ಏರಿಳಿತಗಳನ್ನು ಅತ್ಯಂತ ಸುಶ್ರಾವ್ಯವಾಗಿ ಏರು ಕಂಠದಲ್ಲಿ ಹಾಡಲು ಪ್ರಾರಂಭಿಸುತ್ತಾರೆ. ಈ ‘ಸೊಲ್ಲಿ’ನಲ್ಲಿ ಭಾಷೆ ಇರುವುದಿಲ್ಲ.
ಸುಮಾರು ಅರ್ಧಗಂಟೆ ಈ ‘ಸೊಲ್ಲು’ ನುಡಿಸಿದ ಮೇಲೆ ದೇವರ ಗುಡ್ಡನ ಪ್ರವೇಶವಾಗುತ್ತದೆ. ದೇವರಗುಡ್ಡ ಹೆಚ್ಚು ಕಡಿಮೆ ಬತ್ತಲೆಯಾಗೇ ಇರುತ್ತಾನೆ. ಸಂಪದೂರ್ಣಬತ್ತಲೆಯೂ ಇರುತ್ತಾನೆಂದು ತಿಳಿದುಬಂದಿದೆ. ತನ್ನ ಸೊಂಟಕ್ಕೆ ಹಗ್ಗದ ಮೂಲಕ ಒಂದು ಮರದ ತುಂಡನ್ನು ತನ್ನ ತೊಡೆಯ ಸಂದಿಯಲ್ಲಿ ನೇತಾಡುವಂತೆ ಕಟ್ಟಿಕೊಂಡಿರುತ್ತಾರೆ, ಕೈಯ್ಯಲ್ಲಿ ಬೇವಿನ ಎಲೆಯ ಕಂತೆಯನ್ನು ಹಿಡಿದುಕೊಂಡು ಜನಗಳು ಕುಳಿತಿರುವ ವೃತ್ತವನ್ನು ಪ್ರವೇಶಿಸುತ್ತಾನೆ.
ವೃತ್ತವನ್ನು ಪ್ರವೇಶಿಸಿದ ಗುಡ್ಡ ಮೊದಲು ಎಡ ಮುಂದಾಗಿ ಕೊಂತಗಳಿಗೆ ಬೇವಿನ ಎಲೆಯಿಂದ ಸುತ್ತ ನೇವರಿಸುತ್ತಾನೆ. ಹಾಗೆ ನೇವರಿಸಿದ ಮೇಲೆ ಆ ಬೇವಿನೆಲೆಯನ್ನು ತನ್ನ ತೊಡೆ ಸಂದಿ ಇರುವ ಮರದ ತುಂಡಿಗೆ ಅನೇಕ ಬಾರಿ ಸುತ್ತುತ್ತಾನೆ. ನಂತರ ಮಂಡಿಯನ್ನು ಅರ್ಧಮಡಿಸಿ, ಸೊಂಟ ಬಾಗಿಸಿ ಆ ಮಧದ ತುಂಡನ್ನು ಕೆಲಹೊತ್ತು ಹಿಂದಕ್ಕೆ ಮುಂದಕ್ಕೆ ಕುಂಡಿಯಿಂದ ಆಡಿಸುತ್ತಿರುತ್ತಾನೆ. ಆಡಿಸುವ ಕ್ರಿಯೆ ಸೊಲ್ಲಿನ ಏರಿಳಿತದ ಲಯಕ್ಕಿರುತ್ತದೆ. ಈ ಲಯಕ್ಕೆ ತಕ್ಕಂತೆ ಸಂಭೋಗ ಕ್ರಿಯೆಯಂತೆ ನಟಿಸುತ್ತಿರುತ್ತಾನೆ.
ನಂತರ ಆ ಬೇವಿನ ಸೊಪ್ಪನ್ನ ಹೆಂಗಸರ ತಲೆಯ ಮೇಲೆ ಆಡಿಸಿಕೊಂಡು ಮುಟ್ಟಿಸಿಕೊಂಡು ಹೋಗುತ್ತಾನೆ. ಈ ಕ್ರಿಯೆ ನಡೆಯುವಾಗ ಹೆಂಗಸರು ಬೇರೆ ಯಾವ ಕ್ರಿಯೆಯಲ್ಲೂ ತೊಡಗುವುದಿಲ್ಲ, ಇದಾದನಂತರ ಗುಡ್ಡ ನಿರ್ಗಮಿಸುತ್ತಾನೆ. ಸೊಲ್ಲು ಏರುದನಿಯಲ್ಲಿ ಇರುತ್ತದೆ.
ಕೊಂತ ಪೂಜೆಯ 40ನೇ ದಿನ
ಎರಡನೆಯ ಘಟ್ಟದ ಚಲನೆ ಇದಾದನಂತರ ಪ್ರಾರಂಭವಾಗುತ್ತದೆ. ವಸ್ತುವಿನಲ್ಲು ಬದಲಾವಣೆ ಇರುತ್ತದೆ. ನಾಟಕದ ದೃಶ್ಯ ಬದಲಾದಂತೆನಿಸುತ್ತದೆ. ಹುಲಿಯಂತೆ ಮುಖ, ಎದೆ ಕೈಗೆ ಪಟ್ಟೆಗಳನ್ನು ಬಳಿದುಕೊಂಡ ಪಾತ್ರ ವೃತ್ತವನ್ನು ಚಂಗನೆ ನೆಗೆದು ಬರುತ್ತದೆ. ಅದರ ಆರ್ಭಟ, ಹಾವಭಾವ ಶಕ್ತಿ ಪ್ರದರ್ಶನದಂತೆ ಕಾಣುತ್ತದೆ. ಆ ಹುಲಿಯ ಹಿಂದೆ ಮತ್ತೊಬ್ಬ ಗಂಡಸು ಹೆಣ್ಣಿನ ವೇಷವನ್ನು ಹಾಕಿಕೊಂಡು ಬರುತ್ತಾನೆ. ಹುಲಿಯ ಆರ್ಭಟವಿದ್ದರೂ ಅವನ ಮಾತು ಮಾತ್ರ ಒಂದು ಮಗುವಾಗಿಲ್ಲದಿರುವುದನ್ನು ಸೂಚಿಸುತ್ತದೆ. ತನ್ನ ಹೆಂದತೋ ಬಂಜೆ ಎಂದು ಅಶ್ಲೀಲ ಭಾಷೆಯಲ್ಲಿ ಬಯ್ಯುತಾನೆ. ಅದಕ್ಕೆ ತಕ್ಕಂತೆ ಅವನ ಹೆಂಡತಿಯ ಪಾತ್ರ. ಅವಳ ಗಂಡ ಒಂದುಮಗುವನ್ನು ಹುತ್ತಿಸಲಾರದವನೆಂದು ದೂಶಿಸುತ್ತಿರುತ್ತದೆ. ಹುಲಿವೇಶದ ಪಾತ್ರ ಅಭಿನಯದಲ್ಲಿ ತನ್ನ ಶಕ್ತಿಯ ದ್ಯೋತಕವಾದ ಮಾಂಸಖಂಡಗಳನ್ನು ಕುಣಿಸುತ್ತಿರುತ್ತಾನೆ . ನಂತರ ಮಾತಿನಲ್ಲಿ ತಾನೆಷ್ಟು ನಿ:ಶಕ್ತ ಅಂಬುದನ್ನು ಎಲುತ್ತಿರುತ್ತಾನೆ. ಜೇನು ಹುಳುಗಳು ಬರುವಂತೆ ಶಬ್ದ ಮಾಡಿಕೊಂಡು ಆ ಶಬ್ದಕ್ಕೆ ಹೆದರುವಂತೆ ನಟಿಸುತ್ತಾನೆ. ಕಾಡಿನ ಪ್ರಾಣಿಗಳ ಶಬ್ದಕ್ಕೆ ಅವನು ಅಂಜುತ್ತಾನೆ. ಆಗ ಅವನು ತಮ್ಮ ಹಾಡಿಯ ಅಂಜಬುರುಕನನ್ನ ಅಣಕಿಸುವಂತೆ ಮಾತನಾಡಿ ನಟಿಸುತ್ತಾನೆ. ಒಂದು ರೀತಿಯ ಹಾಸ್ಯದ ಅಲೆ ಎಬ್ಬಿಸುತ್ತಾನೆ.
ಇಲ್ಲಿಯತನಕ ಪ್ರೇಕ್ಷಕನಂತೆ ಕುಳಿತಿರುವವನು ವೃತ್ತದ ಒಳಗೆ ಬರುತ್ತಾನೆ. ಮತ್ತೊಬ್ಬ ಹೆಂಗಸು ಅವನ ಹೆಂಡತಿಯಂತೆ ನಟಿಸುತ್ತಾಳೆ. ಚಿಕ್ಕ ಗಂಡು ಹೆಣ್ಣುಮಕ್ಕಳನ್ನು ಕರೆದುಕೊಂಡು ಅವನ ಹಿಂದೆ ಬರುತ್ತಾಳೆ.. ಅವನಿಗೋ ಆ ಚಿಳ್ಳೆ ಪಿಳ್ಳೆಗಳೆಲ್ಲ ವಿವಿಧರೀತಿಯಲ್ಲಿ ಗೋಳು ಹುಯ್ದುಕೊಳ್ಳುತ್ತದೆ. ಅವನೂ ಸಹ ಲೈಂಗಿಕತೆಗೆ ಸಂಬಂಧಪಟ್ಟ ಮಾತುಗಳನ್ನು ಆಡುತ್ತಿರುತ್ತಾನೆ. ಆ ಮಕ್ಕಳ ಹಿಂದೆ ಒಬ್ಬ ಒಂದು ಬರಲನ್ನು ತಂದು ಲದ್ದಿಯನ್ನು ಎತ್ತುವಂತೆ ಮೂಕಾಭಿನಯ ಮಾಡುತ್ತಾನೆ.
ನಾಲ್ಕನೆಯ ದೃಶ್ಯದಲ್ಲಿ ಮುದುಕನೊಬ್ಬ ಋಷಿಯಂತೆ ಜುಟ್ಟ ಕಟ್ಟಿಕೊಂಡು, ವಿಭೂತಿ ಬಳಿದುಕೊಂಡು ಬರುತ್ತಾನೆ. ಅವನಿಗೆ ಆಗತಾನೆ ಮೈನೆರೆದ ಹುಡುಗಿಯ ಮೇಲೆ ಆಸೆ. ಆ ಆಸೆಯನ್ನು ತೋರಿಸುತ್ತಾ ಹುಡುಗಿಯನ್ನು ಕರೆಯುತ್ತಾನೆ. ಪ್ರಣಯದ ನಾನಾ ಮಜಲುಗಳನ್ನು ಮಾತಿನಲ್ಲಿ ಹಾವಭಾವದಲ್ಲಿ ತೋರಿಸುತ್ತಾನೆ. ಭೋಗವಸ್ತುಗಳನ್ನೆಲ್ಲಾ ಕೊಟ್ಟು ಅವಳನ್ನು ಒಲಿಸಿಕೊಳ್ಳುವಂತೆ ನಟಿಸುತ್ತಾನೆ.
ಇದಾದ ನಂತರ ಐದನೆ ದೃಶ್ಯ ಇದರಲ್ಲಿ ಮದುವೆಯಾಗದ ಹುಡುಗ ಹುಡುಗಿಯರು ಹಾಡು ಹಾಡುತ್ತಾ ಚಪ್ಪಾಳೆ ತಟ್ಟುತ್ತಾ ಕುಣಿಯುತ್ತಾರೆ. ಇವರಲ್ಲಿ ಕೆಲವರು ಪ್ಯಾಂಟನ್ನು ಧರಿಸುತ್ತಾರೆ. ಕೊಡವತಿಯಂತೆ ಹೆಣ್ಣು ಸೀರೆ ಉಟ್ಟಿರುತ್ತಾಳೆ. ಇಂಗ್ಲೀಷ್ ಪದಗಳು ಧಾರಾಳವಾಗಿ ಈ ಸಂಭಾಷಣೆಯಲ್ಲಿ ಸೇರಿರುತ್ತದೆ ಅಥವಾ ಅವರು ಕಂಡು ಕೇಳಿದ ಜನಗಳ ಭಾಷೆಯನ್ನು ಅಣಕಿಸುತ್ತಾ ಆಡುತ್ತಿರುತ್ತಾರೆ. ಅದು ಜಾತ್ರೆಗೆ ಹೋಗುವ ದೃಶ್ಯವೂ ಆಗಿರಬಹುದು. ಹತ್ತಿರದ ಊರಿನ ಸಂತೆಗೆ ಹೋಗುವ ದೃಶ್ಯ ಆಗಬಹುದು.
ಆಗ
ಹುಡುಗ: ಯಾವ ಯಾವ ಪ್ಯಾಂಟು ಲೆತ್ತಿಕೊಡಲೇ ಹೆಣ್ಣೆ/ ಯಾವ ಯಾವ ಸ್ಯಾಲೆಲೆತ್ತಿಕೋಡಲೇ ಹೆಣ್ಣೆ
ಹುಡುಗಿ: ನಾ ಕೇಳಿದಾ ಪ್ಯಾಂಟುನೆ ಲೆತ್ತಿಕೊಡಲೇ ಗಂಡೆ/ ನಾ ಕೇಳಿದ ಸ್ಯಾಲೆನೆ ಲೆತ್ತಿ ಕೊಡುಲೇ ಎಂದು ಹಾಡುತ್ತಾ ಕುಣಿಯುವರು.
ಹೀಗೆ ಬೆಳಕು ಹರಿಯುವ ತನಕ ಸೃಷ್ಟಿ ಕ್ರಿಯೆಯ ನಾನಾ ಮುಖಗಳನ್ನು ಚಿತ್ರಿಸುವ ನಾಟಕವಾಗಿ ಕೊಂತ ಪೂಜೆ ಮುಗಿಯುತ್ತದೆ. ಇಲ್ಲಿ ಪ್ರೇಕ್ಷಕನಾಗಿದ್ದವನು ಅಥವಾ ಆಗಿದ್ದವಳು ನಟ, ನಟಿಯಾಗಬಹುದು. ನಟ, ನಟಿ ನಂತರ ಮತ್ತೆ ಪ್ರೇಕ್ಷಕರಾಗಬಹುದು.
ನಂತರ ಗಂಡು ಹೆಣ್ಣು ಕೊಂತಗಳನ್ನು ‘ಚಪ್ಪರದ ಹಿಂಭಾಗದಿಂದ ದೇವರಗುಡ್ಡ ಎತ್ತಿಕೊಂಡು ಹೋಗಿ ಉಳಿದ ಜನರೊಡನೆ ನೀರಿಗೆ ಬಿಡುತ್ತಾನೆ.
ಈ ಕ್ರಿಯಾವಿಧಿ ನಡೆಯುವಾಗ ಗಮನಿಸುವ ಅಂಶಗಳು. ಭಾಷೆ ಮತ್ತು ಭಾಷೇತರ ಅಂಗಾಂಗಗಳ ಹಾವಭಾವ, ‘ರಂಗಭೂಮಿ’ಯ ಪರಿಕಲ್ಪನೆಗಳು ಈ ಸೃಷ್ಟಿಕ್ರಿಯೆಯ ಕ್ರಿಯಾವಿಧಿಯ ಅಭಿನಯದ ಆರ್ಥ ಹೆಚ್ಚುವಂತೆ ಮಾಡುತ್ತದೆ.
ಇಲ್ಲಿ ಈ ರಂಗಸ್ಥಳ ಎಂಬ ಸ್ಥಳದ ಪರಿಕಲ್ಪನೆ ಇಲ್ಲದಿದ್ದರೂ ಕ್ರಿಯಾವಿಧಿಯ ವೃತ್ತಾಕಾರದ ಸ್ಥಳವೇ ರಂಗಸ್ಥಳವಾಗಿ ಪರಿವರ್ತಿತವಾಗುತ್ತದೆ. ಕಣ್ಣಿಗೆ ಕಾಣುವಂತೆ ರಂಗಸ್ಥಳ ಪ್ರತ್ಯೇಕವಾಗಿ ವಿಭಾಗವಾಗಿಲ್ಲದಿದ್ದರೂ ಪರಿಕಲ್ಪನಾ ಮಟ್ಟದಲ್ಲಿ ಬದಲಾವಣೆಯನ್ನು ತರುತ್ತದೆ. ವ್ಯಕ್ತಿ ವ್ಯಕ್ತಿಗಳ ನಡುವಿನ ಸಮಾನತೆ ಮತ್ತು ವ್ಯತ್ಯಾಸಗಳು ಎರಡೂ ಕಂಡುಬರುತ್ತದೆ. ಈ ವೃತ್ತ ಒಂದು ರೀತಿಯಲ್ಲಿ ವ್ಯಕ್ತಿಗಳನ್ನು ಪರಸ್ಪರ ಹತ್ತಿರ ತರುತ್ತದೆ. ಕ್ರಿಯಾವಿಧಿ ಪ್ರಾರಂಭದಲ್ಲಿ ಲಿಂಗಭೇದ, ವಯೋಭೇದ, ಮದುವೆ ಆದವರು-ಆಗದವರು ಇವೆಲ್ಲ ಸೃಷ್ಟಿಯಾದರೂ ‘ನಾಟಕ’ ಕ್ರಿಯೆ ಪ್ರಾರಂಭವಾದ ಮೇಲೆ ಅಳಿಸಿ ಹೋಗುತ್ತದೆ.
ಮೇಲು ನೋಟಕ್ಕೆ ಈ ರೀತಿಯ ವೈರುಧ್ಯಗಳು ಕಂಡು ಬರುತ್ತದೆ.
- ಆಚರಣೆ – ವೈರುಧ್ಯಗಳು: ಕ್ರಿಯಾಚರಣೆಯ ಆಟದಲ್ಲಿ ಈ ಕೆಳಗಿನಂತೆ ವೈರುಧ್ಯಗಳನ್ನು ಅವರ ತಾಣಗಳನಾಧರಿಸಿ ಗುರುತಿಸಬಹುದಾಗಿದೆ.
1) ತಾಣ ಮತ್ತು ಲಿಂಗ:
ಅ) ಪುರುಷಕೊಂತಿ – ಸ್ತ್ರೀ ಕೊಂತಿ
ఆ) ಪುರುಷಕೊಂತಿ -ಸ್ತ್ರೀ ಪ್ರೇಕ್ಷಕರು
ಇ) ಸ್ತ್ರೀಕೊಂತಿ – ಪುರುಷ ಪ್ರೇಕ್ಷಕರು
2) ವಯಸ್ಸು ಮತ್ತು ಲಿಂಗಗಳಲ್ಲಿ ವೈರುಧ್ಯ:
ಅ) ಜಾನಪದ ಸ್ತುತಿಪದಗಳನ್ನು ಹಾಡುವ ಸ್ತ್ರೀ -ಮದುವೆಯಾದ ವಯಸ್ಸಾದ ಮಹಿಳೆ- ಮದುವೆಯಾದ ಚಿಕ್ಕ ವಯಸ್ಸಿನ ಹೆಣ್ಣು ಮಗಳು – ಮದುವೆಯಾಗದ ಹುಡುಗಿಯರು – ಚಿಕ್ಕ ಹೆಣ್ಣುಮಕ್ಕಳು
ಆ) ಯಜಮಾನ – ವಯಸ್ಸಾದ ಗಂಡಸು – ಮದುವೆಯಾದ ಗಂಡಸು – ಮದುವೆಯಾಗದ ಹುಡುಗರು ಚಿಕ್ಕ ಗಂಡುಮಕ್ಕಳು.
1)ಗಂಡು ಕೊಂತ –ಹೆಣ್ಣು ಕೊಂತ
2) ಚಪ್ಪರದ ಮುಂದಿನಿಂದ ಸ್ಥಾಪಿಸುವುದು – ಚಪ್ಪರದ ಹಿಂದಿನಿಂದ ತೆಗೆದು ವಿಸರ್ಜಿಸುವುದು
3) ನೀರಿನೊಳಗಿನ ಮಣ್ಣಿನಿಂದ ಬರುವುದು – ನೀರಿನೊಳಗೇ ಲೀನವಾಗುವುದು
4) ಹೆಣ್ಣು ಕೊಂತ – ಗಂಡಸರು ಅದರ ಪಕ್ಕ ಕೂರುವುದು
5)ಗಂಡು ಕೊಂತ-ಹೆಂಗಸರು, ಅದರ ಪಕ್ಕ ಕೂರುವುದು
6) ವಯಸ್ಸಿನ ವೈರುಧ್ಯ
- ಅಭಿನಯದಲ್ಲಿ ವೈರುಧ್ಯಗಳು:
೧)ದೇವರಗುಡ ಗಂಡಸು – ಹೆಣ್ಣು ಇಲ್ಲ೨)ಹುಲಿವೇಷ – ನಿರ್ವೀರ್ಯತೆ
೩)ಗಂಡುತನ-ಬಂಜೆತನ