ಲಂಕೇಶರ ಕಾದಂಬರಿಗಳ ‘ಮುಸ್ಸಂಜೆ ವಲಯ’
ಲಂಕೇಶ್-೬೦, ಮೈಸೂರು ವಿಚಾರಸಂಕೀರಣದಲ್ಲಿ ಮಾಡಿದ ಭಾಷಣದಿಂದ ಲಂಕೇಶರ ಕಾದಂಬರಿಗಳ ಬಗ್ಗೆ ಮಾತನಾಡುವುದಕ್ಕೆ ಮೊದಲು ನವ್ಯ ಸಾಹಿತ್ಯದ (ಆಗ ನಾನಿನ್ನು ವಿದ್ಯಾರ್ಥಿ) ಆ ದಿನಗಳನ್ನು ನೆನೆಸಿಕೊಳ್ಳಲಿಕ್ಕೆ ನನಗೆ ಬಹಳ ಇಸ್ತ ಆಗುತ್ತದೆ. ಅನಂತಮೂರ್ತಿ, ತೇಜಸ್ವಿ, ಲಂಕೇಶರು ನಮಗೆ ಆ ಕಾಲಕ್ಕೆ ಪೂರ್ಣತೇಜಸ್ವಿಗಳಂತೆ ಕಾಣುತ್ತಿದ್ದರು. ಇವರ ಬರವಣಿಗೆಯ ಪ್ರಭಾವದಲ್ಲಿ ನಾವು ಏನಾಗಿದ್ವಿ ಅಂತಂದ್ರೆ ಮಾಸ್ತಿಯಾಗಲಿ, ಕುವೆಂಪು ಆಗಲಿ, ಬೇಂದ್ರೆಯಾಗಲೀ ನಮಗೆ ಕಾಣುತ್ತಿರಲಿಲ್ಲ. ಹಾಗೆ ಈ ಮೂವರೇ ನಮಗೆ ಪೂರ್ಣಸೂರ್ಯ ಪ್ರಭೆಯ ಹಾಗೆ ಕಾಣುತ್ತಿದ್ದರು. ಆಗ ಹುಡುಗರಾಗಿದ್ದ ನಮಗೆ ಸಾಹಿತ್ಯದ ರೂಪುರೇಷೆಗಳು ಮನಸ್ಸಿನಲ್ಲಿ ಮೂಡುತ್ತಿದ್ದ ಹೊತ್ತಿನಲ್ಲಿ ಮಾಸ್ತಿ, ಕುವೆಂಪು, ಬೇಂದ್ರೆ, ಪು.ತಿ.ನ. ಇವರೆಲ್ಲ ಕಾಣದ ಹಾಗೆ ನವ್ಯ ಸಾಹಿತ್ಯದ ಪ್ರಭೆ ಮಾತ್ರ ನಮ್ಮ ಕಣ್ಣಿಗೆ ರಾಚುತ್ತಿತ್ತು. ಅನಂತಮೂರ್ತಿಯವರು ನಮ್ಮ ಸಂಸ್ಕೃತಿಗೆ ತಮ್ಮ ಕಾದಂಬರಿಗಳ ಮೂಲಕ ಹೊಸ ವ್ಯಾಖ್ಯಾನಗಳನ್ನು…