ನವ್ಯತೆ ಕೆಲವು ಪ್ರಶ್ನೆಗಳು

ನವ್ಯತೆ ಕೆಲವು ಪ್ರಶ್ನೆಗಳು

೧೯೫೦, ಅಂದರೆ ಸರಿಯಾಗಿ ಈ ಶತಮಾನದ ಉತ್ತರಾರ್ಧದ ಪ್ರಾರಂಭದಲ್ಲಿ ಗೋಕಾಕರು ‘ನವ್ಯ ಕಾವ್ಯ’ದ ಪ್ರಣಾಳಿಕೆಯನ್ನು ಮುಂಬಯಿಯ ಸಾಹಿತ್ಯ ಸಮ್ಮೇಳನದ ಲೇಖಕ ಗೋಷ್ಟಿಯ ಅಧ್ಯಕ್ಷ ಭಾಷಣದಲ್ಲಿ ಹುಟ್ಟು ಹಾಕಿದುದು ಒಂದು ಚಾರಿತ್ರಿಕ ದಾಖಲೆಯಾಗಿದೆ. “ಆಧುನಿಕ ಕನ್ನಡ ಕಾವ್ಯವೂ ತನ್ನ ಪರಂಪರೆಯ ಸಿದ್ದಿಯನ್ನು ಮುಟ್ಟಿದಾಗ – ಮುಂದೇನೆಂಬ ಪ್ರಶ್ನೆ ಏಳುತ್ತದೆ. ಆ ಪ್ರಶ್ನೆಗೆ ಉತ್ತರ ಇದು, ನವ್ಯ ಕಾವ್ಯ” ಎಂದು ಆ ಸಂದರ್ಭದಲ್ಲಿ ಕನ್ನಡ ಸಾಹಿತ್ಯದಲ್ಲಿ ಅನಿರ್ವಾರ್ಯರಾಗಿರುವ ‘ನವ್ಯ ದೃಷ್ಟಿ’ಯನ್ನು ಪ್ರತಿಪಾದಿಸಿ, ಅಲ್ಲಿಂದ ೨೫ ವರ್ಷಗಳ ತನಾ ಈ ನವ್ಯ ಕಾವ್ಯದ ರೂಪು ರೇಖೆಗಳ ಪ್ರತಿಪಾದನೆಯನ್ನು ವಿಧಿ ವಿಧಾನಗಳನ್ನು ಕ್ರೂಡ್ಹೀಕರಿಸಿಕೊಂಡು ಬಂದಿರುವ ಕೃತಿ ‘ನವ್ಯತೆ’. ಈ ದೃಷ್ಟಿಯಿಂದ ‘ನವ್ಯತೆ’, ‘ನವ್ಯ ಕಾವ್ಯ’ದ ಒಂದು ಲಾಕ್ಷಣಿಕ ಗ್ರಂಥವಾಗಿ ಬೆಳೆದುಬಂದಿದೆ.
ಗೋಕಾಕರು ನವ್ಯ ಕಾವ್ಯದ ಸುಳಿವನ್ನು ಹುಟ್ಟು ಹಾಕುವಾಗ ಆಗಲೇ ಎರಡು ಜಾಗತಿಕ ಯುದ್ದಗಳು ಅವುಗಳ ಪರಿಣಾಮ, ಭಾರತೀಯ ಜೀವನದ ಸಂಕೀರ್ಣತೆ, ಪಾಶ್ಚಿಮಾತ್ಯ ಸಂಸ್ಕೃತಿ, ಸಾಹಿತ್ಯಗಳನ್ನು ಅರಗಿಸಿಕೊಳ್ಳುವಾಗಿನ ತೊಳಲಾಟ ಅವರ ಗಮನ ಸೆಳಿದಿತ್ತು. ಆ ಹೊತ್ತಿಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಮಾನವನ ದೃಷ್ಟಿ ಮಲಿನವಾದಂತೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ ಮಲಿನಗೊಂಡಿರುವುದನ್ನು ಗುರುತಿಸಿ , ಈ ಸಂದರ್ಭದಲ್ಲಿ ‘ಒಂದು ನವ ಮಾನವತಾದೃಷ್ಟಿ ಸಾಹಿತ್ಯದ ನವ್ಯ ಜೀವನದ ದೃಷ್ಟಿಯಾಗಬೇಕು. ಈ ಜೀವನದ ದೃಷ್ಟಿ ನವ್ಯ ಸಾಹಿತ್ಯದಲ್ಲಿ ಮೊಳೆತು ಸಕಲ ಸೃಷ್ಟಿಯನ್ನೇ ದಿವ್ಯವಾಗಿಸಬೇಕು ಎಂಬ ಬಯಕೆ ಗೋಕಾಕರದಾಗಿತ್ತು. ಆಧುನಿಕ ಸಾಹಿತ್ಯ (ರಮ್ಯ ನವೋದಯ) ಮಾರ್ಗ ಈ ದೃಷ್ಟಿಯನ್ನು ತಟ್ಟಲು ಅಸಹಾಯಕವಾಗಿದೆ. ಆದ್ದರಿಂದ ಸಹಜವಾಗಿಯೇ ‘ನವ್ಯ ಕಾವ್ಯ’ ಕನ್ನಡದಲ್ಲಿ ಅನಿವಾರ್ಯ ಎಂಬ ವಾದವನ್ನು ಮಂಡಿಸಿದರು.
ಇಂದಿನ ಸಂಕೀರ್ಣ ಸಮಾಜದ ಬದುಕಿಗೆ ತಕ್ಕಂತೆ ವೈಜ್ಞಾನಿಕ, ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಜಾಗತಿಕ ರಾಜಕಾರಣ, ವಿಶ್ವ ಬಾಂಧವ್ಯ – ಮೊದಲಾದ ಚಲನವಲನಗಳನ್ನು ‘ಕುಲ’ಗಳ ಸಮಾಜ ವ್ಯ್ವವಸ್ಥೆಯಿಂದ ಹಿಡಿದು ಮಾರ್ಕ್ಸ್ ವಾದದ ತನಕ ಎಲ್ಲದರ ಪರಿಚಯವಾಗಿ ವಿಶ್ವ ಚದುರಂಗದಾಟ ಮನಸ್ಸನ್ನು ಸೆಳೆದಿರಬೇಕು. ಪ್ರಾಚೀನ, ಅವಾರ್ಚೀನ ದರ್ಶನ ಸಂಗ್ರಹಗಳು ನಮ್ಮದಾಗಬೇಕು. ಪ್ರಜಾಪ್ರಭುತ್ವ, ಸಮಾಜವಾದ, ಮಾರ್ಕ್ಸ್ ವಾದ, ಸರ್ವಾಧಿಕಾರತ್ವ , ನಿರಂಕುಶ ಸಮಾಜವಾದ ಇವೈದು ಆಧುನಿಕ ಸಮಾಜದ ದರ್ಶನಗಳು. ಸತ್ಯ, ಸೌಂದರ್ಯ, ಪ್ರೇಮ, ಕಲ್ಯಾಣ, ಮಂಗಳ – ಈ ಐದು ಆದರ್ಶಗಳು ವ್ಯಕ್ತಿಯ ಜೀವನದ ಐದು ಸೂತ್ರಗಳಾಗಬೇಕೆಂದು, ಇವು ನವ್ಯಕಾವ್ಯದ ದ್ರವ್ಯವಾಗಬೇಕೆಂದು ಕರೆಯಿತ್ತರು. ‘ಸಾಹಿತ್ಯವು ಬರೀ ಸತ್ಯ ಇಲ್ಲವೇ ಸೌಂದರ್ಯಕ್ಕೆ ಅಂಟಿಕೊಂಡು ನಿಲ್ಲದೆ ಮೇಲೆ ಹೇಳಿದ ಸಮ್ಯಕ್ತ್ವವನ್ನು ಚಿತ್ರಿಸಬೇಕಾಗಿದೆ. ಐದು ಅಮೃತ ತತ್ವಗಳ ಸಮೀಕರಣವಾಗಬೇಕಾಗಿದೆ . ಈ ಸಮೀಕರಣವೇ ನವ್ಯ ಸಾಹಿತ್ಯದ ಸೂತ್ರವಾಗಬೇಕಾಗಿದೆ ಎಂದು ಹೇಳಿದರು.
ಈ ರೀತಿಯ ಸಾಹಿತ್ಯದ ನವ್ಯ ಜೀವನದೃಷ್ಟಿ ಸಹಜವಾಗಿಯೇ ಆಗಿದ್ದು ಸಾಹಿತ್ಯ ಕ್ರಮದಿಂದ ಭಿನ್ನವಾದ ತತ್ವ, ದೃಷ್ಟಿ, ವಸ್ತು ಹೊಸ ಪ್ರಜ್ಞೆಗಳನ್ನೊಳಗೊಂಡ ಹೊಸ ಸಾಹಿತ್ಯವನ್ನು ನಿರೀಕ್ಷಿಸುವಂತೆ ಈ ಮಾತುಗಳು ಕಾಣುತ್ತವೆ. ಆದರೆ ಹೀಗೆ ನವ್ಯಕಾವ್ಯದ ಹೊಲವನ್ನು ಹುಟ್ಟು ಹಾಕಿದ ಗೋಕಾಕರೇ “ವಾಸ್ತವಿಕ ಇಲ್ಲವೇ ಅವಾಸ್ತವಿಕ ಪ್ರಜ್ಞೆಯು ‘ನವ್ಯ’ವೆಂದು ನಾವು ಗೆರೆ ಎಳೆಯಲಾರೆವು. ಪ್ರಜ್ಞೆಯು ಪರಂಪರಾನುಗತಿಕವಾದುದು. ಈ ನವ್ಯ ಇಲ್ಲದೆ ನವೀನ ಪ್ರಜ್ಞೆ ಬರೀ ನವ್ಯ ಕಾವ್ಯದಲ್ಲಿಯಷ್ಟೇ ಏಕೆ, ಆಧುನಿಕ (ರಮ್ಯ,ನವೋದಯ) ಕಾವ್ಯದಲೂ ವ್ಯಕ್ತವಾಗಬಹುದು. ಬಹಳವಾಗಿ ನಾವಿಷ್ಟು ಹೇಳಬಲ್ಲೆವು. ಪರಂಪರಾನುಗತಿಕ ಪ್ರಜ್ಞೆಗಿಂತ ನವೀನ ಪ್ರಜ್ಞೆಯೇ ನವ್ಯಕಾವ್ಯದಲ್ಲಿ ವಾಡಿಕೆಯಾಗಬಲ್ಲದು. ಇಂದಿನ ಪ್ರಜ್ಞೆ ಹೊಸತು ನಿಜ. ಆದರೆ ಅದು ಬರೀ ನವ್ಯಕಾವ್ಯದಲ್ಲೇ ಮೂಡಬೇಕಾಗಿಲ್ಲ” ಎಂದು ಸರ್ವಗ್ನನಲ್ಲೂ ಮತ್ತಿತರ ಪ್ರಾಚಿನ ಸಾಹಿತಿಗಳೂ ಆಯಾ ಕಾಲಕ್ಕೆ ತಕ್ಕ ನವ್ಯತೆಯನ್ನು ಕಾಣಬಹುದೆಂದು ಹೇಳಿರುವುದು ಮೇಲಿನ ಅವರ ನವ್ಯಕಾವ್ಯದ ತಾತ್ವಿಕ ತಳಹದಿಯನ್ನೇ ಅಲ್ಲಾಡಿಸುವಂತಹುದು. ಕೊನೆಗೆ ‘ಸಮನ್ವಯ’ದ ಘೋಷಣೆಯ ೧೫ನೇ ವಿಭಾಗದಲ್ಲಿ “ನವ್ಯ ಸಾಹಿತ್ಯ ನವೋದಯ ಸಾಹಿತ್ಯದ ಒಂದು ಅವಸ್ಥೆ ಮಾತ್ರ; ತನಗೆ ತಾನೇ ಪ್ರತ್ಯೇಕೆ ಮಾರ್ಗವಲ್ಲ. ಉದ್ದೀಪನ – ಪ್ರೇರಣೆಗಳ ದೃಷ್ಟಿಯಿಂದಲೂ ಇದು ಸಮರ್ಥನೀಯ” ಎಂದು ಹೇಳಿರುವುದಂತೂ ಗೋಕಾಕರು ‘ನವ್ಯಕಾವ್ಯ’ಕ್ಕೆ ಕರೆಕೊಡುವ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಆದ್ದರಿಂದಲೇ ಏನೋ ಗೋಕಾಕರು ‘ನವ್ಯಕಾವ್ಯ’ ಎಂದರೆ ಅದು ಕೇವಲ ‘ವಿಶೇಷ ತಂತ್ರ ವಿಧಾನಗಳನ್ನು ಪಡೆದ ಕಾವ್ಯವೆಂಬರ್ಥದಲ್ಲಿ ಉಪಯೋಗಿಸಿದ್ದೇನೆ…..
“ಶೈಲಿ ಮತ್ತು ವಾಕ್ಸರಣಿಯಲ್ಲಿ ಆಧುನಿಕವಾಗಿದುದ್ದರ ಕಡೆಗೆ ಹೆಚ್ಚು ಸಹಾನುಭೂತಿಯುಳ್ಳ ವಿಶಿಷ್ಟವಾದ ವೈಚಾರಿಕ ವಿಧಾನವೇ ನವ್ಯ” ಎಂದು ವ್ಯಾಖ್ಯಾನಿಸಿ ನವ್ಯ ಕಾವ್ಯದ ದೃಷ್ಟಿಯನ್ನು ಇಷ್ಟಮಟ್ಟಿಗೆ ಮಾತ್ರ ಇಳಿಸಿ ಬಿಟ್ಟಿದ್ದಾರೆ(reduced) ಎನ್ನಿಸುತ್ತದೆ.
ಇನ್ನು ಗೋಕಾಕರು ಹೇಳುವ ಇಂದಿನ ಸಾಮಾಜಿಕ ಸಂಕೀರ್ಣತೆಯ ಬಗ್ಗೆ ಒಂದು ಮಾತು ಹೇಳಬಹುದು. ಸಾಮಾಜಿಕ ಸಂಕೀರ್ಣತೆ ಎಂಬುದು ಕೇವಲ ಇಂಡಿಯನ್ ಕಾಲದ ಲೇಖಕರು ಮಾತ್ರ ಎದುರಿಸಬೇಕಾಗಿರುವ ಸಮಸ್ಯೆ ಇಲ್ಲ. ಎಲ್ಲಾ ಕಾಲದಲ್ಲಿಯೂ ಲೇಖಕರು ಇದನ್ನು ಶಕ್ತಿಗೆ ತಕ್ಕಂತೆ ಎದುರಿಸುತ್ತಲೇ ಬಂದಿದ್ದಾರೆ. ಉದಾಹರಣೆಗೆ ಜೈನನಾದ ಪಂಪ ಜೈನ ಪರಂಪರೆಯ ವಸ್ತುವನ್ನು ಬಿಟ್ಟು ವೈದಿಕ ಪರಂಪರೆಯ ಭಾರತದ ಕಥಾ ವಸ್ತುವನ್ನು ಆಯ್ದುಕೊಳ್ಳುವಾಗಲೀ ಆಟ ವೈದಿಕ ಮತಾನುಯಾಯಿ ರಾಜ ಅರಿಕೇಸರಿಯ ಅಸ್ಥಾನದಲ್ಲಿದ್ದುದಾಗಲೀ ಕಥಾ ನಾಯಕನನ್ನು ಅರಿಕೇಸರಿಗೆ ಸಮೀಕರಿಸಿಕೊಂಡು ರಾಜ ಭಕ್ತಿಯಿಂದ ಬಾಗಬೇಕಾಗಿ ಬಂದದ್ದಾಗಲೀ ಆ ಕಾಲದ ಒಬ್ಬ ಸೃಜನಶೀಲ ವ್ಯಕ್ತಿ ಎದುರಿಸಬೇಕಾದ ಸಂಕೀರ್ಣಗಳಲ್ಲವೇ? ಆದ್ದರಿಂದ ಸಂಕೀರ್ಣತೆ ಎಂಬುದು ಕೇವಲ ಸ್ವಾತಂತ್ರೋತ್ತರ ಭಾರತದ ಬರಹಗಾರನ ಸಮಸ್ಯೆ ಮಾತ್ರ ಅಲ್ಲ, ಎಲ್ಲಾ ಕಾಲದಲ್ಲೂ ತನ್ನದೇ ಆದ ವಿಶಿಷ್ಟ ಸಂಕೀರ್ಣತೆಗಳನ್ನು ಬರಹಗಾರ ಎದುರಿಸಿಕೊಂಡೇ ಬಂದಿರುತ್ತಾನಲ್ಲವೇ? ಒಂದೊಂದು ಕಾಲದ ಸಂಕೀರ್ಣತೆಯೂ ಒಂದೊಂದು ತರನದ್ದಿರಬಹುದೇ ವಿನಃ ಸಂಕೀರ್ಣತೆಯನ್ನು ಎದುರಿಸದೇ ಕವಿ ಕಾವ್ಯವನ್ನು ರಚಿಸಲಾರ. ಅಂದಮೇಲೆ ಇಂದಿನ ಲೇಖಕ ಮಾತ್ರ ಸಂಕೀರ್ಣತೆಯನ್ನು ಎದುರಿಸಬೇಕಾಗಿ ಬಂದಿದೆ ಎಂಬ ಗೋಕಾಕರ ವಾದ ಸಮಂಜಸವಾಗಿದೆಯೇ ಎಂಬ ಪ್ರಶ್ನೆ ಏಳುತ್ತದೆ.
‘ನವ್ಯ ಕಾವ್ಯವೆಂದರೆ ಅದು ಕೇವಲ ವಿಶೇಷ ತಂತ್ರ ವಿಧಾನಗಳನ್ನು ಪಡೆದ ಕಾವ್ಯ’ವೆಂದರ್ಥದಲ್ಲಿ ಗೋಕಾಕರು ಉಪಯೋಗಿಸಿರುವುದು ಇನ್ನೊಂದು ರೀತಿಯ ಸಂಶಯಕ್ಕೆ ಎಡೆಮಾಡಿಕೊಡುತ್ತದೆ, ಏಕೆಂದರೆ ಕಾವ್ಯದ ರೂಪ ಬದಲಾವಣೆಯಾಗುವುದು ಕವಿಯ ತಾತ್ವಿಕ ಚಿಂತನೆ, ಕಾವ್ಯದ ವಸ್ತು ದೃಷ್ಟಿಕೋನ ಇವುಗಳನ್ನು ಅವಲಂಭಿಸುರುತ್ತದೆ. ಇವು ಹೊಸತಾದಾಗ ಮಾತ್ರ ಅದಕ್ಕೆ ವಿಶಿಷ್ಟ ರೀತಿಯ ತಂತ್ರ ವಿಧಾನವನ್ನು ಕಾವ್ಯದ ದ್ರವ್ಯವೇ ಹುಡುಕಿಕೊಳ್ಳಲು ಪ್ರಯತ್ನಿಸುತ್ತದೆ. ಆಗ ವಿಶೇಷ ತಂತ್ರಕ್ಕೆ ಬೆಲೆ ಇರುತ್ತದೆ. ಇಲ್ಲದಿದ್ದರೆ ಈ ‘ವಿಶೇಷ ತಂತ್ರ’ಕ್ಕೆ ಯಾವ ಬೆಲೆಯೂ ಬರುವುದಿಲ್ಲ. ಅದು ಕೇವಲ ರೂಪದೊಡನೆ ಆಟವಾಡಿದಂತಾಗುತ್ತದಲ್ಲವೇ? ಈ ರೀತಿಯ ಹೇಳಿಕೆಯಿಂದ ಗೋಕಾಕರು ಹೇಳುವ ಕಾವ್ಯ ಪ್ರಜ್ಞೆ, ದ್ರವ್ಯ, ಇವೆಲ್ಲಕ್ಕೂ ವಿರೋಧವಾದ ಧೋರಣೆಯೂ ಆಗಿ ಕಂಡು ಬಂದಾಗುತ್ತದೆ ಎನ್ನಿಸುತ್ತದೆ.
ಈ ಕೆಲವು ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಗೋಕಾಕರು ಕರೆ ಕೊಟ್ಟ ನವ್ಯಕಾವ್ಯದ ರೀತಿ ಮತ್ತು ನವೋದಯ ಮತ್ತು ನವ್ಯಕಾವ್ಯಕ್ಕೆ ಇರುವ ವ್ಯತ್ಯಾಸಗಳ ಬಗೆಗೆ ಚರ್ಚಿಸಬಹುದು.
ನವ್ಯತೆಯ ಲಕ್ಷಣಗಳು
ಗೋಕಾಕರ ಪ್ರಕಾರ ;ನವ್ಯತೆಯು ಬರೀ ಕಾಲಮಾನ – ಪರಿಸ್ಥಿತಿಗಳಿಂದ ಬಂದ ಮಾರ್ಪಾಟಲ್ಲ. ಅದು ಕಾವ್ಯದ ವಿಧಾನ. ರೀತಿ ಇಲ್ಲವೇ ಸೂಕ್ಷ್ಮ ಶರೀರದಲ್ಲಾಗುವ ಮಾರ್ಪಾಟು. ಕಾವ್ಯ ಆತ್ಮ ಯಾವಾಗಲೂ ಒಂದೇ, ದರ್ಶನ ಇಲ್ಲವೇ ಕಾಣ್ಕೆಯೇ ಈ ಆತ್ಮ. ಅದನ್ನು ಒಡಮೂಡಿಸುವಾಗ ಕವಿಯು ಬಗೆಬಗೆಯ ಕಾವ್ಯ ಸಾಮಗ್ರಿಯನ್ನು ಉಪಯೋಗಿಸುತ್ತಾನೆ.
ನವ್ಯಕಾವ್ಯದಲ್ಲಿ(೧)ಬಳಕೆಯ ಮಾತು (೨)ಛಂದಸ್ಸಿನಲ್ಲಿಯ ನವೀನ ಪ್ರಯೋಗ (೩) ಪ್ರತಿಮಾ ಪ್ರಧಾನತೆ (೪) ವಾಸ್ತವಿಕ ಚಿತ್ರದೃಷ್ಟಿ (5)ಪಾರಿಭಾಷಿಕ ಶೈಲಿ (6) ವಸ್ತುವಿನ ಆಯ್ಕೆಯಲ್ಲಿ ಸ್ವಾತಂತ್ರ್ಯ (೭) ಬುದ್ದಿ ಪ್ರಧಾನತೆ (೮) ವ್ಯಕ್ತತೀತ ಮೌಲ್ಯಗಳೇ ಪ್ರಧಾನತೆ ಇರುತ್ತದೆಂದು ಹೇಳಿದ್ದಾರೆ.
ಇವುಗಳಲ್ಲಿ ಮೊದಲು ಐದು ಲಕ್ಷಣಗಳಲ್ಲಿ ಆಧುನಿಕ ಕಾವ್ಯವು ಆಸ್ಥೆ ವಹಿಸಿದ್ದನ್ನು ಗೋಕಾಕರು ಗುರುತಿಸುತ್ತಾರೆ. ಆದರೆ ‘ನವ್ಯ ಪ್ರಜ್ಞೆ’ ಬೆಳೆಯುವುದು ಮಾತ್ರ ಇವುಗಳೆಲ್ಲದರ “ಸಮಯಯೋಚಿತ ಪ್ರಜ್ಞೆ” ಮಾತ್ರ ಎಂದು ಹೇಳಿ, ಆಧುನಿಕ ಕಾವ್ಯದಲ್ಲೂ ಸಮಕಾಲಿನತೆಯನ್ನು ತೋರಿಸಿದ್ದಾರೆ. ಆದ್ದರಿಂದ ‘ನವ್ಯತೆ’ ಆಧುನಿಕ ಕಾವ್ಯ ಮಾರ್ಗದ ಒಂದು ಅವಸ್ಥಾಂತರ ಮಾತ್ರ ಆಗುತ್ತದೆ ಎಂದು ಹೇಳಬಹುದೇ ವಿನಃ ಇವೆಲ್ಲಾ ಲಕ್ಷಣಗಳು ನವ್ಯಕಾವ್ಯಕ್ಕೆ ಮಾತ್ರ ವಿಶಿಷ್ಟವಾದವು ಎಂದು ಹೇಳಲಾಗುವುದಿಲ್ಲ.
ನವೋದಯ ಮತ್ತು ನವ್ಯದ ವ್ಯತ್ಯಾಸಗಳು
ಗೋಕಾಕರ ದೃಷ್ಟಿಯಲ್ಲಿ ನವ್ಯಕಾವ್ಯ ನವೋದಯ ಕಾವ್ಯಕ್ಕಿಂತ ಹೇಗೆ ಭಿನ್ನ ಎಂಬುದನ್ನು ಈ ರೀತಿ ಸಂಗ್ರಹಿಸಬಹುದು.
(೧)ರೋಮ್ಯಾಂಟಿಕ್ ಕವಿಗಳು ತಮ್ಮ ಅನುಭವವನ್ನು ಹೆಚ್ಚು ವ್ಯಕ್ತಿನಿಷ್ಥವಾಗಿ, ವರ್ಣಕವಾಗಿ, ಭಾವಮಯವಾಗಿ ಸಾಧಿಸುತ್ತಾರೆ. ನವ್ಯ ಕವಿ ಇದನ್ನು ಹೆಚ್ಚು ನಾಟ್ಯಾತ್ಮಕವಾಗಿ, ವಸ್ತುಕವಾಗಿ, ಬುದ್ದಿ ಪ್ರಧಾನವಾಗಿ ಸಾಧಿಸುತ್ತಾನೆ.
(೨)ಎರಡು ಮಾರ್ಗಗಳಲ್ಲಿಯೂ ಅಪೂರ್ಣತೆಯುಂಟು, ಎರಡು ಮಾರ್ಗಗಳಲ್ಲಿಯೂ ಮಹೋನ್ನತಿ ಸಾಧ್ಯ.
(೩)ರೋಮ್ಯಾಂಟಿಕ್ ಕವಿಗೆ ವರ್ಣಕತೆ ಹೆಚ್ಚು ಪ್ರಿಯವಾದರೆ ನವ್ಯ ಕವಿ ವಸ್ತುಕತೆಗೆ ಹೆಚ್ಚಾಗಿ ಒಲಿಯುತ್ತಾರೆ.
(೪)ನವ್ಯ ಕವಿಗೆ ಯುಗಮಾನದ ಪ್ರಜ್ಞೆಯನ್ನು ಕುರಿತು ಮಿತಿಮೀರಿದ ಅಭಿಮಾನವಿರುತ್ತದೆ. ಸಾರ್ವಕಾಲಿಕ ಮೌಲ್ಯಗಳು ಅವನನ್ನು ಹೆಚ್ಚಾಗಿ ಆಕರ್ಷಿಸಿರುವ ಸಂಭವವಿದೆ. ಇದೇ ಕಾರಣದ ಮೂಲಕ ನವ್ಯ ಕವಿಯು ಪ್ರತಿಮಾ ದೃಷ್ಟಿ ರೋಮ್ಯಾಂಟಿಕ್ ಸೃಷ್ಟಿಗಿಂತ ಬೇರೆಯಾಗಿರುತ್ತದೆ.
(೫)ಅಂತಃಸ್ಪುರಣ ಕಾವ್ಯದ ಜೀವಾಳ ರೋಮ್ಯಾಂಟಿಕ್ ನ ಕಾವ್ಯದಲ್ಲಿ ಭಾವನಾವೇಶದಿಂದ ಇದು ಮುಚ್ಚಿ ಹೋಗಬಹುದು. ನವ್ಯಕವಿಯ ಬುದ್ಧಿ ಹೆಚ್ಚು ಚುರುಕಾಗಿರುತ್ತದೆ. ಅವನ ಅಂತಃಸ್ಪುರಣ ಅವನಲ್ಲಿಯ ಬೌದ್ಹಿಕ ವ್ಯಾಪಾರದ ಅತಿರೇಖದ ಮೂಲಕ ಸ್ಪುಟವಾಗದೇ ಹೋಗಬಹುದು.
(೬) ಭಾಷಾ ಪ್ರಯೋಗ ಹಾಗೂ ನಾದಗ್ರಹಣ ವಿಷಯದಲ್ಲಿಯೂ ಸಹ ಅವರ ದಾರಿಗಳು ಟಿಸಿಲೊಡದಿವೆ. ಭಾಷೆ ರೋಮ್ಯಾಂಟಿಗನಿಗೆ ಪ್ರಿಯತಮೆಯ ಅಂತ:ಪುರವಾಗಿದ್ದರೆ,ನವ್ಯಕವಿಗೆ ಅದು ಕುಸ್ತಿಯ ಕಣವಾಗಿರಬಹುದು.
(೭) ತಾಳ ಮತ್ತು ಲಯ: ರೋಮ್ಯಾಂಟಿಕ್ ಕವಿಯ ಸೂಕ್ಷ್ಮ ತಾಳ ಲಯಗಳು ಅವನು ತುಳಿಯುವ ರಹದಾರಿಯಲ್ಲಿ ಅಲ್ಲಲ್ಲಿ ಅರಳುತ್ತದೆ. ನವ್ಯ ಕವಿ ತಾನು ಗುರುತಿಸಿದ ಸೂಕ್ಷ್ಮಲಯಗಳ ಛಾನ್ದಸಿಕ ದೇಹವನ್ನು ತನ್ನ ಅನುಭವಕ್ಕೆ ಕೊಡಲು ಹವಣಿಸುತ್ತಾನೆ.
(೮)ರಚನಾಕೌಶಲ್ಯದಿಂದ ನವ್ಯಕವಿ ಮೂರ್ತಿಶಿಲ್ಪದ ಮಾದರಿ ಒಲಿದಿದ್ದರೆ, ರೋಮ್ಯಾಂಟಿಕ್ ಕವಿ ಚಿತ್ರ ಶಿಲ್ಪದ ವಿಧಾನವನ್ನು ಮೆಚ್ಚಿದ್ದಾನೆ.
ಈ ರೀತಿಯ ಭಿನ್ನತೆಗಳನ್ನು ಗೋಕಾಕರು ಸೂಚಿಸ್ದಾಗ ಈ ಕೆಳಗಿನ ಪ್ರಶ್ನೆಗಳು ಏಳುವುದು ಸಹಜ.
(೧)ಯಾವುದೇ ಕಾವ್ಯದಲ್ಲೂ ‘ವರ್ಣಕತೆ’ ಅಥವಾ ‘ವಸ್ತುಕತೆ’ ಎಮಬ್ ವಿಭಾಗ ಮಾಡುವುದು ಸರಿಯೇ? ಎಲ್ಲಾ ಉತ್ತಮ ಕಾವ್ಯದಲ್ಲೂ ಇವೆಲ್ಲದರ ಹದನಾದ ಮಿಳಿತವೇ ಉತ್ಕ್ರುಷ್ಟವಲ್ಲವೇ?
(೨)ಸಾರ್ವಕಾಲಿಕ ಮೌಲ್ಯವಿರುವುದರಿಂದಲೇ ಅಲ್ಲವೇ ಶತಮಾನಗಳಿಂದ ಕೃತಿಗಳು ಉಳಿದು ಬಂದಿರುವುದು? ಇದು ನವ್ಯಕ್ಕೆ ಹೇಗೆ ಪ್ರತ್ಯೇಕವಾಗಿದೆ?
(೩)ಕಾವ್ಯದಲ್ಲಿ ‘ಭಾವ ಇಷ್ಟು’,’ಬುದ್ಧಿ ಇಷ್ಟು’ ಎಂದು ಬೇರ್ಪಡಿಸಿ ತೋರಿಸಲಾಗುವುದೇ?
(೪)ತಾನು ಸೃಷ್ಟಿಸಿದ ಕವನದ ಆಶಯಕ್ಕೆ ಕಾರ್ಯಕಾರಿ ಸಂಬಂಧವನ್ನು ಕಲ್ಪಿಸುವುದರಲ್ಲಿ ಪ್ರತಿಯೊಬ್ಬ ಶಕ್ತಿಯುತ ಕವಿಗೂ ಭಾಷೆ ಸವಾಲನ್ನು ಎಸೆಯುವುದಿಲ್ಲವೇ? ಇಲ್ಲದಿದ್ದರೆ ಕವಿ ಭಾಷೆಯನ್ನು ಕಾವ್ಯವಾಗಿ ಮಾಡಲು, ಹಿಗ್ಗಿಸಿಕೊಳ್ಳಲು ಯಾವ ಕಾಲದಲ್ಲಾದರೂ ಪ್ರಯತ್ನಿಸುವುದಿಲ್ಲವೇ? ಇದೆ ಪ್ರಶ್ನೆಯನ್ನು ‘ತಾಳ ಲಯ’ಗಳಿಗೂ ಹಾಕಬಹುದಲ್ಲವೇ?
(೫) ಮತ್ತು ಕೊನೆಯದಾಗಿ ಈ ಎಲ್ಲಾ ಪ್ರಶ್ನೆಗಳನ್ನೂ ಯಾವುದೇ ಕಾಲದ ಉತ್ತಮವಲ್ಲದ ಕವಿ ಮತ್ತು ಉತ್ತಮ ಕವಿಗಳಿಗೆ ಹಾಕಬಹುದಲ್ಲದೆ ನವ್ಯ ಮತ್ತು ರೋಮಂಟಿಗರಿಗೆ ಮಾತ್ರ ಹಾಕಿಕೊಳ್ಳಬೇಕೇ?
ಈ ಎಲ್ಲಾ ಹಿನ್ನೆಲೆಗಳಿಂದ ನೋಡಿದಾಗ “ಗೋಕಾಕರ ಕಾವ್ಯ ಮೀಮಾಂಸೆ ತಪ್ಪೆಂದು ಹೇಳಲಾಗದಿದ್ದರೂ ಅದು ನವ್ಯ ಕಾವ್ಯದ ರೀತಿ ಹೇಗಾಗುತ್ತದೆಂಬುದು ಎಷ್ಟು ಯೋಚಿಸಿದರು ಬಗಹರಿಯಲಾರದು. ವಿಶಾಲದ ದರ್ಶನದಲ್ಲಿಯೇ ನವ್ಯತೆ ಇರುತ್ತಿದ್ದರೆ ನಮ್ಮ ಮೊದಲ ತಲೆಮಾರಿನ ಕವಿಗಳ ಕಾವ್ಯ ನವ್ಯ ಏಕಲ್ಲ” ಎಂಬ ಕೀರ್ತಿನಾಥ ಕುರ್ತುಕೋಟಿಯವರ ಅಭಿಪ್ರಾಯ ಸಮಂಜಸವೇ ಆಗಿದೆ.
“ಕಾವ್ಯದ ರೂಪ ಮತ್ತು ಭಾಷೆಯ ಮಟ್ಟಿಗೆ ಅವರು ನವ್ಯತೆ ತಂದರು, ಕಾವ್ಯಧೋರಣಗೆ ಸಮಬಂಧಿಸಿದಂತೆ ನವೋದಯ ಮಾರ್ಗದೊಂದಿಗೆ ಮೂಲಭೂತ ಜಗಳ ಇವರಿಗೆ ಇರಲಿಲ್ಲ. ಆದ್ದರಿಂದ ಅವರ ನವ್ಯತೆ ಪ್ರಜ್ಞೆಯಾಗಿ ಮೂಡದೆ ಪ್ರತಿಜ್ಞೆಯಾಗಿ ಬಂದಿತು” ಎಂಬ ಜಿ.ಹೆಚ್.ನಾಯಕರ ಹೇಳಿಕೆಗೂ “ಅವರು ಕಲ್ಪಿಸಿಕೊಂಡ ನವ್ಯಕಾವ್ಯ ನವೋದಯ ಕಾವ್ಯಕ್ಕಿಂತ ಭಿನ್ನ ಮನೋಧರ್ಮ್ಮದ್ದಲ್ಲ, ಅದರ ವಿಸ್ತರಣ ಮಾತ್ರ” ಎಂಬ ಎಲ್.ಎಸ್.ಶೇಷಗಿರಿರಾವ್ ಅವರ ಅಭಿಪ್ರಾಯಕ್ಕೂ ಮನ್ನಣೆ ಕೊಡಬೇಕಾಗಿದೆ.

ಕೀರ್ತಿನಾಥ ಕುರ್ತುಕೋಟಿ(೧೯೭೫) ನವ್ಯಕಾವ್ಯ ಪ್ರಯೋಗ ಎರಡನೇ ಆವೃತಿ ಪುಟ ೪೩
ಜಿ.ಹೆಚ್.ನಾಯಕ(೧೯೭೩) ಸಮಕಾಲೀನ ಪುಟ ೯೧
ಎಲ್.ಎಸ್.ಶೇಷಗಿರಿರಾವ್(೧೯೭೩) ಹೊಸಗನ್ನಡ ಸಾಹಿತ್ಯ (ಸಾಮಾನ್ಯನಿಗೆ ಕಾಣದ ಸಾಹಿತ್ಯ ಚರಿತ್ರೆ) ಬೆಂಗಳೂರು ವಿ.ವಿ.ಬೆಂಗಳೂರು.

Leave a Reply

Your email address will not be published. Required fields are marked *