ಮಿಖೈಲ್ ಬಖ್ತಿನ್

ಮಿಖೈಲ್ ಬಖ್ತಿನ್

1tingalu – may 2009

ಇತ್ತೀಚಿನ ಕನ್ನಡಸಾಹಿತ್ಯವನ್ನು ಅರ್ಥೈಸುವ ವಿಧಾನಗಳಲ್ಲಿ ರೂಪವಾದ, ಸಂರಚನವಾದ, ರಚನೋತ್ತರವಾದ, ಓದುಗ-ಪ್ರತಿಕ್ರಿಯಾಸಿದ್ಧಾಂತ , ಮಾರ್ಕ್ಸ್ವಾದ, ಮನೋವೈಜ್ಞಾನಿಕ ಸಿದ್ಧಾಂತ, ದೇಸೀವಾದ, ಕಥಾನಕ ಮುಂತಾದ ಪರಿಕಲ್ಪನೆಗಳು  ಹೇರಳವಾಗಿ ಪ್ರಯೋಗವಾಗುತ್ತಿದೆ. ಈ ಪರಿಕಲ್ಪನೆಗಳು ಅನೇಕ ವಾಡ-ವಿವಾದಗಳನ್ನು ಸೃಷ್ಟಿಸಿದೆ. ಆದರೂ ಪ್ರತ್ಯಕ್ಷವಾಗಿಯೋ , ಪರೋಕ್ಷವಾಗಿಯೋ ಸಾಂಸ್ಕೃತಿಕ ಪಟ್ಯಗಳ ವಿಶ್ಲೇಷಣೆಯಿಂದ ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಈ ಸಿದ್ಧಾಂತಗಳು ಪಶ್ಚಿಮದಿಂದ ಬಂದಿದ್ದರಿಂದ ನಮ್ಮ ಭಾರತೀಯ ಸಾಹಿತ್ಯ ಸಿದ್ಧಾಂತದ ಹಿನ್ನೆಲೆಯಲ್ಲಿ ನಮ್ಮದೇ ಪರಿಕಲ್ಪನೆಗಳನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆಯೂ ಇಲ್ಲದೆ ಇಲ್ಲ .

ಪಾಶ್ಚಿಮಾತ್ಯ ದೇಶಗಳಲ್ಲಿ ೨೦ನೆ ಶತಮಾನದ ಆದಿಯಲ್ಲಿ ಸಾಹಿತ್ಯ ಕೃತಿಗಳನ್ನು ನೋಡುವ ಮತ್ತು ವಿಶ್ಲೇಷಿಸುವ ದಿಕ್ಕಿನಲ್ಲಿ ಅರಿವಿನ ಸ್ಫೋಟ ಕಂಡುಬಂದಿತು. ಮುಖ್ಯವಾಗಿ ಭಾಷಾಶಾಸ್ತ್ರಜ್ಞ ಫ್ಹರ್ಡಿನಾಂದ್ ದಿ ಸೇಸ್ಯುರ್ ಭಾಷಾಸ್ತ್ರದ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಇಡೀ ಮಾನವಶಾಸ್ತ್ರವನ್ನೇ ಹೊಸ ದಿಕ್ಕಿನೆಡೆಯಿಂದ ನೋಡುವಂತೆ ಮಾಡಿದ. ಈತನ ಕಾಣ್ಕೆ ಮುಖ್ಯವಾಗಿ ಪ್ರಪಂಚದಲ್ಲಿ ಜನರು ಸಾವಿರಾರು ಭಾಷೆಗಳನ್ನು ಮಾತನಾಡುತ್ತಾರೆ. ಭಾಷಾಶಾಸ್ತ್ರಜ್ಞ ಈ ಎಲ್ಲಾ ಭಾಷೆಗಳನ್ನು ಒಂದೊಂದಾಗಿ ವಿಶ್ಲೇಷಿಸುವುದು ಕಷ್ಟಸಾಧ್ಯವಾಗುತ್ತದೆ. ಅದಕ್ಕಾಗಿ ಎಲ್ಲಾ ಭಾಷೆಗಳನ್ನು ಒಳಗೊಂಡಂತಹ ಸಾರ್ವರ್ತಿಕ ನಿಯಮಗಳನ್ನು ಗಮನಿಸಿ ಹಿಂದೆ ಇದ್ದ ಭಾಷೆಗಳು ಈಗ ಆಡುವ ಭಾಷೆಗಳು ಮತ್ತೆ ಮುಂದೆಯೂ ಆಡುವ ಭಾಷೆಗಳ ಲಕ್ಷಣಗಳನ್ನು ಗಮನಿಸಿ ಅವುಗಳ ನಿಯಮಗಳನ್ನು ಕಂಡುಹಿಡಿದುಕೊಂದರೆ ಭಾಷಾ ವಿಶ್ಲೇಷಣೆ ವೈಜ್ಞಾನಿಕತೆಯನ್ನು ಪಡೆಯುತ್ತದೆ ಎಂದು ಖಚಿತಪಡಿಸಿದರು. ಭಾಷೆ ಎನ್ನುವುದು ಎರಡು ಮುಖಗಳನ್ನು ಹೊಂದಿರುತ್ತದೆ. ಒಂದು, ಅಮೂರ್ತವಾದದ್ದು , ಇದು ಎಲ್ಲಾ ಮನುಷ್ಯರಲ್ಲೂ ಸುಪ್ತವಾಗಿ ಇರುವ ಶಕ್ತಿ. ಈ ಶಕ್ತಿ ಮೈದಾಳುವುದು ಅಂದರೆ ಮಾತಾಗಿ ಮೂರ್ತಗೊಳ್ಳುವುದು ವ್ಯಕ್ತಿಯು ಮಾತನಾಡಲು ಪ್ರಾರಂಭ ಮಾಡಿದಾಗ. ಈ ಮಾತು ಪ್ರಪಂಚದಲ್ಲಿರುವ ಎಲ್ಲಾ ಭಾಷೆಗಳಲ್ಲೂ ಮೈದಾಳುತ್ತದೆ ಎಂದು ಸೇಸ್ಯುರ್ ಸಾದರಪಡಿಸಿದ. ಇವಲ್ಲದೆ ಭಾಷೆಯ ಅನೇಕ ಸಾರ್ವರ್ತಿಕ ಗುಣಗಳನ್ನು ಸಹ ವಿಶ್ಲೇಷಿಸಿದ. ಯಾವುದೇ ;ಮಾತು’ ರೂಪ ಮತ್ತು ಅರ್ಥಗಳನ್ನು ಒಳಗೊಂಡಿರುತ್ತದೆ. ರೂಪವನ್ನು ವಿಶ್ಲೇಷಿಸಿದರೆ ‘ಅರ್ಥ’ ತನಗೆ ತಾನೆ ವ್ಯಕ್ತಗೊಳ್ಳುತ್ತದೆ ಎಂದು ತಿಳಿಸಿದ. ಈ ಮೂಲಭೂತ ವಿಚಾರಗಳು ಸಾಂಸ್ಕೃತಿಕ ಪಠ್ಯಗಳನ್ನು ವಿಶ್ಲೆಷಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವು.

ಈ ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ರಷ್ಯಾ, ಫ್ರಾನ್ಸ್ , ಜರ್ಮನಿ ಮುಂತಾದ ಐರೋಪ್ಯ ರಾಷ್ಟ್ರಗಳಲ್ಲಿ ಸಾಂಸ್ಕೃತಿಕ ಪಠ್ಯಗಳನ್ನು ನೋಡುವ ದಿಕ್ಕೇ ಬದಲಾಯಿತು. ಮುಖ್ಯವಾಗಿ ಸಾಹಿತ್ಯ ಪಠ್ಯಗಳನ್ನು ನೋಡುವ ದೃಷ್ಟಿ ಅತ್ಯಂತ ಕ್ರಾಂತಿಕಾರಕ ಬದಲಾವಣೆಯನ್ನು ಕಂಡಿತು. ಭಾಷಾಶಾಸ್ತ್ರಗ್ನರಂತೆ ಸಾಹಿತ್ಯಕ ಪಠ್ಯಗಳಲ್ಲಿ ಇರುವ ಸಾರ್ವರ್ತಿಕ ನಿಯಮಗಳನ್ನು ವಿಶ್ಲೇಷಿಸುವುದೇ ಸಾಹಿತ್ಯ ಚಿಂತಕನ ಗುರಿಯಾಗಬೇಕು.ಏಕೆಂದರೆ ಸಾಹಿತ್ಯಕೃತಿ ರಚನೆಯಾಗುವುದು ಭಾಷೆಯ ಮೂಲಕವೇ ಆದ್ದರಿಂದ ಭಾಷೆಯ ಪ್ರತಿರೂಪವೇ ಸಾಹಿತ್ಯ ಎಂದು ಪರಿಗಣಿಸತೊಡಗಿದರು.

ಈ ಮೇಲಿನ ಭಾಷಾಗುಣಗಳನ್ನು ಸಾಹಿತ್ಯಕ್ಕೆ, ಅದರಲ್ಲೂ  ಕಾದಂಬರಿಗಳಲ್ಲಿ ಈ ಭಾಷಾ ನಿಯಮ ಹೇಗೆ ಕೆಲಸ ಮಾಡುತ್ತದೆ ಮತ್ತು ಆ ನಿಯಮವನ್ನು ಕ್ರಿಯಾತ್ಮಕತೆ ಹೇಗೆ ಮುರಿಯುತ್ತದೆ ಎಂಬುದ್ದನ್ನು ಪರೀಕ್ಷಿಸಿದ ಮೊದಲಿಗನು ರಷ್ಯಾ ದೇಶ ಮಿಖೈಲ್ ಮಿಖೈಲೋವಿಚ್ ಬಖ್ಥಿನ್ ಎಂಬ ಭಾಷಾಜ್ಞಾನಿ  (೧೮೯೫-೧೯೭೫). ಈತ ಹುಟ್ಟಿದ್ದು ರಷ್ಯಾದ ಮಾಸ್ಕೋ ಪಟ್ಟಣದ ಪಕ್ಕದ ಹಳ್ಳಿ ಒರೆಲ್ ನಲ್ಲಿ . ೧೯೧೩ರಲ್ಲಿ ಚಾರಿತ್ರಿಕ ಮತ್ತು ಭಾಷಾಶಾಸ್ತ್ರದ ವಿಭಾಗದ ವಿದ್ಯಾರ್ಥಿಯಾಗಿ ಸ್ಥಳೀಯ ವಿಶ್ವವಿದ್ಯಾನಿಲಯಕ್ಕೆ ದಾಖಲಾದ. ೧೯೧೮ರಲ್ಲಿ ತನ್ನ ಡಿಗ್ರಿಯನ್ನು ಪಡೆದುಕೊಂಡು ನೆವೆಲ್ ಎಂಬ ಹಳ್ಳಿಯಲ್ಲಿ ಶಾಲಾ ಅಧಾಪಕನಾಗಿ ಸೇರಿದ. ಅಲ್ಲಿ ಎರಡು ವರ್ಷ ಕೆಲಸಮಾಡುತ್ತಿದ್ದಾಗ ‘ಬಖ್ತಿನ್ ಸರ್ಕಲ್’ ಎಂಬ ಸಾಂಸ್ಕೃತಿಕ ವೇದಿಕೆಯನ್ನು ಪ್ರಾರಂಭಿಸಿದ. ಈ ಭಾಷಾವಿಜ್ಞಾನಿಯಿಂದಲೇ ನಂತರ ಬಂದು ರೂಪವಾದ, ಸಂರಚನಾವಾದ, ರಚನೋತ್ತರವಾದ ಮುಂತಾದ ವಾದಗಳು ಸೃಷ್ಟಿಗೊಂಡವು. ಆದರೆ ಈತನ ಸಾಹಿತ್ಯಕ ಸಿದ್ದಾಂತ ೧೯೧೦ರ ದಶಕದಲ್ಲಿ ರಷ್ಯಾ ದೇಶವು ಜಾಗತಿಕ ಯುದ್ದದಲ್ಲಿ ಸೋತದ್ದು, ದೇಶದೊಳಗಿನ ಕ್ರಾಂತಿ, ಪೌರಯುದ್ಧಗಳು ಮತ್ತು ಬರ ಇವುಗಳಿಂದ ತತ್ತರಿಸಿದ ಪರಿಣಾಮವಾಗಿ ಬೇರೆಯದೇ ರೀತಿಯಾದ ಸಂಕಷ್ಟಕ್ಕೆ ಒಳಗಾಯಿತು.

ಮುಂದಿನ ದಶಕಗಳಲ್ಲಿ ಸ್ವಾಲಿನ್ ಯುಗ ಪ್ರಾರಂಭವಾದ ನಂತರ. ಬಖ್ತಿನ್ ಫ್ರಾಯ್ಡ್, ಮಾರ್ಕ್ಸ್ ಮತ್ತು ಭಾಷಾಸಿದಾಂತಗಳ ಮೇಲೆ ದಾಸ್ತೋವೆಸ್ಕಿ  ಕಾದಂಬರಿಗಳ ಮೇಲೆ ಬರೆದ ಒಂಭತ್ತು ಬೃಹತ್ ಪುಸ್ತಕಗಳು ಸ್ಪ್ಯಾಲಿನ್ನ ಕೆಂಗಣ್ಣಿಗೆ ಗುರಿಯಾದವು, ಯಾವ ಕಾರಣವನ್ನೂ ಒಡ್ಡದೆ ಸ್ಪ್ಯಾಲಿನ್ ಸರ್ಕಾರ ಇವನನ್ನ ಮೊದಲು ಸೈಬೀರಿಯಾ, ನಂತರ ಕಜಕಿಸ್ತಾನ್ ಜೈಲಿಗೆ ತಳ್ಳಿತು. ಹೀಗೆ ಅವನನ್ನ ಜೈಲಿಗೆ ತಳ್ಳವ ಹೊತ್ತಿಗೆ ಕಾಲಿನ ಮೂಳೆ ಕರಗುವ  ರೋಗಕ್ಕೆ ತುತ್ತಾಗಿ ಒಂದು ಕಾಲನ್ನೇ ಮಂಡಿಯವರೆಗೆ  ಕತ್ತರಿಸಲಾಗಿತ್ತು.  ಈತ ಜೈಲಿನಲ್ಲಿದ್ದಾಗ ಸಹಿಸಿದ ಕಪ್ಪಗಳು ಅಪಾರ. ಕೊರೆಯುವ ಚಳಿಯಲ್ಲಿ ಯಾವ ಪುಸ್ತಕಗಳ ಸಂಗಾತಿಯೂ ಇಲ್ಲದೆ ಕಾಲದೂಡಬೇಕಾಗಿ ಬಂದಿತು. ಆಗ ಸಹಾಯಕ್ಕೆ ಬಂದಿದ್ದ ಅವನ ಅಪಾರವಾದ ಜ್ಞಾಪಕಶಕ್ತಿ. ಅದನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ತನ್ನ ನೋವನ್ನು ಮರೆಯಲು ಬರವಣಿಗೆಯೇ ಮದ್ದು ಎಂದು ಭಾವಿಸಿದ. ಆದರೆ ಆತನಿಗೆ ಬರೆಯಲು ಆ ಜೈಲಿನಲ್ಲಿ ಕಾಗದವೇ ಸಿಗುತ್ತಿರಲಿಲ್ಲ. ಅದಕ್ಕಾಗಿ ಅವನು ಟಾಯ್ಲೆಟ್ ಪೇಪರ್ ಮೇಲೆ ತನ್ನ ಲೇಖನಗಳನ್ನು ಬರೆದಿಡುತ್ತಿದ್ದ. ಈತನ ಬರವಣಿಗೆ ಯಾರ ಕಣ್ಣಿಗೂ ಬೀಳದಂತೆ ನಡೆಯಬೇಕಿತ್ತು. ಒಬ್ಬಂಟಿಯಾಗಿಯೇ ಕಾಲದೂಡಲು  ಇಷ್ಟಪಡುತ್ತಿದ್ದ.ಇವನ ಮೇಲೆ ಜೈಲು ಅಧಿಕಾರಿಗಳ ಕಾವಲು ಕಣ್ಣು ಅವನನ್ನ ಹಿ೦ಬಾಲಿಸುತ್ತಲೇ ಇದ್ದವು. ಇದರಿಂದ ಈತ ಮಾನಸಿಕ ಕೈಕೋಭೆಗೆ ಒಳಪಡಬೇಕಾಯಿತು. ಪ್ರಾಯಶಃ ಈತ ಈ ಕಾಲದಲ್ಲಿ ನಮ್ಮ ಕನ್ನಡದ ಸಂಸನಂತೆ ಜೀವನ ನಡೆಸುತ್ತಿದ್ದಿರಬಹುದು ಎಂದು ಅನ್ನಿಸುತ್ತದೆ.

ಸುಮಾರು ಎರಡು ಪುಸ್ತಕಗಳನ್ನು ಬೇರೆ ಬೇರೆ ಹೆಸರುಗಳಲ್ಲಿ: ಬರೆದಿಟ್ಟಿದ್ದ, ಆದರೆ ಅವನನ್ನು ಒಂದು ಕಾರಾಗೃಹದಿಂದ ಮತ್ತೊಂದು ಕಾರಾಗೃಹಕ್ಕೆ ಬಲವಂತವಾಗಿ ಬದಲಾಯಿಸುವಾಗ ಕೆಲವು ಹಸ್ತಪ್ರತಿಗಳು ಕಣ್ಮರೆಯಾದವು, ಅಲ್ಲದೆ ಜರ್ಮನಿಯ ನಾಜಿಗಳು ಪ್ರಮುಖ ಪ್ರಕಾಶನವೊಂದನ್ನು ಸುಟ್ಟುಹಾಕಿದಾಗ ಅವನ ಉಳಿದ ಹಸ್ತಪ್ರತಿಗಳ ಕೆಲವು ಭಾಗ ಅಲ್ಲಿ ಸುಟ್ಟುಹೋದವು. ಅದರಲ್ಲಿ ಕೆಲವು ಅಳಿದುಳಿದ ಭಾಗಗಳನ್ನು ಸೇರಿಸಿ ಇದಾದ ೪೧ ವರ್ಷಗಳ ನಂತರ ಈ ಪುಸ್ತಕ ಪ್ರಕಟಗೊಂಡಿತು. ಮತ್ತೆ ಕೆಲವು ಪುಸ್ತಕಗಳನ್ನು ಅವನು ಕಾವ್ಯನಾಮದಿಂದ ಬರೆದಿದ್ದರು, ಅದರ ಶೈಲಿಯನ್ನು ಅನುಸರಿಸಿ ಅದನ್ನು ಬರೆದವನು ಬಖ್ತಿನ್ ನೆ ಎಂದು ಅವುಗಳನ್ನು ನಾಶಪಡಿಸಲಾಯಿತು. ಈ ಕಾರಾಗೃಹ ವಾಸದಲ್ಲಿದ್ದಾಗಲೇ ೧೯೩೦ರಲ್ಲಿ ‘ಡಿಸ್ಕೋರ್ಸ್ ಇನ್ ದಿ ನಾವೆಲ್’ ಎಂಬ ಪ್ರಮುಖ ಲೇಖನಗಳ ಮಾಲೆಯನ್ನೂ ಪ್ರಕಟಿಸಿದ. ೧೯೩೭ರಲ್ಲಿ ಬಖ್ತಿನ್ ಕಿಮ್ರಿ ಎಂಬ ಸಣ್ಣ ಪಟ್ಟಣಕ್ಕೆ ಹೋಗಿ ನೆಲೆಸಿ ೧೯ ನೆ ಶತಮಾನದ ಜರ್ಮನ್ ಕಾದಂಬರಿಗಳ ಬಗ್ಗೆ ಒಂದು ಪುಸ್ತಕವಾನು ಬರೆದ. ಆ ಪುಸ್ತಕ ಹಸ್ತ್ರಪ್ರತಿಯು ಜರ್ಮನ್ ರ ಮುತ್ತಿಗೆಯ ಕಾಲದಲ್ಲಿ ಕಣ್ಮರೆಯಾಯಿತು.

ತಾನು ಬರೆದಿದ್ದನ್ನು ತನ್ನ ಮರಗಾಲಿನ ಕಾಲುಚೀಲದ ಒಳಗೆ  ಸೇರಿಸಿಕೊಂಡು ಓಡಾಡುತಿದ್ದ . ಒಮ್ಮೆ ಈತನ ಕಷ್ಟವನ್ನು ಕಂಡ ಜೈಲರ್ ತನ್ನ ಅನಾರೋಗ್ಯದ ನಿಮಿತ್ತ ತನ್ನ ಕಾರಾಗೃಹ ವಾಸವನ್ನು ಕಡಿಮೆ ಮಾಡುವಂತೆ ಮನವಿ ಪತ್ರವನ್ನು ಸಲ್ಲಿಸುವಂತೆ ಸಲಹೆ ನೀಡಿದ. ಕನಿಕರಿಸಿದ ಜೈಲರ್ ಇವನನ್ನು ಕಜಕಿಸ್ತಾನಕ್ಕೆ ವರ್ಗಮಾಡಿ ಅಲ್ಲಿ ಖೈದಿಗಳಿಗೆ ಸಾಕ್ಷರತೆಯನ್ನು ಕಲಿಸಲು ಕಳುಹಿಸಿದನು. ಅಲ್ಲಿ ಈತನನ್ನ ಗ್ರಂಥಭಂಡಾರದಿಂದ ಖೈದಿಗಳಿಗೆ ಬೇಕಾದ  ಪುಸ್ತಕಗಳನ್ನ ವಿತರಿಸುವ ಕೆಲಸವನ್ನು ಹಚ್ಚಿದರು. ಗ್ರಂಥಭಂಡಾರ ಇವನಿಗೊಂದು ನಿಧಿಯೇ ಸಿಕ್ಕಂತಾಯಿತು. ದಾಸ್ತೊವೆಸ್ಕಿಯ ಕಾದಂಬರಿಗಳ ಅಧ್ಯಯನ ಮತ್ತು ಬರಹಗಳು ಅಲ್ಲಿ

ಸಾಧ್ಯವಾಯಿತು.

೧೯೪೦ರಿಂದ ೨ನೇ ವಿಶ್ವಯುದ್ಧದ ಕೊನೆಯವರೆಗೂ ಬಖ್ತಿನ್  ಮಾಸ್ಕೋದಲ್ಲಿ ನೆಲೆಸಿದ.  ಈ ಕಾಲದಲ್ಲಿ ರೆಬಿಲಿಯಾಸ್ ಮೇಲೆ ತನ್ನ ಮಹಾಪ್ರಬ೦ಧವನ್ನು ಗಾರ್ಕಿ ಇನ್ಸ್ಟಿಟ್ಯೂಟ್ ಗೆ ಸಲ್ಲಿಸಿದ. ಈ ಮಹಾಪ್ರಬಂಧ ಮಾಸ್ಕೋದ ವಿದ್ವಾಂಸರನ್ನು ಇಬ್ಭಾಗ ಮಾಡಿತು. ಕೆಲವರು ಇವನ ಬರಹವನ್ನು ಕಾರಣಸಹಿತ ಒಪ್ಪಿಕೊಂಡರೆ ಇವನ ವಿರೋಧಿಗಳು ಈ ಮಹಾಪ್ರಬಂಧವನ್ನು ತಿರಸ್ಕರಿಸಿದರು. ಇದು ಹುಟ್ಟುಹಾಕಿದ ವಾದ-ವಿವಾದ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಕೊನೆಗೊಳ್ಳಬೇಕಾಯಿತು. ಕೊನೆಗೂ ಬಖ್ತಿನ್ ಗೆ ಡಾಕ್ಟರೇಟ್ ಸಿಗಲೇಯಿಲ್ಲ.

index೧೯೬೧ರ ನಂತರ ಬಖ್ತಿನ್ ನ ಆರೋಗ್ಯ ಹೆಚ್ಚು ಹೆಚ್ಚು ಆತಂಕಕಾರಿ ಸ್ಥಿತಿಗೆ ತಲುಪಿತು. ಅವನಿಗೆ ಮೂಳೆ ಕರಗುವ ರೋಗ ಉಲ್ಬಣಗೊಂಡಿದ್ದರಿಂದ ಔಷಧಿಗೂ ಹಣವಿಲ್ಲದೆ ತತ್ತರಿಸಿ ಹೋದ. ೧೯೬೯ರಲ್ಲಿ ಯಾರ ಕಣ್ಣಿಗೂ ಬೀಳದೆ ಅನಾಮಧೇಯನಾಗಿ ಸುತ್ತಾಡತೊಡಗಿದ. ಇವನ ಇರುವಿಕೆಯ ಬಗ್ಗೆಯೇ ಬಲ್ಲವರೆಲ್ಲರಿಗೂ ಅನುಮಾನ ಹುಟ್ಟಿತು. ೧೯೭೫ರ ತನಕ ಈತ ಮಾಸ್ಕೋದಲ್ಲಿ ಕಂಡಿದ್ದೇವೆಂದು ಜನಗಳು ಹೇಳುತ್ತಿದ್ದರು. ಪ್ರಾಯಶಃ ಈತ ೧೯೭೫ರಲ್ಲಿ ಸತ್ತಿರಬಹುದೆಂದು ತಿಳಿದುಬರುತ್ತದೆ. ಆದರೆ ಸ್ಪಷ್ಟವಾದ ಚಿತ್ರಣ ಯಾರಿಗೂ ಗೊತ್ತಿಲ್ಲದೇ ಗೋಪ್ಯವಾಗಿಯೇ ಚರಿತ್ರೆಯನ್ನು ಸೇರಿಬಿಟ್ಟಿದೆ. ಆದರೆ ಇವನ ಸಿದ್ದಾಂತಗಳು ಪ್ರಕಾಶಮಾನವಾಗಿ ಬದುಕಿ ವೈಶಾಲ್ಯತೆಯನ್ನು ಪಡೆಯುತ್ತಿದೆ.

ಬಖ್ತಿನ್ನ ಕೃತಿಗಳು ಜನಪ್ರಿಯವಾದದ್ದು ಅವನು ಸತ್ತನಂತರವೇ, ತನ್ನ ಜೀವಮಾನವಿಡೀ ಆತ ಕಷ್ಟ ಮತ್ತು ದಾರುಣವಾದ ಸ್ಥಿತಿಯಲ್ಲೇ ಕಳೆಯಬೇಕಾಯಿತು. ಅವನ ಮರಣಾನಂತರ ರಷ್ಯದ ಆರ್ಕೈವಲ್ ಮೂಲಕ ಅವನ ಜೀವನದ ಮಾಹಿತಿಗಳು ದೊರೆಯಲಾರ೦ಭಿಸಿತು.

ಅವನ ಮರಣಾನಂತರ ೧೯೭೫ರಲ್ಲಿ ರಚನೋತ್ತರವಾದಿಗಳಾದ ಜ್ಯೂಲಿಯಾ ಕ್ರಿಸ್ಸೆವಾ, ತೊದರೋವ್, ರೋಲಾಂ ಬಾರ್ಥ್, ಇವರು ಫ್ರೆಂಚ್ ಸಾಹಿತ್ಯ ಸಿದ್ದಾಂತಕ್ಕೆ ಇವನ ಸಿದ್ದಾಂತಗಳನ್ನು ಪರಿಚಯ ಮಾಡಿಕೊಟ್ಟ ಮೇಲೆ ಅಮೇರಿಕಾ, ಯೂರೋಪ್ ಮತ್ತಿತರ ದೇಶಗಳಲ್ಲಿ ಸುಪ್ರಸ್ಸಿದ್ದವಾಗಿ ಬೆಳೆಯಿತು. ೧೯೮೯ರ ದಶಕದಿಂದೀಚೆಗೆ ಪಾಶ್ಚಮಾತ್ಯ ದೇಶಗಳಲ್ಲಿ ಅತ್ಯಂತ ಪ್ರಮುಖ ಸಾಹಿತ್ಯ ಮತ್ತು ಸಂಸ್ಕೃತಿಯು ಸಿದ್ದಾಂತಿ ಎಂದು ಪ್ರಖ್ಯಾತನಾಗಿದ್ದಾನೆ.

ಬಖ್ತಿನ್ ಪ್ರಮುಖ ಕೃತಿಗಳೆಂದರೆ ಟುವರ್ಡ್ಸ್ ಎ ಫಿಲಾಸಫಿ ಆಫ್ ದಿ ಆಕ್ಸ್ (ಸಂಪೂರ್ಣವಾಗಿ ಮುಗಿಯದ ಕೃತಿ)  ಪ್ರಾಬ್ಲಂ ಆಫ್ ದಾಸ್ತೋವೆಸ್ಕೀಸ್ ಪೋಯಟಿಕ್ಸ್, ದ ಡೈಲಾಜಿಕ್ ಇಮ್ರಾಜಿನೇಷನ್.

ಬಖ್ತಿನ್ ದಾಸ್ಕೋವಸ್ಸ್ಕೀಯ ಕಾದಂಬರಿಗಳಲ್ಲಿ ಬಹುಮುಖಿ ಧ್ವನಿಗಳನ್ನು ಮೊದಲ ಬಾರಿಗೆ ಗುರ್ತಿಸಿದ್ದಾನೆ. ಆ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ವಿಶಿಷ್ಟವಾದ ಧ್ವನಿಯನ್ನು ಹೊರಡಿಸುತ್ತವೆ ಎಂದು ಪ್ರತಿಪಾದಿಸಿದ ಇದನ್ನು polyphony ಎಂದು ಕರೆದ. ಅಂದರೆ ಯಾವ ಪರಿಕಲ್ಪನೆಯೂ ಪ್ರತಿಯೊಬ್ಬ ವ್ಯಕ್ತಿಯಲ್ಲೂ ತನ್ನ ಬಗ್ಗೆ ಮತ್ತು ಇತರರ ಬಗ್ಗೆ ಪರಿಪೂರ್ಣವಾಗಿರುವುದಿಲ್ಲ, ಇದು ಯಾವಾಗಲೂ ತೆರೆದ ಧ್ವನಿಯಾಗಿರುತ್ತದೆ. ‘ಸತ್ಯವೂ ಕೂಡ ಪರಿಪೂರ್ಣವಲ್ಲ, ಸತ್ಯ ಎನ್ನುವುದು ಒಂದು ಉಲ್ಲೇಖವಲ್ಲ (statement) ಅಥವಾ ವಾಕ್ಯದಲ್ಲಿರುವುದಿಲ್ಲ. ಸತ್ಯವೂ ವೈದೃಶ್ಯದಿಂದಲೂ ಮತ್ತು ತಾರ್ಕಿಕವಾಗಿ ಅಸಂಬದ್ಧವಾದ ಹೇಳಿಕೆಯಂತೆಯೂ ಇರುತ್ತದೆ. ಸತ್ಯಕ್ಕೆ ಬಹುಮುಖ ಧ್ವನಿ ಇದ್ದೇ ಇರುತ್ತದೆ. ಸತ್ಯಕ್ಕೆ ನಾನಾ ಮುಖಗಳು.

ಈತ ಪ್ರಮುಖವಾಗಿ ಕಾದಂಬರಿಗಳು (ಯಾವುದೇ ಕ್ರಿಯಾತ್ಮಕ ಬರಹಗಳ) ಪರಿಣಾಮಕಾರಿಯಾಗಿರುವುದು ತನ್ನ ‘ಬಹುಮುಖ ಧ್ವನಿ’ ಗಳಿಂದ. ಈ ಬಹುಮುಖ ಧ್ವನಿ ಇದಾಗ ಕಾದಂಬರಿಯು ವಿಶಿಷ್ಟವಾಗಿರುತ್ತದೆ. ಉದಾಹರಣೆಗೆ ಕನ್ನಡದಲ್ಲಿ ಕುಸುಮಬಾಲೆ, ಮಲೆಗಳಲ್ಲಿ ಮದುಮಗಳು ಮುಂತಾದ ಕಾದಂಬರಿಗಳನ್ನು ಹೆಸರಿಸಬಹುದು. ಕುಸುಮಬಾಲೆಯಲ್ಲಿ ಈ ಗುಣ ಎದ್ದು ಕಾಣುತ್ತದೆ. ಈ ಕಾದಂಬರಿಯಲ್ಲಿ ಅರೆದೇವತೆಗಳಾದ ಜೋತಮ್ಮದಿರ ಧ್ವನಿ, ಮಂಚ ಮಾತನಾಡುವುದರ ಮೂಲಕ ಹೊರಡುವ ಚಾರಿತ್ರಿಕ ಧ್ವನಿ, ಕಳ್ಳನ ಧ್ವನಿ, ಕ್ರಿಯಾವಿಧಿಯ ಧ್ವನಿ, ಜಾನಪದ ಕಥಾನಕ ಶೈಲಿಯ ಧ್ವನಿ, ಮಾರ್ಕ್ಸಿಸ್ತರ, ವಿಚಾರವಾದಿಗಳ, ದಲಿತರ, ಪುರಾಣ

ಕಟ್ಟುವ ಮತ್ತು ಪುರಾಣವನ್ನು ಮುರಿಯುವ ಮೈದುಂಬಿ ಬರುವ ಕುರಿಯಯ್ಯನಿಂದ ಹೊರಡುವ ಧ್ವನಿ ಇತ್ಯಾದಿಗಳೆಲ್ಲ ಸೇರಿ ಬಹುಮುಖಿ ಧ್ವನಿ ಕನ್ನಡ ಕಾದಂಬರಿಗೆ ವಿಶೇಷವಾಗಿ ನೀಡಿರುವ ಕೊಡುಗೆ ಎಂದು ಭಾವಿಸಬಹುದು. ಸಾಹಿತ್ಯ ಪ್ರಕಾರ ಬೆಳೆದಂತೆಲ್ಲ ಅದು ತನ್ನ ಸಂಸ್ಕೃತಿಯ ಚರಿತ್ರೆಯನ್ನು ಹೆಚ್ಚ ಹೆಚ್ಚು ಬೆಳೆಸುತ್ತದೆ ಮತ್ತು ಹೆಚ್ಚ್ಹು ಹೆಚ್ಚ್ಹು ಜ್ನಾಪಿಸುತ್ತಿರುತ್ತದೆ. ಇಂತಹ ಭಾಷೆಗೆ ಚರಿತ್ರೆಯನ್ನು ಹೊಸದಾಗಿ ಕಟ್ಟಿಕೊಡುವ ಹೊಸ ನೋಟಕ್ಕೆ ಅಳವಡಿಸುವ ಶಕ್ತಿ ಇರುತ್ತದೆ (ಹೆಚ್ಚಿನ ವಿವರಿಗಳಿಗಾಗಿ ನೋಡಿ ಡೈಲಾಜಿಸಂ ಆಫ್ ದಿ ಮ್ಯೂಟ್, ಕಿಕ್ಕೇರಿ ನಾರಾಯಣ ೧೯೮೬).

Leave a Reply

Your email address will not be published. Required fields are marked *