ಮಾನವತಾವಾದಿ ಮಾನವ ಶಾಸ್ತ್ರಜ್ಞ – ಕ್ಲಾಡ್ ಲೆವಿ ಸ್ಟ್ರಾಸ್

ಮಾನವತಾವಾದಿ ಮಾನವ ಶಾಸ್ತ್ರಜ್ಞ – ಕ್ಲಾಡ್ ಲೆವಿ ಸ್ಟ್ರಾಸ್

Tingalu – June 2009

5೨೦ ನೇ ಶತಮಾನದ ಬುದ್ದಿಜೀವಿಗಳಲ್ಲಿ ಅತ್ಯಂತ ಪ್ರಮುಖನೆಂದು ಪರಿಗಣಿಸಲ್ಪಟ್ಟವನು ಕ್ಲಾಡ್ ಲೆವಿ ಸ್ಟ್ರಾಸ್. ಹೋದ ವರ್ಷ ತನ್ನ ನೂರನೇ ಜನ್ಮದಿನವನ್ನು ಆಚರಸಿಕೊಂಡ. ಇಡೀ ಜಗತ್ತಿನ ಚಿಂತಕರು ಇವನ ನೂರನೇ ಹುಟ್ಟುಹಬ್ಬವನ್ನು ಅತ್ಯಂತ ವಿಜ್ರುಂಭಣೆಯಿಂದ ಆಚರಿಸಿದರು. ಫ್ರಾನ್ಸ್ನಲ್ಲಿ ಇಡೀ ವರ್ಷವನ್ನು ಆತನ ಶತಮಾನೋತ್ಸವ ವರ್ಷವೆಂದು ಪರಿಗಣಿಸಿ ೧೯೮ ವಿದ್ವಾಂಸರಿಂದ ಅವನ ಜೀವನ ಮತ್ತು ಕೃತಿಗಳ ಮೇಲೆ ಲೇಖನಗಳನ್ನು ಬರೆಸಿದರು . ಕೇವಲ ಆರು ವಾರಗಳಲ್ಲಿ ಈ ಪುಸ್ತಕದ ಇಪ್ಪತ್ತು ಸಾವಿರ ಪ್ರತಿಗಳು ಮಾರಾಟವಾದವು. ಫ್ರಾನ್ಸಿನ ಪ್ರತಿಷ್ಠಿತ ಪ್ರಕಾಶನ ಇನ್ನು ಬದುಕಿರುವ ವಿದ್ವಾಂಸನೊಬ್ಬನ ಬಗ್ಗೆ ಪ್ರಕಟಿಸಿದ ಮೊದಲ ಕೃತಿಯಿದು. ಹೀಗೆ ಈತನು ಬದುಕಿರುವಾಗಲೇ ದಂತಕತೆಯಾಗಿದ್ದಾನೆ. ಬೌದ್ದಧರ್ಮದ ಮೇಲೆ ಅಪಾರ ನಂಬಿಕೆ ಇಟ್ಟಿರುವ ಈತ ಭಾರತದ ಎಲ್ಲೋರಾ ಮತ್ತು ಅಜಂತಾ ದೇವಾಲಯಗಳಿಗೆ ೧೯೫೦ರ ದಶಕದಲ್ಲಿ ಭೇಟಿ ನೀಡಿದ್ದನು . ಇವನು ಬೌದ್ದಧರ್ಮದ ಕಲೆಯ ಕುರಿತು ಲೇಖನವನ್ನು ಬರೆದಿದ್ದಾನೆ .
ಲೆವಿ ಸ್ಟ್ರಾಸ್ ಫ್ರಾನ್ಸ್ ದೇಶದ ಕಲಾಕಾರನ ಮಗನಾಗಿ ೨೮-೧೧-೧೯೦೮ ರಂದು ಜನಿಸಿದನು. ೧೯೩೫ರಿಂದ ೧೯೩೯ರ ತನಕ ಪ್ಯಾರಿಸ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಮತ್ತು ದರ್ಶನಶಾಸ್ತ್ರ್ಗಳ ಅಭ್ಯಾಸ ಮಾಡಿದನು. ಅವನಿಗೆ ಸಾಹಿತ್ಯದ ಮೇರು ಕೃತಿಗಳ ಓದು ಮತ್ತು ಶಾಸ್ತ್ರಿಯ ಸಂಗೀತದಲ್ಲಿ ಅಪಾರ ಆಸಕ್ತಿ . ಈತನ ಬರಹಗಳೆಲ್ಲ ಕಾವ್ಯಮಯ ವಿಜ್ಞಾನದಂತೆ ಓದಿಕೊಂಡು ಹೋಗುತ್ತವೆ. ಫ್ರಾನ್ಸ್ನಿನ ಸಾಹಿತ್ಯ ಅಕಾಡೆಮಿ ಈತನ ‘tristas tropics’ ಎಂಬ ಅಮೆಜಾನ್ ನ ಬುಡಕಟ್ಟು ಜನಾಂಗದ ಬಗ್ಗೆ ಬರೆದು ಪುಸ್ತಕವನ್ನು ‘ಸಾಹಿತ್ಯ ಕೃತಿ’ ಎಂಬ ಪರಿಗಣಿಸಿ ಬಹುಮಾನವನ್ನು ಕೊಡಲು ತೀರ್ಮಾನಿಸಿತು. ಕೊನಗೆ ಕೊಡಲಾಗದೆ ಸಂತಾಪ ವ್ಯಕ್ತಪಡಿಸಿತು. ನಮ್ಮ ದೇಶದಲ್ಲಿ, ಬಿ.ಜಿ.ಎಲ್.ಸ್ವಾಮಿಯವರು ಸಸ್ಯಶಾಸ್ತ್ರದ ಬಗ್ಗೆ ಬರದ ‘ಹಸಿರು ಹೊನ್ನು’ ಕೃತಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಗಳಿಸಿದ್ದು ಇಲ್ಲಿ ಗಮನಾರ್ಹ.
ಲೆವಿ ಸ್ಟ್ರಾಸ್ ಮಾನವಶಾಸ್ತ್ರದ ಅಧ್ಯಯನದಲ್ಲಿ ಅರಿವಿನ ಸ್ಪೋಟವನ್ನು ಉಂಟು ಮಾಡಿದವನು.ಇಡೀ ಪ್ರಪಂಚದಲ್ಲಿ ಬಿಳಿಯರು ಮಾತ್ರ ಶ್ರೇಷ್ಠಮಾನವರೆಂದೂ ಉಳಿದವರೆಲ್ಲಾ ಅವರಿಗಿಂತ ‘ಕಿಂಚಿದೂನ’ ಎಂದು ತಿಳಿದು, ಪ್ರಪಂಚದ ಎಲ್ಲಾ ಜನಾಂಗಗಳನ್ನು ಕೀಳಾಗಿ ಪರಿಭಾವಿಸುತ್ತಿದ್ದ ಕಾಲವೊಂದಿತ್ತು. ಬಿಳಿಯರು ಬರೆಯುತ್ತಿದ್ದ ಚರಿತ್ರೆ, ಜನಾಂಗೀಯ ಅಧ್ಯಯನ , ಸಾಹಿತ್ಯ, ಸಾಂಸ್ಕೃತಿಕ ಅಧ್ಯಯನ ಎಲ್ಲದರಲ್ಲೂ ಸ್ವತಃ ಅವರೇ ಮಾದರಿಯಾಗಿರುತ್ತಿದ್ದರು. ಉದಾಹರಣೆಗೆ ಮುಸುಕುಧಾರಿ ಫ್ಯಾಂಟಮ್ ನನ್ನೇ ತೆಗೆದುಕೊಳ್ಳಬಹುದು. ಅವನು ಎಲ್ಲರಿಗಿಂತಲೂ ಬಲಶಾಲಿಯೂ, ಬುದ್ದಿವಂತನೂ ಆಗಿರುತ್ತಾನೆ.ಅವನ ಜೊತೆ ಬರುವ ಪಾತ್ರಗಳು ಮಾತ್ರ ಕರಿಯರು, ಪಿಗ್ಮಿಗಳು ಆಗಿರುತ್ತಾರೆ . ಅವರು ತಮ್ಮ ಬಿಡುಗಡೆಗಾಗಿ ಫ್ಯಾಂಟಮ್ ನ ಸಹಾಯಕ್ಕೆ ಕಾದಿರುತಾರೆ.ಅವನೋ ಅಪದ್ಭಾಂದವನಂತೆ ಬಂದು ಅವರನ್ನು ರಕ್ಷಿಸುತಾನೆ . ನಿಜವಾಗಿ ಅವನ ಮುಸುಕನ್ನು ತೆರೆದು ನೋಡಿದರೆ ಅವನು ಬಿಳಿಯನಾಗಿರುತ್ತಾನೆ.ಅಷ್ಟೇ ಏಕೆ ವಸಾಹತುಶಾಹಿ ಸಾಹಿತ್ಯವು ಸಹ , ಇದೆ ವಸಾಹತುಕರಣಗೊಂಡವರ ಸಂಸ್ಕೃತಿಯನ್ನು ಬಿಂಬಿಸುವಾಗ ಅಪ್ರಜ್ಞಾಪೂರ್ವಕವಾಗಿ ತಳೆಯುತ್ತಿದ್ದ ನಿಲುವೆಂದರೆ ತಮ್ಮ ಉತ್ತಮಿಕೆಯ ಅಹಂ. ಉದಾಹರಣೆಗೆ, ‘ನಿಗರ್ ಆಫ್ ದಿ ನಾರಿಸ್ಸಿಸ್’, ‘ ಪ್ಯಾಸೇಜ್ ಟು ಇಂಡಿಯಾ’ ಮುಂತಾದ ಕೃತಿಗಳನ್ನೇ ನೋಡಬಹುದು. ಇದೆ ರೀತಿಯಲ್ಲಿ ಬಿಳಿಯರು ತಾವು ಮಾತ್ರ ಅಮೂರ್ತ ಪರಿಕಲ್ಪನೆಯಲ್ಲಿ ಯೋಚಿಸಬಲ್ಲೆವು, ಉಳಿದವರ ಜ್ಞಾನ ಅಷ್ಟು ತೀಕ್ಷ್ಣವಲ್ಲದ್ದರಿಂದ ಕೇವಲ ಮೂರ್ತ ರೀತಿಯಲ್ಲಿ ಮಾತ್ರ ಯೋಚಿಸಬಲ್ಲರು ಎಂದು ನಂಬಿದ್ದರು. ಲೆವಿ ಸ್ಟ್ರಾಸ್ ಈ ಯೋಚನೆಗಳನ್ನೆಲ್ಲಾ ತಲೆಕೆಳಗು ಮಾಡುವಂತೆ ಬುಡಕಟ್ಟು ಜನಾಂಗದ ಅಧ್ಯಯನವನ್ನು ನಡೆಸಿ ವಿಶ್ಲೇಷಣೆ ಮಾಡಿ ‘ಮಾನವರೆಲ್ಲರೂ ಒಂದೇ ರೀತಿ ಆಲೋಚಿಸಬಲ್ಲರು, ಎಲ್ಲರ ಮನಸ್ಸುಗಳೂ ಮೂರ್ತ ಮತ್ತು ಅಮೂರ್ತ ಯೋಚನೆಗಳಲ್ಲಿ ಒಂದೇ ರೀತಿಯಲ್ಲಿ ಕ್ರಿಯಾಶೀಲವಾಗಿರುತ್ತವೆ’ ಎಂದು ಸಾರಿದನು.
ಇದಕ್ಕಾಗಿ ಲೆವಿ ಸ್ಟ್ರಾಸ್ ೧೯೩೫ ರಿಂದ ೧೯೩೯ ರ ತನಕ ಬ್ರಜಿಲ್ ದೇಶಕ್ಕೆ ಮತ್ತೆ ಮತ್ತೆ ಹೋಗಿ, ಅಲ್ಲಿಯ ಬುಡಕಟ್ಟು ಜನರ ಜೊತೆಯೇ ಬದುಕಿ ಜನಾಂಗೀಯ ಅಧ್ಯಯನವನ್ನು ನಡೆಸಿದನು. ಈ ಅಧ್ಯಯನದ ಫಲವೇ ಅವನ ಮೊದಲ ಮೇರು ಕೃತಿಯಾದ ‘ tristas tropics. ಇದೆ ಕಾಲದಲ್ಲಿ ಎರಡನೇ ಪ್ರಪಂಚ ಯುದ್ದ ಮೊದಲಾಗಿ ಫ್ರಾನ್ಸ್ ದೇಶ ಇವನನ್ನು ವಾಪಸ್ಸು ಕರೆಸಿಕೊಂಡಿತು. ಯುದ್ದ ಕಾಲದಲ್ಲಿ ಗುಪ್ತ ಏಜೆಂಟ್ ಆಗಿ ಕೆಲಸ ಮಾಡಲ ಹಚ್ಚಿತು. ಸ್ವಲ್ಪ ದಿನದಲ್ಲೇ ಯಹೂದಿ ಎಂಬ ಕಾರಣ ಕೊಟ್ಟು ಇವನನ್ನು ಆ ಕೆಲಸದಿಂದ ತೆಗೆದುಹಾಕಿತು. ಅವನು ದೇಶಭ್ರಷ್ಟನಾಗಿ ದಕ್ಷಿಣ ಅಮೆರಿಕಾಗೆ ಮತ್ತೆ ಯಾನವನ್ನು ಕೈಗೊಂಡನು. ತನ್ನ ಅರ್ಧ ನಿಂತ ಬುಡಕಟ್ಟು ಅಧ್ಯಯನವನ್ನು ಮುಂದುವರೆಸಲು ಇಚ್ಚಿಸಿದನು. ಆದರೆ ಇವನನ್ನು ಕಸ್ಟಮ್ ಏಜಂಟರು ಪರಿಶೀಲಿಸಿದಾಗ ಇವನ ಹತ್ತಿರ ಒಂದು ಜರ್ಮನ್ ಭಾಷೆಯ ಪತ್ರ ಕಂಡು ಬಂದಿತು.
6ಈ ಏಜಂಟರು ಇವನನ್ನು ಬಂಧಿಸಲು ಆಲೋಚಿಸುತ್ತಿದ್ದಾಗ, ಲಂಗರು ತೆಗೆದು ಹೊರಡಲು ಸಿದ್ದವಿದ್ದ ಅಮೆರಿಕಾದ ಹಡಗೊಂದನ್ನು ಏರಿಕೊಂಡ. ಆ ಹಡಗಿನಲ್ಲಿ ಖೈದಿಗಳು, ಯುದ್ದಖೈದಿಗಳು ಮತ್ತ್ತು ಕೊಲೆಗಡುಕರು ಮಾತ್ರ ಇದ್ದರು. ಇವರ ಜೊತೆಯಲ್ಲಿ, ಹಡಗಿನ ತಳದಲ್ಲಿ ಬೆಳಕಿಂದ ಕಿರಣವೂ ಇಲ್ಲದ ಗಬ್ಬುನಾತವುಳ್ಳ ಜಾಗದಲ್ಲಿ ಅನಾಮಧೇಯನಾಗಿ ಉಳಿದು ಅಮೆರಿಕೆಗೆ ಪ್ರಯಾಣ ಬೆಳೆಸಿದ. ಅಲ್ಲಿ ಇವನನ್ನು ದೇಶಭ್ರಷ್ಟರಿಗಾಗಿ ನಡೆಸುತ್ತಿದ್ದ ವಿಶ್ವವಿದ್ಯಾನಿಲಯದಲ್ಲಿ ಪಾಠ ಮಾಡಲು ಹಚ್ಚಿದರು. ಎರಡನೇ ಮಹಾಯುದ್ದದ ನಂತರ ಇವನಿಗೆ ವಾಷಿಂಗ್ಟನ್ ನಲ್ಲಿ ಫ್ರೆಂಚ್ ರಾಯಭಾರಿಯ ಕಚೇರಿಯಲ್ಲಿ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕೆಲಸ ಮಾಡಲು ಹಚ್ಚಿದರು. ೧೯೪೮ರಲ್ಲಿ ಈತನನ್ನು ಪ್ಯಾರಿಸ್ ಗೆ ವಾಪಸ್ಸು ಕರೆಸಿಕೊಳ್ಳಲಾಯಿತು. ಈ ಅವಧಿಯಲ್ಲಿ ಈತ ‘ಭಾಂದವ್ಯದ ಮೂಲ ರಚನೆಗಳು’ (The Elementary Structures of Kinship ) ಎಂಬ ಅತ್ಯಂತ ಪ್ರಮುಖ ಮಾನವಶಾಸ್ತ್ರ ಕೃತಿಯನ್ನು ರಚಿಸಿದನು. ಇದನ್ನು ಆ ಕಾಲದ ಅತ್ಯಂತ ಪ್ರಭಾವಶಾಲಿ ಚಿಂತಕಿಯಾದ ಸೈಮನ್ ದಿ ಬೋವಾ ವಿಮರ್ಶೆ ಮಾಡಿ ಪಾಶ್ಚಾತ್ಯ ಸಂಸ್ಕೃತಿಯ , ಆಚೆಗಿರುವ ಮಹಿಳೆಯರ ಅತ್ಯಂತ ಪ್ರಮುಖವಾದ ವಿಶ್ಲೇಷಣೆ ಎಂದು ಸಾರಿದಳು. ಇದರ ಪ್ರಭಾವದಿಂದ ಈತ ಫ್ರಾನ್ಸ್ ನಲ್ಲಿ ಪ್ರಮುಖ ಬುದ್ದಜೀವಿಯೆಂದು ಪರಿಗಣಿಸಲ್ಪಟ್ಟ. ಇವನಿಗಾಗಿಯೇ ‘Comparative Religion of Non-Literate Peoples‘ ಎಂಬ ಪೀಠವನ್ನು ಸ್ತಾಪಿಸಿ ಇವನನ್ನು ಅದರ ನಿರ್ದೇಶಕನನ್ನಾಗಿ ನೇಮಿಸಲಾಯಿತು.
ಲೆವಿ ಸ್ಟ್ರಾಸ್ ಒಬ್ಬ ಮಹಾಮೌನಿ, ತೀಕ್ಷ್ಣಮತಿ ಮತ್ತು ಸಂತ. ತನ್ನ ವೈಯಕ್ಥಿಕವಾದ ವಿಷಯವನ್ನು ಆತ ನೇರವಾಗಿ ಎಲ್ಲೂ ದಾಖಲಿಸಲಿಲ್ಲ. ಸುಮಾರು ೩೦ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳ ಅಧ್ಯಯನ ನಡೆಸಿದರೂ ತನ್ನ ಅಧ್ಯಯನಕ್ಕೆ ಸಂಬಂಧಪಟ್ಟ ವಿಷಯದ ಜೊತೆ ಆ ಬುಡಕಟ್ಟುಗಳ ಮಾಹಿತಿ ಸಂಗ್ರಹಿಸುವಾಗ ಆತ ಕಂಡುಕೊಂಡ ವಿಷಯವನ್ನು ಮಾತ್ರ ತನ್ನ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಬುಡಕಟ್ಟು ಜನಾಂಗದ ಗುಡಿಸಿಲಿನಲ್ಲಿ ಈತನ ವಾಸ. ಅವರು ತಿನ್ನುತ್ತಿದ್ದ ಅಡಿಗೆಯಲ್ಲಿ ಇವನಿಗೂ ಒಂದು ಪಾಲು. ಊಟ ಮಾಡುವಾಗಲು ಈತ ಆ ಊಟದ ಹಿಂದಿನ ಸಾಂಸ್ಕೃತಿಕ ಹಿನ್ನಲೆಯನ್ನು ಮನದಲ್ಲಿ ವಿಶ್ಲೆಶಿಸಿಕೊಳ್ಳುತ್ತಿದ್ದ. ಇದರ ಪರಿಣಾಮವಾಗಿ ಈತ ರಚಿಸಿದ ಮಹತ್ತರ ಪುಸ್ತಕವೆಂದರೆ ‘ ದೇ ರಾ ಅಂಡ್ ದಿ ಕುಕ್ದ್’. ಅಮೆಜಾನ ಕಾಡುಗಳಲ್ಲಿ ಹಾಡಿಯ ಪಕ್ಕದ ಮರದ ಕೆಳಗೆ ಕುಳಿತು ಇಡೀ ಸಮಾಜ ಬೆಳಗಿನಿಂದ ಸಾಯಂಕಾಲದವರೆಗೂ ಹೇಗೆ ತನ್ನ ಕೆಲಸಗಳಲ್ಲಿ ನಿರತವಾಗಿರುತ್ತದೆ ಎಂಬುದನ್ನು ಗಮನಿಸುತ್ತಿದ್ದನು. ಅದರಲ್ಲೂ ಹೆಂಗಸರ ಕಾರ್ಯಕ್ರಮಗಳನ್ನು ವೀಕ್ಷಿಸಿ ಆಯಾ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನವೇನು ಎಂದು ತೀರ್ಮಾನಿಸುತ್ತಿದ್ದನು. ಇದರ ಫಲವಾಗಿಯೇ ಆತ ಕಂಡುಕೊಂಡಿದ್ದು ಹೆಣ್ಣು ನಾಣ್ಯವಿದ್ದಂತೆ. ಆಕೆಯು ತನ್ನ ತವರುಮನೆಯಿಂದ ಗಂಡನ ಮನೆಗೆ ಹೋಗುವುದೆಂದರೆ ನಾಣ್ಯದ ಚಲಾವಣೆಇದ್ದಂತೆ ಎಂದು ಅವನು ವಿಶ್ಲೇಶಿಸಿದನು.
ಈತನ ಸಹಚಿಂತಕರೆಂದರೆ ಆಗಿನ ಕಾಲದ ದಾರ್ಶನಿಕರಾದ ಸಾರ್ತ್ರ ಮತ್ತು ಮಾರ್ಲೋಪೊಂಟಿ. ಲೆವಿಸ್ತ್ರಾಸ್ ಸಾರ್ತ್ರನ ಅಸ್ತಿತ್ವವಾದವನ್ನು ತದ್ವಿರುದ್ದವಾದ ದಿಕ್ಕಿನೆಡೆಗೆ ಕೊಂಡೊಯ್ದವನು ಮತ್ತು ಬದುಕು ಒಂದು ಆಟ ಎಂದು ತೋರಿಸಿಕೊಟ್ಟವನು. ಈತನ ಶಿಷ್ಯನಾದ, ಮುಂದೆ ಬಹಳ ಹೆಸರುವಾಸಿಯಾದ ಸಾಂಸ್ಕೃತಿಕ ಅಧ್ಯಯನಕಾರ ರೋಲಾಂ ಬಾರ್ತ್ ಇವನ್ನು ಸಂಧಿಸಲು ದಿನಗಟ್ಟಲೆ ಕಾಯುತ್ತಿದ್ದ.
ಲೆವಿ ಸ್ಟ್ರಾಸ್ ಕಟ್ಟಾ ಸಂರಚನಾವಾದಿ, ಮಾನವಶಾಸ್ತ್ರದ ಅಧ್ಯಯನವೆಂದರೆ ಬರೇ ಒಂದೊಂದು ಸಮುದಾಯವನ್ನಾಗಲಿ ಅಥವಾ ಜನಾಂಗವನ್ನಾಗಲಿ ಬಿಡಿಬಿಡಿಯಾಗಿ ಅಧ್ಯಯನ ಮಾಡುವುದಲ್ಲ. ಅಧ್ಯಯನಕ್ಕೆ ಒಳಪಟ್ಟ ಸಾಂಸ್ಕೃತಿಕ ಪಠ್ಯಗಳ ಸಾರ್ವರ್ತಿಕ ಗುಣಗಳನ್ನು ಪರಿಶೀಲಿಸಿ ವಿಶ್ಲೇಷಿಸಬೇಕು. ಆಗ ಮಾತ್ರ ಆ ಪಠ್ಯಗಳನ್ನು ಸೃಜಿಸಿದ ಮನಸ್ಸು ತಿಳಿಯುತ್ತದೆ ಎಂದು ಅವನು ಪ್ರತಿಪಾದಿಸಿದನು. ಇದನ್ನು ಬುಡಕಟ್ಟು ಜನಾಂಗದ ಅಧ್ಯಯನಕ್ಕೆ ಅನ್ವಯಿಸಿ ಅವನು ‘ರಾಚನಿಕ ಮಾನವಶಾಸ್ತ್ರ’ (structural anthropology) ಎಂಬ ಮೇರು ಕೃತಿಯನ್ನು ರಚಿಸಿದನು . ಇದು ಐದು ಸಂಪುಟಗಳಲ್ಲಿ ಪ್ರಕಟವಾಗಿದೆ.
ಲೆವಿ ಸ್ಟ್ರಾಸ್ ಗಿಂತ ಮುಂಚೆ ಮಾನವಶಾಸ್ತ್ರಜ್ಞರು ತಮ್ಮ ಅದ್ಯಯನಕ್ಕೆ ಒಂದೊಂದೇ ಸಮಾಜವನ್ನು ಒಳಪಡಿಸಿ ವರ್ಗೀಕರಿಸಿ ಅನಂತರ ಸಾಮಾನ್ಯೀಕರಣವನ್ನು ಮಾಡುತ್ತಿದ್ದರು. ಮನುಷ್ಯನ ಹುಟ್ಟು, ಮದುವೆ, ಲೈಂಗಿಕತೆ , ಕ್ರಿಯಾವಿಧಿಗಳು, ಸಾವು ಇವುಗಳನ್ನು ಸುತ್ತ ವಿವರಣಾತ್ಮಕವಾಗಿ ನೋಡುತ್ತಾ ತಮ್ಮ ಕೃತಿಗಳನ್ನು ರಚಿಸುತ್ತಿದರು. ಇದಕ್ಕೆ ಬದಲಾಗಿ ಲೇವಿ ಸ್ಟ್ರಾಸ್ ಈ ಸಾಂಸ್ಕೃತಿಕ ಪಠ್ಯಗಳನ್ನು ಸೃಷ್ಟಿಸುವ ಮನುಷ್ಯನ/ಸಮಾಜದ ಮನಸ್ಸು ಹೇಗೆ ಸಾರ್ವತ್ರಿಕವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಗ್ರಹಿಸಲು ಪ್ರಯತ್ನಿಸಿದನು. ಈ ಪಠ್ಯಗಳು ಮೇಲ್ಮೆಯ್ಮಟ್ಟದಲ್ಲಿ ಮತ್ತು ವಿವರಣೆಯಲ್ಲಿ ಭಿನ್ನವಾಗಿ ಕಂಡರೂ ಆಳದಲ್ಲಿ ಅವೆಲ್ಲ ಒಂದೇ ರೀತಿಯ ರಚನೆಗಳನ್ನು ಹೊಂದಿರುತ್ತವೆ ಎಂಬುದನ್ನು ವಿಶ್ಲೇಷಿಸಿ ತೋರಿಸಿದನು. ಇದರ ಮೂಲಕ ಪ್ರತಿಯೊಂದು ಸಮಾಜವೂ ಮನುಷ್ಯನ ಬೌದ್ಹಿಕ ಸಮಗ್ರತೆಯನ್ನು ಸೃಷ್ಟ್ಯಿಸಿಕೊಳ್ಳುತ್ತದೆ ಎಂದು ತೋರಿಸಿದ. ‘tristas tropics’ ೧೯೫೫ ಒಂದು ರೀತಿಯಲ್ಲಿ ಆತನ ಮಾನವಶಾಸ್ತ್ರ ಅಧ್ಯಯನದ ದಾರ್ಶನಿಕ ಆತ್ಮಕತೆ. ಇದರಲ್ಲಿ ಮತ್ತು ‘ ರಾಚನಿಕ ಮಾನವಶಾಸ್ತ್ರ’ ಗಳಲ್ಲಿ ರಾಚನಿಕ ‘ ವಿಧಾನಗಳನ್ನು ಅನ್ವಯಿಸಿ ಅದಕ್ಕೆ ನಿದರ್ಶನಗಳನ್ನು ಕೊಟ್ಟು , ರಚನವಾದವನ್ನು ಹುಟ್ಟು ಹಾಕಿದ. ಪ್ರತಿಯೊಂದು ಸಂಕಥನವೂ ಎರಡು ರೀತಿಯಲ್ಲಿ ಸಂಯೋಜಿತವಾಗಿರುತ್ತದೆ ಇವುಗಳನ್ನು ಘಟಕಗಳಾಗಿ ಒಡೆದು ನೋಡುವುದು ಒಂದು ರೀತಿಯ ಸಂಯೋಜನೆಯಾದರೆ, ಅದೇ ಸಂಕಥನದಲ್ಲಿ ಅನೇಕ ಘಟಕಗಳನ್ನು ಬೇರೆ ಬೇರೆ ರೂಪದಲ್ಲಿ ಪುನರಾವರ್ತನೆಯಾಗಿರುತ್ತದೆ. ಈ ಗುಣವು ಮೌಖಿಕ ಸಂಕಥನ ಮತ್ತು ಸೃಜನಶೀಲ ಸಂಕಥನಗಳಲ್ಲಿ ಒಂದೇ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತವೆ ಎಂದು ಅವನು ವಿಶ್ಲೇಷಿಸಿ ತೋರಿಸಿದ. ಯಾವುದೇ ಕಥಾನಕದಲ್ಲಿ ಹೊಸ ಅರ್ಥ ಸೃಷ್ಟಿಯಾಗುವುದು ಈ ವೈರುಧ್ಯಗಳು ಸಂಧಿಸುವ ಜಾಗದಲ್ಲಿ, ಒಂದು ಸಾಂಸ್ಕೃತಿಕ ಪಠ್ಯದ ಅರ್ಥವನ್ನು ಗ್ರಹಿಸಬೇಕಾದರೆ ಈ ಸಾರ್ವರ್ಥಿಕ ಗುಣವನ್ನು ಓದುಗ ಕಂಡುಕೊಳ್ಳುವುದೇ ಆಗಿದೆ. ಇದು ಮೌಖಿಕ ಮತ್ತು ಲಿಖಿತ ಸಾಂಸ್ಕೃತಿಕ ಪಠ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶ. ಹೀಗೆ ಪ್ರತಿಯೊಂದು ಪಠ್ಯವನ್ನುಸೃಜಿಸುವ ಮನಸ್ಸು, ಅದು ಬುಡಕಟ್ಟು ಜನಾಂಗದವರದ್ದೆ ಆಗಿರಲಿ, ಮೌಖಿಕ ಸಂಪದ್ರಾಯದ ಸಮಾಜದ್ದೆ ಆಗಲಿ ಅಥವಾ ಹೆಚ್ಚು ಅಮೂರ್ತ ಚಿಂತನೆಯ ಸಮಾಜವೇ ಆಗಲಿ ಅಷ್ಟೇ ಮೂರ್ತವೂ, ಅಮೂರ್ತವೂ ಆದ ಆಲೋಚನಾಕ್ರಮಗಳನ್ನು ಹೊಂದಿರುತ್ತದೆ. ‘ದ ಸಾವೆಜ್ ಮೈಂಡ್’ (೧೯೬೨ ) ಎನ್ನುವ ಪುಸ್ತಕದಲ್ಲಿ ಈ ಪರಿಕಲ್ಪನೆಯನ್ನು ವಿಶ್ಲೇಷಿಸಲಾಗಿದೆ.
ಹೇಗೆ ಲೆವಿ ಸ್ಟ್ರಾಸ್ ನ ಸಂರಚನಾವಾದವು ಅನಂತ ಸಾಂಸ್ಕೃತಿಕ ಪಠ್ಯಗಳನ್ನು ಒಂದು ನಿರ್ಧಿಷ್ಟವಾದ ಆಲೋಚನಾಕ್ರಮಕ್ಕೆ ಒಳಪಡಿಸುತ್ತ ಸಾಂಸ್ಕೃತಿಕ ಪಠ್ಯಗಳು, ಹೇಗೆ ಒಂದು ಸಾಮಾಜಿಕ ವ್ಯವಸ್ತೆಯ ಸಂವಹನ ವಿಧಾನವಾಗಿರುತ್ತದೆ ಎಂಬುದನ್ನು ತೋರಿಸಿಕೊಡುವುದೇ, ವಿಶ್ಲೇಷಕನ ಕಾರ್ಯವೆಂದು ಅವನು ಹೇಳಿದನು.
7ಲೆವಿ ಸ್ತ್ರಾಸನು ಸೃಷ್ಟಿಪುರಣದ ಬಗ್ಗೆ ವಿಶ್ಲೇಷಿಸುತ್ತಾ ಎನ್ನುವುದು ಒಂದು ರೀತಿಯ ಭಾಷೆ, ಇದು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳು ಸಂಮ್ಮಿಲನಗೊಂದು ವ್ಯಕ್ತಪಡಿಸುವ ಆಲೋಚನಾಕ್ರಮ. ಇದು ಸಂಗೀತದಂತೆ ಕಾಲಾತೀತವಾಗಿ ಕೆಲಸ ಮಾಡುತ್ತಿರುತ್ತದೆ” ಎಂದು ನಿರೂಪಿಸಿದನು. ಸೃಷ್ಟಿಪುರಾಣಗಳೆಲ್ಲವೂ ಬೇರೆ ಬೇರೆಯಾದಂತೆ ಕಂಡರೂ ಅಂತರ್ಗತವಾಗಿ ಒಂದೇ ರೀತಿಯ ರಚನೆಯನ್ನು ಹೊಂದಿರುತ್ತವೆ ಎಂದು ತೋರಿಸಿಕೊಟ್ಟ. ಸೃಷ್ಟಿಪುರಾಣದ ಮುಖ್ಯ ಕಾರ್ಯವೆಂದರೆ ಸಮಾಜವನ್ನು ಒಂದು ವ್ಯವಸ್ಥೆಗೆ ಒಳಪಡಿಸುವುದು ಮತ್ತು ಆ ವ್ಯವಸ್ತೆಯನ್ನು ಮುಂದುವರೆಸಿಕೊಂಡು ಹೋಗುವುದು. ಈ ಸೃಷ್ಟಿಪುರಾಣಗಳು ಕಾಲದಿಂದ ಕಾಲಕ್ಕೆ ಆಂತರಿಕವಾಗಿ ಬದಲಾಗುತ್ತಿರುತ್ತವೆ. ಹಳೆಯ ಆಲೋಚನಾಕ್ರಮ ಬಿಟ್ಟು ಹೊಸ ಆಲೋಚನಾಕ್ರಮ ಸೇರಿಕೊಳ್ಳಬಹುದು. ಇಷ್ಟಾದರೂ ಆಂತರಿಕವಾಗಿ ಸಾಂಕೇತಿಕತೆ ಅಚಲವಾಗಿ ಉಳಿದಿರುತ್ತದೆ ಎಂದು ಅವನು ತನ್ನ “ಮಿಥ್” ಎಂಬ ಹೊತ್ತಿಗೆಯಲ್ಲಿ ತೋರಿಸಿಕೊಟ್ಟಿದ್ದಾನೆ. ಸೃಷ್ಟಿಪುರಾಣವು ವೈರುಧ್ಯದ ಆಲೋಚನಕ್ರಮದಿಂದ ಹೊರಟು ಆ ವೈರುಧ್ಯವನ್ನು ಬಿಡಿಸಿಕೊಳ್ಳುವ ಕಡೆಗೆ ದುಡಿಯುತ್ತದೆ ಎಂದು ತೋರಿಸಿಕೊಟ್ಟ. ಅಲ್ಲದೆ ಸೃಸ್ತಿಪುರಾಣದಲ್ಲಿ ಒಂದು ಅಧಿಕೃತವಾದ ಪಠ್ಎಂಬುದಿಲ್ಲ. ಇವು ಪಾಠಾಂತರಗಳಲ್ಲಿ ಅವತಾರವೆತ್ತುತ್ತಿರುತ್ತವೆ ಎಂದು ತೋರಿಸಿಕೊಟ್ಟ.Mythologiques I – IV(1965)
ಇವನ ಮತ್ತೊಂದು ಪ್ರಭಾವಶಾಲಿ ಕೃತಿಯೆಂದರೆ “ಬಂಧುತ್ವದ ಅಧ್ಯಯನ”. ಇವನ ವಿಶ್ಲೇಷಣೆ ಬರುವವರೆಗೂ ಮಾನವಶಾಸ್ತ್ರಜ್ಞರು ಬಂದುತ್ವದ ಅಧ್ಯಯನ ಎಂದರೆ ಕುಟುಂಬದ ಅಧ್ಯಯನ ಎಂದು ಭಾವಿಸಿದ್ದರು. ಆದರೆ ಈತ ಬಂಧುತ್ವಕ್ಕು , ಮದುವೆ ನಿಯಮಗಳಿಗೂ, ಸಂಪತ್ತಿನ ವರ್ಗಾವಣೆ ಮತ್ತು ಕುಟುಂಬದ ಗುಂಪುಗಗಳು ಹೇಗೆ ಘಟಕಗಳಾಗಿರುತ್ತವೆ ಎನ್ನುವುದರ ಮೇಲೆ ಒತ್ತುಕೊಟ್ಟ. ಅಲ್ಲದೆ ಈ ಕೃತಿಯು ಹೆಣ್ಣು ಒಂದು ಕುಟುಂಬದಿಂದ ಇನ್ನೊಂದು ಕುಟುಂಬಕ್ಕೆ ಬದಲಾಗುತ್ತ ಹೋಗುವ ಸಂಬಂಧವನ್ನು ವಿವರಿಸುವ ಪಠ್ಯದಂತೆ ಕೆಲಸ ಮಾಡುತ್ತದೆ. ಈ ಬದಲಾಗುವ ಸಂದರ್ಭದಲ್ಲಿ ಹೆಣ್ಣು ಪಡುವ ಪಾಡು ಎಂಥದು ಎಂಬ ವಿಶ್ಲೇಷಣೆ ಈ ಪುಸ್ತಕದಲ್ಲಿ ದೊರೆಯುತ್ತದೆ. ಇದರ ವಿಸ್ತೃತವಾದ ಅದ್ಯಯನವನ್ನು ‘ಯುಗಾಂತ’ ಖ್ಯಾತಿಯ ಮಾನವಶಾಸ್ತ್ರಜ್ಞೆ, ಇರಾವತಿ ಕರ್ವೆ ಭಾರತದ ಸಂಧರ್ಭದಲ್ಲಿ ಅನ್ವಯಿಸಿ ಆಳವಾದ ವಿಶ್ಲೇಷಣೆಯನ್ನು ಮಾಡಿದ್ದಾರೆ. ಈ ವಿಶ್ಲೇಷಣೆಯು ಒಂದು ಪ್ರಮುಖವಾದ ಅಂಶವನ್ನು ಹೊರಗೆಡವಿದೆ. ಪಶ್ಚಿಮ ಭಾರತದಲ್ಲಿರುವ ಆರ್ಯ ಸಮುದಾಯಗಳ ಮೇಲೆ ದ್ರಾವಿಡ ಸಂಸ್ಕೃತಿಯ ಬಂಧುತ್ವ ಸಂರಚನೆಯು ಪ್ರಭಾವ ಬೀರಿರುವದನ್ನು ತೋರಿಸುತ್ತದೆ.
ಹೀಗೆ ಲೆವಿ ಸ್ಟ್ರಾಸ್ ನು ಭಾಷಾಶಾಸ್ತ್ರದಿಂದ ಪ್ರಭಾವಿತನಾಗಿ ಸಂರಚನಾವಾದವನ್ನು ಮಾನವಶಾಸ್ತ್ರದ ಅಧ್ಯಯನಕ್ಕೆ ಅನ್ವಯಿಸಿದನು. ಭಾಷಾಶಾಸ್ತ್ರವು ಹೇಗೆ ಒಂದು ಪದದ ಅರ್ಥವನ್ನು ಹುಡುಕದೆ ಪದಗಳು ತಮ್ಮ ಜೋಡಣೆಯಲ್ಲಿ ಸೃಷ್ಟಿಸುವ ವಿನ್ಯಾಸವನ್ನು ಕಂಡುಕೊಳ್ಳುತ್ತದೋ, ಅಂತೆಯೇ ಮಾನವಶಾಸ್ತ್ರದ ಪಠ್ಯಗಳು ಒಂದು ಘಟಕದ ಅರ್ಥವನ್ನು ಮಾತ್ರ ಗ್ರಹಿಸದೆ ಆ ಘಟಕಗಳ ಸಂಯೋಜನೆಯನ್ನು ಅಭ್ಯಯಿಸುತ್ತದೆ. ಈ ಮೂಲಕ ಮನುಷ್ಯನ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬದನ್ನು ಅರ್ಥ ಮಾಡಿಕೊಳ್ಳಲು ಅನುವಾಗುವಂತಹ ಸಿದ್ದಾಂತವನ್ನು ಲೆವಿ ಸ್ಟ್ರಾಸ್ ಕೊಟ್ಟ. ಮನುಷ್ಯನು ಪ್ರಕೃತಿಯನ್ನೂ ಸಂಸ್ಕ್ರುತಿಯನ್ನಾಗಿ ಮಾರ್ಪಡಿಸಿಕೊಳ್ಳುವ ರೀತಿಯನ್ನು ಅರಿಯುವುದು ಹೇಗೆ ಎಂದು ತನ್ನ ಬರಹಗಳಲ್ಲಿ ವಿಶ್ಲೇಷಿಸಿದನು. ಅವರ ಉಳಿದ ಪ್ರಮುಖ ಪುಸ್ತಕಗಳೆಂದರೆ :”The Raw and the Cooked”.
8ಲೆವಿ ಸ್ಟ್ರಾಸ್ ತನ್ನ ಬದುಕಿನ ನೂರೊಂದು ವರ್ಷಗಳಲ್ಲಿ ೩೫ ವರ್ಷಗಳಷ್ಟು ದೀರ್ಘಕಾಲ ಬುಡಕಟ್ಟು ಜನಾಂಗದ ಅಧ್ಯಯನವನ್ನು ನಡೆಸಿದ. ಇವನ ಬರಹಗಳ ಪ್ರಭಾವ ಸಾಹಿತ್ಯ ಪಠ್ಯಗಳನ್ನು ವಿಶ್ಲೇಷಿಸುವುದರ ಮೇಲೂ ಆಗಿದೆ. ತೊದರೋವ್ ಬರೆದ ‘’, (೧೯೨೪) ಇದಕ್ಕೆ ಒಳ್ಳೆಯ ಉದಾಹರಣೆ. ಲೆವಿ ಸ್ಟ್ರಾಸ್ ಮೌಖಿಕ ಪರಂಪರೆ ಮತ್ತು ಲಿಖಿತ ಪರಂಪರೆಗೆ ಇದ್ದ ಅಂತರವನ್ನು ಕಡಿದು ಹಾಕಿದನು. ೧೯೯೦ ರ ದಶಕ ನಂತರ ಬರುತ್ತಿರುವ ಸಾಂಸ್ಕೃತಿಕ ಅಧ್ಯಯನದ ಹಿಂದೆ ಲೆವಿ ಸ್ಟ್ರಾಸ್ ಅಚ್ಚಳಿಯದೆ ನಿಂತಿದ್ದಾನೆ. ಇವನ ಈ ವಿಶ್ಲೇಷಣಾ ವಿಧಾನವನ್ನು ಜಗತ್ತಿನ ಅನೇಕ ವಿಶ್ವವಿದ್ಯಾನಿಲಯಗಳು ‘ತೌಲನಿಕ ಸಾಹಿತ್ಯ’ ಎಂಬ ಹೆಸರಿನಲ್ಲಿ ಬೋಧಿಸುತ್ತಿವೆ ಮತ್ತು ಸಂಶೋಧನೆಯನ್ನು ನಡೆಸುತ್ತಿವೆ.
ಈತನ ಸಂಶೋಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವನನ್ನು ಗೌರವಿಸಿವೆ. ಪ್ರಮುಖವಾಗಿ ೧೯೬೬ ರಲ್ಲಿ ವೆನರ್ ಗ್ರೇನ್ ಫೌಂಡೇಶನ್, ವೈಕಿಂಗ್ ಫಂಡ್ ಮೆಡಲ್ ಅನ್ನು ಕೊಟ್ಟು ಗೌರವಿಸಿತು. ೧೯೭೦ರಲ್ಲಿ ಇರಾಸ್ಮಸ್ ಬಹುಮಾನ ಇವನ್ದಾಯಿತು. ಈತನಿಗೆ ಆಕ್ಸ್ಫರ್ಡ್,ಏಲ್, ಹಾರ್ವಡ್ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ಗಳನ್ನೂ ಕೊಟ್ಟು ಗೌರವಿಸಿವೆ. ಅನೇಕ ಸಂಶೋಧನಾ ಸಂಸ್ಥೆಗಳು ಇವನಿಗೆ ಗೌರವ ಸದಸ್ಯತ್ವವನ್ನು ಕೊಟ್ಟಿವೆ. ಅವುಗಳಲ್ಲಿ ಮುಖ್ಯವಾದವು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ದಿ ಅಮೇರಿಕನ್ ಅಕಾಡೆಮಿ ಅಂಡ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್, ದಿ ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ದಿ ಅಮೆರಿಕನ್ ಫಿಲಾಸಫಿಕಲ್ ಸೊಸೈಟಿ. ಹೀಗೆ ನೂರು ಮೊಂಬತ್ತಿಗಳನ್ನೂ ಹಚ್ಚಿಸಿ ತನ್ನ ನೂರನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಲೆವಿ ಸ್ಟ್ರಾಸ್ ನಿಂದ ಇನ್ನು ಏನನ್ನು ನಿರೀಕ್ಷಿಸೋಣ!?

Leave a Reply

Your email address will not be published. Required fields are marked *