ಜ್ಯಾಕ್ ಲೆಕಾಂ
ತಿಂಗಳು – ಏಪ್ರಿಲ್ ೨೦೧೦
೧೯೭೦ರ ದಶಕದಿಂದ ಸ್ತ್ರೀವಾದವು ಅನೇಕ ಮಜಲುಗಳನ್ನು ದಾಟಿ ಒಂದು ವಿಶಾಲ ಸಾಂಸ್ಕೃತಿಕ-ಮನೋವೈಜ್ಞಾನಿಕ ವಿಶ್ಲೇಷಣೆಯ ತಳಹದಿಯ ಮೇಲೆ ರೂಪಿತಗೊಳ್ಳುತ್ತಿವೆ . ಅಲ್ಲಿಯ ತನಕ ಸ್ತ್ರೀವಾದವು ಬೇರೆ ಬೇರೆ ಆಯಾಮಗಳಲ್ಲಿ ತನ್ನ ಬರುವಿಕೆಯನ್ನು ಗೊತ್ತುಪಡಿಸಿತ್ತು.
ಉದಾರವಾದಿ ಮತ್ತು ಸಮಾಜವಾದಿ ಸ್ತ್ರೀವಾದವು ಗಂಡು –ಹೆಣ್ಣಿನ ಸಾಮಾಜಿಕ , ಆರ್ಥಿಕ , ಸಾಂಸ್ಕೃತಿಕ ತಾರತಮ್ಯ ದೃಷ್ಟಿಕೋನವನ್ನು ಮುಂಚೂಣಿಗೆ ತಂದಿತು. ಇಲ್ಲಿ ಗಂಡಿನಂತಯೇ ಹೆಣ್ಣಿಗೂ ಎಲ್ಲಾ ರಂಗಗಳಲ್ಲೂ ಅವಕಾಶ ಸಿಗಬೇಕು. ಸಮಾನತೆಯನ್ನು ಕಾನೂನಿನ ಮೂಲಕ ತರಬೇಕು. ಆರ್ಥಿಕವಾಗಿ ಗಂಡಿಗೆ ಸರಿಸಮಾನನಾಗಿ ನಿಲ್ಲಬೇಕು. ವರ್ಗ ಮತ್ತು ಲಿಂಗಾಧಾರಿತ ತಾರತಮ್ಯಗಳು ಹೋಗಬೇಕೆಂದು ಹೋರಾಡಿತು. ಗಂಡು – ಹೆಣ್ಣಿನ ಅಸಾಮಾನತೆಗೆ ಬಂಡವಾಳಶಾಹಿಯೇ ಕಾರಣವಾದ್ದರಿಂದ ಅದನ್ನು ನಿರ್ನಾಮ ಮಾಡಬೇಕೆಂದು ನಂಬಿತ್ತು.
ಎರಡನೇ ರೀತಿಯ ಸ್ತ್ರೀವಾದವು ಹೆಣ್ಣು ಒಂದು ಶಕ್ತಿ. ಹೆಣ್ಣಿನ ಮೌಲ್ಯ ದೊಡ್ಡದು. ಪುರುಷ ಪ್ರಧಾನತೆ ಹೆಣ್ಣನ್ನು ಕೀಳಾಗಿ ನೋಡುತ್ತದೆ. ಗಂಡು ಯಾವಾಗಲು ತಾನು ಮೇಲು ಎಂದು ನೋಡುತ್ತಿರುತ್ತದೆ. ಇದರಿಂದ ಹೆಣ್ಣು ತುಳಿತಕ್ಕೊಳಗಾಗಿದ್ದಾಳೆ ಎಂಬುದು ಈ ವಾದದ ತಿಳಿವು. ಆದರೆ ಈ ವಾದವನ್ನು ಬರಿಯ ಸ್ತ್ರೀವಾದಿಗಳು, ಅಭಿವೃದ್ಧಿಶೀಲ ದೇಶದ ಸ್ತ್ರೀವಾದಿಗಳು , ವಾಸಾಹತುಶಾಹಿ ಸ್ತ್ರೀವಾದಿಗಳು ವಿರೋಧಿಸುತ್ತಿದ್ದಾರೆ.
ಬಿಳಿಯ ಸ್ತ್ರೀವಾದಗಳ ಸಿದ್ದಾಂತವನ್ನು ಕರಿಯ ಸ್ತ್ರೀವಾದಿಗಳು (black feminist) ಒಪ್ಪುವುದಿಲ್ಲ. ಇವರು ಕರಿಯ ಸ್ತ್ರೀವಾದಿಗಳಿಗೂ ಬಿಳಿಯ ಸ್ತ್ರೀವಾದಿಗಳಿಗೂ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸಿದ್ದಾರೆ. ಕರಿಯ ಸ್ತ್ರೀಯರ ಅನುಭವ, ಸಾಂಸ್ಕೃತಿಕ ಪ್ರಾತಿನಿಧ್ಯ ಮತ್ತು ಸಾಮಾಜಿಕ – ಆರ್ಥಿಕ ಆಸಕ್ಥಿಗಳಲ್ಲಿರುವ ವ್ಯತ್ಯಾಸವನ್ನು ತೋರಿಸಿಕೊಡುತ್ತಿದ್ದಾರೆ . ಅಂತೆಯೇ ವಸಾಹತುಶಾಹಿಯ ಸಂಧರ್ಭದಲ್ಲಿ ಹೆಣ್ಣು ಹೇಗೆ ಎರಡು ಪಟ್ಟು ದಮನಕ್ಕೊಳಗಾಗಿದ್ದಾಳೆ ಎಂದು ವಿಶ್ಲೇಷಿಸುತ್ತಾರೆ. ಇದಕ್ಕೆ ಕಾರಣ ವಸಾಹತುಶಾಹಿಗಳ ದಬ್ಬಾಳಿಕೆ ಒಂದೆಡೆಯಾದರೆ, ತಮ್ಮ ದೇಶದ ಗಂಡಸರ ಪುರುಷ ಪ್ರಧಾನತೆ ಮತ್ತೊಂದು ಕಾರಣವಾಗಿರುತ್ತದೆ.
ರಚನೋತ್ತರ ಸ್ತ್ರೀವಾದಿಗಳು ಲೈಂಗಿಕತೆ(sexuality) ಮತ್ತು ಲಿಂಗಾಧಾರಿತ(gender based) ಸಮಾಜವೂ ಆಯಾ ಸಮಾಜದ ಮತ್ತು ಸಂಸ್ಕೃತಿಯ ನಿರ್ಮಿತಿಗಳೆಂದು ನಂಬುತ್ತಾರೆ . ಇದನ್ನು ಶರೀರಶಾಸ್ತ್ರ(biological)ದನ್ವಯ ವಿಶ್ಲೆಷಿಸಲಾಗುವುದಿಲ್ಲ ಎಂದು ಹೇಳುತ್ತಾರೆ. ಹೆಣ್ತನ – ಗಂಡುತನಗಳು ಸಾರ್ವರ್ತಿಕ ವರ್ಗಗಳಾಗಿ ವಿಂಗಡಿಸಲು ಸಾಧ್ಯವಿಲ್ಲ. ಗಂಡುತನ-ಹೆಣ್ಣುತನ ಹೇಗೆ ಭಾಷೆಯಲ್ಲಿ ಪ್ರತಿನಿಧಿಸಲ್ಪಟ್ಟಿದೆ ಎಂಬುದರ ಆಧಾರದ ಮೇಲೆ ನಿಗಧಿಪಡಿಸಲಾಗುವುದು. ಇಲ್ಲಿ ಸಂಸ್ಕೃತಿ ಪ್ರತಿನಿಧೀಕರಣ , ಭಾಷೆ, ಅಧಿಕಾರ, ತಾತ್ವಿಕ ತೊಳಲಾಟ, ಮಾನಸಿಕ ಸ್ಥಿತಿಯ ರೂಪ ಇವುಗಳ ಆಧಾರದ ಮೇಲೆ ಸ್ತ್ರೀವಾದ ನಿಂತಿದೆ. ಲಿಂಗಾಧಾರಿತ ನಿರ್ಮಿತಿಯು ಮನಸ್ಸಿನ ಒಳಗೂ-ಹೊರಗಿನ (ಸುಪ್ತ-ಜಾಗೃತ ಪ್ರಜ್ಞೆಗಳ) ಜೊತೆ ಹೇಗೆ ಸಂಧಿಸುತ್ತದೆ ಎಂಬುದನ್ನು ವಿಶ್ಲೇಷಿಸುವ ಮೂಲಕ ಸ್ತ್ರೀವಾದವನ್ನು ಪ್ರತಿನಿಧಿಸುತ್ತಾರೆ .
ಈ ವಾದದ ಪ್ರಮುಖ ರೂವಾರಿ ಫ್ರಾನ್ಸ್ನ ಜ್ಯಾಕ್ ಲೆಕಾಂ (೧೯೧೦-೧೯೮೪)
ಲೆಕಾಂ ಫ್ರಾಯ್ಡ್ ನ ಪ್ರಮುಖ ಪರಿಕಲ್ಪನೆಗಳಾದ ಸಾಂಸಾರಿಕ ಮತ್ತು ಲೈಂಗಿಕ ಅನುಭವಗಳನ್ನು ಸಾಂಸ್ಕೃತಿಕ ಅನುಭವವನ್ನಾಗಿ ಪರಿವರ್ತಿಸಿಬಿಡುತ್ತಾನೆ. ಪ್ರತಿಯೊಬ್ಬನ ಅನನ್ಯತೆಯೂ ಭಾಷಾ ಪ್ರಯೋಗದಲ್ಲಿ ವ್ಯಕ್ತವಾಗುತ್ತದೆ. ಪ್ರತಿಯೊಬ್ಬನಲ್ಲೂ ಲೈಂಗಿಕ ಪ್ರಜ್ಞೆ ಅದುಮಿಕೊಂಡು ಬಿಡುತ್ತದೆ. ಅದು ಸುಪ್ತಪ್ರಜ್ಞೆಯ ಒಳಗೆ ಸೇರಿಕೊಳ್ಳುತ್ತದೆ. ಈ ಅದುಮಿಟ್ಟ ಸುಪ್ತಪ್ರಜ್ಞೆಯ ಭಾಷೆಯ ರೂಪವನ್ನು ತಳೆದು ನಂತರ ಬದುಕಿನ ಆಕಾಂಕ್ಷೆಯಾಗಿ ಪರಿವರ್ತಿತವಾಗುತ್ತದೆ. ಅದು ಹೊರ ಹೊಮ್ಮುವುದು ಭಾಷೆಯ ಮುಖಾಂತರ. ಭಾಷೆಯಲ್ಲಿ ನಿರಂತರವಾದ ಹುಡುಕಾಟವಾಗುತ್ತದೆ. ಭಾಷೆ ಸಾಂಕೇತಿಕವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ತಂದೆಯ ರೂಪಕವಾದ ‘ಶಿಶ್ನ’. ಶಿಶ್ನವು ಅಧಿಕಾರದ, ನಿಯಂತ್ರಣದ ಸಂಕೇತ . ಇದನ್ನು ಹೊಂದಿರುವ- ಹೊಂದಿಲ್ಲದ (ಗಂಡುಮಗು-ಹೆಣ್ಣುಮಗು) ಶಿಶ್ನ ಸಂಕೇತದ ಭಾಷೆಯನ್ನೇ ಬಳಸಲು ಕಲಿಯುತ್ತವೆ. ಆದ್ದರಿಂದ ಇಡೀ ಭಾಷೆ ಲೆಕಾಂ ಪ್ರಕಾರ ಗಂಡಿನ ಭಾಷೆಯೇ ಆಗಿರುತ್ತದೆ. ಭಾಷೆಯ ಉಳಿದೆಲ್ಲ ಸಾಧ್ಯತೆಗಳೂ ಈ ಶಿಶ್ನ ಭಾಷೆಯನ್ನೂ ಅವಲಂಬಿಸಿರುತ್ತದೆ.ಆದ್ದರಿಂದ ಮನೋ-ವೈಜ್ಞಾನಿಕ ವಿಶ್ಲೇಷಣೆ ಸಂಪೂರ್ಣವಾಗಿ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಲೆಕಾಂ ಸುಪ್ತಪ್ರಜ್ಞೆಯು ಭಾಷಾ ಮಾದರಿಯಲ್ಲೇ ಕೆಲಸ ಮಾಡುತ್ತಿರುತ್ತದೆ. ಅದರಂತೆಯೇ ರೂಪುಗೊಂಡಿರುತ್ತದೆ ಎಂದು ವಿಶ್ಲೇಷಿಸಿದ್ದಾನೆ . ಸುಪ್ತಪ್ರಜ್ಞೆಯು ನಮ್ಮ ಅರಿವಿಗೆ ಬರುವು ಮಾತು ಮಾತು ಕ್ರಿಯಾಶೀಲ ಬರವಣಿಗೆಗಳ ಮೂಲಕ. ಈ ಕ್ರಿಯಾತ್ಮಕ ಭಾಷೆಯಲ್ಲಿ ಸುಪ್ತಪ್ರಜ್ಞೆ , ಜಾಗೃತ ಪ್ರಜ್ಞೆಯೊಡನೆ ನಿರಂತರವಾಗಿ ಆಟವಾಡುತ್ತಿರುತ್ತದೆ.
ಕನಸುಗಳು ಮತ್ತು ಹಾಸ್ಯವನ್ನು ವಿಶ್ಲೇಷಿಸುವಾಗ ಫ್ರಾಯ್ದನು ಭಾಷೆಯ ಬಗ್ಗೆ ಒತ್ತಿ ಹೇಳಿದ್ದನು. ಸುಪ್ತಪ್ರಜ್ಞೆಯನ್ನು ಹೊರಹಾಕುವ ಏಕೈಕ ಮಾಧ್ಯಮ ಭಾಷೆ. ಇದರ ಆಧಾರದ ಮೇಲೆ ಲೆಕಾಂ ಹೇಳುವುದೇನೆಂದರೆ ಭಾಷೆ ಇಲ್ಲದಿದ್ದರೆ ಪ್ರಪಂಚದಲ್ಲಿ ಏನನ್ನು ಅರಿಯಲು ಸಾಧ್ಯವಿರಲಿಲ್ಲ . ಒಂದು ವಸ್ತುವಿಗಿಂತ ಇನ್ನೊಂದು ಭಿನ್ನ ಎಂದು ತಿಳಿಯುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ . ಆಗ ರಚನೆಗಳೇ ಇರಲಿಲ್ಲ. ಸುಪ್ತಪ್ರಜ್ಞೆಯನ್ನು ಭಾಷೆಯ ಮೂಲವಾಗಿಯೇ ಪುನರಚಿಸಬೇಕೆಂದು ವಿಶ್ಲೇಷಿಸಿದ್ದಾನೆ. ಭಾಷೆಗಿಂತ ಮೊದಲು
ಮಗುವಿನ ಮನಸ್ಸು, ಪ್ರವೃತ್ತಿ(instinct) ಮಟ್ಟದಲ್ಲಿ ಮಾತ್ರ ಇರುತ್ತದೆ. ಬಾಷೆ ಕಲಿಕೆಯ ಶಕ್ತಿಯಿಂದ ಮನುಷ್ಯ ಮನುಷ್ಯನಾಗಿದ್ದಾನೆ. ನಮ್ಮ ಲೈಂಗಿಗಕಾತ್ಮಕತೆ(sexuality) ಮತ್ತು ಲಿಂಗಭೇದ (gender distinction) ರೂಪಿಸಿದೆ. ಈ ಕಾರಣದಿಂದಾಗಿ ಲೆಕಾಮ್ನ ಭಾಷಾಧಾರಿತ ಮನೋವಿಜ್ಞಾನ ಎಪ್ಪತ್ತರ ದಶಕದಿಂದೀಚೆಗೆ ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಅರಿಯುವ ಪ್ರಮುಖ ಸಾಧನವಾಗಿದೆ.ಸ್ಥ್ರೀವಾದಕ್ಕೆ ಆಳ ಮತ್ತು ವಿಸ್ತಾರವನ್ನು ಒದಗಿಸಿದೆ. ಹಾಗೆ ನೋಡಿದರೆ ಫ್ರಾಯ್ಡ್ನ ಮನೋವಿಶ್ಲೇಷಣೆ ಸ್ತ್ರೀವಾದಿಗಳಿಗೆ ಪ್ರತಿಕೂಲವಾಗಿಯೇ ಇದೆ. ಏಕೆಂದರೆ ಹೆಣ್ಣಿನ ದಮನವನ್ನೇ ಅದು ಹೇಳುತ್ತದೆ. ಹೆಣ್ಣು ಕ್ರಿಯಾಶೀಲಳಲ್ಲ, ಅವಳಿಗೆ ಸಮಾಜದಲ್ಲಿ ಅಧಿಕಾರವಿಲ್ಲ, ಲೈಂಗಿಕವಾಗಿ ಅರಳಿಕೊಳ್ಳುವುದಿಲ್ಲ ಎಂಬೆಲ್ಲ ಮಾಮೂಲಿ ಗುಣಗಳನ್ನು ತೋರಿಸಿಕೊಡುತ್ತದೆ. ಈ ಹೆಣ್ಣುತನ ಸಾಂಸಾರಿಕ ಸಂದರ್ಭದಲ್ಲಿ ಸುಪ್ತಪ್ರಜ್ಞೆ ತನ್ನ ತಾಣವನ್ನು ಹೇಗೆ ಸೃಷ್ಟಿಸಿಕೊಂಡಿದೆ, ವಿಧೇಯತೆಯನ್ನು ಅಂತರ್ಗತ ಮಾಡಿಕೊಂಡಿದೆ ಎಂಬುದನ್ನು ನೇತ್ಯಾತ್ಮಕವಾಗಿ ತಿಳಿಸಿಕೊಡುತ್ತದೆ.
ಅದು ಒಂದು ರೀತಿಯಲ್ಲಿ ಹೌದು ಕೂಡ. ಆದರೆ ಲೆಕಾಂ ಪ್ರಕಾರ ಅದು ಅಷ್ಟಕ್ಕೇ ನಿಲ್ಲುವುದಿಲ್ಲ. ಫ್ರಾಯ್ಡ್ನ ಈ ಸೀಮಿತ ನೇತ್ಯಾತ್ಮಕ
ಅರಿವಿಗೆ ಭಾಷೆಯ ಪರಿಕಲ್ಪನೆಯನ್ನು ಜೋಡಿಸಿ ಮನಸ್ಸನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾನೆ . ಹೊಸ ಹೊಳವುಗಳನ್ನು ಕೊಡುತ್ತಾನೆ. ಮಕ್ಕಳು ಹುಟ್ಟಿದಾರಭ್ಯ ಭಾಷೆಯ ಸಾಕೇಂತಿಕತೆಯಲ್ಲಿ ಹೇಗೆ ಸ್ಥಾನ ಪಡೆಯುತ್ತಾರೆ ಎಂಬುದನ್ನು ವಿಶ್ಲೇಷಿಸುತ್ತಾನೆ . ಲೆಕಾಂ ಪ್ರಕಾರ ಮಕ್ಕಳು ಈ ಭಾಷೆಯನ್ನಾಡುವ ಮಟ್ಟಕ್ಕೆ ಬರಬೇಕಾದರೆ ಅನೇಕ ಕವಲುಗಳಾಗಿ ಸೀಳಿಕೊಳ್ಳುತ್ತಾರೆ. ಮೊದಲು ಮಗುವು ತಾನು ತನ್ನ ತಾಯಿಯ ದೇಹಕ್ಕಿಂತ ಭಿನ್ನ ಎಂದು ಅರಿತುಕೊಳ್ಳುತ್ತದೆ. ಮುಂದಿನ ಘಟ್ಟ ಮಗು ತನ್ನ ಪ್ರತಿಫಲನವನ್ನು ಕನ್ನಡಿಯಲ್ಲಿ ಕಂಡಂತೆ ತನ್ನನ್ನೇ ಕಾಣುವ ಘಟ್ಟ (mirror reflexion stage). ಮೂರನೆಯ ಘಟ್ಟದಲ್ಲಿ ‘ನಾನತ್ವ’ ವನ್ನು ಭಾಷೆಯ ಮೂಲಕ ಕಂಡುಹಿಡಿದುಕೊಳ್ಳುವ ಘಟ್ಟ. ಈ ‘ನಾನು’ ಬೇರೆಯವರಿಗಿಂತ ಭಿನ್ನ ಎಂಬುದನ್ನು ಅರಿಯುವುದು. ಈ ‘ನಾನು’ ಅವನು/ಳು ಎಂಬುದನ್ನು ಭಾಷೆಯಲ್ಲಿ ತಿಳಿಯುವ ಘಟ್ಟ. ಭಾಷೆ ಇಲ್ಲದೆ ಈ ಘಟ್ಟದಲ್ಲಿ ಮಗು ಸೀಳಿಕೊಳ್ಳಲಾಗುವುದಿಲ್ಲ. ಭಾಷೆ ಕಲಿಯುವುದರೆಂದರೆ ಸಮಾಜದ ಜೊತೆ ಒಡನಾಟ ನಡೆಸುವುದು (socialization) ನಂತರ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು.
ಲೆಕಾಂ ಪ್ರಕಾರ ಗಂಡು ಮತ್ತು ಹೆಣ್ಣು ಮಕ್ಕಳು ಈ ಸಾಂಕೇತಿಕ ಕ್ರಮವನ್ನು ಬೇರೆ ಬೇರೆಯಾಗಿ ಪ್ರವೇಶಿಸುತ್ತಾರೆ. ಅವರ ಭಾಷೆಯಲ್ಲೂ ಸೀಳು ಅಥವಾ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ‘ಶಿಶ್ನ’(phallus)ದ ಪ್ರಾಮುಖ್ಯತೆ. ಇಲ್ಲಿ phallus ಎಂದರೆ ಒಂದು ಸಾಂಕೇತಿಕತೆ ಪ್ರತೀಕ ಎಂದು ತಿಳಿಯಬೇಕು. ಮನುಷ್ಯ ಜನನೆಂದ್ರಿಯ ಎಂದು ತಿಳಿಯಬಾರದು. ಸುಪ್ತಪ್ರಜ್ಞೆಯಲ್ಲಿ ಮೂಡಿ ನಂತರ ಬೆಳೆಯುವ ಒಂದು ಭಾವನೆ. ಫ್ರಾಯ್ಡ್ನ ಪ್ರಕಾರ ಮಕ್ಕಳ ‘ಉಭಯ ಲಿಂಗಿಗಳು’(bisexual). ಆದರೆ ನಮ್ಮ ನಾಗರಿಕತೆಯ ಬೇಡಿಕೆಗೆ ಅನುಗುಣವಾಗಿ ಮುಂದೆ ವಂಶೋದ್ದಾರಕ್ಕೆ ಮಕ್ಕಳನ್ನು ಪಡೆಯಲು ಗಂಡ – ಹೆಣ್ಣು ಎಂದು
ಗುರುತಿಸಕೊಳ್ಳಬೇಕಾಗುತ್ತದೆ. ಹೆಣ್ಣು-ಗಂಡು ಒಂದನ್ನೊಂದು ಬಯಸಿ ಮುಂದೆ ಮಕ್ಕಳನ್ನು ಪಡೆಯಲು ಅನುವಾಗುವಂತೆ ನಾಗರೀಕತೆ ಮಾಡುತ್ತದೆ. ಈ ಹಂತವನ್ನು ಫ್ರಾಯ್ಡ್ ಈಡಿಪಸ್ ಕಾಂಪ್ಲೆಕ್ಸ್ ಎಂದು ಕರೆಯುತ್ತಾನೆ. ಈ ಹಂತದಲ್ಲಿ ಮಗು ತಾಯಿಯನ್ನು ಬೇಡುತ್ತದೆ. ತಂದೆಯ ಬಗ್ಗೆ ‘ಹೊಟ್ಟೆಕಿಚ್ಚ’ನ್ನು (male envy) ಬೆಳೆಸಿಕೊಳ್ಳುತ್ತದೆ. ಏಕೆಂದರೆ ತಂದೆಯು ಮಗುವಿನ ಮತ್ತು ತಾಯಿಯ ಪ್ರೀತಿಗೆ ಅಡ್ಡ ಬರುವವನಾಗಿರುತ್ತಾನೆ. ಮುಂದಿನ ಹಂತವೆಂದರೆ ಸಾಕೇಂತಿಕವಾಗಿ ಅಂದರೆ castration, ಲೈಂಗಿಕತೆಯನ್ನು ಅದುಮಿಟ್ಟುಕೊಳ್ಳುವ ಹಂತ. ಗಂಡು ಮಗು ತಾಯಿಯ ಬಗ್ಗೆ ಇರುವ ಪ್ರೀತಿಯನ್ನು ತಂದೆಯ ಅಧಿಕಾರದ ‘ಹೆದರಿಕೆಯಿಂದ’ ಮುಚ್ಚಿಟ್ಟುಕೊಳ್ಳುತ್ತದೆ. ತಂದೆಯ ಜೊತೆ ತಾನು ತಾನು ಗುರುತಿಸಿಕೊಳ್ಳುತ್ತದೆ. ದೈಹಿಕವಾಗಿ ಗಂಡು ಮಗು ತಂದೆಯಂತೆಯೇ ಇರುವುದು ಇದಕ್ಕೆ ಕಾರಣ. ಹೆಣ್ಣು ಮಕ್ಕಳು ತಮ್ಮಲ್ಲಿ ‘ಶಿಶ್ನ’ವಿಲ್ಲದಿರುವುದರಿಂದ ತಾಯಿಯ ಜೊತೆಯಲ್ಲಿ ಗುರುತಿಸಿಕೊಳ್ಳುತ್ತಾರೆ. phallic ಅನ್ನುವುದರ ಮತ್ತೊಂದು ಅರ್ಥ ಪುರುಷ ಪ್ರಧಾನತೆ, ಇದು ಸಾಮಾಜಿಕ ಕ್ರಮ. ಲೈಂಗಿಕ ನಿಷೇಧ(incest ) ಈ ಹಂತದಲ್ಲಿ ತಾಯಿ-ಮಗುವೆಂಬ ದ್ವಿವಾದವೃತ್ತಿ ಅರಿವಿಗೆ ಬಂದಾಗ ಭಾಷೆ ಪ್ರವೇಶಿಸುತ್ತದೆ. ಸಾಕೇಂತಿಕತೆ /ಭಾಷೆ ರೂಪ ಪಡೆಯುತ್ತದೆ. ಈ ಮಟ್ಟದಲ್ಲಿ ಗಂಡು – ಹೆಣ್ಣು ಮಗುವಿನ ಜನನಾಂಗಗಳ ವ್ಯತ್ಯಾಸದ ಅರಿವು ಮೂಡುತ್ತದೆ ಎಂದು ಲೆಕಾಂ ಗುರುತಿಸುತ್ತಾನೆ.
ಈ ಭಾಷೆಯ ಸಾಂಕೇತಿಕ ಕ್ರಮ ಸಾಮಾಜಿಕ, ಸಾಂಸ್ಕೃತಿಕ ಕೇಂದ್ರಿತವಾಗಿರುವುದರಿಂದ ಅದು ಪುರುಷ ಪ್ರಧಾನವಾಗಿ ಮಾರ್ಪಟ್ಟಿದೆ ಎಂಬುದು ಲೆಕಾಂ ವಾದ . ಅನೇಕ ಸ್ತ್ರೀವಾದಿಗಳು ಲೆಕಾಂನ ಈ ಸಿದ್ಧಾಂತವನ್ನು ಹೆಣ್ಣು ಹೇಗೆ ಭಾಷೆಯ ಮೂಲಕ ತುಳಿತಕ್ಕೊಳಗಾಗಿದ್ದಾಳೆ ಎಂದು ತೋರಿಸಲು ತೊಡಗುತ್ತಾರೆ. ಭಾಷಾ ಸಂಜ್ಞೆ. ಗಂಡಿನ ಕ್ಷೇತ್ರವಾಗಿರುತ್ತದೆ . ಇದರಿಂದಾಗಿ ಅವರು ಭಾಷೆಯ ಸಾಂಕೇತಿಕತೆಯಿಂದ ಅನ್ಯರಾಗಿ, ಅಂಚಿಗೆ ದೂಡಲ್ಪಟ್ಟಿರುತ್ತಾರೆ ಎಂದು ವಾದಿಸುತ್ತಾರೆ.
ಆದರೆ ಲೆಕಾಂ ಇದನ್ನು ಒಪ್ಪುವುದಿಲ್ಲ. ಇವನ ವಾದವನ್ನು ಮುಂದುವರಿಸುತ್ತಾ ಜೂಲಿಯಾ ಕ್ರಿಸ್ತೆವಾ ಲೆಕಾಂನ ನಿಲುವನ್ನು ಸ್ಪಷ್ಟ ಪಡಿಸುತ್ತಾಳೆ.
ಒಬ್ಬಳು ‘ಸಂಪೂರ್ಣ ಹೆಣ್ಣೆಂದು, ಒಬ್ಬ ‘ಸಂಪೂರ್ಣ ಗಂಡೆಂದು’ ನಂಬುವುದು ಈ ಪ್ರಪಂಚದಲ್ಲಿ ಸಾಧ್ಯವಿಲ್ಲ. ರಾಜಕೀಯ ಕಾರಣಕ್ಕಾಗಿ ಗಂಡು-ಹೆಣ್ಣು ಎಂಬ ಭೇದ ಇರಬಹುದೇ ವಿನಃ ನೈಜತೆಯಲ್ಲಿ ಇದು ಸಾಧ್ಯವಿಲ್ಲ. ಲೈಂಗಿಕ ವ್ಯತ್ಯಾಸವನ್ನು ಗುರುತಿಸುವುದು ಸಂತಾನೋತ್ಪತ್ತಿಗೆ. ಆದರೆ ಪ್ರತಿ ನಲ್ಲಿ ಗಂಡು, ಪ್ರತಿ ಗಂಡಿನಲ್ಲಿ ಹೆಣ್ಣೂ ಅಡಗಿರುತ್ತದೆ. ಅದು ಭಾಷೆಯ ಮೂಲಕವೇ ವ್ಯಕ್ತವಾಗುತ್ತಿರುತ್ತದೆ. ಇದನ್ನು ಕಲೆಗಾರರಲ್ಲಿ, ಕವಿಗಳಲ್ಲಿ ,ಕ್ರಿಯಾತ್ಮಕ ಆಲೋಚನಾಕಾರರಲ್ಲಿ ಚೆನ್ನಾಗಿ ವ್ಯಕ್ತವಾಗುವುದನ್ನು ಕಾಣಬಹುದು. ಗಂಡಸು/ಹೆಂಗಸು ಎಂಬ ದ್ವಿವಾದವ್ರುತ್ತಿಯನ್ನು ಒಂದು ರೀತಿಯಲ್ಲಿ ಅನುಭವದ ನೆಲೆಯಲ್ಲಿ ನೋಡಬೇಕಾಗುತದೆ. ಮೊಲೆ ಮೂಡಿ ಬಂದರೆ ಹೆಣ್ಣೆಂಬರು/ ಮೀಸೆ ಮೂಡಿ ಬಂದರೆ ಗಂಡೆಂಬರು.ಆತ್ಮ ಯಾವ ಲಿಂಗ? ಎಂಬ ಅರಿವು ಲೆಕ್ಸಾಂ / ಕ್ರಿಸ್ಸೆವಾ ಇವರಿಗಾಗಿದೆ. ಹೀಗೆ ಗಂಡಿನಲ್ಲಿ ಹೆಣ್ಣು, ಹೆಣ್ಣಿನಲ್ಲಿ ಗಂಡು ಕೆಲಸ ಮಾಡುತ್ತಿರುತ್ತದೆ.
ಫ್ಲಾಯ್ದ್ನ ಸಿದ್ದಾಂತವನ್ನು ಮುಂದಿಟ್ಟುಕೊಂಡು ಲೆಕ್ಕಾಂ ಸಂಸ್ಕೃತಿ ಮತ್ತು ಲಿಂಗಗಳು ಭಾಷೆಯಲ್ಲಿ ಹೇಗೆ ವ್ಯಕ್ತವಾಗುತ್ತದೆ ಎಂಬುದನ್ನು ವಿಶ್ಲೇಷಿಸುತ್ತಾನೆ/ ನಮ್ಮ ಅನನ್ಯತೆ ಉಳಿದಿರುವುದೇ, ನಾವು ಗುರುತಿಸಲ್ಪಡುವುದೇ ಭಾಷೆಯಿಂದ. ನಮ್ಮ ಆಲೋಚನಾ ಪ್ರಕ್ರಿಯೆ ನಡೆಯುವುದು ನಮ್ಮ ಮಾತಿನ/ಭಾಷೆಯ ಮೂಲಕ.
ಆದರೆ ಈಗಿರುವ ಸಂಸ್ಕೃತಿ ಅಭಿವ್ಯಕ್ತವಾಗುವುದು ಸುಪ್ತಪ್ರಜ್ಞೆಯ ಆಕಾಂಕ್ಷೆ (desire)ಯಿಂದ. ಇದು ಪುರುಷನ ಆಕಾಂಕ್ಷೆಯಭಾಷೆಯಾಗಿರುತ್ತದೆ. ಮ್ಮಲ್ಲಿ ಹುದುಗಿರುವ ಈ ಗಂಡಸುತನ, (ಅಂದರೆ ಪ್ರಜ್ಞಾಪೂರ್ವಕ ವ್ಯಕ್ತಿಗತ ಆಲೋಚನೆ) ಹೆಣ್ಣುತನ ಸುಪ್ತಪ್ರಜ್ಞೆಯ ವ್ಯಕ್ತಿಗತವಲ್ಲದ ಸಂಜ್ಞೆಗಳು ಭಾಷೆಯಲ್ಲಿ ಹೊಮ್ಮುತಿರುತ್ತದೆ. ಭಾಷೆಯಲ್ಲಿರುವ ವೈರುಧ್ಯದ (ಹಣದು – ಹೆಣ್ಣು, ಹಗಲು-ರಾತ್ರಿ, ಒಳ್ಳೆಯ-ಕೆಟ್ಟ ಇತ್ಯಾದಿ) ಅರ್ಥಗಳು ‘ಶಿಶ್ನ’ವನು ಹೊಂದಿರುವ – ಹೊಂದಿರದ ಭೇದದ ಮೇಲೆ ನಿಂತಿರುತ್ತದೆ. ಹೆಣ್ಣುತನ ‘ಶಿಶ್ನ’ ಅಭಾವವನ್ನು ಪ್ರತಿನಿಧಿಸುವುದರಿಂದ ಭಾಷೆಯ ಅರ್ಥ ಹೆಣ್ಣಿನಲ್ಲಿ ಅಸ್ಪಷ್ಟವಾಗಿರುತ್ತದೆ. ಅಂದರೆ ಭಾಷೆಯಲ್ಲಿ ಗಂಡುತನ – ಹೆಣ್ಣುತನ ಒಟ್ಟೊಟ್ಟಿಗೆ ಪ್ರಕಟವಾಗುತ್ತಿರುತ್ತದೆ. ಇವೆರಡೂ ಬೆರೆತು ಸಾಂಸ್ಕೃತಿಕ ಕಥಾನಕಗಳು ಒಂದು ಸಮಾಜದಲ್ಲಿ ರೂಪು ತಾಳುತ್ತವೆ. ಆದ್ದರಿಂದ ಇಲ್ಲಿ ‘ಗಂಡುತನ’ – ‘ಹೆಣ್ಣತನ’ ಮುಖ್ಯವಾಗುತ್ತದೆಯೇ ವಿನಃ ಗಂಡಸು – ಹೆಂಗಸು’ ಎಂಬ ದೈಹಿಕ ವಿಭಾಗ ಅಥವಾ ವೈರುಧ್ಯ ಮುಖ್ಯವಾಗುವುದಿಲ್ಲ. ಗಂಡು-ಹೆಣ್ಣಿನ ಭಾಷೆ ಸಾಂಕೇತಿಕವಾಗುತ್ತದೆ. ‘ಗಂಡಸುತನ’ವೆಂದರೆ ಜಾಗೃತ ಪ್ರಜ್ಞೆಯ ತರ್ಕಬದ್ಧ ಭಾಷೆ, ಹೆಣ್ಣುತನವೆಂದರೆ ಸುಪ್ತಪ್ರಜ್ಞೆಯ (desire) ಆಕಾಂಕ್ಷೆ. ಅದು ಅದುಮಿಟ್ಟ ಆಸೆಗಳು.ಈ ಸುಪ್ತಪ್ರಜ್ಞೆಯ ಆಕಾಂಕ್ಷೆಯು ಅಭಿವ್ಯಕ್ತಿಯ ಪ್ರಕ್ರಿಯೆ ಕಲಾವಿದರಲ್ಲಿ ಸಾಹಿತಿಗಳ ಬರಹದಲ್ಲಿ ಮೇಲ್ಮೈ ಮಟ್ಟಕ್ಕೆ ತೇಲಿಬರುತ್ತದೆ. ‘ಮಜ್ಜಿಗೆಯೊಳಗಿನ ಬೆಣ್ಣೆಯಂತೆ, ಇವು ವ್ಯಕ್ತವಾಗುವುದು ಕಥಾನಕಗಳಲ್ಲಿ ಇದನ್ನು ಕನ್ನಡ ಜಾನಪದ ಮನಸ್ಸು ಹೇಗೆ ವಿಶ್ಲೇಷಿಸಿ ಮೇಲ್ಮೈಮುಟ್ಟಕ್ಕೆ ಬಂದು ತೇಲುವಂತೆ ಮಾಡಿದೆ ಎಂಬುದನ್ನು ಪಿ.ಕೆ.ರಾಜಶೇಖರ್ ಅವರು ಸಂಗ್ರಹಿಸಿಕೊಟ್ಟಿರುವ ಮಲೆಮಾದೇಶ್ವರ’ ಮಹಾಕಾವ್ಯದ ‘ಆದಿ ಪರಾಶಕ್ತಿಯ ಕವಟ್ಲು’ ಎಂಬ ಸೃಷ್ಟಿ ಪುರಾಣದಿಂದ ಅರಿತುಕೊಳ್ಳಬಹುದು.
. ಆದಿಶಕ್ತಿ ಕವಟ್ಲು
ಆದಿಪರಾಸಕ್ತಿ ಭೂಮಿ ಸೊರ್ಗ ಪಾತಾಳ ಹುಟ್ಟದಕ್ಕುಂಚೆ ಇಸ್ಣು ಬ್ರಮ್ಮ ಮಾದೇಶ್ವರ ಹುಟ್ಟದಕ್ಕಂಜೆ ಹುಟ್ಟಿದ್ದಾಳೆ, ಬೆಳಿತಾ ಬೆಳೀತಾ ಯೌವನ ಬಂದ್ದಡು ಆಹ್ವಾನನ್ನ ಯೌವ್ವನವನ್ನು ತಪ್ಪುವಂತ ಪುರುಸರು ನನಗಿಲ್ವಲ್ಲ, ನನ್ನ ಗುದ್ದ ನಾನೇ ಪಡಿಬೇಕು ಅ೦ತ ಬ್ರಮ್ಮನನ್ನ ತಾಯಿ ಪಡೆದವಳೆ.. “ಅಪ್ಪಾ, ಮಗುವೆ ನಿನ್ನನ್ನ ನಾನು ಯಾತುಕೋಸ್ಕರ ಪಡೆದಿದ್ದೀನಿ ಅಂದ್ರೆ ನನಗೆ ಪರಾಯದ ಕಾಲ. ನಿಂಬೆ ಹಣ್ಣಿನಂಗೆ ಯೌವ್ವನ. ಯೌವ್ವನಕ್ಕೆ ಸಲ್ಲವಂತ ನಿನ್ನ ಪಡ್ಡಿದೀನಿ ನನಗೆ ಪುರುಸನಾಗು ನನ್ನ ಇದ್ಯೆನೆಲ್ಲ· ನಿನ್ಗೆ ತೋರ್ಕೊಡ್ತ್ಹಿದ್ದಿನಿ. ಪ್ರಪಂಚವೆಲ್ಲ ನಿನ್ನ ವಸವಾಯ್ತದೆ, ಅಂತ ಹೇಳಾಳೆ, ಆಗ ಬ್ರಮ್ಮ “ತಾಯಿ ! ನೀನು ನಾನಾ ಪಡುದ್ಬುಟ್ಟು ನನಗೆ ಪುರಸನಾಗು ಪತಿಯಾಗು ಅಂತ ಹೇಳ್ತಿಯಲ್ಲ, ನೀನು ಹೆತ್ತ ತಾಯಲ್ಲವಾ? ಪಡುದ ಮೇಲೆ ತಾಯಲ್ಲವಾ? ಈ ಮಾತು ನಿನಗೆ ತರವಲ್ಲ” ಅಂತಾನೆ. ಆದಿಸಕ್ತೀಗೆ ಅದ್ದೂರಿ ಕ್ವಾಪ ಬಂದು “ ನನ್ನ ಮತ ಮೀರಿದ್ಕೆ ನೀನು ಭಸ್ಮ ಆಗು” ಅಂತ ಹೇಳಿ ತನ್ನ ಹಸ್ತವನ್ನು ಅವನ ತಲೆ ಮೇಲೆ ಮಡುಗುದ್ಲು . ಆ ಹಸ್ತದಲ್ಲಿ ಉರಿಗನ್ನಿತ್ತು, ಆ ಉರಿಗಣ್ಣಲ್ಲಿ ಬ್ರಮ್ಮ ಸುಟ್ಟಿ ಭಸ್ಮ ಆದ.
“ಈ ಮಾನುಭಾವ ನನ್ನ ಯೌವನವನ್ನು ಮುಚ್ಚುಸ್ನಿಲ್ಲ” ಎಂಬುದಾಗಿ ಎರಡನೇ ಜೀವ್ಸದಲ್ಲಿ ತನ್ನ ಸಕ್ತಿಯಿಂದ ತನ್ನ ಗುದ್ದುನಿಂದ ಮಾಯಿಸ್ನುವನ್ನು ಪಡೆದಳು. ಮಾಯಿಸ್ನು ತಾಯಿ ಅನ್ನುವ ಭಾವ ತಿಳಿದುಕೊಂಡು ಸರನು ಮಾಡ್ತಾನೆ . ಆಗ ಅವಳು “ನನ್ನ ಕಣ್ಣೆತ್ತಿ ನೋಡಿ ನಾನಾ ಪುರುಸ್ನಾಗಿ ನನ್ನ ಯೌವ್ವನ ತೀರ್ಸು”, ಅಂದವಳೇ ಮಾತಾಯಿ. ಆಗ ಮಾಯಿಸ್ನು “ತಾಯಿ ಏನಿಂತ ಹೊಸ ಮಾತಾಡ್ತಿಯಲ್ಲ! ಇದು ನಿನಗೆ ಧರುಮ್ವಾ ? ಹುಡುಸ್ವಾಗ ಹುಡುಸ್ಬಿಟ್ಟು ಪಡಿಯಾಗ ಪಡೆದ್ಬುಟ್ಟು ಕಣ್ಣೆತ್ತಿ ನೋಡಿ ನನಗೆ ಪುರುಸನಾಗು ಅಂತೀಯಲ್ಲ.ಮುಂದೆ ಬರುವಂತಾ ಪ್ರಪಂಚದಲ್ಲಿ ಆಗುವತ ಆಡಳಿತದಲ್ಲಿ ಜನಗಳು ಮಕ್ಕಳಿ ಹೆರ್ತಾರೇ. ಆ ಹೆತ್ತ ಮಕ್ಳು ಬೆಳೆದು ತಕ್ಸ್ನಕೆ ತಾಯಿಯ ತಾವ್ಕೆ ಹೋಯ್ತಾರೆ ? ಇದು ನಿನಗೆ ಧರುಮ್ವಾ? ನಿನ್ನ ಕಣ್ಣೆತ್ತಿ ನೋಡಲ್ಲ ಅಂದವ್ನೆ. ಇಂಬಿ ಹಣ್ಣಿನಂಗೆ ತುಂಬಿ ಬಂದ ಯೌವ್ವನ ತಡೀನಾರ್ದೆ ಆ ಆದಿಪರಾಸಕ್ತಿ ತನ್ನ ಮಾಯಾ ತನ್ನ ಸಕ್ತಿ ತನ್ನ ಗುದ್ನಿಂದ ತನ್ನ ಉರುಗಣ್ಣನ್ನು ತಗುದು ಇಸ್ಣು ನೆತ್ತಿ ಮೇಲೆ ಮಡುಗುದ್ಲು . ಸುಟ್ಟಿ ಭಸ್ಮ ಆಗವ್ನೆ ಮಾಯಿಸ್ನು.
ಮೂರ್ನೆ ಜಿವ್ಸುಕ್ಕೆ ಮುಕ್ಕಣ್ಣನ ಪಡೆದವ್ಲೇ ನಿನ್ನನ್ನು ನಾನು ಯಾತಕ್ಕೆ ಪಡುದ್ದಿದ್ದಿನಿ ಅಂದರೆ ನನ್ನ ಯೌವ್ವನ ತಪ್ಪಿಸೋದಕ್ಕೊಸ್ಕರ , ನಿನ ವಸನಾನಾಯ್ತ್ಹೀನಿ ನಾನ ವಾಸ ನೀನಾಗಪ್ಪ” ಅಂತಾಳೆ. ಅದಕ್ಕೆ ಮಾದೇಶ್ವರ ಹೇಳ್ತಿದ್ದಾರೆ ಹೆತ್ತತಾಯಿ ಹುಟ್ಟಿದ ಮಕ್ಳು ಎಲ್ಲಾರೂ ಒಂದಾಯ್ತ್ಹಾರ? ತರವಲ್ಲ ಮಾತಾಯಿ ಅಂತಾರೆ.
ಆಗ ಆದಿಪರಾಸಕ್ತಿ ಹೇಳ್ತಿದ್ದಾಳೆ “ ಛೀ ಮಾನುಭಾವ್ನೆ , ನಾನು ನೀನು ಗಂಡಹೆಡ್ತಿರಾಗಿ ಬಾಲಾಟ ನಡುಸ್ದೆ ಹೋದರೆ ಪ್ರಪಂಚಕ್ಕೆ ಸುಳೀನೆ ಇಲ್ಲ ಅಂತಾಳೆ. ಆಗ ಮಾದೇಶ್ವರ ಕವಿದಿರುವಂತ ಕತ್ಲು ಕಲಿಯಾಕಿಲ್ಲ, ಪ್ರಪಂಚ ಬೆಳಕಾಗೊದೆಂಗೆ , ಕಾಮಜೇನು ಕರಿಯೋದಿಲ್ಲ, ಭೂಮ್ತಾಯಿ ಬೆಳೆಯೋದಿಲ್ಲ, ಮೊದಕಟ್ಟಿ ಮಳೆಯಾಗೋದಿಲ್ಲ , ಅಗ್ಗಿ ದೇವರೇ ಅರುಗಾಯ್ತಾಳೆ , ಗಂಗಮ್ಮ ಮರೆಯಾಯ್ತ್ಹಾಳೆ . ಲಿಂಗವಿಲ್ಲ ಭಾವಿಗಳು ಪ್ರಪಂಚವನ್ನು ಆಳುವಂತಾ ರೀತಿ ಬತ್ತದೆ, ಧರ್ಮ ಹಾಳಾಗೊಯ್ತದೆ , ಕರ್ಮ ಹೆಚಾಯ್ತದೆ” ಅಂದವ್ನೆ ಮಾದೇವ.
ಸಾಬಾಸ್ ನನಕಂದ ಚಿಕ್ಕವನದ್ರೂ ಚೊಕ್ಕವಾಗಿ ಮಾತಾಡ್ತೀಯೇ, ಇಕ್ತಿವಂತ ನಾನೇ ಆದಿಸಕ್ತಿ ಅಲ್ಲುವಪ್ಪ ಅರಿ ಅರಾ ಬ್ರಮ್ಮಾಂಡರೆಲ್ಲ ನನ್ನ ಕರದಲ್ಲಿದ್ದಾರೆ ಅಗ್ಗಿ ದೇವ್ತಿ , ಗಂಗೆ ದೇವ ದೇವಮಾನವರೆಲ್ಲ ನನ್ನ ಕರದಲ್ಲಿ ಕೂತಿದ್ದಾರೆ. ನನ್ನ ರುದೆಯಲ್ಲಿ ಈ ಪ್ರಪಂಚವೇ ತುಮ್ಬ್ಕೊಂಡದೆ .ಪ್ರಪಂಚ ತಿಕ್ಷ್ನೆ ಮಾಡೋದು ನನ್ನ ಕೈನಲ್ಲೈತೆ ನನ್ನ ಕಣ್ಣೆತ್ತಿ ನೋಡಿ ನನ್ನ ಯೌವ್ವನ ತೀರ್ಸಪ್ಪ ಅಂತಾಳೆ. “ತಾಯಿ ನಿನಗೆ ನಾನು ಪುರುಸ್ನಾಗ್ದೆ ಹೋದ್ರೆ?” ನೀನು ಸುಟ್ಟು ಭಸ್ಮ ಮಾಡ್ತೀನಿ.. ಅದಕ್ಕೆ ಮಾದೇವ “ನನಗೆ ನೀನು ಪುರುಸ್ನಾಗು ಅಂತ್ಹೇಳಿ ನನ್ನ ಪುಡುದೆತ್ತಾನೆ? ನೀನು ನನ್ನ ಸಾಕಿ ದೊಡ್ಡೋನ ಮಾಡ್ಬೇಕು. ಸತೀಗಿಂತ ಪತಿ ದೊಡ್ದೊನಾಗಿರ ಬೇಡ್ವಾ” ಅನಂತರ “ಮಗುವೆ ನಿನ್ನನ್ನು ನಾನು ಸಾಲಾಗಿ ಚಿಕ್ಕವನನ್ನು ದೊಡ್ಡವನು ಮಾಡಿದೆ. ನನ್ನ ಯೌವ್ವನ ತೀರಸಪ್ಪ” ಅಂದಳು. “ಅಮ್ಮ ತಾಯೆ ನಾನು ನಿನ್ನ ಪುರುಸಾಗಬೇಕಾದರೆ ಹೆಂಡತಿಗಿಂತ ಗಂಡ ಸಕ್ತಿವಂತನಾಗಿರಬೇಕು ತಾನೆ. ನನ್ಗೆ ನಿನ್ನ ಇದ್ಯೆನೆಲ್ಲ ಕಲುಸವ್ವ” ಅಂದರು ಮಾದೇವ ಮಾತೆ ಬೆರಗಾಗಿ ನನ್ನ ಇದ್ಯೆನೆಲ್ಲ ನಿನ್ಗೆ ತೋರುಸ್ಕೊಟ್ಟ ನಿನ್ನ ಸಕ್ತಿವಂತನಾಗಿ ಮಾಡ್ತಿನಪ್ಪ ನನಗೆ ಪಡೆಯೋ ವಿದ್ಯೆ ಸೃಷ್ಟಿಮಾಡೋ ವಿದ್ಯೆ ಎಲ್ಲ ಗೊತ್ತು ಅಂತ ಪರಾಶಕ್ತಿ ಹೇಳಾಳೆ,”ನಿನ್ನ ವಿದ್ಯಕ್ಕೆ ಒಂದು ಗರಿ ಹೆಚ್ಚಗಿ ನಿನ್ನ ಪುರುಸನಾದ ಮೇಲೆ ನಾನು ಪಡೀಬೇಕು” ಅಂತಾನೆ ಮಾದೇವ. : “ಅಪ್ಪಾ ನಿನಗೆ ಈ ವಿದ್ಯೆಯೆಲ್ಲ ಏಕೆ ಬೇಕಪ್ಪ ಅಂದಿದ್ದಕ್ಕೆ ಅಮ್ಮ ತಾಯಿ ನಿನಗೆ ಪುರುಷನಾಗ ಬೇಕಾದರೆ ನಿನ್ನಲ್ಲಿರುವಂತ ಸಕ್ತಿ ಸಾಸುವೆಲ್ಲ ಗ್ರಿ ನನಗೆ ತುಂಬಬೇಕು’ ಅಂತಾನೆ ಆದಿಪರಾಶಕ್ತಿ ತನ್ನ ವಿದ್ಯೆ ಎಲ್ಲ : ಕಲಿಸಿಕೊಡಾಳೆ, ಆಗ ಮಾದೇವ ಕೇಳಾನೆ ಈಗ ನಾನೆಚ್ಚೂ ನೀನೆಚ್ಚೂ ಅಂತ. ಆಗ ನಾನೇ ಹೆಚ್ಚು ಅಂದಾಗ “ನಿನ್ನ ವಿದ್ಯೆ ಎಲ್ಲ ನನ್ನ ಕೈಲಿದೆ. ನೀನು ಹೇಗೆ ಹೆಚ್ಚು ಅಂತಾನೆ ಮಾದೇವ, ಹಾಗಾದರೆ ಪರೀಕ್ಷೆ ಮಾಡೋಣ. ಅದಕ್ಕೆ ನಾಟ್ಟ ಮಾಡೋಣ ಅಂತ ಹೇಳಾನೆ, ನಾಟ್ಟ ಮಾಡಾ ಮಾಡಾ ತನ್ನ ಕೈಯನ್ನು ತಲೆ ಮೇಲೆ ಇಟ್ಟೊತಾನೆ. ಆಕೆಯಾ ಹಾಗೆ ಮಾಡಲು ತನ್ನ ಅಂಗೈಯ್ಯಲ್ಲಿದ್ದ ಉರಿಯೋ ಕಣ್ಣಿಂದ ತಾನೇ ಭಸ್ಮವಾಗ್ದಾಳೆ. ಆಗ ಆ ಉರಿಗಣ್ಣಿತ್ತಲ್ಲ ಅದು ನಮ್ಮಪ್ಪಾಜಿ ಪಾದ್ಕೆ ಸರಣು ಮಾಡಿ “ಸ್ವಾಮಿ ನಿಮ್ಮ ಪಾದ ನನ್ನ ಸಿರದ ಮ್ಯಾಲಿರಲಿ” ಅಂತು. ಹೀಗೆ ಗೆದ್ದ ಮಾದೇವ ನಂತರ ಆಕಾಶ ಭೂಮಿ, ನೀರು, ಪಶು ಪಕ್ಷಿ, ನರಪ್ರಾಣಿ, ಮರ-ಗಿಡ ಎಲ್ಲವನ್ನು ಸೃಷ್ಟಿ ಮಾಡ್ತಾನೆ.
ಲೆಕಾಂ ಹೇಳಿದಂತೆ ಹೆಣ್ಣು – ಗಂಡುಗಳು ಸುಪ್ತಪ್ರಜ್ಞೆಯಲ್ಲಿ ಹೇಗೆ ರೂಪು ತಾಳಿದ್ದಾರೆಂದು ತಿಳಿಯಲು ಪಿ.ಕೆ.ರಾಜಶೇಖರ್ ಅವರು ಸಂಗ್ರಹಿಸಿರುವ ‘ಮಲೆಮಾದೇಶ್ವರ’ ಮಹಾಕಾವ್ಯದಲ್ಲಿ ಬರುವ ‘ಆದಿಪರಾಸಕ್ತಿ ಕವಟ್ಲು’ ಒಂದು ಶಕ್ತಿಯುತವಾದ ಕಥಾನಕ. ಇಲ್ಲಿ ಆದಿಸಕ್ತಿಯು ಇಡೀ ಬ್ರಹ್ಮಾಂಡವನ್ನು ಸೃಷ್ಟಿಸುವ ಶಕ್ತಿ ಮತ್ತು ಜ್ಞಾನವನ್ನು ಹೊಂದಿರುವವಳು. ತನ್ನ ಯೌವ್ವನವನು (ಲೈಂಗಿಕಾತ್ಮಕತೆ) ತೀರಿಸಿಕೊಳ್ಳಲು ಪುರುಷನನ್ನು ಸೃಷ್ಟಿಸುತ್ತಾಳೆ. ಅದಕ್ಕೆ ಮುಂಚೆ ಇರುವುದು ಕತ್ತಲೆ ಅಷ್ಟೇ. ಆ ಎರಡು ಮಕ್ಕಳು (ಬ್ರಹ್ಮ- ವಿಷ್ಣು) ತಾಯಿಯ ಬೇಡಿಕೆಯನ್ನು ತೀರಿಸಲಾಗದ್ದರಿಂದ ಸುಟ್ಟು ಬೂದಿಯಾಗುತ್ತಾರೆ. ಅಧಿಕಾರ, ಶಕ್ತಿ(power, authority)ಯನ್ನು ತಿರಸ್ಕರಿಸಿದರೆ ‘ಸಾವೇಕಟ್ಟಿಟ್ಟಿದ್ದು”. ಇದು ಸಾಂಕೆತಿಕವಾದದ್ದೆಂದು ನೋಡಿದಾಗ ಈಗಲೂ ನಡೆಯುವ ಕ್ರಿಯೆಯೇ . ಇಲ್ಲಿ ಮತ್ತೊಂದು ವಿಷಯ ಪ್ರಕಟವಾಗುತ್ತದೆ. ಅದೆಂದರೆ ಲೈಂಗಿಕ ನಿಷೇಧದ ಪರಿಕಲ್ಪನೆ(incest taboo). ತಾಯಿಯಿಂದ ಮಗ ಬೇರ್ಪಡುವ ಮತ್ತು ಅದು ವ್ಯಕ್ತವಾಗುವ ಕ್ರಮ. ಈಡಿಪಸ್ ಕಾಂಪ್ಲೆಕ್ಸ್ ನ ಪರಿಕಲ್ಪನೆ ಅನ್ವಯವಾಗುವುದು ಮಗು ‘ನಾನತ್ವ’ವನ್ನು ಪಡೆಯುವ ಘಟ್ಟ ಮತ್ತು (ಲೈಂಗಿಕ ಪ್ರವೃತ್ತಿಯನ್ನು ಅದುಮಿಡುವ ಘಟ್ಟ. ಅಂತರ್ ಪ್ರಜ್ಞೆಗೆ ಲೈಂಗಿಕತೆಯನ್ನು ದೂಡುವ(castration) ಘಟ್ಟ ಎಂದು ಲೆಕಾಂನ ವಿಶ್ಲೇಷಣೆಯನ್ನು ಇಲ್ಲಿ ಅನ್ವಯಿಸಬಹುದು ಮತ್ತು ಧರ್ಮ (ethics) ಎನ್ನುವ ಅರ್ಥದಲ್ಲಿ ಸ್ಥಾಪಿಸಲು ಹೊರಟಿರುವುದ ಕಾಣುತ್ತದೆ.
ಆದರೆ ಮಾದೇವನ ಸೃಷ್ಟಿಯಾದ ನಂತರ ಆತ ಆದಿಪರಾಶಕ್ತಿಯ ಲೈಂಗಿಕ ತಹತಹವನ್ನು ತಹಬಂದಿಗೆ ತಂದಿದ್ದೇ ಅಲ್ಲದೆ ಅವಳ ಶಕ್ತಿಯನ್ನು (power) ಜ್ಞಾನವನ್ನು (knowledge) ತಾನು ಪಡೆದು ಮುಂದೆ ಆಕಾಶ-ಭೂಮಿ, ಸೂರ್ಯ-ಚಂದ್ರ, ಹೆಣ್ಣು –ಗಂಡು(ಮನುಷ್ಯ) , ಪ್ರಾಣಿ – ಪಕ್ಷಿ ಇತ್ಯಾದಿಗಳ ಸೃಷ್ಟಿ ಎಲ್ಲವನ್ನು ಮಾಡುತ್ತಾನೆ. ಇಡೀ ಸೃಷ್ಟಿ ಗಂಡಿನ ಸೃಸ್ತಿಯಾಗುತ್ತದೆ. ಗಂಡಿನ ಸ್ವಾಧೀನಕ್ಕೆ ಎಲ್ಲವೂ ಒಳಾಗುತ್ತದೆ. ಗಂಡು ಹೆಣ್ಣನ್ನು ಆಳುವ ‘ಶಕ್ತಿ’ಯಾಗುತ್ತಾನೆ. ಪುರುಷ ಪ್ರಧಾನ ಸಮಾಜದ ಸೃಷ್ಟಿಯಾಗುತ್ತದೆ.
ಭಾರತ ದೇಶದ ಅನನ್ಯ ಸಂಸ್ಕೃತಿಯೆಂದರೆ ಇಂದಿಗೂ ಅಸಂಖ್ಯಾತ ಗ್ರಾಮ ದೇವತೆಗಳಿಂದ ಹಿಡಿದು ಅಮೂರ್ತವಾದ, ಸಂಸ್ಕ್ರುತೀಕರಣಗೊಂಡ ಸರಸ್ವತಿ, ಲಕ್ಷ್ಮಿ, ಪಾರ್ವತಿಯವರಗೆ ಅನೇಕ ದೇವತೆಗಳನ್ನು ಪೂಜಿಸುತ್ತಿರುವುದು . ಕಾಳೀ , ದುರ್ಗಿಯರು ಪಾರ್ವತಿಯಾಗಿ ಪರಿವರ್ತನೆಗೊಂಡಿದ್ದಾರೆ. ಶಕ್ತಿಯಾಗಿ ಮಾರ್ಪಟ್ಟಿದ್ದಾರೆ. ಆದರೆ ಈ ಎಲ್ಲಾ ಶಕ್ತಿ ದೇವತೆಗಳು ಮೂಲತಃ ಸ್ತ್ರೀವಾದಿಗಳೇ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಮೂಲಕ್ಕೆ ಹೋಗಿ ನೋಡಿದಾಗ ಈ ಎಲ್ಲಾ ದೇವತೆಗಳು ಗಂಡಿನ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಹೆಣ್ಣು ದೇವತೆಗಳಾಗಿರುತ್ತಾರೆ. ಚಾಮುಂಡಿಯಾಗಲೀ , ದುರ್ಗೆಯಾಗಲಿ ಇವರು ಗಂಡು ದೇವತೆಗಳಿಗೆ ಕಷ್ಟ ಬಂದಾಗ ನಿವಾರಿಸುವ ಮಾಧ್ಯಮಗಳಾಗಿದ್ದಾರೆ. ಆದರೆ ಇವರ್ಯಾರೂ ಹೆಣ್ಣಿನ ಬಿಡುಗಡೆಗಾಗಿ ಹೋರಾಡದೆ ‘ಗಂಡುಹೆಂಗಸಾಗಿ’ ಬಿಟ್ಟಿರುವುದು ಕಂಡುಬರುತ್ತದೆ. ಅಂದರೆ ಈ ಹೆಣ್ಣು ದೇವತೆಗಳು ಪುರುಷರಿಗಾಗಿ ಪುರುಷರಿಂದ ಸೃಷ್ಟಿಸಲ್ಪಟ್ಟವರು.
ಈ ಹೆಣ್ಣು ದೇವತೆಗಳಲ್ಲಿ ಪ್ರಮುಖವಾದ ದೇವತೆ ಎಂದರೆ ತಾಂತ್ರಿಕರು ಸೃಷ್ಟಿಸಿದ ‘ಶಕ್ತಿ’ ದೇವತೆ. ಶಕ್ತಿ ದೇವತೆಗೆ ಇಡೀ ಬ್ರಹ್ಮಾಂಡವನ್ನು ಸೃಷ್ಟಿಸುವ ಶಕ್ತಿ ಇದೆ. ಈ ಬ್ರಹ್ಮಾಂಡದಲ್ಲೇ ಅತೀ ಹೆಚ್ಚು ಅಧಿಕಾರವನ್ನು ಹೊಂದಿದ ದೇವತೆ. ಈಕೆ ದಿವ್ಯ ರೂಪಿಣಿ. ಗಂಡು ರೂಪಿಯಾದ ಶಿವನೊಡನೆ ಈಕೆಯ ಸಹವಾಸ. ಮಾರ್ಕಂಡೇಯ ಪುರಾಣದಲ್ಲಿ ಈಕೆ ಮೊದಲು ಕಾಣಿಸಿಕೊಳ್ಳುತ್ತಾಳೆ. ದೇವೀ ಮಹಾತ್ಮೆಯಲ್ಲಿ ಇವಳನ್ನು ಪ್ರಕೃತಿ, ಮಾಯಾ ಮತ್ತು ಶಕ್ತಿ ಎಂದು ಕರೆಯಲಾಗಿದೆ. ರೂಪಿಲ್ಲದ ಆದರೆ ಎಲ್ಲಾ ರೂಪಗಳ ಮೂಲ ಮಾತ್ರುಕೆಯಾಗಿದ್ದಾಳೆ. ತಾಂತ್ರಿಕರಲ್ಲಿ ಈಕೆ ಶಿವ – ಶಕ್ತಿ ಸಮರಸವಾಗಿ ಕಂಡು ಬರುತ್ತಾಳೆ. ಇಚ್ಚೆ, ಜ್ಞಾನ ಮತ್ತು ಕ್ರಿಯೆಯು ಪ್ರತೀಕವಾಗಿ ಆದಿಪರಾಶಕ್ತಿಯಾಗಿ ಕಾಣಿಸಿಕೊಳ್ಳುತ್ತಾಳೆ. ಚಿತ್ತಶಕ್ತಿ , ಪ್ರಕೃತಿಶಕ್ತಿಯಾಗಿ ಕಾಣಿಸಿಕೊಳ್ಳುತ್ತಾಳೆ. ಇಲ್ಲಿ ಶಕ್ತಿ ಪರಮ ಸತ್ಯ. ಶಿವ ಅವಳನ್ನು ಧರಿಸುವ ಆಧಾರ ಮಾತ್ರ. ಆದರೆ ದೇವೀ ಭಾಗವತದಲ್ಲಿ ಇದೇ ದೇವತೆ ಮಾನವ ಹೆಣ್ಣು ಮತ್ತಿ ಶೂದ್ರರು ಕೇಳಬಾರದು, ಉಚ್ಚರಿಸಬಾರದು ಎಂದು ಹೇಳುವುದು ಚೋದ್ಯವೇ ಸರಿ. ಇಲ್ಲೂ ಸಹ ಪುರುಷ ಪ್ರಜ್ಞಾವಂತನೆಂದು ಪ್ರಕೃತಿ ಅಚಿತ್ (unconcious) ಮತ್ತು ಜಡ ಎಂದು ತಿಳಿಯಲಾಗಿದೆ. ಈ ಪರಿಕಲ್ಪನೆಯನ್ನು ಫ್ರಾಯ್ಡ್ ನ ಪರಿಕಲ್ಪನೆಯೊಡನೆ (ಮೊದಲೇ ತಿಳಿಸಿದಂತೆ) ಹೋಲಿಸಿ ನೋಡಬಹುದು. ಈ ರೂಪಕ ಇಂದೂ ಸಹ ಮೂಲಭೂತವಾದಿಗಳಲ್ಲಿ ಮೊಳಗುತ್ತಿದೆ. ಹೆಣ್ಣನ್ನು ಗಂಡಿನ ಇಚ್ಚೆಯಂತೆಯೇ ನಡಿಸಿಕೊಳ್ಳಬೇಕೆಂಬ ಸಂಹಿತೆಯನ್ನು ಅವರು ಸಾರುತಿದ್ದಾರೆ. ಇವರು ಹೆಣ್ಣು ಎಲ್ಲಿ ಪೂಜಿಸಲ್ಪಡುತ್ತಾಳೋ… ಎಂದು ಹೇಳುವುದು ಸಹ ಗಂಡಿನ ಸ್ವಾರ್ಥ ಸಾಧನೆಗೆ ಆಗಿದೆ.
ಲಕ್ಹ್ಮಿ – ಸರಸ್ವತಿಯವರು ಸಂಪತ್ತಾಗಿ , ವಿದ್ಯೆಯಾಗಿ, ಜ್ಞಾನವಾಗಿ ಪುರುಷರಿಗೆ ಒಲಿಯುವವರಾಗಿದ್ದಾರೆ ಅಷ್ಟೇ. ಪಾಶ್ಚಿಮಾತ್ಯದಲ್ಲಿ ಹೆಣ್ಣು ದೇವತೆಗಳು ಸಂಖ್ಯೆಯಲ್ಲಿ ಭಾರತದ ದೇವತೆಗಳಷ್ಟೇ ಇಲ್ಲದಿದ್ದರೂ ಸುಮಾರು ಎರಡು ಸಹಸ್ರಮಾನದ ಹಿಂದೆಯೇ ತೆರೆಯ ಮರೆಗೆ ಸರಿದುಬಿಟ್ಟಿದ್ದಾರೆ.
ಆದರೆ ಲೆಕಾಂ ಪ್ರತಿಪಾದಿಸುವ ‘ಗಂಡುತನ’, ‘ಹೆಣ್ಣುತನ’ದ ಪರಿಕಲ್ಪನೆ. “ಪಿರಿಯಾಪಟ್ಟಣದ ಕಾಳಿಗ” ಎಂಬ ಜನಪದ ಮಹಾಕಾವ್ಯದಲ್ಲಿ ಸ್ಪಷ್ಟವಾಗಿ ಒಡ ಮೂಡಿದೆ. ಇಲ್ಲಿ ಪಿರಿಯಾಪಟ್ಟಣದ ರಾಜ “ಗಂಡು ದೊರೆ” ಮೈಸೂರಿನ ದಳವಾಯಿ “ಹೆಣ್ಣು ರಾಜ” ವೀರಾಜ ಎಷ್ಟು ಪರಾಕ್ರಮಿ ಎಂದರೆ ದಳವಾಯಿ ಆ ರಾಜ್ಯದ ದಿಕ್ಕಿಗೆ ತಲೆಹಾಕಿಯೂ ಮಲಗುವುದಿಲ್ಲ. ಯಾವುದೂ ಕಾರಣಕ್ಕೆ ವೀರಾಜ ಯುದ್ಧವನ್ನು ಸಾರಿದಾಗ ದಳವಾಯಿ ಹೆದರಿ ಅಂತಃಪುರ ಸೇರಿ, ಮಕಾಡೆನಾಗೆ ಮಲಗಿ ಅಳಲು ಶುರು ಮಾಡುತ್ತಾನೆ. ವೀರಾಜ ಅವನನ್ನು “ಹೆಣ್ಣಿಗ” ಎಂದು ಜರಿಯುತ್ತಾನೆ. ದಳವಾಯಿ ಮೈಸೂರಿನ ಚಾಮುಂಡಿಯನ್ನು ಪ್ರಾರ್ಥಿಸುತ್ತಾನೆ. ಆಗ ಚಾಮುಂಡಿ ಯುದ್ದಕ್ಕೆ ಸಿದ್ದಳಾಗುತ್ತಾಳೆ. ತಾನು ಹೆಣ್ಣಾಗಿ ಒಬ್ಬಳೇ ಹೋಗುವುದಕ್ಕೆ ಸಮಾಜದ/ಸಂಸ್ಕೃತಿಯ ಒಪ್ಪಿಗೆ ಇರದ ಕಾರಣ ನಂಜನಗೂಡಿನ ನಂಜುಂಡನನ್ನು ಬರಮಾಡಿಕೊಳ್ಳುತ್ತಾಳೆ. ಯುದ್ದದ ಹೆಸರನ್ನು ಕೇಳಿದ ತಕ್ಷಣ ನಂಜುಂಡ ನಡಗುತ್ತಾನೆ. ಏಕೆಂದರೆ ಈಗ ಆತ ಹಾರುವವರ ದೇವರಾಗಿ ಸಸ್ಯಹಾರಿಯಾಗಿ ಬಿಟ್ಟಿರುತ್ತಾನೆ. ರಕ್ತ ಕಂಡರೆ ಆತನಿಗೆ ಹೆದರಿಕೆ. ಆಗ ನಂಜುಂಡನನ್ನು ಮಗುವನ್ನಾಗಿ ಮಾಡಿಕೊಂಡು ತನ್ನ ಬೆನ್ನಿಗೆ ಕಟ್ಟಿಕೊಂಡು ಯುದ್ದ ಮಾಡಿ ಗಂಡು ರಾಜನಾದ ವೀರಾಜನನ್ನು ಸೋಲಿಸುತ್ತಾಳೆ. ಇಲ್ಲಿ ಪ್ರಮುಖವಾಗಿ ಕಂಡುಬರುವುದು ‘ಗಂಡಿನಲ್ಲಿ ಹೆಣ್ಣುತನ, ಹೆಣ್ಣಿನಲ್ಲಿ ಗಂಡುತನ”.
ಹೀಗೆ ಒಂದು ಸಮಾಜದಲ್ಲಿ ಗಂಡುತನ ಹೆಣ್ಣುತನ ಇರುತ್ತದೆಯೇ ವಿನಃ – “ಗಂಡು –ಹೆಣ್ಣು”ಗಳಿರುವುದಿಲ್ಲ. ಆದ್ದರಿಂದ ಒಂದು ಸಂಸ್ಕೃತಿಯ ಕಥಾನಕಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿಕೊಳ್ಳುವುದರ ಮೂಲಕ ಸ್ತ್ರೀವಾದಿಗಳು ಪರೋಕ್ಷವಾಗಿ (discursive) ಸಮಾಜದ ತರ-ತಮಗಳನ್ನು ಕಂಡುಕೊಳ್ಳಬಹುದೆಂದು ಲೆಕಾಂ ವಿಶ್ಲೇಷಿಸುತ್ತಾನೆ. ರಚನೋತ್ತರ ವಾದಿಗಳು , ಆಧುನಿಕೋತ್ತರ ವಾದಿಗಳು ಸ್ತ್ರೀವಾದ ಪರಿಕಲ್ಪನೆಯನ್ನು ಹಿಗ್ಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಇಂದೂ ನಮ್ಮ ಸಮಾಜದ ರಾಜಕೀಯ, ಸಾಂಸ್ಕೃತಿಕ, ಲೈಂಗಿಕ ಆಯಾಮಗಳನ್ನುವಿಶ್ಲೇಷಿಸಿಕೊಂಡು “ಹೆಣ್ಣುತನ-ಗಂಡುತನ”ಗಳ ಅರಿವು ಪಡೆದರೆ ಬಿಡುಗಡೆಯ ಹಾದಿಯಲ್ಲಿ ನಡೆಯಬೇಕಿದೆ.