Jenukuruba – Kannada – English Dictionary

Jenukuruba – Kannada – English Dictionary

ಜೇನುನುಡಿ – ಕನ್ನಡ ಇಂಗ್ಲೀಷ್ ನಿಘಂಟುವಿನ ಪಾತ್ರ

4-003

ಯುನೆಸ್ಕೋ ಅಧ್ಯಯನದ ಪ್ರಕಾರ ಈ ವಿಶ್ವದಲ್ಲಿ ಸುಮಾರು ೬೦೦೦ಕ್ಕೂ ಮೀರಿ ಭಾಷೆಗಳಿವೆ ಎಂಬ ಅಂದಾಜಿದೆ. ಈ ೬೦೦೦ ಭಾಷೆಗಳಲ್ಲಿ ಸುಮಾರು ೨೫೦೦ ಭಾಷೆಗಳು ಅಳಿದಿವೆ ಅಥವಾ ಅಳಿವಿನ ಅಂಚಿನಲ್ಲಿವೆ. ಯಾವ ಭಾಷೆಗಳು ಅಳಿದಿವೆ ಅಥವಾ ಅಳಿವಿನ ಅಂಚಿನಲ್ಲಿವೆ ಎಂದು ತಿಳಿಯಬೇಕಾದರೆ ಈ ಮೂರು ಅಂಶಗಳನ್ನು ಗಮನಕ್ಕೆ ತಂದುಕೊಳ್ಳಬೇಕು:

೧. ಈಗ ಆ (ಅಳಿವಿನ ಪರಿಧಿಗೆ ಬಂದಿರುವ) ಭಾಷೆಯನ್ನೂ ಎಷ್ಟು ಜನ ಮಾತನಾಡುತ್ತಿದ್ದಾರೆ?

೨. ಅವರ ಸರಾಸರಿ ವಯಸ್ಸು (ಆ ಭಾಷೆಯನ್ನೂ ಸರಾಗವಾಗಿ ಮಾತನಾಡುವವರು) ಎಷ್ಟು?

೩.ಅಳಿಯುತ್ತಿರುವ ಭಾಷೆಯನ್ನೂ ಯುವಕರು ಎಷ್ತರ ಮಟ್ಟಿಗೆ ಕಲಿಯುತ್ತಿದ್ದಾರೆ/ಬಿಡುತ್ತಿದ್ದಾರೆ?

ಜೇನುಕುರುಬರು ಮಾತನಾಡುವ ಜೇನುನುಡಿ ಈಗ ಅಳಿವಿನ ಅಂಚಿನಲ್ಲಿರುವ ಭಾಷೆ. ಅಳಿವಿನ ಅಂಚಿನಲ್ಲಿರುವ ಭಾಷೆಗಳನ್ನು ಪುನುರುಜ್ಜೀವನಗೊಳಿಸಲು, ಮತ್ತೆ ಬದುಕಿನಲ್ಲಿ ಉಳಿಯಲು, ಆ ಭಾಷೆಯನ್ನೂ ಡಾಕ್ಯುಮೆಂಟ್ ಮಾಡಬೇಕು, ಅಲ್ಲದೆ ಅದಕ್ಕೆ ಶಕ್ತಿಯನ್ನು ತುಂಬಬೇಕಾಗುತ್ತದೆ. ಅಂತೆಯೇ, ಈ ಭಾಷೆಯನ್ನೂ ಪುನಃಶ್ಚೆತನಗೊಳಿಸಲು ಅದನ್ನು ಹಿಡಿದಿಡಬೇಕು, ಡಾಕ್ಯುಮೆಂಟೇಶನ್ ಮಾಡಬೇಕು. ಅಂದರೆ ಈ ಭಾಷೆಯ ವ್ಯಾಕರಣ, ನಿಘಂಟು ಮತ್ತು ಮೌಖಿಕ ಸಂಪ್ರದಾಯವನ್ನು ದಾಖಲು ಮಾಡಬೇಕು. ಈ ರೀತಿ ಮಾಡುವುದರಿಂದ ಅದನ್ನು ಆ ಸಮುದಾಯದಲ್ಲಿ ಕ್ರಿಯಾಶೀಲವಾಗಿ ಶಿಕ್ಷಣದಲ್ಲಿ ಬಳಸಿ ಉಳಿಸಬೇಕಾಗುತ್ತದೆ. ತನ್ನ ಭಾಷೆಯನ್ನೂ ಬಿಟ್ಟು ಇನ್ನೊಂದು ಭಾಷೆಗೆ ಬದಲಾಗದ ಹಾಗೆ ನೋಡಿಕೊಳ್ಳಬೇಕಾಗುತ್ತದೆ.

ಜೇನುಕುರುಬರು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಮತ್ತು ಕೊಡಗಿನ ಕುಶಾಲನಗರ ತಾಲ್ಲುಕಿನಲ್ಲಿ ವಾಸಿಸುತ್ತಿದ್ದಾರೆ. ಹೆಗ್ಗಡದೇವನಕೋಟೆ ಮತ್ತು ಹುಣಸೂರಿನಲ್ಲಿ ಇವರ ಸಂಖ್ಯೆ ಜಾಸ್ತಿ ಇದೆ.

ಅನಾದಿ ಕಾಲದಿಂದಲೂ ಈ ಜನ ಕಾಡಿನಲ್ಲಿ ಮೇಲೆ ಹೇಳಿದ ಸ್ಥಳಗಳಲ್ಲಿ ಪ್ರಕೃತಿಯೊಡನೆ ಒಂದಾಗಿ ಬದುಕುತ್ತಾ ಬಂದಿದ್ದಾರೆ. ಆದರೆ ಈಗ ಇವರು ಎರಡು ಮುಖ್ಯ ಕಾರಣಗಳಿಂದ ಕಾಡಿನ ಆಚೆಗೆ ತಳ್ಳಲ್ಪಟ್ಟಿದ್ದಾರೆ. ಮೊದಲನೆಯದಾಗಿ ಇಲ್ಲಿ ಹರಿಯುತ್ತಿರುವ ಕಪಿನಿ , ನುಗು, ತಾರಕ, ಹೆಬ್ಬಳ್ಳ ಮುಂತಾದ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿರುವುದು. ಈ ಕಾರಣದಿಂದ ಹಿನ್ನೀರಿನಲ್ಲಿ ವಾಸಿಸುತ್ತಿದ್ದ ಬುಡುಕಟ್ಟೆ ಇತರ ಜನರಿಗೆ ಮುಳುಗಡೆಗೊಂಡ ಜಮೀನನ್ನು ಕೊಡಲು ಕಾಡನ್ನು ಕಡಿಯಬೇಕಾಯಿತು. ಇದರಿಂದ ಜೇನುಕುರುಬರು ತಮ್ಮ ಕಾಡಿನಲ್ಲೇ ತಾವು ಪರಕೀಯರಾಗಬೇಕಾಯಿತು. ಇವರು ಇದ್ದ ಕಾಡನ್ನು ಕಡಿದು ರೈತರಿಗೆ ಭೂಮಿ ಹಂಚಬೇಕಾಯಿತು. ಇದರಿಂದ ತಮ ಬದುಕಿಗಾಗಿ, ಉಳಿವಿಗಾಗಿ ಜಮೀನುದಾರರಲ್ಲಿ ಕೂಲಿಕಾರರಾಗಿ ಕೆಲಸ ಮಾಡಬೇಕಾಗಿ ಬಂತು.ಇದಕ್ಕಾಗಿ ಸುಮಾರು ಜನ ತಮ್ಮ ಭಾಷೆ, ಕಸುಬು, ಸಂಸ್ಕೃತಿಯನ್ನು ಬಿಡಬೇಕಾಯಿತು.

ಎರಡನೇ ಮುಖ್ಯಕಾರಣ, ಉಳಿದ ಕಾಡಿನ ಭಾಗಗಳನ್ನು ರಾಷ್ಟ್ರೀಯ ಉದ್ಯಾನವನಗಳಾಗಿ ಪರಿವರ್ತನೆಗೊಳಿಸಲಾಯಿತು. ಈ ಕಾರಣದಿಂದ ಇವರನ್ನು ಕಾಡಿನ ಅಂಚಿಗೆ ದಬ್ಬಲಾಯಿತು. ಮತ್ತು ಈ ರಾಷ್ಟ್ರೀಯ ಉದ್ಯಾನವನದ ಒಳಗೆ ಪ್ರವೇಶವನ್ನು ನಿಷೇಧಿಸಲಾಯಿತು. ತಮ್ಮ ದಿನನಿತ್ಯದ ಬದುಕಿಗಾಗಿ ,ಸಣ್ಣಪುಟ್ಟ ಕಾಡಿನ ಕಿರು ಉತ್ಪನ್ನಗಳನ್ನು ಶೇಖರಿಸಿ ,ಮಾರಿ, ಜೀವಿಸುವುದು ಕಷ್ಟವಾಯಿತು(ವಿವರಗಳಿಗೆ ನೋಡಿ , ಜೇನುಕುರುಬ ಈ –ಪುಸ್ತಕದ ಡಿ.ವಿ.ಡಿ nfsc)

ಇದರಿಂದಾಗಿ ಇವರ ಜೀವನ ವಿಧಾನ ಬದಲಾಯಿತು.ಭಾಷೆಯು ಬದಲಾಗುತ್ತಾ ಬಂತು. ೪೦೦೦೦ ಜನಸಂಖ್ಯೆಯುಳ್ಳ ಇವರಲ್ಲಿ ೧೯೭೪ ಇಸವಿಯಿಂದ ಈಚೆಗೆ ಸುಮಾರು ಶೇ.೨೦ ಅಂದರೆ ಸುಮಾರು ೮೦೦೦ ಜನ ತಮ್ಮ ಭಾಷೆಯನ್ನೂ ಸಂಪೂರ್ಣವಾಗಿ ಬಿಟ್ಟುಕೊಟ್ಟಿದ್ದಾರೆ. ಸುಮಾರು ೪೦೦೦ ಜನ, ಜೇನುಕುರುಬ ಭಾಷೆಯನ್ನೂ ಕೇವಲ ಅರ್ಥಮಾಡಿಕೊಳ್ಳುವ ಮಟ್ಟದಲ್ಲಿ ಮಾತ್ರ ಇದ್ದಾರೆ. ಇವರೆಲ್ಲ ಸುಮಾರು ೪೦ ವರ್ಷದ ಒಳಗಿನವರು. ಈ ಪ್ರಮಾಣದಲ್ಲಿ ತಮ್ಮ ಭಾಷೆಯನ್ನೂ ಬಿಟ್ಟುಕೊಡುತ್ತಾ ಬಂದರೆ ಇನ್ನೊಂದು ೫೦ ವರ್ಷದೊಳಗೆ ಈ ಭಾಷೆ ಸಂಪೂರ್ಣ ನಾಶಗೊಳ್ಳುವ ಎಲ್ಲಾ ಚಿಹ್ನೆಗಳು ಇವೆ. ಆದ್ದರಿಂದ, ಇದೊಂದು ಅಳಿವಿನ ಅಂಚಿನಲ್ಲಿರುವ ಭಾಷೆಯೆಂದೇ ಹೇಳಬಹುದು.

ಒಂದು ಭಾಷೆ ನಾಶವಾಯಿತೆಂದರೆ, ಒಂದು ಸಂಸ್ಕೃತಿಯ ನಾಶ ತಮ್ಮ ನೆಲದಲ್ಲೇ ತಾವು ಪರಕೀಯರಾಗುವ ಸ್ಥಿತಿ, ಅಲ್ಲಿಯದೇ ಆದ ಒಂದು ಜ್ಞಾನ ವ್ಯವಸ್ಥೆಯ ಸರ್ವನಾಶ. ಅಂದರೆ ವೈದ್ಯಕೀಯ ಜ್ಞಾನ, ಪ್ರಾಣಿಗಳ ಬಗೆಗಿನ ಜ್ಞಾನ, ಜೀವ ಜಂತುಗಳ ಬಗೆಗಿನ ಜ್ಞಾನ, ಇಕಾಳಜಿಯ ಜ್ಞಾನ , ಸಸ್ಯಸಂಪತ್ತಿನ ಜ್ಞಾನ ಮತ್ತು ಅವುಗಳ ಪರಸ್ಪರ ಇರುವಿಕೆಯ ಸರಪಳಿಯ ಸಮತೋಲನ ಇವೆಲ್ಲವೂ ನಾಶವಾದಂತೆ.ಇವರ ಲೋಕದೃಷ್ಟಿ ಸಂಪೂರ್ಣವಾಗಿ ಮರವೆಗೆ ತಳ್ಳಲ್ಪಡುತ್ತದೆ.

ಒಂದು ಭಾಷೆಯನ್ನೂ ಉಳಿಸುವುದೆಂದರೆ ಇವುಗಳನೆಲ್ಲ ಸಂಗ್ರಹಿಸಿ, ಬರಹರೂಪದಲ್ಲಿ ಇರುವಂತೆ ಮಾಡುವುದು, ಮತ್ತೆ ಮರವೆಯಿಂದ ಉಳಿವೆಗೆ ತರುವುದೇ ಆಗಿದೆ. ತಮ್ಮ ಭಾಷೆಯನ್ನೂ ಕಲಿತು  ಜೊತೆಗೆ ತಮ್ಮ ಜ್ಞಾನ ಸಂಪತ್ತು ಪಡೆಯಲು, ಮುಂದಿನ ಓದು ಸುಲಭವಾಗಲು, ವೈಜ್ಞಾನಿಕವಾಗಲು , ಮನೆ ಭಾಷೆಯಿಂದ ಶಾಲಾಭಾಷೆಗೆ                                 ರೂಪಾಂತರ ಹೊಂದಲು, ಆ ಜ್ಞಾನವನ್ನು ಪಡೆದು ಹೊಸ ಜ್ಞಾನವನ್ನು ಬರಮಾಡಿಕೊಳ್ಳಲು ತಮ್ಮ ನುಡಿಯನ್ನು ಬಳಸಬೇಕಾಗಿದೆ. ಈ ಕಾರಣದಿಂದ , ಈಗಾಗಲೇ ಜೇನುಕುರುಬರು ತಾವು ಮರೆತ ಹಾಡುಗಳನ್ನು , ಹಬ್ಬಗಳನ್ನು , ಕಥೆಗಳನ್ನು ಸಂಗ್ರಹಿಸಿ ಅವರಿಗೆಕೊಡುವ ಕೆಲಸವನ್ನು NFSC, ಚೆನ್ನೈ, ರತನ್ ಟಾಟಾ ಟ್ರಸ್ಟ್ ರವರ ಬೆಂಬಲದಿಂದ, ನಮ್ಮ ಮೂಲಕ ಈ ಕೆಲಸ ಹಮ್ಮಿಕೊಳ್ಳುವಂತೆ  ತಾಂತ್ರಿಕ ಮತ್ತು ಆರ್ಥಿಕ ನೆರವೂ ನೀಡಿ ಈ ನಿಘಂಟನ್ನು ಮತ್ತು ಅವ್ಯಕ್ತ ಸಾಂಸ್ಕೃತಿಕ ಪಠ್ಯಗಳನ್ನು ಸಂಶೋಧಿಸಿ ಪ್ರಕಟಿಸಿದೆ.

ಈ ನಿಘಂಟನ್ನು ಜೀನುನುಡಿ ಗೊತ್ತಿಲ್ಲದವರೂ ಉಪಯೋಗಿಸಬಹುದು. ಉಪಾಧ್ಯಾಯರುಗಳು ಜೇನು ಶಾಲೆಗಳಲ್ಲಿ ಪಾಥಮಾಡುವಾಗ ಅವರ ಭಾಷೆಯಲ್ಲಿ ಕನ್ನಡ ಅಥವಾ ಇಂಗ್ಲೀಷಿನಲ್ಲಿ ಆ ಪದಕ್ಕೇನು ಅರ್ಥ ಎಂದು ತಿಳಿದು ಆ ವಿದ್ಯಾರ್ಥಿಗಳಿಗೆ ಹೇಳಬಹುದು. ಅಲ್ಲದೆ ಜೇನುನುಡಿ ಕನ್ನಡಕ್ಕೆ ಹೇಗೆ ಹತ್ತಿರ ಇದೆ ಅಥವಾ ಭಿನ್ನವಾಗಿದೆ, ಎಂದು ತಿಳಿಯಬಹುದು. ಜೇನುನುಡಿಯಲ್ಲಿ ಪಠ್ಯ ರಚನೆ ಮಾಡುವಾಗ ಇದನ್ನು ಉಪಯೋಗಿಸಬಹುದು

ಓದು ಬರಹ ಕಲಿತ ಜೇನುಕುರುಬ ಮಕ್ಕಳು – ತಮ್ಮ ಭಾಷೆ, ಸಂಸ್ಕೃತಿಯನ್ನು ಬಿಟ್ಟ ಮಕ್ಕಳು – ಯುವಕರು ತಮ್ಮ ಭಾಷೆಯನ್ನು ಪುನಃ ಗಳಿಸಿಕೊಳ್ಳಬಹುದು. ನಿಸರ್ಗದೊಡನೆ ತಮ್ಮ ಸಂಬಂಧ ಹೇಗಿದೆ ಎಂದು ತಿಳಿಯಬಹುದು.

ಹೀಗೆ ಈ ಭಾಷೆ ಗೊತ್ತಿರುವವರಿಗೆ , ಈ ಭಾಷೆಯನ್ನೂ ತಿಳಿಯಬೇಕೆಂಬ ಜೇನುಕುರುಬರಲ್ಲದವರಿಗೆ, ಎಲ್ಲರಿಗೂ ಈ ನಿಘಂಟು ಪ್ರಯೋಜನಕಾರಿ ಎಂದು ಭಾವಿಸಲಾಗಿದೆ. ಈ ನಿಘಂಟು ಸಿ.ಡಿ. ರೂಪದಲ್ಲೂ ಸಿದ್ದವಾಗಿದೆ. ಇದನ್ನು ಜೀನುನುಡಿ-ಕನ್ನಡ-ಇಂಗ್ಲೀಷ್ ಕ್ರಮದಲ್ಲೂ ಉಪಯೋಗಿಸಬಹುದು. ಅಂತೆಯೇ ತಿರುವುಮುರುವಾಗಿ ಇಂಗ್ಲೀಷ್- ಜೇನುನುಡಿ- ಕನ್ನಡದಂತೆಯು ಓದಬಹುದು.

ಜೇನುನುಡಿಯ ವ್ಯಾಕರಣವೂ ಸರಳ ಕನ್ನಡದಲ್ಲಿ ಸಧ್ಯದಲ್ಲೇ ಹೊರಬರಲಿದೆ.

ಇಂತಹ ಜೇನುಕುರುಬ ಜನಾಂಗವು ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಅನೇಕ ಪ್ರಯೋಗಗಳಾಗಿವೆ. ಜೇನುಕುರುಬ ಭಾಷೆಯ ಕನ್ನಡದ ಒಂದು ಭಾಷಾ ಪ್ರಭೇದವೆಂದು ಪರಿಗಣಿಸಿದರೂ ಆ ಜನಾಂಗದ ಸಂಸ್ಕೃತಿ , ಸಾಮಾಜಿಕ ರಚನೆ, ಆರ್ಥಿಕ ವ್ಯವಸ್ಥೆ ಇವೆಲ್ಲವೂ ಭಿನ್ನವಾದುದರಿಂದ ಮತ್ತು ಅನೇಕ ಪದಗಳು ವ್ಯಾಕರಣ ರಚನೆ ಇವುಗಳಲ್ಲಿ ವ್ಯತ್ಯಾಸ ಕಂಡುಬರುತ್ತವೆ. ಈ ಜನಾಂಗದ ಲೋಕದೃಷ್ಟಿಯು ತೀರ ಭಿನ್ನವಾದುದು.

ಇವುಗಳೆಲ್ಲವನ್ನು ಮನಸಿನಲ್ಲಿಟ್ಟುಕೊಂಡು ಜೇನುಕುರುಬ ಭಾಷೆಯಲ್ಲೇ ಪಠ್ಯವನ್ನು ರಚಿಸಲಾಯಿತು. ಮೊದಲ ತರಗತಿಯಲ್ಲಿ ಸುಮಾರು ಶೇ.೮೦ ಜೇನುಕುರುಬ ಪದಗಳನ್ನೇ ಇಟ್ಟುಕೊಂಡು ಪಠ್ಯ ರಚಿಸಲಾಯಿತು. ಅಲ್ಲದೆ ಜೇನುಕುರುಬ ಸಂಸ್ಕೃತಿಯನ್ನು ಮಾತ್ರ ಪಠ್ಯದಲ್ಲಿ ತರಲಾಯಿತು. ಜೇನುಕುರುಬ ಧ್ವನಿವ್ಯವಸ್ಥೆ , ವ್ಯಾಕರಣ ವಿಶೇಷಗಳನ್ನು ಮಾತ್ರ ಈ ಪಠ್ಯದಲ್ಲಿ ತರಲಾಯಿತು. ಇದರಿಂದ ಅವರ ದ್ವನಿ ಮತ್ತು ವ್ಯಾಕರಣ ವ್ಯಾವಸ್ಥೆಯಲ್ಲಿ ಇಲ್ಲದ ವಿಷಯಗಳನ್ನು ಕೈ ಬಿಡಲಾಯಿತು . ಆದ್ದರಿಂದ ಮಕ್ಕಳಿಗೆ ಶಾಲೆಗೇ ಸೇರಿದ ತಕ್ಷಣವೇ ಭಯೋತ್ಪಾದನೆಯನ್ನು ಉಂಟು ಮಾಡುವ ಮಹಾಪ್ರಾಣ, ‘ಹ’ಕಾರ ಇತ್ಯಾದಿಗಳನ್ನು ಕೈ ಬಿಟ್ಟು ಜೇನುಕುರುಬ ವರ್ಣವ್ಯವಸ್ತೆಯನ್ನು ಮಾತ್ರ ಹೇಳಿಕೊಡಲಾಗುತ್ತದೆ.

ಎರಡನೇ ತರಗತಿಯಲ್ಲಿ ವೈಜ್ಞಾನಿಕವಾಗಿ ಹಂತಹಂತವಾಗಿ ಮಹಾಪ್ರಾಣ ಮತ್ತಿತ್ತರ ಶಾಲಾ ಕನ್ನಡದಲ್ಲಿ ಬರುವ ಧ್ವನಿಗಳನ್ನು ಪರಿಚಯಿಸಲಾಗಿದೆ. ಈ ಹಂತದಲ್ಲಿ ಸುಮಾರು ಶೇ.೬೦ ಜೇನುಕುರುಬ ಭಾಷೆಯನ್ನೂ ಪ್ರಯೋಗಿಸಲಾಗಿದೆ. ಮೂರನೇ ಪಠ್ಯದಲ್ಲಿ ಸುಮಾರು ಶೇ.೪೦ ಜೇನುಕುರುಬ ಭಾಷೆಯನ್ನೂ ಪರಿಚಯಿಸಲಾಗಿದೆ. ಪಠ್ಯದ ವಸ್ತುವು ಸಹ ಗೊತ್ತಿರುವುದರಿಂದ ಗೊತ್ತಿಲ್ಲದೆಡೆಗೆ, ಸರಳತೆಯಿಂದ ಸಂಕೀರ್ಣತೆಯ ಕಡೆಗೆ ಪರಿವರ್ತಿತವಾಗುತ್ತದೆ. ಇದರಿಂದ ಮಕ್ಕಳ ಕಲಿಕೆಗೆ ಸಾಮೀಪ್ಯತೆ, ವ್ಯವಸ್ಥಿತ ರೂಪ ಇತ್ಯಾದಿಗಳು ದಕ್ಕುತ್ತವೆ. ನಾಲ್ಕನೇ ತರಗತಿಗೆ ಬರುವ ಹೊತ್ತಿಗೆ ಜೇನುಕುರುಬ ವಿಧ್ಯಾರ್ಥಿಯು ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗಳಷ್ಟು ಪ್ರಾವಿಣ್ಯತೆಯನ್ನು ಪಡೆಯುತ್ತಾನೆ/ಳೆ.

ಈ ಪದ್ದತಿಯನ್ನು ಅನುಸರಿಸಲು ಜೇನುಕುರುಬ ಶಾಲೆಯಲ್ಲಿ ಪಾಠ ಮಾಡುವ ಅಧ್ಯಾಪಕರುಗಳಿಗೆ ವಿಶೇಷ ತರಬೇತಿಯನ್ನು ನೀಡಲಾಯಿತು. ಪ್ರಮುಖವಾಗಿ ಜೇನುಕುರುಬದಂತಹ ಭಾಷೆಯ ಬಗ್ಗೆ ಈ ಅಧ್ಯಾಪಕರುಗಳಿಗೆ ಕೆಲವು ಗೃಹೀತವಾದ ಅಂಶಗಳಿದ್ದವು. ಅವುಗಳೆಂದರೆ ಜೇನುಕುರುಬ ಭಾಷೆಗೆ ವ್ಯಾಕರಣವಿಲ್ಲ. ಆದ್ದರಿಂದ ಅದನ್ನು ಪಾಠಮಾಡಲಾಗುವುದಿಲ್ಲ. ಎರಡನೆಯದಾಗಿ ಈ ಭಾಷೆಯನ್ನೂ ಮಾತನಾಡುವ ಜನರ ಸಂಸ್ಕೃತಿ ‘ಕೀಳು’ ಎಂಬ ಪರಿಕಲ್ಪನೆ ಗೃಹೀತವಾಗಿಯಾದರೂ ಆ ಅಧ್ಯಾಪಕರುಗಳಲ್ಲಿ ಮತ್ತು ಅವರ ಆಹಾರ ಪಾದ್ದತಿಯ ಬಗ್ಗೆಯೂ ಇಂತಹ ಪರಿಕಲ್ಪನೆಗಳಿದ್ದವು. ಇವುಗಳನೆಲ್ಲ ಹೋಗಲಾಡಿಸಲು ಎಲ್ಲಾ ಬುಡಕಟ್ಟು ಜನಾಂಗದ ಅಧ್ಯಾಪಕರುಗಳಿಗೆ ಈ ಪಠ್ಯಗಳನ್ನು ಶಾಲೆಯಲ್ಲಿ ಉಪಯೋಗಿಸುವ ವಿಧಾನಗಳನ್ನು ಹೇಳಿಕೊಡಲಾಯಿತು. ಈ ವಿಧಾನಕ್ಕೆ ದ್ವಿಭಾಷ ಪರಿವರ್ತಿತ ಮಾದರಿ ಎಂದು ಹೆಸರಿಡಲಾಯಿತು . ಇಡೀ ಭಾರತ ದೇಶದಲ್ಲಿ ೧೯೮೨-೮೩ ರಲ್ಲಿ ನಡೆಸಲಾದ ಈ ವಿಧಾನವು ಮೊದಲನೆಯ ಪ್ರಯೋಗ ಎಂದು ಪರಿಗಣಿಸಲಾಯಿತು. ಅಲ್ಲದೆ ಈ ಮೂಲಕ ಜೇನುಕುರುಬ ಭಾಷೆಯನ್ನೂ ಹೇಳಿಕೊಡುವುದರ ಜೊತೆಗೆ ಶಿಷ್ಟ ಕನ್ನಡವನ್ನು ಕ್ರಮಬದ್ದವಾಗಿ ಹೇಳಿಕೊಡಲಾಯಿತು.

ಬುಡಕಟ್ಟು ಸಮುದಾಯವು ಮೌಖಿಕ ಪರಂಪರೆಯ ಮೇಲೆ ನಿಂತಿರುವುದರಿಂದ ಅದನ್ನು ಈ ಬರಹ ಸಂಸ್ಕೃತಿಗೆ ಪರಿಚಯಿಸಕೊಡಲಾಯಿತು. ಈಗ ಭಾರತ ಅನೇಕ ಕಡೆಗಳನ್ನು ಅದರಲ್ಲೂ ಒರಿಸ್ಸಾ ಮತ್ತು ನೈರುತ್ಯ ಭಾರತದ ಅನೇಕ ಬುಡಕಟ್ಟು ಜನಾಂಗದವರಿಗೆ ಈ ರೀತಿಯ ಮಾದರಿಯನ್ನು ಅನುಸರಿಸಿ ಪಠ್ಯಗಳನ್ನು ರಚಿಸಲಾಗುತ್ತಿದೆ.

ಅಲ್ಲದೇ ಈ ಬುಡಕಟ್ಟು ಜನಾಂಗಗಳಲ್ಲಿರುವ ಜನಪದ ಗೀತೆಗಳು, ಹಬ್ಬ ಹರಿದಿನಗಳ ಆಚರಣೆ, ಲೋಕದೃಷ್ಟಿ, ಇವರದ್ದೇ ಆದ ವೈದ್ಯ ವಿಜ್ಞಾನ , ಆರೋಗ್ಯ ರಕ್ಷಣೆಯ ವಿಧಾನಗಳು ಮತ್ತು ಜ್ನಾನವ್ಯವಸ್ತೆಯನ್ನು ಸಂಗ್ರಹಿಸಿ, ವಿಶ್ಲೇಷಿಸಿ ಪುಸ್ತಕಗಳನ್ನು ರಚಿಸಲಾಗಿದೆ.