ಅಮೆಜಾನ್ ಕಾಡಿನಲೊಬ್ಬ ಮಹಾ ಮಾಂತ್ರಿಕ ‘ಗುಡ್ಡ’

ಅಮೆಜಾನ್ ಕಾಡಿನಲೊಬ್ಬ ಮಹಾ ಮಾಂತ್ರಿಕ ‘ಗುಡ್ಡ’

Tingalu – June 2009

11ನೂರಕ್ಕೆ ತೊಂಬತ್ತು ಭಾಗ ಔಷದಿ ಸಸ್ಯಗಳು ನಮ್ಮ ಬುಡಕಟ್ಟು ಜನಾಂಗಗಳು ವಾಸಿಸುವ ಕಾಡುಗಳಲ್ಲಿ ಸಿಗುವಂತವು. ಆದರೆ ಅಧುನಿಕ ಬದುಕಿನ ದಾಪುಗಾಲಿಗೆ ಸಿಕ್ಕಿ ಬಹುಪಾಲು ಕಾಡುಗಳು ನಾಶವಾಗುತ್ತಿವೆ. ಕಾಡಿನ ಮೂಲ ಜ್ಞಾನವಿರುವುದು ಬುಡಕಟ್ಟು ಜನಾಂಗಗಳಲ್ಲಿ. ಸಾವಿರಾರು ವರ್ಷಗಳಿಂದ ಇವರು ಕಾಡಿನಲ್ಲಿ ಬದುಕುತ್ತ , ತಮಗೆ ಬರುತ್ತಿರುವ ಅನೇಕ ಖಾಯಿಲೆಗಳನ್ನು ವಾಸಿಮಾಡಲು ಈ ಕಾಡಿನ ಸಸ್ಯಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇತ್ತೀಚಿನ ವರದಿಯ ಪ್ರಕಾರ ಪ್ರಪಂಚದಲ್ಲಿ ಒಂದು ನಿಮಿಷಕ್ಕೆ ೧೦೦ ಎಕರೆಯಷ್ಟು ಅರಣ್ಯ ನಾಶವಾಗುತ್ತಿದೆ . ಪ್ರಪಂಚದಲ್ಲಿರುವ ಸಸ್ಯದಲ್ಲಿ ಶೇ .೧೦ ನಿರ್ನಾಮವಾಗುತ್ತಿವೆ. ಕಾಡಿನಲ್ಲಿದ್ದ ಬುಡಕಟ್ಟು ಜನಾಂಗದವರನ್ನು  ಕಾಡಿನಿಂದ ಹೊರಗೆ ಹಾಕುವುದರ ಮೂಲಕ ಅವರಿಗಿದ್ದ ಜಾನಪದ ವೈದ್ಯ ಜ್ಞಾನವನ್ನು ನಾಶ ಮಾಡಲಾಗುತ್ತಿದೆ. ಈ ಜ್ಞಾನಪದ್ಧತಿಯನ್ನು ಕಾಪಾಡಿಕೊಂಡು ಬರುತ್ತಿರುವವರು ಮುಖ್ಯವಾಗಿ ಬುಡಕಟ್ಟು ಜನಾಂಗದ  ‘ದೇವರಗುಡ್ಡರು’ (ಶಮಣರು). ಆದರೆ ಇವರು ಕಾಡನ್ನೇ ಪ್ರವೇಶಿಸದಂತೆ ತಡೆಯಲಾಗುತ್ತಿರುವ ಕಾರಣ ಈ ಶಮಣರು ತಮ್ಮ ವೈದ್ಯ ಪದ್ಧತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ .

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಜನಾಂಗೀಯ ಔಷಧಿ ಪದ್ದತಿಯನ್ನು, ಅದನ್ನು ಪೊರೆದುಕೊಂಡು ಬರುತ್ತಿರುವ ದೇವರಗುಡ್ಡರನ್ನು ದಕ್ಷಿಣ ಅಮೇರಿಕಾದ ಅಮೆಜಾನ್ ಕಾಡುಗಳಲ್ಲಿ ಭೇಟಿ ಮಾಡಿದ ಧೀರ  – ಮಾರ್ಕ್ .ಜೆ .ಪ್ಲಾಟ್ಕಿನ್ . ಈತ ಅವರ ವಿಷದ ಬಾಣಗಳಿಂದ ಬದುಕುಳಿದಿದ್ದೆ ಒಂದು ಪವಾಡ. ಹಾಗೆ ಬದುಕುಳಿದು ಅವರಲ್ಲೇ ಒಬ್ಬನಾಗಿ ಸುಮಾರು ೩೫ ವರ್ಷಗಳಿಂದ ಗುಡ್ಡರ ಶಿಷ್ಯನಾಗಿ ಸುಮಾರು ೩೦೦ಕ್ಕೂ  ಹೊಸ ಔಷಧೀಯ ಸಸ್ಯಗಳನ್ನು ಕಂಡುಹಿಡಿದ ಸಾಹಸ ಈತನದು.

ಪ್ಲಾಟ್ಕಿನ್ ಹುಟ್ಟಿದ್ದು – ಮೇ ೨೧,೧೯೫೫ ರಲ್ಲಿ. ಅಮೆರಿಕಾದ  ನ್ಯೂ ಒರ್ಲೆಯಾನ್ಸ್ ನಲ್ಲಿ. ಹದಿಹರೆಯದ ಹುಡುಗನಾಗಿದ್ದಾಗಲೇ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರದಲ್ಲಿ  ವಿಶೇಷ ಆಸಕ್ತಿಯನ್ನು  ತಳೆದ ಈರ ೧೬ನೇ ವಯಸ್ಸಿನಲ್ಲೇ  ತಂದೆ, ತಾಯಿಯನ್ನು ಕಳೆದುಕೊಂಡು, ಓದನ್ನು ಮುಂದುವರಿಸಲಾಗದೆ ಶಾಲೆಗೆ ಶರಣು  ಹೊಡೆದ . ಬದುಕಿಗಾಗಿ ಅಲ್ಲಿ ಇಲ್ಲಿ ಕೆಲಸ ಮಾಡಿದ. ಅನೇಕ ಕನಸುಗಳನ್ನು ಹೊತ್ತು ತಿರುಗಿದ. ಹದಿ ವಯಸ್ಸಿನ ಹುಡುಗರು ಕಾರು ಡ್ರೈವಿಂಗ್ , ಆಲ್ಕೋಹಾಲ್ , ಹುಡುಗಿಯರೊಡನೆ ಡೇಟಿಂಗ್ ಗಳಲ್ಲಿ ಮುಳುಗಿದಾಗ ಈತ ಕಾಡಿನ ಪ್ರಾಣಿಗಳು, ಸಸ್ಯಗಳು , ಕಾಡಿನ ತಿರುಗಾಟಗಳ ಕನಸು ಕಾಣುತ್ತಿದ್ದ . ಈ ಕನಸುಗಳಲ್ಲಿಯೇ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ (ತಾನೇ ಗಳಿಸಿದ ಹಣವನ್ನು ತೆತ್ತು) ಕಾಲೇಜಿಗೆ ಸೇರಿದನು. ಅಲ್ಲಿ ನಾಲ್ಕು ಗೋಡೆಗಳ ಮಧ್ಯೆ ಶೂನ್ಯದಲ್ಲಿ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರಗಳ ಭೋಧನೆ ನಡೆಯುತಿತ್ತು. ಇದರಿಂದ ಬೇಸತ್ತು ಮಧ್ಯದಲ್ಲೇ  ಕಾಲೇಜನ್ನು ಬಿಟ್ಟು , ಗಳಿಸಿದ್ದ  ಹಣವನ್ನು ಕಳೆದುಕೊಂಡು , ಬೀದಿಗೆ ಬಿದ್ದ . ಹೀಗೆ ಅಲೆದಾಡುತ್ತಿದ್ದಾಗ  ಅವನಿಗೆ ಯಾರೋ ಪ್ರ್ರಾಣಿಶಾಸ್ತ್ರದ ಮ್ಯೂಸಿಯಂನಲ್ಲಿ ಒಂದು ದಿನಗೂಲಿ ಕೆಲಸವನ್ನು ಕೊಡಿಸಿದರು . ಅಲ್ಲಿ ಆತ ಪ್ರಾಣಿಗಳ ಅವಶೇಷಗಳನ್ನೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು , ಬದುಕಿರುವ ಪ್ರಾಣಿಗಳ ಮೈತೊಳೆದು ಆಹಾರ ಕೊಟ್ಟು, ಅವುಗಳ ಮಲ, ಮೂತ್ರವನ್ನು  ತೊಳೆದು ಸ್ವಚ್ಛಪಡಿಸುವ ಕೆಲಸವನ್ನು ಮಾಡಬೇಕಿತ್ತು . ಒಂದಲ್ಲಾ ಒಂದು ದಿನ ಯಾರಾದರೊಬ್ಬರು ತನ್ನನ್ನು ಮಳೆ ಕಾಡಿಗೆ ಅದರಲ್ಲೂ ಅಮೆಜಾನ್ ಕಾಡಿಗೆ ಕರೆದೊಯ್ಯಬಹುದೇ ಎಂಬ ಕನಸನ್ನು ಮುಂದುವರಿಸಿಯೇ ಇದ್ದ. ಇವನು ಗೀಳನ್ನು ಅರಿತ ಸಹ ಕೆಲಸಗಾರನೊಬ್ಬ ರಾತ್ರಿ ಶಾಲೆ ಸೇರಿ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರದಲ್ಲಿ ಪದವಿಯನ್ನಲ್ಲದಿದ್ದರು  ಒಂದು ಸೆಮಿಸ್ಟರ್ ಕೋರ್ಸ್ ಮಾಡಬಹುದೆಂದು  ಸಲಹೆ ಮಾಡಿದನು. ಈ ವಿಷಯದಲ್ಲಿ ಈ ರೀತಿಯ ಕೋರ್ಸ್ ಇದ್ದದ್ದು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ  ಮಾತ್ರ. ಈಗ ಇಲ್ಲದಿದ್ದರೆ ಮುಂದೆ ಸಾಧ್ಯವೇ ಇಲ್ಲ ಎಂಬ ಸಂಧರ್ಭ ಅದು. ಅಲ್ಲದೆ ಜೀವನ್ ಪರ್ಯಂತ ಈ ಕಾರಣಕ್ಕಾಗಿ ಪರಿತಪಿಸುತ್ತೇನೆ ಎಂದುಕೂಂಡು ಹಾರ್ವರ್ಡ್ ವಿಶ್ವವಿದ್ಯಾನಿಲಯದತ್ತ ಮುಖ ಮಾಡಿದ, ಪ್ಲಾಟ್ಕಿನ್.

12ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪರಿಸರ ಇವನ ಕನಸಿಗೆ ಗುರಿಮೂಡಿಸಿತು. ವಿಶ್ವಮಾನ್ಯ ಪ್ರೊ.ಶುಲ್ಫ್ಸ್ ಎಂಬ ಸಸ್ಯಶಾಸ್ತ್ರಜ್ಞ. ಇವನಿಗೆ ಹೊಸ ಪ್ರಪಂಚವನ್ನೇ ತೆರೆದು ತೋರಿಸಿದರು. ಅವರು ದಕ್ಷಿಣ ಅಮೆರಿಕಾದ ಅಮಜಾನ್ ಮಳೆಯ ಕಾಡು. ಅದರ ಪರ್ಯಾವರಣ, ಮೂಲ ನಿವಾಸಿಗಳು ಅವರ ಬದುಕು, ಅವರು ಉಪಯೋಗಿಸುವ ಔಷಧೀಯ ಸಸ್ಯಗಳು, ಕೋಕಾ ಮತ್ತು ಕೊಕೈನ್ ಮತ್ತು ಮೆಕ್ಷಿಕೊದ ಅಣಬೆ ಸುತ್ತ ನಡೆಸುವ ಕ್ರಿಯಾವಿಧಿಗಳು, ಮಾದಕ ದ್ರವ್ಯಗಳು ಇವುಗಳಲೆಲ್ಲದರ ಚಿತ್ರಗಳನ್ನು ತೋರಿಸಿದರು. ಔಷಧಿಗೆ ಬಳಸುವ ಸುಮಾರು ೨೦೦೦ ಸಸ್ಯವರ್ಗಗಳನ್ನು ತೋರಿಸದರು. ಇದಕ್ಕಾಗಿ ಅವರು ೧೪ ವರ್ಷ ಅಮಜಾನ್ ಕಾಡಿನಲ್ಲಿ (೧೯೫೦ರ ದಶಕದಲ್ಲಿ) ಕಳೆದಿದ್ದರು. ಇದನೆಲ್ಲ ನೋಡಿ ಪ್ಲಾಟ್ಕಿನ್ಗೆ ಆಕಾಶವೇ ಕೈಗೆಟುಕಿದಂತಾಯಿತು. ಇಂತಹ ಮಳೆಯ ಕಾಡುಗಳು ಇಡೀ ಪ್ರಪಂಚದಲ್ಲಿ ಏಷ್ಯಾ, ಆಫ್ರಿಕಾ ಬಿಟ್ಟರೆ ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡುಗಳಲ್ಲಿ ಮಾತ್ರಾ ಕಂಡು ಬರುತ್ತವೆ. ಈ ಅಮೆಜಾನ ಕಾಡಿನಲ್ಲಿ ಪ್ರಪಂಚದಲ್ಲಿ ಕಂಡುಬರುವ ಸುಮಾರು ೬೦ ಸಾವಿರ ಸಸ್ಯಗಳಲ್ಲಿ ೨೫,೦೦೦ ಸಾವಿರ ಸಸ್ಯಗಳು ಬೆಳೆಯುತ್ತವೆ. ಇವುಗಳಲ್ಲಿ ಇನ್ನು ಎಷ್ಟೋ ಯಾರ ಕಣ್ಣಿಗೂ ಬಿದ್ದಿಲ್ಲ. ಅಧ್ಯಯನಕ್ಕೂ ಒಳಪಟ್ಟಿಲ್ಲ. ಈ ಪ್ರಪಂಚದಲ್ಲಿರುವ ಕೀಟಗಳಲ್ಲಿ ಸುಮಾರು ಶೇ.೮೦ರಷ್ಟು ಕೀಟಗಳು ಅಮೆಜಾನ್ ಕಾಡಿನಲ್ಲೇ ಇವೆ. ಅಲೆಕ್ಷ್ಗಾನ್ದರ್ ದಿ ಗ್ರೇಟ್, ಆಲಿವರ್ ಕ್ರಾಂವೆಲ್ ಅಲ್ಲದೆ  ಇನ್ನು ಲಕ್ಷಾಂತರ ಹೆಸರಿಲ್ಲದ ಜನರನ್ನು ಕೊಂದ ಮಲೇರಿಯಾ ಖಾಯಿಲೆಗೆ ಔಷಧಿ ಸಿಕ್ಕಿದ್ದು ಈ ಅಮೆಜಾನ್ ಕಾಡಿನಲ್ಲೇ. ಇದನ್ನು ತಲತಲಾ೦ತರದಿಂದ ಅಮೆಜಾನ್ ಕಾಡಿನ ಬುಡಕಟ್ಟು ಜನಾಂಗದವರು ಮಲೇರಿಯಾಕ್ಕೆ ಔಷಧಿಯಾಗಿ ಬಳಸುತ್ತಿದ್ದರು. ಇದೇ ಸಿಂಕೋನ.

ಒಂದು ದಿನ ಪ್ಲಾಟ್ಕಿನ್ ತರಗತಿಯನ್ನು ಮುಗಿಸಿ ಲಿಫ್ಟಿನಲ್ಲಿ ಇಳಿಯುತ್ತ್ತಿದ್ದಾಗ ಅಚಾನಕ್ಕಾಗಿ ಒಬ್ಬ ಪ್ರೊಫೆಸರ್ ಸಿಕ್ಕಿ ಅಮೆಜಾನ ಕಾಡಿನಲ್ಲಿರುವ ಪ್ರಾಣಿಗಳ ಅಧ್ಯಯನಕ್ಕೆ ಹೊಗಿತ್ತಿದ್ದೇನೆ , ಸಹಾಯಕನಾಗಿ ಬರುತ್ತಿಯಾ ಅಂತ ಕೇಳಿದರು. ಪ್ಲಾಟ್ಕಿನ್ಗೆ ಸ್ವರ್ಗ ಸಿಕ್ಕಿದಂತಾಗಿ ತಕ್ಷಣ ಒಪ್ಪಿಕೊಂಡುಬಿಟ್ಟ. ಅಲ್ಲಿಂದ ಶುರುವಾಯಿತು ಅವನ ಅಮೆಜಾನ ಕಾಡಿನ ಅಧ್ಯಯನ.

ಅಮೆಜಾನ್ ಕಾಡೆಂದರೆ ಮರಗಳು ಪೈಪೋಟಿಯ ಮೇಲೆ ನೂರಾರು ಅಡಿ ಎತ್ತರ ಬೆಳೆದು ನೆಲೆಕ್ಕೆ ಸೂರ್ಯನ ಬೆಳಕೇ ಬೀಳದಂತೆ ಚಪ್ಪರ ಕಟ್ಟಿರುತ್ತವೆ. ಪ್ರಾಣಿಶಾಸ್ತ್ರದ ಅಧ್ಯಯನಕ್ಕೆ ಸಹಾಯಕನಾಗಿ ದುಡುಯುತ್ತಿದ್ದಾಗಲೆ ಸಸ್ಯದ ಬಗ್ಗೆ ಮತ್ತು ಅದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ತಿಳಿದುಕೊಳ್ಳತೊಡಗಿದ. ಕೆಲವರಿಗೆ ಕೆಲವು ಔಷಧೀಯ ಸಸ್ಯಗಳು ಗೊತ್ತಿರಬಹುದು ಆದರೆ ಅದರ ಪೂರ್ಣ ಪ್ರಮಾಣದ ಜ್ಞಾನ ಇರುವುದು ಬುಡಕಟ್ಟು ಜನಾಂಗದ ದೇವರಗುಡ್ಡವರಿಗೆ ಮಾತ್ರ ಎಂಬುದು ಅವನ ಅರಿವಿಗೆ ಬಂತು. ಆರು ತಿಂಗಳು ಅಧ್ಯಯನದ ನಂತರ ಮತ್ತೆ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಹೋಗಿ ತಾನೊಬ್ಬನೇ ಔಷಧೀಯ ಸಸ್ಯಗಳ ಅಧ್ಯಯನಕ್ಕೆ ಮತ್ತೆ ಅಮೆಜಾನ್ ಕಾಡಿಗೆ ಹೊರಟ. ಅಲ್ಲಿ ಹೋದಾಗ ಅವನಿಗೆ ಅರಿವಿಗೆ ಬಂದಿದ್ದು ಅಮೇರಿಕಾ ದೇಶವೊಂದೇ  ಮೂಲಿಕೆ ಮೂಲದ ೧೨೦ ರೀತಿಯ ಔಷದಗಳನ್ನು ತಯಾರು ಮಾಡುತ್ತವೆ. ಇದರಿಂದ ಔಷಧಿ ಕಂಪನಿಗಳು ಒಂದು ವರ್ಷಕ್ಕೆ ಆರು ಇಲಿಯನ್ ಡಾಲರ್ ಗಳಿಸುತ್ತವೆ ಎಂದು ತಿಳಿಯಿತು. ಈ ಭೂಮಿಯ ಮೇಲೆ ನಾಶವಾಗಿಯೇ ಹೋಗಿದೆ ಎಂದು ತಿಳಿದಿದ್ದ ಸಿಂಕ್ಗೋ ಎಂಬ ಮರ ಉಳಿದಿರುವುದು ಇಲ್ಲೇ ಎಂದು ಕಂಡುಹಿಡಿದ.ಗರ್ಭಕೋಶದ ಕ್ಯಾನ್ಸರ್ ಅನ್ನು ಗುಣಪಡಿಸುವುದಕ್ಕೆ ಟ್ಯಾಕ್ಸೋಲ್ ಎಂಬ ಮರದ ಚಕ್ಕೆಯನ್ನು ಉಪಯೋಗಿಸಬಹುದು ಎಂಬುದನ್ನು ೧೯೯೨ ರಲ್ಲಿ ಕಂಡುಹಿಡಿದನು.ಅಲ್ಲದೆ ಈ ಬುಡಕಟ್ಟುಜನಾಂಗದ ಗುಡ್ಡರು ಲೈಂಗಿಕ ರೋಗಗಳನ್ನು ‘ಯೂ’ ಮರದ ಚಕ್ಕೆಯನ್ನು ಅರೆದು ಹಚ್ಚುವುದರಿಂದ ವಾಸಿಮಾಡಬಹುದೆಂದು ತೋರಿಸಿಕೊಟ್ಟರು. ಈಗ ಅದು ವಿಶ್ಲೇಷಣೆಯ ಹಾದಿಯಲ್ಲಿದೆ. ಸಾವಿರಾರು ವರ್ಷಗಳಿಂದ ಬುಡಕಟ್ಟು ಜನಾಂಗವು ಈ ರೀತಿ ಒಂದು ಜ್ನಾನಶಾಖೆಯನ್ನೇ ತೆರೆದಿಟ್ಟಿದೆ. ಪ್ಲಾಟ್ಕಿನ್ ಹೇಳುವ ಪ್ರಕಾರ “ಒಬ್ಬ ದೇವರ ಗುಡ್ಡ ಸತ್ತರೆ ಒಂದು ಲೈಬರಿಯೇ ಸುಟ್ಟುಹೋದಂತೆ”.

ಪಾಶ್ಚಾತ್ಯರು ಔಷಧೀಯ ಸಸ್ಯಗಳನ್ನು ಅಮೆಜಾನ್ ಬುಡಕಟ್ಟು ಜನಾಂಗದಿಂದ ಕಲಿತು ಕೊಟ್ಯಅಂತರ ಡಾಲರುಗಳ ವಹಿವಾಟುಗಳನ್ನು ನಡೆಸುತ್ತಲೇ ಇದ್ದಾರೆ . ಅದರ ಜೊತೆಗೆ ಅಮೆಜಾನ್ ಕಾಡುಗಳನ್ನೇ ಸೂರೆಗೊಳ್ಳುತ್ತಿದ್ದಾರೆ – ಬುಡಕಟ್ಟು ಜನರ ಹೆಸರನ್ನು ಹೇಳದೆ.

13ತನ್ನ ಕ್ಷೇತ್ರ ಕಾರ್ಯದ ಸಮಯದಲ್ಲಿ  ಪ್ಲಾಟ್ಕಿನ್ ಗೆ ಇದರ ಅರಿವು ಚೆನ್ನಾಗಿಯೇ ಆಯಿತು . ಆಟಗಾರರು ಯುವಕರು ಇಂದು ಜಗಿಯುವ ಚಿಕ್ಲೆಟ್ ಮತ್ತು ಚ್ಯುಯಿಂಗ್ ಗಂ  ಬಂದಿದ್ದು ಸಹ ಮೆಕ್ಸಿಕನ್ ಜನರು ತಮಗೆ ಆಯಾಸವಾಗಿದ್ದಾಗ ಅಗಿಯುತ್ತಿದ್ದ ಚಿಕಲ್ ಎಂಬ ಮರದ ಹಾಲಿನಿಂದ. ಈಗ ಅದನ್ನು ಉಪಯೋಗಿಸಿ ಚ್ಯುಯಿಂಗ್ ಗಮ್ ಮಾಡುವ ಕಾರ್ಖಾನೆಯೇ ಶುರುವಾಗಿದೆ. ಅಲ್ಲದೆ ಕೋಟ್ಯಾಂತರ ಡಾಲರುಗಳನ್ನು ಗಳಿಸುವ ಕಾರ್ಖಾನೆಯೂ ಆಗಿದೆ. ಹುಳುಕು ಹಲ್ಲಾದರೆ ಅಥವಾ ಹಲ್ಲುಕುಳಿಯಾದರೆ ಈ ಬುಡಕಟ್ಟು ಜನಾಂಗ ಲ್ಯಾಟಿಕ್ಸ್ ಎಂಬ ಮರದ ಹಾಲನ್ನು ಹಲ್ಲಿನ ಕುಳಿಗೆ ತುಂಬುತ್ತಿದ್ದರು. ಇಲ್ಲಿಯವರೆಗೂ  ಈ ಹಾಲನ್ನೇ ವೈದ್ಯರುಗಳು ಬಳಸುತ್ತಿದ್ದರು. ಇತ್ತೀಚಿಗೆ ಸಿಂಥೆಟಿಕ್ ನಲ್ಲಿ ಮಾಡಿದ ವಸ್ತುವನ್ನು ಹಲ್ಲಿನ ಕುಳಿ ತುಂಬಲು ಉಪಯೋಗಿಸುತ್ತಿದ್ದಾರೆ . ಆದರೆ ಈ ಸಿಂಥೆಟಿಕ್ ವಸ್ತುವು ಆರು ತಿಂಗಳು ಅಥವಾ ಒಂದು ವರ್ಷ ಮಾತ್ರ ಬಾಳಿಕೆ ಬರುತ್ತದೆ. ಆದರೆ ಈ ಲ್ಯಾಟಿಕ್ಸ್ ತುಂಬಿದ ಹಲ್ಲುಕುಳಿ ತಾನಾಗಿಯೇ ಬೀಳುವುವರೆಗೂ  ಅಥವಾ ಮನುಷ್ಯ ಬದುಕಿರುವವರೆಗೂ ಬಾಳಿಕೆ ಬರುತ್ತದೆ. ಅಲ್ಲದೆ ಇದರಿಂದ ಯಾವ ದಂತ ಕ್ರಿಮಿಗಳು ಮುತ್ತುವುದಿಲ್ಲ .

ಅತ್ತಿಮರದ ಭಾಗಗಳನ್ನು ಅನೇಕ ಖಾಯಿಲೆಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ . ವಸಡಿನಲ್ಲಿ ರಕ್ತ ಸುರಿಯುವುದನ್ನು ನಿಲ್ಲಿಸಲು ಮತ್ತು ಹೃದಯ ಸಂಭಂದಿ ಖಾಯಿಲೆಗಳಿಗೆ ಇದರಿಂದ ಔಷಧಿಗಳನ್ನು ತಯಾರಿಸುತ್ತಾರೆ . ಚರ್ಮರೋಗಗಳಿಗೂ ಸಹ ಇದರ ಔಷಧಿಯನ್ನು ಬಳಸುತ್ತಾರೆ . ಒಂದೇ ಔಷಧೀಯ ವಸ್ತುವನ್ನು ಬೇರೆ ಬೇರೆ ಪ್ರಮಾಣದಲ್ಲಿ ತಯಾರು ಮಾಡುವುದರಿಂದ ಬೇರೆ ಬೇರೆ ಖಾಯಿಲೆಗಳನ್ನು ಸಹ ವಾಸಿ ಮಾಡಬಹುದು ಎಂಬುದನ್ನು ಪ್ಲಾಟ್ಕಿನ್ ಅರಿತುಕೊಂಡ . ಹುಳಕಡ್ಡಿ ಮುಂತಾದ ಚರ್ಮ ರೋಗಗಳನ್ನು ಸಂಪೂರ್ಣವಾಗಿ ಗುಣಪಡಿಸಲು ಇನ್ನೂ ಪಾಶ್ಚಾತ್ಯರಿಗೆ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದರೆ ಇವರು ಉಪಯೋಗಿಸುವ ‘ಮನಿಬಲ್ಲಿ’ ಎಂಬ ಮರದ ಹಾಲಿನಿಂದ ಈ ರೋಗಗಳನ್ನು ಸಂಪೂರ್ಣವಾಗಿ ವಾಸಿ ಮಾಡಬಹುದು ಎಂದು ಪ್ಲಾಟ್ಕಿನ್ ಅರಿತ .

ನಾವು ಈಗ ಉಪಯೋಗಿಸುತ್ತಿರುವ ಆಸ್ಪಿರಿನ್ ನೋವನ್ನು ಕೊಲ್ಲುವುದಕ್ಕಾಗಿ ಮಾತ್ರ. ಆದರೆ ಬುಡಕಟ್ಟು ಜನಾಂಗದವರು ಜ್ವರ, ಮೈ ಕೈ ಊತ , ಹೃದಯಾಘಾತ ಮತ್ತು ಲಕ್ವಾಗಳನ್ನು ವಾಸಿ ಮಾಡಲು ಉಪಯೋಗಿಸುತ್ತಾರೆ. ಅಲ್ಲದೆ ರಕ್ತ ಹೆಪ್ಪುಗಟ್ಟುವಿಕೆ, ರಕ್ತನಾಳಗಳಲ್ಲಿ ರಕ್ತ ಸರಿಯಾಗಿ ಹರಿಯುವಂತೆ ಮಾಡಲು , ಅಸ್ತಮಾ ಖಾಯಿಲೆಯನ್ನು ವಾಸಿ ಮಾಡಲು ಉಪಯೋಗಿಸುತ್ತಾರೆ. ಹೀಗೆ ಪ್ಲಾಟ್ಕಿನ್ ಸುಮಾರು ೩೦೦ ಹೊಸ ಔಷಧ ಸಸ್ಯಗಳನ್ನು ಕಂಡುಹಿಡಿದಿದ್ದಾನೆ . ೩೬ ವರ್ಷಗಳಿಂದ ಅಮೆಜಾನ್ ಕಾಡಿನ ಜೀವನಾಡಿಯನ್ನೇ ಹಿಡಿದಿದ್ದಾನೆ . ಇದಕ್ಕಾಗಿ ಈತ ಬುಡಕ್ಕಟ್ಟು ಜನರ ಗುಡ್ಡರ ಶಿಷ್ಯನಾಗೆ ಕೆಲಸ ಮಾಡುತ್ತಾ ಅವರಿಂದ ಕಲಿಯುತ್ತಲೇ ಇದ್ದಾನೆ.

ಇವೆಲ್ಲವನ್ನೂ ಕ್ರೂಢೀಕರಿಸಿ ಈತ ಟೇಲ್ಸ್ ಆಫ್ ಆ ಶಮನ್ಸ್ ಅಪ್ರೆಂಟಿಸ್ ಎಂಬ ಅತ್ಯಾಕರ್ಷಕ ಪುಸ್ತಕವನ್ನು ರಚಿಸಿದ್ದಾನೆ . ಈ ಪುಸ್ತಕ ಬರೀ ಔಷಧಿ ಸಸ್ಯಗಳ ಪಟ್ಟಿಯಲ್ಲ. ಈ ಪುಸ್ತಕ ಔಷಧೀಯ ಹಿಂದೆ ಇರುವ ಬುಡಕಟ್ಟು ಜನಾಂಗದ ಸಾವಿರಾರು ವರ್ಷಗಳ ಚರಿತ್ರೆಯನ್ನು ಬಿಚ್ಚಿಡುತ್ತದೆ. ಗುಡ್ಡರು ಸಾಮಾನ್ಯವಾಗಿ ಔಷಧಿಯನ್ನು ನೇರವಾಗಿ ರೋಗಿಗಳಿಗೆ ಕೊಡುವುದಿಲ್ಲ . ಔಷಧಿ ಸೇವನೆ ರೋಗಿಗೆ ಮತ್ತು ಗುಡ್ಡನಿಗೆ ಒಂದು ಕ್ರಿಯಾವಿಧಿಯ ರೂಪದಲ್ಲಿರುತ್ತದೆ. ಇದಕ್ಕೊಂದು ಸಾಂಸ್ಕೃತಿಕ ಮಹತ್ವ ಒಂದಿರುತ್ತದೆ. ಇದನ್ನು ಮನಗಂಡ ಪ್ಲಾಟ್ಕಿನ್ ವಿಧೇಯ ವಿದ್ಯಾರ್ಥಿಯಂತೆ ಇಂದೂ ಗುಡ್ಡರಿಂದ ಕಲಿಯುತ್ತಲೇ ಇದ್ದಾನೆ. ಇವನ ಕಲಿಕೆಯನ್ನು ಕಂಡು ಪರೀಕ್ಷೆ ಬರೆಯದೆ ಹಾರ್ವರ್ಡ್ ವಿಶ್ವವಿದ್ಯಾನಿಲಯವು ಇವನಿಗೆ ಪದವಿಯನ್ನು ಕೊಟ್ಟಿತು. ಟಿಫ್ಟ್  ವಿಶ್ವವಿದ್ಯಾನಿಲಯ ಈತನ ಕೆಲಸಕ್ಕಾಗಿ ಡಾಕ್ಟರೇಟ್ ಡಿಗ್ರಿಯನ್ನು ಕೊಟ್ಟಿತು. ತಿರಿಯೋ ಎಂಬ ಬುಡಕಟ್ಟು ಜನಾಂಗದ ಭಾಷೆಯಲ್ಲಿ ಇರುವ ಪುಸ್ತಕಗಳು (ಪ್ರಪಂಚದಲ್ಲಿ) ಎರಡೇ ಎರಡು . ಒಂದು ಬೈಬಲ್ , ಇನ್ನೊಂದು ಈತ ಬರೆದ ಔಷಧೀಯ ಸಸ್ಯಗಳ ಪುಸ್ತಕ.

ಪ್ಲಾಟ್ಕಿನ್ ಔಷಧೀಯ  ಸಂಗ್ರಹಣೆ ಅಷ್ಟು ಸುಲಭದ್ದಾಗಿರಲಿಲ್ಲ ಈತ ಬ್ರೆಜಿಲ್ , ಫ್ರೆಂಚ್ ಗಯಾನ , ಸುರಿನಾಮೆ ಮತ್ತು ವೆನಿಜುಲಾ ದೇಶಗಳ ಬುಡಕಟ್ಟು ಜನಾಂಗದವರೊಡನೆ ಕೆಲಸ ಮಾಡುತ್ತಿದ್ದಾಗ ಅನೇಕ ಕಷ್ಟಗಳನ್ನು ಅನುಭವಿಸಿದನು ಮೊದಲ ಬಾರಿಗೆ ಈತ ಫ್ರಂಚ್ ಗಯಾನಕ್ಕೆ ಹೋದಾಗ ಹಾದಿಯ ಹೊರಗಿನ ಗುಡಿಸಿನಲ್ಲಿ ರಾತ್ರಿ ಮಲಗಿರುತ್ತಾನೆ . ಕಡುಕಪ್ಪು ರಾತ್ರಿಯಲ್ಲಿ ಹೊಳೆವ ಎರಡು ಕಣ್ಣುಗಳು ಗುಡಿಸಿಲಿನ ಬಿದುರಿನ ಕಂಡಿಯಲ್ಲಿ ಕಾಣುತ್ತವೆ . ಅದೊಂದು ಜಾಗ್ವಾರ್ ಪ್ರಾಣಿಯಾಗಿರುತ್ತದೆ. ಗುಡಿಸಿಲಿನ ಸುತ್ತಾ ಸುತ್ತು ಹಾಕುತ್ತಿರುತ್ತದೆ. ಈತನಿಗೆ ಜಂಘಾಬಲವೇ  ಉಡುಗಿಹೋಗುತ್ತದೆ .ಬೆವೆತು ಎದ್ದು ಕುಳಿತು ಬಿಡುತ್ತಾನೆ. ಇದು ಕನಸೋ , ನನಸೋ  ಎಂಬ ಭ್ರಮೆಗೆ ಒಳಗಾಗುತ್ತಾನೆ . ತನ್ನ ಸಹಾಯಕನ ಬರುವಿಗಾಗಿ ಬೆಳಗಾಗುವುದನ್ನೇ ಕಾಯುತ್ತಾ  ಕುಳಿತಿರುತ್ತಾನೆ . ಆಗ ದೇವರ ಗುಡ್ಡನೆ  ಬರುತ್ತಾನೆ . ಆತನನ್ನು ಕೇಳಿದಾಗ ಈ ಜಾಗ್ವಾರ್ ನಾನೇ ಎಂದು ಹೇಳುತ್ತಾನೆ. ಅವನು ಪ್ಲಾಟಿಕಿನ್ ಗೆ  ಧೈರ್ಯ ತುಂಬಲು ಹಾಗೆ ಹೇಳಿದನೋ ,ಅಥವಾ ….. ಪ್ಲಾಟಿಕಿನ್ ಗೆ ಸತ್ಯ ಏನಂಬುದು ಇಂದಿಗೂ ತಿಳಿದಿಲ್ಲ.

ಬುಡಕಟ್ಟು ಜನರು ಹೊಸದಾಗಿ  ಬಂದ ತಮ್ಮ ಅತಿಥಿಗಳನ್ನು ಸತ್ಕಾರ ಮಾಡಲು ಸಂಭ್ರಮಿಸುತ್ತಾರೆ . ದೇವರ ಗುಡ್ಡ  ಸೊರೆ ಬುರುಡೆಯಂಥ ಬುರುಡೆಯ  ಬಿರುಡೆ ತೆಗೆದು ಅತಿಥಿಯ ಅಂಗೈ  ಮೇಲೆ ಕರಿ ದ್ರವವನ್ನು ಸುರಿಯುತ್ತಾನೆ . ಅದನ್ನು ದೇವರಗುಡ್ಡ  ತಾನು ಮೂಸಿ ಅತಿಥಿಯೂ  ಮೂಸುವಂತೆ ತೋರಿಸುತ್ತಾನೆ . ಪ್ಲಾಟ್ಕಿನ್  ಮೂಸುತ್ತಾನೆ . ಮೂಸಿದ ತಕ್ಷಣ ಅವನ ನರ ನಾಡಿಗಳೆಲ್ಲ ಬಿಗಿದುಕೊಂಡು, ಒಡೆದು ರಕ್ತವೆಲ್ಲಾ ಸುರಿದು ಹೋಗುವ ಅನುಭವವಾಗುತ್ತದೆ. ಅವನು ಎದ್ದಿದ್ದು ಮರುದಿನ ಬೆಳಗ್ಗೆ ಹತ್ತು ಗಂಟೆಗೆ .

ಈತ ಇನ್ನೊಮ್ಮೆ ಸೆಖೆಯನ್ನು ತಾಳಲಾರದೆ ಹೊಳೆಯಲ್ಲಿ ಸ್ನಾನಕ್ಕೆ ಇಳಿದು ಮುಂದೆ ಈಜುವಷ್ಟರಲ್ಲಿ ಅವನಿಗೆ ಕಂಡದ್ದು ತೊಡೆ ಗಾತ್ರದ ಆರು ಅಡಿ ಉದ್ದದ ‘ವಿದ್ಯುತ್ ಈಲ್ ‘ ಎಂಬ ಜಲಚರ ಪ್ರ್ರಾಣಿ. ಅದು ಇವನೆಡೆಗೆ  ಶರವೇಗದಲ್ಲಿ ಬರುತ್ತಿರುತ್ತದೆ. ಆಗ ತನ್ನ ಶಕ್ತಿಯನ್ನೆಲ್ಲಾ ಬಿಟ್ಟು ಈಜಿ ದಡ ಸೇರುತ್ತಾನೆ. ವಿದ್ಯುತ್ ಈಲ್ ಎಂಬ ಜಲಚರ ಪ್ರಾಣಿ ಮನುಷ್ಯ ಜೀವಕ್ಕೆ ಅತ್ಯಂತ ಮಾರಕವಾದುದ್ದು . ಇದು ತನ್ನ ಆಹಾರಕ್ಕೆ ಬಾಯಿ ಮತ್ತು ಬಾಲದಿಂದ ಒಮ್ಮೆಗೆ ಹೊಡೆಯುತ್ತದೆ. ಹೀಗೆ ಹೊಡೆದಾಗ ಮೈಗೆ ವಿದ್ಯುತ್ ಶಾಕ್ ಹೊಡೆದಂತಾಗುತ್ತದೆ . ಬದುಕುಳಿದರೆ ಮೂಳೆ ಮೂಳೆಗಳ ಸಂದುಗಳಲ್ಲೂ ಭರಿಸಲಾಗದ ನೋವುಂಟಾಗುತ್ತದೆ. ಹೆಚ್ಚಿಲಿನ ವೇಳೆ ಸಾವು ಸನ್ನಿಹಿತವಾದಂತಯೇ .

ಮತ್ತೊಮ್ಮೆ ಸುರಿನಾಮೆ ದ್ವೀಪಕ್ಕೆ ವಿಮಾನದಲ್ಲಿ ಬಂದಿಳಿದಿದ್ದೆ ತಡ ಅಲ್ಲಿ ಅವನಿಗೆ ಕಂಡಿದ್ದು ಭೀಕರ ಆಂತರಿಕ ಯುದ್ಧ. ಹಗಲಿನಲ್ಲಿ ಒಂದು ನೊಣವೂ ಬೀದಿಯಲ್ಲಿ ಸುಳಿಯುತ್ತಿರಲಿಲ್ಲ. ರಾತ್ರಿಯೆಲ್ಲಾ ಬಂದೂಕಿನ ಶಬ್ದದಿಂದ ತುಂಬಿ ಹೋಗುತ್ತಿತ್ತು. ಶಸ್ತ್ರಾತ್ರ ತುಂಬಿದ ವಾಹನಗಳ ಭರಾಟೆ, ಜನಗಳ ಕೂಗಾಟ, ಚೀರಾಟ, ಮನೆಯಿಂದ ಬುಡಕಟ್ಟು ಜನರನ್ನು ಎಳೆದೆಳೆದು ಕೊಳ್ಳುವ ದೃಶ್ಯ. ಇದು ಎಡಪಂಥೀಯ ಮತ್ತು ಬಲಪಂಥೀಯರ ನಡುವಿನ ಸಮರ. ಇದಕ್ಕಾಗಿ ಕ್ಯೂಬಾದ ಬಾಡಿಗೆ ಸೈನಿಕರು ಮುತ್ತಿದ್ದರು. ಪ್ಲಾಟಿಕಿನ್ ಇವೆಲ್ಲವನ್ನೂ  ಗಮನಿಸುತ್ತಾ ಗುಡಿಸಿಲೊಂದರಲ್ಲಿ ಅವಿತು ಕುಳಿತಿದ್ದ . ಕೊನೆಗೆ ಬಿಳಿ ಬಾವುಟದ ಪುಟ್ಟ ವಿಮಾನವೊಂದು ಬಂದಿತು. ಅದರಲ್ಲಿ ಈತ ಹಾರಿ ತಪ್ಪಿಸಿಕೊಂಡ. ನಾಲ್ಕು ದಿವಸ ಉಪವಾಸವನ್ನು ಮಾಡಿದ್ದ .

ಮತ್ತೊಮ್ಮೆ ವಿಷಬಾಣದ ಪ್ರಯೋಗ ನೋಡಲು ಮತ್ತು ಅದನ್ನು ತಯಾರಿಸುವ ವಿಷ ಸಸ್ಯಗಳನ್ನು ಅರಿಯಲು ಒಬ್ಬ ಗುಡ್ಡನ ಜೊತೆ ಕಾಡಿಗೆ ಹೋಗುತ್ತಾನೆ . ಅಲ್ಲಿ ಆ ಗುಡ್ಡ ಬಿಟ್ಟ ಬಾಣ  ಮರದ ಮೇಲೆ ಕುಳಿತ ಪಕ್ಷಿಯೊಂದಕ್ಕೆ ಹೊಡೆದು ಕೆಳಗೆ ಬೀಳುತ್ತದೆ. ಬೀಳುವಾಗ ಆ ಬಾಣ ಆ ಗುಡ್ಡನ ಕೈಗೆ ತರಚಿಕೊಂಡು ಕೆಳಗೆ ಬೀಳುತ್ತದೆ . ಒಂದು ನಿಮಿಷದಲ್ಲಿ ಆ ಗುಡ್ಡ ನೆಲಕ್ಕೆ ಬಿದ್ದು ಹೊರಳಾಡಿ ಪ್ರಾಣ ಬಿಡುವುದನ್ನು ಕಣ್ಣಾರೆ ಕಂಡು ವಿಚಲಿತನಾದನು. ಸ್ವಲ್ಪದರಲ್ಲಿಯೇ ಆ ಬಾಣ ತಗಲುವುದರಿಂದ ಬಚಾವಾಗುತ್ತಾನೆ.ಹೀಗೆ ಅನೇಕ ಬಾರಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡ ಪ್ಲಾಟ್ಕಿನ್ ಇಂದೂ ಬಟಾಬಯಲಾಗುತ್ತಿರುವ ಅಮೆಜಾನ್ ಕಾಡನ್ನುಉಳಿಸುವುದರಲ್ಲಿ ಮತ್ತು ಬುಡಕಟ್ಟು ಜನಾಂಗದ ಗುಡ್ದರಿಗೆ ಔಷಧಿ ತಯಾರಿಕೆಯನ್ನು ಕಲಿಸುತ್ತಾ ಹೊಸ ಗುಡ್ದರನ್ನು ತಯಾರು ಮಾಡುತ್ತಿದ್ದಾನೆ.

ಅತ್ಯಂತ ವೇಗವಾಗಿ ನಾಶಗೊಳ್ಳುತ್ತಿರುವ ಅಮೆಜಾನ್ ಕಾಡಿನ ಗುಡ್ದರ ಪಾರಂಪಾರಿಕ ಜ್ಞಾನ, ವಿವೇಕಾ ಮತ್ತು ಸಂಸ್ಕೃತಿಯನ್ನು ಉಳಿಸಲು ಈತ ಹಗಲಿರುಳು ದುಡಿಯುತ್ತಿದಾನೆ. ಇಂತಹ ಗುಡ್ದರ ಜ್ಞಾನ ಸಂಪತ್ತು ಕಾಡಿನಂತಯೇ ನಶಿಸಿಹೊಗುತ್ತಿರುವುದನ್ನು ತಡೆಗಟ್ಟಲು ಬುಡಕಟ್ಟು ಜನಾಂಗದ ಯುವಕರಿಗೆ ಅವರದೇ ಜ್ಞಾನವನ್ನು ವಾಪಸ್ಸು ಕೊಡುತ್ತಿದ್ದಾನೆ. ಪ್ಲಾಟ್ಕಿನ್ ಅಮೆಜಾನ್ ಕನ್ಸರ್ವೇಷನ್ ಟೀಂ ನ ಅಧ್ಯಕ್ಷನಾಗಿ ಜೀವ ವೈವಿಧ್ಯತೆಯನ್ನು , ಆರೋಗ್ಯವನ್ನು, ಸಂಸ್ಕೃತಿಯನ್ನು ಉಳಿಸಲು ಕೆಲಸ ಮಾಡುತ್ತಿದ್ದಾನೆ. ಇವನ ಟೇಲ್ಸ್ ಆಫ್ ಎ ಶಮನ್ಸ್, ಅಪ್ರೆಂಟಿಸ್ ಮತ್ತು ಮೆಡಿಸಿನ್ ಕ್ವೆಸ್ಟ್ ಎಂಬ ಪುಸ್ತಕಗಳಿಗೆ ಟೈಮ್ ಮ್ಯಾಗಜಿನ್ ಹೀರೋ ಫಾರ್ ದಿ ಪ್ಲಾನೆಟ್ ಎಂಬ ಬಿರುದನ್ನೂ ಕೊಟ್ಟಿತು. ಈ ಬುಡಕಟ್ಟು ಜನಾಂಗಗಳನ್ನು ಕಾಡಿನಿಂದ ಕಿತ್ತೆಸೆಯದೆ ಅವರ ಜ್ನಾನಭಂಡಾರವನ್ನು ಉಪಯೋಗಿಸಿಕೊಂಡು ಅವರಿಗೆ ಅಲ್ಲೇ ಕೆಲಸಗಳನ್ನು ಕೊಡುವುದರ ಮೂಲಕ ಕಾಡಿನಲ್ಲೇ ಉಳಿಸಿಕೊಳ್ಳಬಹುದು ಎಂದು ನಂಬಿದ್ದಾನೆ. ಈತನು ಸುರಿನಾಮೆ, ಕೊಲಂಬಿಯಾ, ಬ್ರಜಿಲ್ ದೇಶದ ಜ್ಞಾನ ಸಂಪತ್ತನ್ನು ಉಳಿಸಲು ಶ್ರಮಿಸುತ್ತಿದ್ದಾನೆ. ಬುಡಕಟ್ಟು ಜನರ “ಬೌದ್ದಿಕ ಸಂಪತ್ತಿನ ಹಕ್ಕಿಗಾಗಿ” ಹೋರಾಟ ನಡೆಸುತ್ತಲೇ ಇದ್ದಾನೆ.

ಪ್ಲಾಟ್ಕಿನ್ ಅನ್ನು ಅರಸಿ ಅನೇಕ ಪ್ರಶಸ್ತಿಗಳು ಬಂದಿವೆ. ಈತ ವರ್ಲ್ಡ್ ವೈಲ್ಡ್ ಲೈಫ್ ಫಂಡ್ ನ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾನೆ. ಸ್ಮಿತ್ ಸೋನಿಯನ್ ಇನ್ಸ್ಟಿಟ್ಯೂಟ್ ನಲ್ಲಿ ಸಂಶೋಧಕನಾಗಿಯೂ ಕೆಲಸ ಮಾಡಿದ್ದಾನೆ. ಪ.ಬಿ. ಎಸ್ ನೋವಾ ಎಂಬ ಕಂಪನಿಯು ಇವನ ಮೇಲೆ ಒಂದು ಡಾಕ್ಯುಮೆಂಟರಿ ಚಿತ್ರವನ್ನು ಸಹ ಮಾಡಿದೆ. ಅಮೆಜಾನ್ ಎನ್ನುವ ಸಿನೆಮಾದಲ್ಲಿ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಹೀಗೆ ಬೀದಿ ಅಲೆಯುತ್ತಿದ್ದ ಹುಡುಗನೊಬ್ಬನ ಕನಸು ಅವನ ನಿಷ್ಠೆಯಿಂದ ನನಸಾಗಿದೆ.

ಈ ಹಿನ್ನಲೆಯಲ್ಲಿ ನಮ್ಮ ದೇಶದಲ್ಲಿ ಇರುವ ಕಾಡುಗಳು ಮತ್ತು ಅಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರ ವೈದ್ಯಕೀಯ ಜ್ಞಾನವನ್ನು ಗುರುತಿಸಿ, ವೈಜ್ಞಾನಿಕವಾಗಿ ವಿಶ್ಲೇಷಿಸಿ ಅನೇಕ ಔಷಧೀಯ ಸಸ್ಯಗಳನ್ನು, ಅವುಗಳ ಉಪಯೋಗವನ್ನು ಕಂಡುಹಿಡಿದುಕೊಳ್ಳುವ ಪಾಠವಾಗಿ ನಾವು ನೋಡಬೇಕಾಗಿದೆ. ಇಡೀ ಬುಡಕಟ್ಟು ಜನಾಂಗವಲ್ಲದೆ ಇತರರೂ ಆಶ್ಚರ್ಯಪಡುವಂತೆ ಖಾಯಿಲೆಗಳನ್ನು ವಾಸಿಮಾಡುವ ಕರ್ನಾಟಕದ ಬುಡಕಟ್ಟು ಜನಾಂಗಗಳಾದ ಜೇನುಕುರುಬ, ಬೆಟ್ಟಕುರುಬ, ಇರುಳ, ಪಣಿಯ ಮುಂತಾದ ಜನಾಂಗಗಳ ದೇವರಗುಡ್ಡಗಳನ್ನು ನಮ್ಮ ಗುರುಗಳೆಂದು ಭಾವಿಸಿ ಅವರ ಅಪಾರ ಜನನ ಸಂಪತ್ತನ್ನು , ಕಾಡಿನ ಉಳಿವನ್ನು, ಪರ್ಯಾವರಣವನ್ನು ರಕ್ಷಿಸುವ ಕಲೆಯನ್ನು ನಾವು ಪ್ಲಾಟ್ಕಿನ್ನಂತವರಿಂದ ಕಲಿಯಬೇಕಾಗಿದೆ. ಅಲ್ಲದೆ ಈ ಜಾಗತೀಕರಣದ ಹೊತ್ತಿನಲ್ಲಿ ಏಕ ಮಾದರಿಯ ಜ್ನಾನಸ್ವಾಮ್ಯವನ್ನು ಬೆಳೆಸಿ ಪರ್ಯಾಯ ಆಲೋಚನಾಕ್ರಮವನ್ನು ಹುಟ್ಟುಹಾಕುವ ಕಾಲ ನಮಗೆ ಎದುರಾಗಿದೆ.

Leave a Reply

Your email address will not be published. Required fields are marked *