ಕೃತಿ,ಪಠ್ಯ ಮತ್ತು ಕಂಬಾರರ ಭಾಷೆ

ಕೃತಿ,ಪಠ್ಯ ಮತ್ತು ಕಂಬಾರರ ಭಾಷೆ

ಪಠ್ಯಕ್ಕೆ ಒಂದು ಅರ್ಥವಿಲ್ಲ. ಅದು ಓದುಗರ ಸೃಷ್ಟಿಗೆ ಅನುಗುಣವಾಗಿ ಹುಟ್ಟಿಕೊಳ್ಳುತ್ತದೆ. ಒಂದು ವಿಷಯಕ್ಕೆ ಒಂದು ರಚನೆಯಿದೆ ಎಂದುಕೊಂಡಾ ಕ್ಷಣವೇ ಈ ರಚನೆಯೇ ಪಠ್ಯದ ವಸ್ತು ಎಂದು ಹೇಳಿಬಿಡಬಹುದು . ಇದು ಒಂದು ಕೇಂದ್ರವನ್ನು ಹುಡುಕಿದಂತೆ. ಆದರೆ ಪಠ್ಯದ ಕೇಂದ್ರವು ಯಾವಾಗಲೂ ದೃಷ್ಟಿಕೋನಕ್ಕೆ ಅನುಗುಣವಾಗಿ ತನ್ನ ಕೇಂದ್ರವನ್ನು ಬದಲಾಯಿಸುತ್ತಲೇ ಇರುತ್ತದೆ. ಇಲ್ಲಿ ಪಠ್ಯವೆಂದರೆ ಯಾವುದಾದರೂ ಒಂದು ನಾಟಕವಾಗಿರಬಹುದು ಅಥವಾ ಯಾವುದೇ ಸಾಹಿತ್ಯ ಕೃತಿಯಾಗಿರಬಹುದು. ಈ ಸಾಹಿತ್ಯ ಕೃತಿಗೆ ಯಾವುದೇ ಒಂದು ರೀತಿಯ ರಚನೆಯಿರುವುದಿಲ್ಲ. ಇದು ಬಹಳ ಮುಖ್ಯವಾದುದು . ಏಕೆಂದರೆ ಮಾತಿನಂತೆ ರಚನೆಗಳೂ ಪುನರ್ ಸಂದರ್ಭೀಕರಣಕ್ಕೆ ಒಳಗಾಗುತ್ತವೆ. ಹೇಗೆ ಪುನರ್ ಸಾಂದರ್ಭೀಕರಣಕ್ಕೆ ಒಳಗಾಗುತ್ತಾ ಹೊಸ ರೀತಿಯ ಸಾಂಸ್ಕೃತಿಕ ಶೂನ್ಯತೆ ಉಂಟಾಗುತ್ತದೆ.

ಸಾಹಿತ್ಯ ಪಠ್ಯ ಸೃಷ್ಟಿಯಾಗುವುದೆಂದರೆ ಇದುವರೆವಿಗೂ ಆ ಸಂಸ್ಕೃತಿಯಲ್ಲಿ ಆ ಅರ್ಥ ಸೃಷ್ಟಿಯಾಗಿಲ್ಲವೆಂದರ್ಥ. ಅರ್ಥ ಭಾಷೆಗಾಗಿ ಕಾಯುತ್ತಾ ಕುಳಿತಿರುತ್ತದೆ. ಯಾವುದೇ ಪಠ್ಯವೂ ಏಕ  ಸಾಪೇಕ್ಷಕವಾಗಿಯೂ, ಸಾರ್ವತ್ರಿಕವಾಗಿಯೂ ಇರುತ್ತದೆ. ಒಬ್ಬ ಬರಹಗಾರ ಪಠ್ಯವನ್ನು ಸೃಷ್ಟಿಸಿವುದು ವೈಯಕ್ತಿಕ ನೆಲೆಯಲ್ಲಿ. ಆದರೆ ಅದೇ ಕಾಲದಲ್ಲಿ ಅದು ಇನ್ನೊಬ್ಬರಿಗೂ ಅರ್ಥವಾಗುತ್ತಿರುತ್ತದೆ. ನೂರರಷ್ಟು ಅರ್ಥವಾಗದಿರಬಹುದು. ಅರ್ಥವಾಗುತ್ತದೆ ಎನಿಸುತ್ತಿರುವಾಗಲೇ ನಿಗೂಢ ನಿಗೂಢವಾಗಿಯೂ ಇದೆ ಎನಿಸುತ್ತದೆ. ಭಾಷೆ ನಮಗೆ ಅರ್ಥವಾಗುತ್ತಿದೆ ಎನಿಸುತ್ತಿರುವಾಗಲೇ ಎಲ್ಲಿಯೋ ಅರ್ಥವಾಗಿರುವುದಿಲ್ಲ . ಸಾಹಿತ್ಯ ಕೃತಿಯೂ ಹಾಗೆಯೇ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ.
ಈ ದೃಷ್ಟಿಯಲ್ಲಿ ನೋಡಿದಾಗ ಪಠ್ಯದಲ್ಲಿ ಪಠ್ಯ ಸೃಜಿಸುವವನ ಅರ್ಥ ಮತ್ತು ಓದುಗರ ಅರ್ಥ ಎಂಬುದಿಲ್ಲ. ಯಾವುದೇ ಪಠ್ಯದಲ್ಲಿ ಒಂದು ಅರ್ಥವಿರುವುದಿಲ್ಲ. ಒಂದು ಪಠ್ಯದಲ್ಲಿ ಅರ್ಥದ ವಿವಿಧ ಛಾಯೆಗಳು ಮಾತ್ರ ಇರುತ್ತವೆ. ನಾವು ಈಗ ಏನನ್ನು ಗುರುತಿಸುತ್ತಿದ್ದೇವೆಯೋ ಅಷ್ಟನ್ನು ಮಾತ್ರ ಗುರುತಿಸಕೊಳ್ಳಬಹುದು . ಒಂದು ವಸ್ತು ಅಥವಾ ಪಠ್ಯವನ್ನು ಓದಿದಾಗ, ಒಂದು ಕತೆಯನ್ನು ಅಥವಾ ಒಂದು ನಾಟಕವನ್ನು ಓದಿದಾಗ, ನಮಗೆ ಸದ್ಯದ ಅರ್ಥ ಮಾತ್ರ ಸಿಗುತ್ತಿರುತ್ತದೆ. ಉಳಿದ ಅರ್ಥಗಳೆಲ್ಲ ಗಾಳಿಯಲ್ಲಿ ತೇಲಾಡಿದಂತೆ ಇರುತ್ತದೆ. ಹಿಂದೆ ಹೇಳಿದಂತೆ ಯಾವುದೇ ಸಂಜ್ಞೆಯು ತನ್ನ ಶುದ್ಧ ಸ್ಥಿತಿಯಲ್ಲಿರುವುದಿಲ್ಲ. ಏಕೆಂದರೆ ಯಾವುದೇ ಒಂದು ಪಠ್ಯ ಎಂದ ತಕ್ಷಣ ಅದಕ್ಕೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಆಯಾಮಗಳು ಬಂದು ಬಿಡುತ್ತವೆ. ಯಾವುದೇ ಪಠ್ಯವೇ ಆಗಲಿ, ಓದಾಗಲಿ ಈ ಅರ್ಥದಲ್ಲಿ ಸಾಚಾ ಆಗಿರುವುದಿಲ್ಲ. ಈ ರೀತಿಯ ಸಂದರ್ಭವನ್ನು ಸೃಷ್ಟಿಸಿಕೊಳ್ಳುವುದೆಂದರೆ ಒಂದು ರೀತಿಯ ಒಂದು ಓದುವಿಗೂ ಮತ್ತೊಂದು ಓದಿವಿಗೂ ನೂರಕ್ಕೆ ನೂರರಷ್ಟು ಅನುಗುಣವಾಗಿ ಅರ್ಥದ ವಿವಿಧ ಛಾಯೆಗಳನ್ನು ಮಾತ್ರ ಓದುಗ ಗುರುತಿಸಿಕೊಳ್ಳಬಲ್ಲ. ಸಾಮಾನ್ಯವಾಗಿ ನಮ್ಮಲ್ಲಿ ವಿಮರ್ಶಕರು ಏನು ಮಾಡುತ್ತಿದ್ದಾರೆಂದರೆ ಯಾವುದೇ ಒಂದು ಸಾಹಿತ್ಯ ಕೃತಿಯಲ್ಲಿ ಒಂದು ಅರ್ಥವನ್ನು ಮಾತ್ರ ಕಾಣುವುದಕ್ಕೆ ಪ್ರಾರಂಭಿಸುತ್ತಾರೆ. ನಾನ ಮೊದಲೇ ಹೇಳಿದಂತೆ ಭಾಷೆಗೆ ಒಂದು ಅರ್ಥವಿರುವುದಿಲ್ಲ. ಯಾವಾಗ ಪುನರ್ ಸಂದರ್ಭೀಕರಣಕ್ಕೆ ಒಳಗಾಗುತ್ತಿರುತ್ತದೋ ಆಗ ಅನೇಕ ಅರ್ಥಗಳು ಹೊರಡುತ್ತಿರುತ್ತವೆ.
ಈಗ ಉದಾಹರಣೆಗೆ ಮನೋವೈಜ್ಞಾನಿಕ ವಿಮರ್ಶಕರು ಏನು ಮಾಡುತ್ತಾರೆಂದರೆ ಸಾಹಿತ್ಯ ಕೃತಿಯನ್ನು ಮನೋವೈಜ್ಞಾನಿಕ ವಿಶ್ಲೇಷಣೆಯ ಉದಾಹರಣೆಯಾಗಿ ತೆಗೆದುಕೊಂಡು ಅಷ್ಟಕ್ಕೇ ಮಾತ್ರ ತಮ್ಮ ಅರ್ಥವನ್ನು ಸಂಕುಚಿತಗೊಳಿಸುತ್ತಾರೆ. ಒಂದು ರೀತಿಯಲ್ಲಿ ಬರಹಗಾರನ ವೈಯಕ್ತಿಕ ಮಾನಸಿಕ ಸ್ಥಿತಿಯನ್ನು ಹುಡುಕುವುದಕ್ಕೆ ಪ್ರಯತ್ನಿಸುತ್ತಾರೆ.  ವಿಮರ್ಶೆ ಅಲ್ಲಿ ಮಿತಿಗೊಳಿಸಿಕೊಳ್ಳುತ್ತದೆ. ಅಸ್ತಿತ್ವವಾದಿ ವಿಮರ್ಶೆ ಪಠ್ಯವನ್ನು ಒಂದು ಯೋಜನೆಯೆಂದು ಭಾವಿಸುತ್ತದೆ. ಒಂದು ಪಠ್ಯ ಹೇಗೆ ಯೋಜಿತವಾಗಿದೆ ಎನ್ನುವುದನ್ನು ನೋಡುತ್ತದೆ. ಮಾರ್ಕ್ಸ್ ವಾದಿ  ವಿಮರ್ಶೆ ಸಾಮಾಜಿಕ ಚಾರಿತ್ರಿಕ ಅರ್ಥವನ್ನು ಮಾತ್ರ ಹುಡುಕುತ್ತಾ ಹೋರಾಡುತ್ತದೆ. ಈ ರೀತಿ ನಮ್ಮ ವಿಮರ್ಶೆಗಳು ಏನು ಮಾಡುತ್ತಿವೆಯೆಂದರೆ ಪಠ್ಯವನ್ನು ಒಂದು closed text ಆಗಿ ನೋಡುತ್ತಿವೆ. ಆದರೆ ಪ್ರತಿ ಸಲ ಯಾವುದೇ ಟೆಕ್ಸ್ಟ್ retexutal ಆಗಿರುತ್ತದೆ. ಈಗ ಉದಾಹರಣೆಗೆ ಕಂಬಾರರು ಜಾನಪದ ಅಥವಾ myth ಬಳಸುತ್ತಾರೆ. myth ಬಳಸುವ ಉದ್ದೇಶ ಅದರ ಮೂಲಕ ಇನ್ನೊಂದೇನನ್ನೂ ಹೇಳುವುದು. ಆ myth  ಅಲ್ಲಿ ಒಂದು ಸಂದರ್ಭವನ್ನು ತೆಗೆದು ಇನ್ನೊಂದು ಸಂದರ್ಭಕ್ಕೆ ಅದನ್ನು ಸಂಯೋಜಿಸಿದಾಗ ಹೊರಡುವ ಅರ್ಥವೇ ಬೇರೆಯಾಗಿರುತ್ತದೆ.
 ಈಗ ಉದಾಹರಣೆಗೆ ಅವರ “ಜೋಕುಮಾರ ಸ್ವಾಮಿ”ಯಲ್ಲಿ ಬರತಕ್ಕಂತಹ ಪಡುವಲಕಾಯಿ myth ತೆಗೆದುಕೊಂಡರೆ ಅದು ಕೇವಲ ನಮಗೆ ಪಡುವಲಕಾಯಿ myth ಆಗಿ ಉಳಿಯುವುದಿಲ್ಲ. ಏಕೆಂದರೆ ಅಲ್ಲಿ ಕಂಬಾರರ ನಾಟಕದ  ಪಠ್ಯದ ಬೆಳವಣಿಗೆಯ ದೃಷ್ಟಿಯಲ್ಲಿ ಅದು ಪುನರ್ ಸಂದರ್ಭೀಕರಣಕ್ಕೊಳಗಾಗುತ್ತಿರುತ್ತದೆ. ಅದು ಕೇವಲ ಜಾನಪದವಾಗಬೇಕಾಗಿಲ್ಲ. ಅದನ್ನು ಪರಿಗಣನೆಗೆ ತೆಗೆದುಕೊಂಡಾಗ ಅದು ಪುನಃ ಪುನರ್ ಸಾಂದರ್ಭೀಕರಣಕ್ಕೆ ಒಳಗಾದಾಗ ಅದರ ಅರ್ಥವೇ ಬೇರೆಯಾಗಿರುತ್ತದೆ . ಆದ್ದರಿಂದ ಅದು ಕೇವಲ ಜಾನಪದವಾಗಿಯೇ ಉಳಿದುಕೊಂಡಿರುವುದಿಲ್ಲ. ಅದು ಜಾನಪದಕ್ಕಿಂತ ಬೇರೆಯದಾಗಿ ಬೇರೆಯ ಅರ್ಥಗಳನ್ನೇ ಹೊರಡಿಸುವುದಕ್ಕೋಸ್ಕರವಾಗಿಯೇ ಅದು ಪುನರ್ ಸಂದರ್ಭೀಕರಣಕ್ಕೊಳಗಾಗುತ್ತಲೇ  ಇರುತ್ತದೆ. ಆದ್ದರಿಂದ ಪಠ್ಯವನ್ನು ಗ್ರಹಿಸಿದ ತಕ್ಷಣ ಅದಕ್ಕೆ ಅನೇಕ ಅರ್ಥದ ಸ್ಥಳಾವಕಾಶವಿದ್ದೇ ಇರುತ್ತದೆ.
ಆದ್ದರಿಂದ ಪಠ್ಯ ಬಹುರೂಪಿ. ಸೈದ್ಧಾಂತಿಕವಾಗಿ  ಅನುಭವಕ್ಕೆ ಬಂದಿದ್ದೆಲ್ಲವನ್ನು ಹೇಳಬಹುದಾದರೂ ವಿಜ್ಞಾನದ ದೃಷ್ಟಿಯಿಂದ ನಾವು ಒಂದು ಸಂದರ್ಭವನ್ನು ಸೃಷ್ಟಿಸಿಕೊಂಡು ಏನನ್ನು ಹೇಳುತ್ತಿದ್ದೇವೆ ಎನ್ನುವುದಕ್ಕೆ ಒಂದು ಆವರಣವನ್ನು ಸೃಷ್ಟಿಸಿಕೊಳ್ಳುತ್ತೇವೆ. ಹೀಗೆ ಸೃಷ್ಟಿಸಿಕೊಂಡ ಆವರಣದಿಂದ ಸಂವಾದ ಕ್ರಿಯೆ ಸರಿಯಾಗಿ ನಡೆಯುವ ನೆಲೆ ಸ್ಥಾಪಿತವಾಗಿದೆಯೆಂದ ಮೇಲೆ ಅನುಭವವನ್ನು ಹಿಗ್ಗಿಸಲು ಪ್ರಯತ್ನಿಸುತ್ತೇವೆ. ಆದರೆ ಅರ್ಥವೂ ಸಂದರ್ಭಕ್ಕೆ ತಕ್ಕಂತೆ ಸಂಕುಚಿತಗೊಳ್ಳುತ್ತಲೇ ವೈಶಾಲ್ಯತೆಯನ್ನು ಪಡೆಯುತ್ತದೆ. ಸಂಕುಚಿತತೆ ಮತ್ತು ವೈಶಾಲ್ಯತೆ ಎರಡೂ ಒಟ್ಟೊಟ್ಟಿಗೆ ನಡೆಯುತ್ತಿರುತ್ತದೆ. ಇದೆ ರೀತಿ ಒಂದು ಸಾಹಿತ್ಯ ಪಠ್ಯದಲ್ಲೂ ಅದಕ್ಕೆ ಯಾವ ಓದು ಅರಾಜಕವಾಗಿರುವುದಿಲ್ಲ. ಆದ್ದರಿಂದ ಪಠ್ಯ ಮತ್ತು ಸಂದರ್ಭ ಬಹಳ ಮುಖ್ಯ. ಇದು ಅರ್ಥ ಪ್ರಸರಣ ಕ್ರಿಯೆ ನಡೆಯುವ ವಿಧಾನ. ಮಾರ್ಕ್ಸ್ ವಾದಿಗಳು ಹೇಳಿದಂತೆ ಥೀಸಿಸ್ ಮತ್ತು ಆಂಟಿಥೆಸಿಸ್ ಎರಡು ಸಿಂಥೆಸಿಸ್ ಆಗುವುದಿಲ್ಲ. ಭಾಷೆಯಲ್ಲಿ ಸೂಚಿ ಇರುತ್ತದೆ. ಸೂಚ್ಯ ಇರುತ್ತದೆ. ಇಲ್ಲಿ ಸೂಚ್ಯ ನಿರ್ದಿಷ್ಟವಾಗಿ ಕಂಡುಬಂದರೂ ಸೂಚಕ ನಿರ್ದಿಷ್ಟವಲ್ಲ. ಸೂಚ್ಯ ಮತ್ತು ಸೂಚ್ಯ ಮತ್ತು ಸೂಚಕ ಒಂದರಲ್ಲಿ ಒಂದು ಬೆರೆತುಕೊಳ್ಳುವುದಿಲ್ಲ. ಅದು ಕೇವಲ ಮೈ ಮತ್ತು ಮನಸ್ಸೆಂದು, ಆತ್ಮ ಮತ್ತು ದೇಹಗಳೆಂದು ಎರಡಾಗಿ ಒಡೆದಂತೆ ಆಗಿರುತ್ತದೆ, ಬೆಸುಗೆಯಾಗುತ್ತಿರುತ್ತದೆ ಮತ್ತು ಬಿಚ್ಚಿಕೊಳ್ಳುತ್ತಿರುತ್ತದೆ. ಇದೊಂದು ಸತತವಾದ ಪ್ರಕ್ರಿಯೆಯಾಗಿ ನಡೆಯುತ್ತಿರುತ್ತದೆ.
ಪಠ್ಯ ಈ ರೀತಿ ಕೆಲಸ ಮಾಡುತ್ತಿರುತ್ತದೆ. ಆದ್ದರಿಂದ ಯಾವುದೇ ಒಂದು ಪಠ್ಯದಲ್ಲಿ ಒಂದು ಕೇಂದ್ರವಿರುವುದಿಲ್ಲ. ಕೇಂದ್ರ ಬದಲಾಗುತ್ತಲೇ ಇರುತ್ತದೆ. ಕೃತಿ ಒಂದೇ ಆದರೂ ಅದರ ಕೇಂದ್ರ ಮಾತ್ರ ಬೇರೆ ಬೇರೆಯಾಗುತ್ತಿರುವುದು ಬಹಳ ಮುಖ್ಯವಾಗಿ ಗಮನಿಸಬಹುದಾದ ಅಂಶ.
ಇನ್ನೊಂದು ಉದಾಹರಣೆ ಕೊಡಬೇಕಾದರೆ ಕೃಷ್ಣ ಕಂಸನನ್ನು ಕೊಲ್ಲುವುದಕ್ಕೆ ಬಂದಾಗ ಜಟ್ಟಿಗಳಿಗೆ ಮೇರು ಪರ್ವತದಂತೆ ಕಂಡನು. ಬ್ರಾಹ್ಮಣರಿಗೆ ಇನ್ನೊಂದು ರೀತಿ ಕಂಡನು. ಕಂಸನಿಗೆ ಮತ್ತೊಂದು ರೀತಿ ಕಂಡನು . ಕೃಷ್ಣ ಒಬ್ಬನೇ ಆದರೂ ಅವನ ಕಾಣುವಿಕೆ ಬೇರೆ ಬೇರೆಯಾಗಿದ್ದಂತೆ ಪಠ್ಯವೂ ಸಹ ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿರುವುದಿಲ್ಲ. ಸಂದರ್ಭ ಇದನ್ನು ನಿರ್ಧರಿಸುತ್ತಾ ಹೋಗುತ್ತಿರುತ್ತದೆ. ಹಾಗಾದರೆ ಈ ಅರ್ಥದಲ್ಲಿ ಪಠ್ಯವೆಂದರೇನು ಎನ್ನುವುದಕ್ಕೆ ನಾವು ಸ್ವಲ್ಪ ವಿಶ್ಲೇಷಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ನೋಡಿದಾಗ ಪಠ್ಯ ಮತ್ತು ಕೃತಿ ಬೇರೆ ಬೇರೆ ಎಂದು ನೋಡಬೇಕಾಗುತ್ತದೆ. ಕೃತಿಯೆಂದರೆ ನಾವು ಕೈಗಳಲ್ಲಿ ಹಿಡಿದುಕೊಳ್ಳುವಂತಹ ಒಂದು ಅಷ್ಟು. ಅದರಲ್ಲಿ ಪುಟಗಳಿರುತ್ತವೆ. ಆದರೆ ಪಠ್ಯ ಭಾಷೆಯಲ್ಲಿ ಆಗಿರುತ್ತದೆ. ಅದು ಯಾವುದೇ ಪಠ್ಯವಾಗಿರಬಹುದು . ಕೃತಿಗೂ, ಭಾಷೆಗೂ ಈ ವ್ಯತ್ಯಾಸವಿರುತ್ತದೆ. ಕೃತಿ ಹಾಳೆಗಳಲ್ಲಿ ಮುದ್ರಿತವಾಗಿ ಕಪಾಟಿನಲ್ಲಿ ಜಾಗ ಪಡೆಯುವ ಒಂದು ವಸ್ತು. ಪಠ್ಯ ಒಂದು ವಿಧಾನಾತ್ಮಕವಾದ ಕ್ಷೇತ್ರ. ಕೃತಿಯನ್ನು ಕೈಗಳಲ್ಲಿ ಹಿಡಿದರೆ ಪಠ್ಯವನ್ನು ಭಾಷೆಯಲ್ಲಿ ಹಿಡಿಯಬೇಕಾಗುತ್ತದೆ. ಅದು ಭಾಷೆಯಲ್ಲದೆ ಬೇರೆಯಲ್ಲ. ಅದರ ಇರುವಿಕೆ ಭಾಷೆಯಲ್ಲಿಯೇ, ಪಠ್ಯ ಭಾಷೆಯನ್ನೂ ಪುನರ್ ವಿಂಗಡಿಸುತ್ತದೆ. ಒಂದು ಬಾಷೆಯೆನ್ನುವುದು ಅದರಲ್ಲಿರುವುದಿಲ್ಲ. ಇದು ಬಹಳ ಮುಖ್ಯ .
 ಈಗ ಕಂಬಾರರ ಸಾಹಿತ್ಯದಲ್ಲಿ ಭಾಷೆ ಎಂದ ತಕ್ಷಣ ಅದರಲ್ಲಿ ಜಾನಪದದ ಸೊಗಡಿದೆ ಅಥವಾ ಉತ್ತರ ಕರ್ನಾಟಕದ ಭಾಷೆಯನ್ನೂ ಬಳಸುತ್ತಾರೆ ಎಂದು ನಾವು ತಿಳಿದು ಕೊಂಡಿರುತ್ತೇವೆ . ಆದರೆ ಇದು ಹಾಗೆ ಆಗುವುದಿಲ್ಲ. ಅಲ್ಲಿ ನಾನಾ ರೀತಿಯ ಭಾಷೆಗಳು ಬೆರೆತುಕ್ಕೊಳ್ಳುತ್ತಿರುತ್ತವೆ ಮತ್ತು ಪುನರ್ ಸಂದರ್ಭೀಕರಣಕ್ಕೊಳಗಾಗುತ್ತಿರುತ್ತವೆ. ಹೀಗಿರುವುದರಿಂದ ಅದು ಕಂಬಾರರ ಪಠ್ಯವಾಗುತ್ತದೆ. ಇದನ್ನು ನಾವು ಪಠ್ಯ ಎಂದು ತಿಳಿದು ಓದಬೇಕಾಗುತ್ತದೆಯೇ ವಿನಃ ಕೃತಿ ಎಂದು ಓದುವುದಕ್ಕಾಗುವುದಿಲ್ಲ. ಕೃತಿ ಒಂದು ನಿರ್ದಿಷ್ಟ ವಸ್ತು. ಆದರೆ ಪಠ್ಯವೆನ್ನುವುದು ಒಂದು ನಿರ್ದಿಷ್ಟ ವಸ್ತುವಲ್ಲ. ಅದು ಅಮೂರ್ತವಾದುದು . ನಮ್ಮ ಮನಸ್ಸಿನಲ್ಲಿ ರೂಪುಗೊಳ್ಳುವಂತಹದು. ಆದ್ದರಿಂದ ಭಾಷ ದೃಷ್ಟಿಯಲ್ಲಿ ನೋಡಿದಾಗ ಯಾವುದೇ ಕೃತಿಯನ್ನು ನಾವು ಬೇರೆ ಬೇರೆ ರೀತಿಯಲ್ಲಿ ನೋಡಬೇಕಾಗುತ್ತದೆ. ಅಲ್ಲಿ ಅನೇಕ ಭಾಷೆಗಳು ಕೂಡಿಕೊಂಡಿರುವುದನ್ನು ನಾವು ನೋಡಬೇಕಾಗುತ್ತದೆ. ಈಗ ಉದಾಹರಣೆಗೆ ಮಹಾದೇವರವರ “ಕುಸುಮ ಬಾಲೆ”ಯಲ್ಲಿ ಬೇರೆ ಬೇರೆ ರೀತಿಯ ಭಾಷೆಗಳಿವೆ. ಅಲ್ಲಿ ಬ್ರಾಹ್ಮಣರ ಭಾಷೆಯಿದೆ, ಹರಿಜನರ ಭಾಷೆಯಿದೆ. ಲಿಂಗಾಯಿತರ ಭಾಷೆಯಿದೆ, ಮಾರ್ಕ್ಸ್ ವಾದಿಗಳ ಭಾಷೆಯಿದೆ. ಎಲ್ಲಾ ಭಾಷೆಗಳೂ ಇವೆ. ಇವೆಲ್ಲವೂ ಕೂಡಿಕೊಂಡು ಅದೊಂದು ಪಠ್ಯವಾಗಿದೆ. ನಾವು ವಿಮರ್ಶಕರು, ಸಾಮಾನ್ಯವಾಗಿ ಇದು ನಂಜನಗೂಡಿನ ಭಾಷೆ, ಕಂಬಾರರ ಬಗೆಗೆ ಹೇಳಬೇಕೆಂದರೆ ಇದು ಧಾರವಾಡದ ಭಾಷೆ ಎಂದು ಹೇಳುತ್ತೇವೆ. ಆದರೆ ವಾಸ್ತವವಾಗಿ ಇದು ನಿಜವಲ್ಲ. ಅವು ಪುನರ್ ಸಂದರ್ಭೀಕರಣಕ್ಕೊಳಗಾಗಿ ಪಠ್ಯದ ಭಾಷೆಯಾಗಿ ಮಾತ್ರವಾಗಿರುತ್ತವೆ . ಆದ್ದರಿಂದ ಕೆಲವೊಂದು ಪದಗಳನ್ನು ತೆಗೆದುಕೊಂಡು ನಾವು ಇದು ಧಾರವಾಡದ ಭಾಷೆ ಅಥವಾ ಇದು ನಂಜನಗೂಡಿನ ಭಾಷೆ ಎಂದು ಹೇಳಲಿಕ್ಕಾಗುವುದಿಲ್ಲ. ಪುನರ್ ಸಂದರ್ಭೀಕರಣಕ್ಕೊಳಗಾದಾಗ ಅದರಲ್ಲಿ ಬೇರೆ ಬೇರೆ ಭಾಷೆಗಳಿರುತ್ತವೆ. ಒಬ್ಬ ಕಳ್ಳನ ಭಾಷೆಯಿರಬಹುದು, ಒಬ್ಬ ಯೋಗಿಯ ಭಾಷೆಯಿರಬಹುದು. ಒಬ್ಬ ಬ್ಯಾಪಾರಿಯ ಭಾಷೆಯಿರಬಹುದು. ಈ ಎಲ್ಲ ಭಾಷೆಗಳ ಮಿಳಿತವಾಗಿ ಒಂದು ಪಠ್ಯವಾಗಿರುತ್ತದೆ. ಪಠ್ಯ ಭಾಷೆಯನ್ನೂ ಪುನರ್ ವಿಂಗಡಿಸುತ್ತದೆ . ಪ್ರತಿ ಪಠ್ಯವೂ ಒಂದು ಅರ್ಥದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಅಂತರ್  ಪಠ್ಯಗಳಿಂದ ಕೂಡಿರುತ್ತದೆ . ಇದು ಬಹಳ ಮುಖ್ಯವಾದುದು .
ಪಠ್ಯ ಸೃಷ್ಟಿಯ ಮೂಲ ಉದ್ದೇಶ ಜ್ಞಾನ ಪ್ರಸರಣ. ಜ್ಞಾನ ಪ್ರಸರಣ ಕ್ರಿಯೆ ಕಾಲಾನುಕ್ರಮದಲ್ಲಿ ಸರಳ ರೇಖಾತ್ಮಕವಾಗಿ ನಡೆಯುವುದಿಲ್ಲ. ಪ್ರಸಾರಣವು ಪ್ರಜ್ಞಾಪೂರ್ವಕವಾಗಿಯಾಗಲಿ ಅಥವಾ ಅಪ್ರಜ್ಞಾಪೂರ್ವಕವಾಗಿಯಾಗಲೀ ಒಂದು ಗುಂಪಿನ ಶಕ್ತಿಯೊಡನೆ ನೆರೆ ಸಂಪರ್ಕವನ್ನು ಹೊಂದಿರುತ್ತದೆ. ಅದು ಅಗೋಚರವಾಗಿ, ವಿರಳವಾಗಿ ಕಾಣಿಸಿಕೊಳ್ಳುತ್ತಿರುತ್ತದೆ . ಈ ಶಕ್ತಿ ಸರ್ವಾಂತರ್ಮಿಯಾಗಿರುತ್ತದೆ. ಯಾವುದೇ ಸಂಸ್ಕೃತಿಯು, ಅದು ವಸಾಹತುಶಾಯಿಯದ್ದಾಗಿರಲಿ ಅಥವಾ ಆಳುವವರದ್ದಾಗಿರಲಿ, ಏಕ ಕಾಲದಲ್ಲಿ ಅಂತರ್ ಸಂಸ್ಕೃತಿಗಳಲ್ಲಿ ಪ್ರಕಟಗೊಳ್ಳುವುದಿಲ್ಲ. ಪ್ರಸಾರಣಗೊಂಡರೂ ಅದು ರೂಪುಗೊಳ್ಳುವುದಿಲ್ಲ. ಇದನ್ನು ನಾವು ಹೆಚ್ಚು ಹೊರಗಡೆಯಿಂದ ಎರವಲು ಪಡೆಯುತ್ತಿದ್ದೇವೆ ಎನ್ನುವ ಅಭಿಪ್ರಾಯವಿದೆ.
ಈಗ ಉದಾಹರಣೆಗೆ ಕಂಬಾರರು ಜಾನಪದದ ಎರವಲು ಪಡೆಯುತ್ತಾರೆ ಎನ್ನುತ್ತೇವೆ . ಇದು ನಿಜವಲ್ಲ. ಇಲ್ಲಿ ಅದು ಪುನರ್ ಸಂದರ್ಭೀಕರಣಕ್ಕೊಳಗಾಗುತ್ತಾ ಇರುತ್ತದೆ. ಒಂದು ರೀತಿಯ ಚರಿತ್ರೆಯನ್ನು ಬದಲಾಯಿಸುತ್ತಿರುತ್ತದೆ . ಈ ಹಿನ್ನೆಲೆಯಲ್ಲಿ “ಸಿರಿ ಸಂಪಿಗೆ” ನಾಟಕದೊಳಗಿನ ಒಂದೆರಡು ಮಾತುಗಳನ್ನು ಇಲ್ಲಿ ಗಮನಿಸೋಣ. ಇದು ಹೇಗೆ ಕೆಲಸ ಮಾಡುತ್ತಿರುತ್ತದೆ ಎಂಬುದನ್ನು ಪರಿಶೀಲಿಸೋಣ. ಭಾಷೆ ಬೇರೆ ಬೇರೆಯಾಗಿರುವುದೆಂದು ನಾನು ಹೇಳಿದೆನು. ಒಬ್ಬ ಹುಚ್ಚನ ಭಾಷೆಯಿರುತ್ತದೆ, ಒಬ್ಬ ಪ್ರವಾದಿಯ ಭಾಷೆಯಿರುತ್ತದೆ, ಒಬ್ಬ ವಿಜ್ಞಾನಿಯ ಭಾಷೆಯಿರುತ್ತದೆ, ಒಬ್ಬ ರಾಜಕಾರಣಿಯ ಭಾಷೆಯಿರುತ್ತದೆ.  ಈ ಎಲ್ಲಾ ಭಾಷೆಗಳೂ ಒಂದು ರೀತಿಯಲ್ಲಿ ಒಂದು ಪಠ್ಯದಲ್ಲಿ ಕೆಲಸ ಮಾಡುತ್ತಿರುತ್ತವೆ . ಕಂಬಾರರ “ಸಿರಿ ಸಂಪಿಗೆ”ಯಲ್ಲಿ  ಸಹ ಕೆಲಸ ಮಾಡುತ್ತಿರುವ ಭಾಷೆ ಯಾವುದೆಂದರೆ ಒಂದು ಪ್ರವಾದಿಯ ಭಾಷೆ ಮತ್ತು ಇನ್ನೊಂದು ಹುಚ್ಚನ ಭಾಷೆ. ಹುಚ್ಚನ ಭಾಷೆ ಅಥವಾ ಪ್ರವಾದಿಯ ಭಾಷೆ ನಮಗೆ ಏಕೆ ಅರ್ಥವಾಗುವುದಿಲ್ಲವೆಂದರೆ ಅದನ್ನು ನಮ್ಮ ಕ್ರಮದ ಸಾಂದರ್ಭೀಕರಣಕ್ಕೆ ಒಳಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ.
ಈಗ ಭಾಗವತ ಹೇಳುವಂತಹದು “ಕುಲದೇವರವತರಿಸಿ ಕಾರಣಿಕ ಹೇಳಿದರು – ಎಲೆಗೆ, ಉಂಟವಗೆರಡು ದೋಷ, ಸನ್ಯಾಸಿಯಾಗುವನು  – ಧ್ವನಿ , ಭಂಗವಾದಾಗ ಅನುಜ ಸತ್ತಾಗ” ಈ ಒಂದು ಪ್ರವಾದಿ ಭಾಷೆಯನ್ನೂ ತಾಯಿ ಅರ್ಥ ಮಾಡಿಕೊಳ್ಳುವ ರೀತಿಯೇ ಬೇರೆ, ಮಗ ಸತ್ತು ಹೋಗುತ್ತಾನೆ ಎನ್ನುವ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾಳೆ. ಅದಕ್ಕಾಗಿ ಅವಳು ಏನು ಮಾಡುತ್ತಾಳೆಂದರೆ ನೀರಿನಲ್ಲಿ ನೆರಳು ನೋಡಿದ ಹಾಗೇ ಅವನಿಗೆ ಒಬ್ಬ ತಮ್ಮನಿಲ್ಲದಿರುವುದರಿಂದ ಅವನು ಸಾಯುವ ಸಾಧ್ಯತೆ ಕಡಿಮೆ ಎಂದು ಸಮಾಧಾನಪಟ್ಟುಕೊಳ್ಳುತ್ತಾಳೆ.
ಹೀಗಾಗಿ ಆ ಧ್ವನಿಗೆ ಅರ್ಥ ಬರುವುದು ಕೊನೆಯಲ್ಲಿ . ಈ ಒಗಟೆಲ್ಲಾ ಈ ಆಪಮ್ಭ್ರಂಶ ವೈರುಧ್ಯಗಳೆಲ್ಲಾ ಅಳಿದು “ಓ ಹೌದು ನಾನು ಹೀಗನ್ನಬಾರದಿತ್ತು ನಿನ್ನ ಮಾತನ್ನು ನಾನು ನಂಬುತ್ತೇನೆ” ಎಂದು ತಾಯಿ ಹೇಳುವಾಗ ಮಾತ್ರ ಅದು contextual ಆಗುತ್ತದೆ ಮತ್ತು ಅದರ ಅರ್ಥ ಅಲ್ಲಿ ಸೃಷ್ಟಿಯಾಗುತ್ತದೆ. ಈ ರೀತಿ ಕಂಬಾರರು ಭಾಷೆಯನ್ನು – ನಮ್ಮ ಕ್ರಮದಲ್ಲಿಲ್ಲದ ಭಾಷೆಯನ್ನೂ – ಬಳಸಿಕೊಂಡು ಅದನ್ನೊಂದು ಕ್ರಮಕ್ಕೆ ಅಳವಡಿಸಿಕೊಳ್ಳಲು ನೋಡುತ್ತಾರೆ. ಇದೆ ರೀತಿ ಬೇರೆ ನಾಟಕಗಳಲ್ಲೂ ಮಾಡುತ್ತಾರೆ. “ನಾಯಿ ಕಥೆ” ಎನ್ನುವ ನಾಟಕದಲ್ಲಿಯೂ ಅಷ್ಟೇ. ನಾಯಿ ಮಗ ಮಾತನಾಡಲು ಯಾವ ಅವಕಾಶವೂ ಇಲ್ಲ. ಆದರೆ ಕೊನೆಯಲ್ಲಿ ಮಾತ್ರ ಅವನು ಮಾತನಾಡುತ್ತಾನೆ. ಅವನ ಮೌನವನ್ನು ಮುರಿದು ಮಾತನಾಡಿಸುವ ಕ್ರಿಯೆಯನ್ನು ಕಂಬಾರರು ಇಲ್ಲಿ ಮಾಡುತ್ತಾರೆ. ಹೀಗೆ ಮೌನವನ್ನು ಮಾತನಾಡಿಸುವ ಕ್ರಿಯೆಯನ್ನು, ಪಠ್ಯವನ್ನು ಸೃಷ್ಟಿಸುವ ಕ್ರಿಯೆಯಾಗಿ ಕಂಬಾರರು ಕಂಡುಕೊಂಡಿದ್ದಾರೆ. ಅವರ ಪಠ್ಯಗಳಲ್ಲಿ ಮುಖ್ಯವಾಗಿ ಈ ವೈರುಧ್ಯಗಳು ಒಂದರ ಮೇಲೊಂದು ಆಗುವುದನ್ನು ಕಾಣುತ್ತೇವೆ . ಸರ್ಪ ಗರುಡಗಳೆಲ್ಲಾ ಮಿಳಿತಗೊಂಡು ಅದು ಒಂದೇ ಆಗುವುದನ್ನು ಕಾಣುತ್ತೇವೆ.
ಆದ್ದರಿಂದ ಕಂಬಾರರು ಸೃಷ್ಟಿಸುವಂತಹ ಸಾಹಿತ್ಯದಲ್ಲಿ ಬಾಷೆಯ ಮಿತಿಯನ್ನು ಕಂಡುಕೊಳ್ಳುವುದರೊಂದಿಗೆ ಭಾಷೆಯ ಶಕ್ತಿಯನ್ನು ಸಹ ಅವರು ತೋರಿಸುತ್ತಾರೆ. ಯಾವುದೇ ಬರಹವೂ ಭಾಷೆಯ ಮಿತಿಯಾಗುವಂತೆ, ಭಾಷೆಯ ಶಕ್ತಿಯೂ ಆಗುತ್ತದೆ. ಪ್ರತಿಯೊಬ್ಬ ಬರಹಗಾರನು ಎದುರಿಸುವ ಈ ಒಂದು ಪ್ರಶ್ನೆ ಈ ಭಾಷೆಯಲ್ಲಿಯೇ ಉಳಿಯ ತಕ್ಕಂತಹದು ಭಾಷೆಯನ್ನೂ ಬಿಟ್ಟು ಪಠ್ಯ ಇರುವುದಿಲ್ಲ. ಪಠ್ಯವೆಲ್ಲಾ ಭಾಷೆಯೇ ಆಗಿರುತ್ತದೆ. ಆದರೆ ಅದು ಸೃಜಿಸುವ ಅರ್ಥಗಳು ಅನಂತವಾಗಿರುತ್ತವೆ. ನಾವು ಈ ಅನಂತವಾದ ಅರ್ಥಗಳನ್ನು ಒಂದು ಸಂದರ್ಭಕ್ಕೊಳಪಡಿಸಿ ಅರ್ಥಮಾಡಿಕೊಳ್ಳಲು ಪ್ರಯತ್ನಪಡುತ್ತಿರುತ್ತೇವೆ.
ಕಂಬಾರರು ತಮ್ಮ ನಾಟಕಗಳಲ್ಲಿ ಪ್ರಮುಖವಾಗಿ ಬಳಸುವ ತಂತ್ರ ಭಾಷೆಯ ತಂತ್ರವಾಗಿರುತ್ತದೆ. ಆದ್ದರಿಂದ ನಾವು ಕಂಬಾರರ ಭಾಷೆಯನ್ನೂ ಭಾಷೆ ಎಂದಾಗ, ಕೇವಲ ಅದರ ಪದಗಳನ್ನಲ್ಲ , ಆ ಪದಗಳೆಲ್ಲಾ ಹೇಗೆ ಪುನರ್   ಸಂದರ್ಭೀಕರಣಕ್ಕೊಳಗಾಗಿ ಹೊಸ ಅರ್ಥವನ್ನು – ವಿವಿಧ ರೀತಿಯಲ್ಲಿ, ವಿವಿಧ ಕೇಂದ್ರಗಳಲ್ಲಿ , ನೆಲೆಗಳಲ್ಲಿ ನಿಂತು ನೋಡಿದಾಗ ಹೇಗೆ ಕೊಡುತ್ತದೆ – ಎನ್ನುವುದನ್ನು ನೋಡಬಹುದು. ಹೀಗೆ ಸ್ಥೂಲವಾಗಿ ನಾನು ಭಾಷೆ ಎನ್ನುವ ಪರಿಕಲ್ಪನೆಯನ್ನು ಕಂಬಾರರ ಕೆಲವು ನಾಟಕಗಳಿಗೆ ಅನ್ವಯಿಸಿ ಹೇಳಿದ್ದೇನೆ.

Leave a Reply

Your email address will not be published. Required fields are marked *