ರೊವೀನಾರ ಮುನ್ನುಡಿ

ರೊವೀನಾರ ಮುನ್ನುಡಿ

‘ರೊವೀನಾ ಹಿಲ್’ರನ್ನು ಮೈಸೂರಿನ ಅವರ ಮನೆಗೆಲಸದಾಕೆ ‘ರೋಹಿಣ’ಮ್ಮನನ್ನಾಗಿಸಿಕೊಂಡು ಸಂಭೋಧಿಸುತ್ತಿದ್ದಳು. ವೆನೆಜುಯೆಲಾದ ರೊವೀನಾ ಕರ್ನಾಟಕವನ್ನು /ಭಾರತವನ್ನು ಇದೇ ರೀತಿ ತನ್ನದಾಗಿಸಿಕೊಂಡು ಕಾಣಲು ಪಡಿಪಾಟಲು ಪಡುತ್ತಿದ್ದರು. ಮನದ ಸೆರಗಿಗೆ ಕೆಂಡವನ್ನು ಕಟ್ಟಿಕೊಂಡು ಬಿರುಗಾಳಿಯಂತೆ ಇಲ್ಲಿ ೧೯೮೨ರಿಂದ ಸುತ್ತುತ್ತಿದ್ದರು . ಈಗಲೂ ಆಕೆ ಈ ‘ಇಂಡಿಯಾ’ ಅರ್ಥಮಾಡಿಕೊಳ್ಳಲು ಬರುತ್ತಲೇ ಇರುತ್ತಾರೆ . ಈ ಇಪ್ಪತ್ತು ವರ್ಷಗಳ ತನಕ ಈಕೆ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಅಮೆರಿಕಾ ಮತ್ತು ಯುರೋ ರಾಷ್ಟ್ರಗಳನ್ನು ಹೊರತುಪಡಿಸಿದ ಅವುಗಳ ನೆರಳಿನಲ್ಲಿಯೇ ತೃತೀಯ ಜಗತ್ತುಗಳಾಗಿರುವ  ದೇಶಗಳಿಗೆ ಪರಿಚಯಿಸಿಕೊಡುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ . ವಚನ ಸಾಹಿತ್ಯವನ್ನು(ಪ್ರಭುಶಂಕರ  ಜೊತೆಗೂಡಿ ) ಭಾಷಾಂತರಿಸಿದ್ದಾರೆ. ಮಹಾದೇವರ ‘ಕುಸುಮ ಬಾಲೆ’ಯುನ್ನು ಮೊದಲು ಆಂಗ್ಲಭಾಷೆಗೆ ಅನುವಾದಿಸಿದವರು ಇವರೆ. ಆಗ ಈಕೆಯ ಜೊತೆ ನನ್ನ ಒಡನಾಟ ಜಾಸ್ತಿಯಾಯಿತು. ಆ ಸಂದರ್ಭದಲ್ಲಿ ‘ಕುಸುಮ ಬಾಲೆ’ಯನ್ನು ಸೂಕ್ಷ್ಮಅತಿಸೂಕ್ಷ್ಮ ಮೂಳೆಗಳನ್ನು ತಡಕಲು ಪ್ರಯತ್ನಿಸುತ್ತಿದ್ದ ಪರಿ ನನ್ನನ್ನು ಅಚ್ಚರಿಗೊಳಿಸುತ್ತಿತ್ತು . ಇದಾದ ೩-೪ ಜನ ಅದನ್ನು ತಿದ್ದಲು  ಯತ್ನಿಸುತ್ತಿದ್ದರು ಅದರ ಬುನಾದಿ ಮಾತ್ರ ರೊವೀನಾರವರದೇ. ಇತ್ತೀಚೆಗೆ ಮೂಡ್ನಾಕೂಡು ಚನ್ನಸ್ವಾಮಿಯವರ ಕವನಗಳನ್ನು ಇಂಗ್ಲಿಷ್ ಹಾಗೂ ಸ್ಪ್ಯಾನಿಷ್ ಗೆ ಭಾಷಾಂತರಿಸಿದ್ದಾರೆ. ಸ್ವತಃ ಸ್ಪಾನಿಷ್ ಭಾಷೆಯ ಕವಿಯಾದ ಇವರು ಕುಮಾರವ್ಯಾಸವನ್ನು ಭಾಷಾಂತರಿಸುವ ಇವರ ಕಾತುರ ಬೆರಗುಗೊಳಿಸಿತ್ತು.

ನನ್ನ ಇವರ ಸ್ನೇಹ ಬೆಳೆದಂತೆ ಮನೆಗೆಲಸದಾಕೆ  ಈಕೆಯನ್ನು ರೋಹಿಣಮ್ಮನನ್ನಾಗಿಕೊಂಡದ್ದು ನನ್ನೊಳಗೆ ಬೆಳೆಯತೊಡಗಿತು . ನಮ್ಮ ಈ ಭಾರತೀಯ ಸಂಸ್ಕೃತಿ ಹೊರಗಿನದ್ದನ್ನು ಒಳಗಿನದ್ದಾಗಿ ಪರಿವರ್ತಿಸಿ ಕಾಪಿಟ್ಟುಕೊಳ್ಳುವ ಪರಿ ಸಂಕೇತವಾಯಿತು.
ಅಂತೆಯೇ ಈ  ಸಂಕೀರ್ಣ ನಾಡಿನ ಮನಸ್ಸಿನ ಪದರಗಳನ್ನು ಹಿಡಿಯುವ ಸಂಕೀರ್ಣ ಕ್ರಿಯೆಯನ್ನು ಅದಕ್ಕೆ ಪಡುವ ಕಷ್ಟದ ಅರಿವನ್ನು ‘ರೋಹಿಣಿ ಹಿಲ್’ ಸಂಕೇತಿಸುವಂತೆ ಕಂಡರೂ. ಏಕೆಂದರೆ ಇಲ್ಲಿ ಭೂತ-ವರ್ತಮಾನ, ಭವಿಷ್ಯತ್ ಗಳೆಲ್ಲವೂ ಒಂದಾಗಿ ಗೋಜಲಾಗಿ, ಗೊಂದಲವಾಗಿ ಕಾಣುತ್ತದೆ

ವಿದೇಶಿಯರಿಗೆ ನಮಗೆ ಅನೇಕ ಬಾರಿ ಏನೂ ಕಾಣುವುದೇ ಇಲ್ಲ, ಬಿಡಿ. ರೊವೀನಾರ ಮನಸ್ಸೆಲ್ಲ ಈ ದ್ವೈರುಧ್ಯಗಳನ್ನು ಹಿಡಿಯುವ ಪ್ರಯತ್ನವೇ ಆಗಿತ್ತು. ಇದು ಒಂದು ಇಂಡಿಯಾ ಅಲ್ಲ. ಇಂಡಿಯಾದಲ್ಲಿ ಅನೇಕ ಇಂಡಿಯಾಗಳಿವೆ ಎಂಬ ಅರಿವು ಅವರಿಗಿದ್ದಿತು. ಇದನ್ನು ತಮ್ಮ ಲೋಕದೃಷ್ಟಿಯಿಂದ ಹಿಡಿಯಲು ಯತ್ನಿಸುತ್ತಿದ್ದರು .

ಈ ಸಂಕೀರ್ಣತೆಯನ್ನು ಬಿಡಿಬಿಡಿಯಾಗಿ ಹಿಡಿದು ಇಡಿಯಾಗಿ ಗ್ರಹಿಸಿ ಈ ‘ನನ್ನ ಕಣ್ಣಿನ ಬಸಿರು’ ಕವನ ಸಂಕಲನದಲ್ಲಿ ನಮಗೆ ಕೊಟ್ಟಿದ್ದಾರೆ.

ನೀನು ಅದ್ಭುತ ನಿಶ್ಚಯ

-ನಗುತ್ತಾ ಆಪಾದನೆಯನ್ನು ಶಂಕಿಸುತ್ತಾ –

ನೃತ್ಯಗಾರರ ಶಿರೋಮಣಿ

ಕಟ್ಟುವ ಮತ್ತು ಅಳಿಯುವವರ ನಡುವೆ ನಿಂತು

ನೀನು ಏನೆಂದು ತಿಳಿಯದಿರಬಹುದು

ಆದರೆ ನೃತ್ಯದ ಲಯ ನೀ ತಪ್ಪುವುದಿಲ್ಲ

ಈ ದೇಶವನ್ನು ಇಡಿಯಾಗಿ ಕಾಣಲು ಮನದ ನೆಲದಲ್ಲಿ ಕಣ್ಣು ಕಣ್ಣೊಡೆಯುವ ತನಕ

ನಾನು ಚಾಚಬೇಕು

ಅಗ ಇಂಡಿಯಾ ಒಳಗೆ ಕುದಿಯುತ್ತದೆ

ನೋವು-ನಲಿವು ಎಲ್ಲ ಪ್ರಯಾಣದಲ್ಲಿ “ತೀರ್ಪಿಗೆ ಜಾಗವಿರುವುದಿಲ್ಲ”

(ಇಂಡಿಯಾ ಮತ್ತು ನೀನು)

ಇಂಡಿಯಾವನ್ನು ಗ್ರಹಿಸುವ ಪ್ರಯತ್ನ ಈ ಕವನ ಸಂಕಲನ ಉದ್ದಕ್ಕೂ ಹರಿದಿದೆ. ಈ ಕ್ರಮದಲ್ಲಿ ವಸಾಹತುಶಾಹಿಯ ಗತ್ತಿಲ್ಲ, ಅಹಮಿಕೆ ಇಲ್ಲ, ತೆರೆದ ಮನದ ಹದವಿದೆ.

‘ಭಾರತೀಯ ಕುಟುಂಬ’ವನ್ನು ಗ್ರಹಿಸುವ ರೀತಿಯೂ ಇದೇ ಆಗಿದೆ. ಇಲ್ಲಿ ಯಾವಾಗಲೂ ಒಬ್ಬ ವ್ಯಕ್ತಿ, ಏಕ ಪಾತ್ರಧಾರಿಯಾಗಿರುವುದಿಲ್ಲ. ಹೆಂಡತಿಗೆ ಗಂಡನಾಗಿ, ತಾಯಿಗೆ ಮಗ/ಮಗಳಾಗಿ , ಅತ್ತೆಯಾಗಿ-ಮಾವನ್ನಾಗಿ, ಒಬ್ಬನೇ /ಳೇ ಬಹು ಪಾತ್ರಧಾರಿಗಳಾಗಿರುತ್ತಾರೆ . ಒಂದು ತೀತಿಯಲ್ಲಿ ಈ ಹುಟ್ಟು ಪೂರ್ಣವಾಗುವದೇ ಇಲ್ಲ.

ಅವರ ಹುಟ್ಟು ಪೂರ್ಣವಾಗುವುದೇ ಇಲ್ಲ

ತಂದೆ ತಾಯಿಗಳಿಗೆ, ಅಜ್ಜ ಅಜ್ಜಿಯರಿಗೆ

ಅತ್ತೆ ಮಾವ ಚಿಕ್ಕಪ್ಪ ದೊಡ್ಡಪ್ಪರಿಗೆ

ಅಣ್ಣಂದರಿಗೆ ಅಕ್ಕ ತಂಗಿಯರಿಗೆ , ಬಂದು ಬಾಂಧವರಿಗೆ

ಕುಲದ ಎಲ್ಲ ಹಿರಿಯರಿಗೆ ಗಂಟೆ ಹಾಕಿಕೊಳ್ಳುತ್ತಾರೆ

ಅವರಿಗೆ ಸ್ವಾತಂತ್ರ್ಯ ತೆರೆಯುವುದು ಒಳಗಿನಿಂದ

ಇದೇ ರೀತಿಯ ಇನ್ನೊಂದು ಪದ್ಯ ‘ಮದುವೆಯ ಹಾಡು’. ಭಾರತದ ಚರಿತ್ರೆ ದಿನಾಂಕಗಳ ಚರಿತ್ರೆಯಲ್ಲ. ಇದು ಮನದ ಚರಿತ್ರೆ (history of mind) ಘಟನೆಗಳನ್ನು ಮನುಷ್ಯನ ಒಳಿತು -ಕೆಡಕುಗಳನ್ನು ಗುರುತಿಸುವ ಕಾಲಾತೀತ ಚರಿತ್ರೆ. ಮನುಷ್ಯನ ಮನದ ಬೆಳವಣಿಗೆಯ ಚರಿತ್ರೆ. ಈ ಚರಿತ್ರೆಯ ಪರಿಕಲ್ಪನೆಯನ್ನು ಪಡೆದು ಬೆಳೆದಿರುವ ಪದ್ಯ ‘ಮರುಭೂಮಿ’ (ಕನ್ನಡದ ತಲೆಬರಹ ಅರ್ಥಪೂರ್ಣ) – ಏಕೆಂದರೆ ಇದು ಮರು (ಹುಟ್ಟಾಗಿ ಬರುವ) ಭೂಮಿಯೂ ಭೂತ -ವರ್ತಮಾನ-ಭವಿಷ್ಯತ್ತಿನ mythical history, ಮನುಕುಲದ ಮನದ ಚರಿತ್ರೆ ಇದೊಂದು ಅದ್ಭುತ ಖಂಡಕಾವ್ಯವೇ ಸರಿ. ನಾಗಣ್ಣರ ಭಾಷಾಂತರವೂ ಇಲ್ಲಿ ಬಹಳ ಪ್ರಭುತ್ವ ಕಂಡಿದೆ. ಇಡೀ ಪದ್ಯವನ್ನು ಓದಿದರೆ ಅದು ಪಿಸುಗುಡವ ರೀತಿ, ಪರಿಕಲ್ಪನೆಗಳು ವಿಸ್ತೃತವಾಗುವ ಪರಿ ಅದ್ಭುತವಾಗಿ ಬಂದಿದೆ. ಮನದ ಚರಿತ್ರೆಯಲ್ಲಿ ಬಣ್ಣಗಳಲ್ಲಿ, ವಾಸನೆಯಲ್ಲಿ, ಕಣ್ಣುಗಳಲ್ಲಿ, ಸ್ಪರ್ಶದಲ್ಲಿ ಹಿಡಿಯಲಾಗಿದೆ.

ರೊವೀನಾರ ಕಾವ್ಯದ ಮತ್ತೊಂದು ಮಗ್ಗುಲು ಈ ದೇಶದ ಸಾಮಾಜಿಕ, ಸಾಂಸ್ಕೃತಿಕ ಮಗ್ಗುಲುಗಳ ಸೂಕ್ಷ್ಮವನ್ನು ಮುಟ್ಟಿ -ತತ್ತಿ ಪರೀಕ್ಷಿಸುವ ರೀತಿ. ಸತಿ, ಎಲ್ಲಮ್ಮ, ಶಾಖ ತಂಡ ಸಾವು, ತನ್ನ ಖಾಸಗಿ ದೇವಾಲಯದಲ್ಲಿ ಅಜ್ಜಿ ಮಳೆಗಾಗಿ ಪ್ರಾರ್ಥಿಸುವುದು

(ಒಂದು ಕಾಲದಲ್ಲಿ

ಜಮೀನಿನಲ್ಲೇ ಗಂಡಸು

ಅವಳನ್ನು ಉತ್ತುಬಿಡುತ್ತಿದ್ದ

ಇಬ್ಬರು ಮೊಳೆಯುತ್ತಿದ್ದರು )

(-ಮಳೆಗಾಗಿ ಪ್ರಾರ್ಥಿಸುವುದು)

ಇಲ್ಲೆಲ್ಲ ರೊವೀನಾರ ಮನಸ್ಸು ಅತಿಸೂಕ್ಷ್ಮವಾಗಿ ಕೆಲಸ ಮಾಡುತ್ತದೆ. ಇವರ ಗ್ರಹಿಕೆ ಕೇವಲ ವೈರುಧ್ಯದ ತಾಕಲಾಟದ ಪರಿಣಾಮವಲ್ಲ. ಅವುಗಳೆರಡರ ಮಧ್ಯದಲ್ಲಿ ದಕ್ಕುವ ಚಲನಾತ್ಮಕ ಅರ್ಥ. ಆದ್ದರಿಂದ ಅವು ರೊಚ್ಚಿನ ಕವನಗಳಾಗದೆ ಚಲನಶೀಲತೆಯಲ್ಲಿ ಅರ್ಥವನ್ನು ಒದಗಿಸುವ ಕ್ರಮವಾಗಿದೆ.

ರೊವೀನಾರ ಮತ್ತೊಂದು ಸೂಕ್ಶ್ಮ – ದರ್ಶನವೆಂದರೆ ‘ನಿರಾಳ ‘ ಎಂಬ ಪುಟ್ಟ ಪದ್ಯದಲ್ಲಿ ವ್ಯಕ್ತವಾಗಿರುವ ಒಂದೇ ಒಂದು ಸಾಲು. ಅದು ‘ಶರೀರದ ಮೂಲಕವೇ ನನ್ನ ಮುಕ್ತಳಾಗಿಸಿದೆ’ ಎಂಬ ಸಾಲು.(‘ಕಾಡಮೂಲಕವೇ ಪಥ ಆಗಸಕ್ಕೆ’ ಎಂಬ ಅಡಿಗರ ‘ಭೂಮಿಗೀತ’ದ ಸಾಲು ಜ್ಞಾಪಕಕ್ಕೆ ಬರುತ್ತದೆ). ಇದರ ಹಿಂದೆ ರೊವೀಣಾ ಭಾರತದ ವೇದಾಂತ-ದರ್ಶನದ ಕಾಣ್ಕೆಯನ್ನೇ ನೀಡಿದ್ದಾರೆ. ಇಂಡಿಯಾದ ಡಯಾಸ್ಪೊರಾ (diaspora)ದ ಮನಸ್ಸನ್ನು ‘ಇಂಡಿಯಾದಲ್ಲಿ ನೈಪಾಲ್ ‘ ಎಂಬ ಕವನ ಬಿಚ್ಚಿಡುತ್ತದೆ.

ಗೋಡೆಗೆ ಬೆನ್ನು ಮಾಡಿ ನಿಂತಿರಿ

ಬೇರೆ ಪಯಣಗಳ ನೆನೆದು;

ದೇಶಭ್ರಷ್ಟ ಮರಳಿ

ಅವಿಚಾರಗಳಿಗೆ ಅಸಹ್ಯಪಟ್ಟು

ಕತ್ತಲ ವಲಯ ಸಿಕ್ಕಿತು

ತರುವಾಯ ನುರಿತ ನಿರ್ಣಯಕಾರ

ಒಂದು ನಾಗರಿಕತೆಯ

ಗಾಯಗಳ ಮೇಲೆ ಬರಲಿತ್ತು

ಶರೀರವನ್ನು ಒಂದು ಕೈಯಳತೆಯ ದೂರವಿಟ್ಟು

ಈ ರೀತಿಯ ಕವನಗಳೇ ಅಲ್ಲದೇ ರೊವೀವಾರವರು, ಸ್ಥಳಗಳ,ವ್ಯಕ್ತಿಗಳ ಜಾರಿತ್ರಿಕ ಪ್ರದೇಶಗಳ, ದೇವಾಲಯಗಳ, ದೇವರುಗಳ ಮೇಲೆ ಕವನಗಳನ್ನು ಬರೆದಿದ್ದರೆ. ಇವೆಲ್ಲ ವಿದೇಶೀಯ ಕವಿಯತ್ರಿಯ ಮನಸ್ಸು ಅಲ್ಲಿಯ ಲೋಕದೃಷ್ಟಿಯನ್ನು ಇಲ್ಲಿ ಕೊಂಡಿ ಹಾಕುವ ಕ್ರಮ ನಡೆಸಿದೆ. ಅಂತೆಯೇ ‘ಕೃಷ್ಣರಾಜಸಾಗರ ದೇವಾಲಯ’ದ ಸುತ್ತ ಸುತ್ತಿಕೊಂಡಿರುವಸಾಮಾಜಿಕ , ಸಾಂಸ್ಕೃತಿಕ, ರಾಜಕೀಯ ಆಯಾಮಗಳನ್ನು ಪ್ರಸ್ತುತ ಪಡಿಸುತ್ತದೆ.

ಹೀಗೆ ರೊವೀನಾರ ಕಾವ್ಯದ ಇನ್ನೂ ಅನೇಕ ಮಗ್ಗಲುಗಳನ್ನು ಪರೀಕ್ಷಿಸಲು ಓದುಗರಿಗೆ ಬಿಡುವುದೇ ಒಳಿತು.

ರೊವೀನಾ ‘ರೋಹಿಣಮ್ಮ’ ಆದದ್ದನ್ನುಪ್ರ್ರಾರಂಭದಲ್ಲಿ ಹೇಳಿದೆ. ಮಿತ್ರ ನಾಗಣ್ಣ ಅವರು ಈ ಕವನಗಳನ್ನು ಕನ್ನಡೀಕರಿಸುವುದೂ ಇದೇ ಕ್ರಿಯೆ ಮತ್ತು ಕ್ರಮ. ಕನ್ನಡದ ಕಣ್ಣು ಕಂಡ ಕಾಣ್ಕೆ ಈ ಭಾಷಾಂತರ ಅಥವಾ ಅನುಕೃತಿ . ಕನ್ನಡವನ್ನು ಕನ್ನಡಿಸುತ್ತಾ ಅನೇಕ ಕನ್ನಡಗಳಾಗಿ ಸಂವೃದ್ಧಿಗೊಳಿಸುತ್ತಿರುವ ನಾಗಣ್ಣನವರು ಈ ಇಂಗ್ಲೀಷಿನಲ್ಲಿರುವ ಕನ್ನಡವನ್ನು ಕನ್ನಡೀಕರಿಸಿದ್ದರೆ. ರೊವೀನಾರ ಕವನಗಳನ್ನು ಓದಿಕೊಂಡ ಕ್ರಮ, ಇಂಗ್ಲೀಷ್ ಭಾಷ್ಯೆ ರಚನೆಯನ್ನು ಕನ್ನಡ ಭಾಷಾರಚನಾಕ್ರಮಕ್ಕೆ ಒಗ್ಗಿಸಿಕೊಂಡಿರುವ ರೀತಿ

ಈ ನೆಲಕ್ಕೆ ಹತ್ತಿರವಾಗಿದೆ. ಭಾಷಾಂತರ ಕೇವಲ ಸಮಾನಾಂತರ ಪದಗಳ ಸೃಷ್ಟಿಯಲ್ಲ. ಪದಗಳ ಹೊಸಜೋಡಣೆ, ಮರುವಿಂಗಡನೆಗೆ ಹೊಸ ಪರಿಕಲ್ಪನೆಗನುಗುಣವಾಗಿ ಹೊಸ ಸೃಷ್ಟಿ ಇವೆಲ್ಲವನ್ನೂ

ನಾಗಣ್ಣ ಬಹಳ ಸೃಜನಾತ್ಮಕವಾಗಿ ತಂದಿದ್ದಾರೆ, ಮರುಸೃಷ್ಟಿ ಮಾಡಿದ್ದಾರೆ. ಮೊದಲು ಕೆಲವು ಕವನಗಳಲ್ಲಿ ಅವು ಪ್ರಜ್ಞಾಪೂರ್ವಕವೆನಿಸಿದರೂ ನಂತರ ಅವರ ತೆಕ್ಕೆಗೆ ಕವನಗಳು ದಕ್ಕಿವೆ. ಇದಕ್ಕಾಗಿ ನಾಗಣ್ಣನವರನ್ನು ನಾವು ಅಭಿನಂಧಿಸಲೇಬೇಕು.ಮೂಲ ಇಂಗ್ಲಿಷ್ ಕವನಗಳು ಮತ್ತು ಕನ್ನಡ ಭಾಷಾಂತರಗಳೆರಡೂ ಪರಿಕಲ್ಪನೆಯ ಗರಿಗೆದರಬಹುದೆಂದು ಆಶಿಸುತ್ತೇನೆ.

Leave a Reply

Your email address will not be published. Required fields are marked *