Browsed by
Category: ತಿಂಗಳು ಪತ್ರಿಕೆ ಲೇಖನಗಳು

ವಿಶ್ವಮಾನವ ಜೋಸೆಫ್ ಕ್ಯಾಂಪ್ ಬೆಲ್

ವಿಶ್ವಮಾನವ ಜೋಸೆಫ್ ಕ್ಯಾಂಪ್ ಬೆಲ್

Tingalu – September 2009

9ಎ.ಕೆ.ರಾಮಾನುಜನ್ ಕನ್ನಡದಲ್ಲಿ ಬರೆದದ್ದು ಒಂದೇ ಒಂದು ಕಥೆ. ‘ಅಣ್ಣಯ್ಯನ ಮಾನವ ಶಾಸ್ತ್ರ’. ಮೈಸೂರಿನ ಅಣ್ಣಯ್ಯ ಹಿಂದುಧರ್ಮ ಮತ್ತು ಕ್ರಿಯಾವಿಧಿಗಳನ್ನು, ಅಷ್ಟೇ ಎಕೆ, ತನ್ನ ಬಗ್ಗೆಯೇ ತಾನು ತಿಳಿದದ್ದು ಅಮೆರಿಕಾದ ವಿಶ್ವವಿದ್ಯಾನಿಲಯವೊಂದರ ಲೈಬ್ರರಿಯಲ್ಲಿ ಫೆರ್ಗ್ಯುಸನ್ ಎಂಬ ಮಾನವಶಾಸ್ತ್ರ ರಚಿಸಿದ ಪುಸ್ತಕದ ಮೂಲಕ.  ಆ ಫೆರ್ಗುಸನ್ ನ ವಿಸ್ತೃತ ಆವ್ರುತ್ತಿಯೆಂದರೆ ಇದೇ ಅಮೇರಿಕಾದ ಜೋಸೆಫ್ ಕ್ಯಾಂಪ್ಬೆಲ್ ಎಲ್ಲರ ಪ್ರೀತಿಯ ಜೋ. ಈತನೊಬ್ಬ ಪುರಾಣ ಶಾಸ್ತ್ರಜ್ಞ.

ಜೋ ಪ್ರಕಾರ ಪಶ್ಚಿಮವು ಪೂರ್ವವನ್ನು ಸಂಧಿಸುವುದು ಐನ್ ಸ್ಟೀನ್ ನ ಭೌತಶಾಸ್ತ್ರ ನತ್ತು ಭಾರತದ ದರ್ಶನಶಾಸ್ತ್ರದಲ್ಲಿ ಇಪ್ಪತ್ತನೆ ಶತಮಾನದಲ್ಲಿ ಐನ್ ಸ್ಟೀನ್ ನು “ಹೊಸ ಭೌತಶಾಸ್ತ್ರದಲ್ಲಿ ಕ್ಷೇತ್ರ(field) ಮತ್ತು ಭೌತಶಾಸ್ತ್ರ (matter) ಎರಡಕ್ಕೂ ಇಲ್ಲಿ ಎಡೆ ಎಲ್ಲ. ಇಲ್ಲಿ ಕ್ಷೇತ್ರ ಮಾತ್ರ ಸತ್ಯ, ಕ್ಷೇತ್ರದಲ್ಲಿ ಚೈತನ್ಯ ಯಾವಾಗಲೂ ಸಂಚರಿಸುತ್ತದೆ” ಎಂದು ಹೇಳಿದ. ಇದನ್ನೇ ಜೋ ಸಮೀಕರಿಸಿ “ತತ್ತ್ವಮ್ಮಸಿ” ಎಂಬ ಭಾರತೀಯ ಪರಿಕಲ್ಪನೆಗೆ ಹೋಲಿಸಿದ. ಇಲ್ಲಿ ಕೆಲಸ ಮಾಡುವುದು ‘ನಾನೇ ಅದು’, ಅಂದರೆ ಚೈತನ್ಯ. ಮಾನವ ಪ್ರಪಂಚವನ್ನು ಗ್ರಹಿಸುವುದು ದ್ವೈರುಧ್ಯದಿಂದ. ಈ ದ್ವೈರುಧ್ಯವನ್ನು ಮೀರುವುದೇ ಮನುಷ್ಯ ಪ್ರಕೃತಿಯೊಡನೆ ಒಂದಾಗುವ ಕ್ರಿಯೆ. ಈ ತುರೀಯ ಮಟ್ಟವನ್ನು ಮುಟ್ಟುವುದರ ಮೂಲಕ ಅಲ್ಲಿ  ಪೂರ್ಣತ್ವವಿರುತ್ತದೆ. ನಾನು ಬೇರೆ\, ಪ್ರಪಂಚ ಬೇರೆ ಎಂದು ಅಂದುಕೊಂಡ ತಕ್ಷಣ ಪೂರ್ಣತೆಯನ್ನು ಧಿಕ್ಕರಿಸಿದಂತಾಗುತ್ತದೆ. ಇದರ ಮೂಲಕ  ನಮ್ಮನ್ನು ನಾವೇ ಕಬ್ಬಿಣದ ಗೋಡೆ ನಿರ್ಮಿಸಿಕೊಂಡು ಬಂಧಿತರಾಗುತ್ತೇವೆ. ಈ ದ್ವೈರುಧ್ಯಗಳನ್ನು ಕಳಚಿಗೊಂದರೆ ಮಾತ್ರ ಕ್ಷ್ತೆತ್ರವೆಲ್ಲವೂ ಚೈತನ್ಯವಾಗಿ ಪರಿವರ್ತಿತವಾಗುತ್ತದೆ ಎಂಬುದನ್ನು ಜೋ ತನ್ನ ಸೃಷ್ಟಿಪುರಾಣ ಶಾಸ್ತ್ರದ ಅಧ್ಯಯನದಿಂದ ತೋರಿಸಿಕೊಟ್ಟ.

ಜೋ ಹುಟ್ಟಿದ್ದು ಮಾರ್ಚ್ ೨೬, ೧೯೦೪ ರಂದು, ನ್ಯುಯಾರ್ಕ್ ನಲ್ಲಿ ; ಒಬ್ಬ ವ್ಯಾಪಾರಿಯ ಮಗನಾಗಿ, ಇವನ ತಾತ ಐರ್ಲೆಂಡಿ ನಿಂದ ಅಮೇರಿಕಾಕ್ಕೆ ಬಂದು ರೈತನಾಗಿದ್ದ. ಅಲ್ಲಿ ಮೂರು ವರ್ಷಗಳ ಮಹಾ ಬರಗಾಲ ಬಂದಾಗ ಈತ ವಲಸೆ ಬಂದಿದ್ದ. ಜೋ ತನ್ನ ಒಂಬತ್ತನೇ ವಯಸ್ಸಿನಲ್ಲಿ ನ್ಯೂಯಾರ್ಕಿನ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿಗೆ ಭೇಟಿಕೊಟ್ಟಿದ್ದ. ಅಲ್ಲಿ ಅಮೇರಿಕನ್ ಇಂಡಿಯನ್ ಬುಡಕಟ್ಟು ಜನಾಂಗದ ಪ್ರಾಣಿ ಸಂಕೇತವಾಗಿ ನೆಟ್ಟಿದ್ದ  ಸಂಕೇತವಾದ ಕಂಬವನ್ನು, ಮುಖವಾಡಗಳನ್ನೂ ನೋಡಿ ಆಶ್ಚರ್ಯ ಚಕಿತನಾಗಿದ್ದ. ಬಾಳಿನಲ್ಲಿ ಇವುಗಳ ಅರ್ಥವೇನು?  ಎಂಬ ಪ್ರಶ್ನೆ ಇವನನ್ನು ಬದುಕಿನುದಕ್ಕೂ ಕಾಡತೊಡಗಿತು. ಐದು ಸಂಪುಟಗಳಲ್ಲಿದ್ದ ಆ ಬುಡಕಟ್ಟು ಜನಾಂಗದ ಪುರಾಣ , ಚಾರಿತ್ರಿಕ-ಪುರಾಣ (legends)ಗಳನ್ನು ತನ್ನ ಹದಿಮೂರನೇ ವಯಸ್ಸಿಗಾಗಲೇ ಓದಿ ಮುಗಿಸಿದ್ದ.

ಕ್ಯಾಂಬೆಲ್(೧೯೦೪ – ೧೯೮೭) ತನ್ನ ಶಾಲಾದಿನಗಳನ್ನು ಮುಗಿಸಿ ೧೯೨೪ ರಲ್ಲಿ ತನ್ನ ಕಾಲೇಜಿನ ರಜಾದಿನಗಳಲ್ಲಿ ಹಡಗಿನಲ್ಲಿ ಯೂರೋಪಿಗೆ ಪ್ರಯಾಣ ಬೆಳೆಸುತ್ತಿದ್ದ. ಅಲ್ಲಿ ಭಾರತೀಯ ಯುವ ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿಯ ಪರಿಚಯವಾಯಿತು. ಪರಿಚಯ ಸ್ನೇಹವಾಗಿ ಹಿಂದೂ ಧರ್ಮದ ಬಗ್ಗೆ ಪರಿಚಯವಾಯಿತು. ಜಿಡ್ಡು ಆಲೋಚನೆಗಳು ಬಗ್ಗೆ ಜೋ ಆಕರ್ಷಿತನಾದ.

ನಂತರ ಕಾಲೇಜಿನಲ್ಲಿ ಜೀವಶಾಸ್ತ್ರ, ಗಣಿತ ತೆಗೆದುಕೊಂಡು ಓದುತ್ತಿದ್ದ ಜೋಗೆ ಆ ವಿಷಯಗಳ ಬಗ್ಗೆ ಆಸಕ್ತಿ ಕಡಿಮೆಯಾಯಿತು. ಅದಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿ ಇಂಗ್ಲೀಷ್ ಸಾಹಿತ್ಯದಲ್ಲಿ ಬಿ.ಎ ಮಾಡಿ ಮಧ್ಯಕಾಲೀನ ಸಾಹಿತ್ಯದಲ್ಲಿ ಎಂ.ಎ ಮಾಡಿ ಮುಗಿಸಿದ . ವಿಶ್ವವಿದ್ಯಾಲಯಕ್ಕೆ ಮೊದಲಿಗನಾಗಿ.

೧೯೨೭ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ವಿಧ್ಯಾರ್ಥಿವೇತನದ ಮೇಲೆ ಯುರೋಪಿಗೆ ಹೋಗಿ ಫ್ರೆಂಚ್ ಮತ್ತು ಸಂಸ್ಕೃತವನ್ನು ಅಧ್ಯಯನ ಮಾಡಿದ ನಂತರ ಜರ್ಮನಿಗೆ ಹೋಗಿ ಜರ್ಮನ್ ಭಾಷೆ ಕಲಿಯುವುದರ ಜೊತೆಗೆ ಸಂಸ್ಕೃತದ ಮೇಲೆ ಹೆಚ್ಚಿನ ಹಿಡಿತ ಸಾಧಿಸಿದ. ಇಲ್ಲಿ ಮನಃಶಾಸ್ತ್ರಜ್ಞ ಯುಂಗನ ಪರಿಚಯವಾಯಿತು. ಯುಂಗನ ಪುರಾಣದ ಬಗೆಗಿನ ಅಧ್ಯಯನ ಇವನ ಗಮನ ಸೆಳೆಯಿತು. ಆತನ “ಸಾಂಘಿಕ ಸುಪ್ತ ಪ್ರಜ್ಞೆ” ಪರಿಕಲ್ಪನೆಯನ್ನು ಗಹನವಾಗಿ ಅದ್ಯಯನ ಮಾಡಿದ. ಆತನ “ಮಾತ್ರುಕಾಮಾದರಿ” (archetypes) ಯನ್ನು ಪುರಾಣಕ್ಕೆ ಅನ್ವ್ಯಯಿಸುವ ಹೊಳವು ಸಿಕ್ಕಿತು. ಅಲ್ಲದೆ ಯುಂಗ್ ಪುರಾಣ ಮತ್ತು ಮನಸ್ಸಿನ ನಡುವೆ ಇರುವ ಸಂಬಂಧವನ್ನು ಚೆನ್ನಾಗಿ ಸ್ತಾಪಿಸಿದ್ದ. ಇಷ್ಟು ಹೊತ್ತಿಗಾಗಲೇ ಆತನು ಭಾರತೀಯ ಪುರಾಣ, ಬೌದ್ದಧರ್ಮ , ಬುಡಕಟ್ಟು ಜನಾಂಗಗಳು, ಪುರಾಣಗಳ ಅಧ್ಯಯನವನ್ನು ಪ್ರಾರಂಭಿಸಿದ್ದ.

೧೯೨೯ರಲ್ಲಿ ಯುರೋಪಿನಿಂದ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಬಂದು ಸಂಸ್ಕೃತ ಸಾಹಿತ್ಯ ಮತ್ತು ಆಧುನಿಕ ಕಲೆಯ ಮೇಲೆ ತನ್ನ ಮಹಾ ಪ್ರಬಂಧ ಬರೆಯಲು ತಯಾರಿ ನಡೆಸಿದ. ಆದರೆ ಆತನ ಗೈಡ್ ಆ ವಿಷಯವನ್ನು ಅನುಮೋದಿಸಲಿಲ್ಲ . ಇದರಿಂದ ನಿರಾಸೆಗೊಂಡ ಜೋ ತನ್ನ ಜೀವಮಾನದಲ್ಲೇ ಡಾಕ್ಟೊರೇಟ ಪದವಿ ಮಾಡುವುದಿಲ್ಲವೆಂದು ನಿರ್ಧರಿಸಿದ,

ಇದಾದ ಕೇವಲ ಎರಡು ವಾರಗಳಲ್ಲಿ ಅಮೇರಿಕಾದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು. ಯಾವ ಕೆಲಸವೂ ಇಲ್ಲದ ಜೋ ತನ್ನ ಕೊಠಡಿಗೆ ಬಂಧಿತನಾದ. ಆತ ತನಗೆ ಬೇಕಾದ ಮಾನವಶಾಸ್ತ್ರ, ಮನಃಶಾಸ್ತ್ರ, ಪುರಾತತ್ವಶಾಸ್ತ್ರ ಮತ್ತು ಪುರಾನಶಾಸ್ತ್ರಗಳ ಬಗ್ಗೆ ಓದತೊಡಗಿದ.

10ಸರ್ ಜೇಮ್ಸ್ ಫ್ರೇಜೆರ್ ೧೯೮೦ರಲ್ಲಿ ಬರೆದ ಮಾನವಶಾಸ್ತ್ರದ ಪುಸ್ತಕ ಇವನನ್ನು ಆಕರ್ಷಿಸಿತು. ಆದರೆ ಆತನ ಚಿಂತನೆ ಜೋಗೆ ಅಷ್ಟಾಗಿ ಹಿಡಿಸಲಿಲ್ಲ . ಆತ ತನ್ನ ‘ಗೋಲ್ಡನ್ ಬೊ’ ಎಂಬ ಪ್ರಸಿದ್ದ ಮಾನವಶಾಸ್ತ್ರದ ಪುಸ್ತಕದಲ್ಲಿ ಈ ರೀತಿ ಬರೆದಿದ್ದಾನೆ . “ಮೈಥಾಲಜಿ (ಪುರಾಣಶಾಸ್ತ್ರ) ಬರುವ ಮೂಢ ನಂಬಿಕೆ ಕೊನೆಗೆ ಆಧುನಿಕ ವಿಜ್ಞಾನದಿಂದ ಅಳಿಸಿ ಹೋಗುತ್ತದೆ. ಮಿಥ್ ನ ನೆಲೆ ಕಣ್ಕಟ್ಟು(magic) ಮನುಷ್ಯ ತರ್ಕಬದ್ದವಾದ ಬುದ್ದಿಯನ್ನು ಬೆಳೆಸಿಕೊಳ್ಳುವುದರ ಮೂಲಕ ಈ ಮಿಥ್ ಗಳು ಅರ್ಥಹೀನವಾಗುತ್ತವೆ. ಯಾವುದೇ ಸಂಪ್ರದಾಯ ಅಥವಾ ನಂಬಿಕೆಯನ್ನು ತರ್ಕಹೀನ ಎಂದು ತೋರಿಸುವುದರ ಮೂಲಕ ಅದು ಕಣ್ಮರೆಯಾಗುತ್ತದೆ. ಏಕೆಂದರೆ ಎಲ್ಲಾ ಕ್ರಿಯಾವಿಧಿಗಳೂ ಮನಸ್ಸಿಗೆ ಸಂಬಂಧಿಸಿದ್ದು ಎಂದು ನಂಬುತ್ತೇವೆ. ಅದ್ದರಿಂದ ಅದು ನಿಜವೆಂದು ತಿಳಿಯುತ್ತೇವೆ. ವೈರಿಯ ಪ್ರತಿಮೆಯನ್ನು ಮಾಡಿ ಅದನ್ನು ಕೊಂಡರೆ ವೈರಿ ಸಾಯುತ್ತಾನೆ ಎಂದು ತಿಳಿಯುತ್ತೇವೆ ಇದು ಸುಳ್ಳು, ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಮೂಢನಂಬಿಕೆ ಮತ್ತು ಧರ್ಮ ಇಲ್ಲವಾಗುತ್ತದೆ. ಮನುಷ್ಯನ ಅಭಿವೃಧಿ ಆಗ ಸಾಧ್ಯವಾಗುತ್ತದೆ”.

ಈ ಹೇಳಿಕೆ “ಜೋ” ನ ನಂಬುಗೆಯನ್ನು ಅಲ್ಲಾಡಿಸಿತು. ಆದರೆ ಅದಕ್ಕೆ ಅವನಿಗೆ ಉತ್ತರ ಸಿಕ್ಕಿದ್ದು ಇಡೀ ಸಮಯದಲ್ಲಿ ಸಿಗ್ಮಂಡ್ ಫ್ರಾಯ್ಡ್ ಮತ್ತು ಕಾರ್ಲಯುಂಗ್ (೧೮೮೫) ಹಿಸ್ಟಿರಿಯಾ , ಆಫೇಸಿಯ , ಕನಸು-ಮಿಥ್ ಇವುಗಳ ಬಗ್ಗೆ ನಡೆಸಿದ ಅಧ್ಯಯನದಲ್ಲಿ , ಯುಂಗ್ ‘ಮಿಥ್ ಎಂದರೆ ಅದೊಂದು ಸಾಂಘಿಕ ಕನಸು , ಕನಸೆಂದರೆ ಅದೊಂದು ವೈಯಕ್ತಿಕ ಮಿಥ್” ಎಂದು ತಮ್ಮ ವಾದವನ್ನು ಮುಂದಿಟ್ಟು ವಿಶ್ಲೇಷಿಸಿದ್ದರು. ಪ್ರಮುಖವಾಗಿ ಯುಂಗನು ಮೈಥಾಲಜಿ ಮತ್ತು ಧರ್ಮ ಇವುಗಳನ್ನು ಧನಾತ್ಮಕವಾಗಿ ನೋಡಿದ್ದನು . ನಮ್ಮ ಇಂದ್ರಿಯಗಳು ತಮ್ಮದೇ ಆದ ಉದ್ದೇಶಪೂರ್ವಕ ಕಾರ್ಯಗಳನ್ನು ಹೊಂದಿವೆ. ಕೆಲವನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸಬಹುದು . ಮತ್ತೆ ಕೆಲವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ತಮ್ಮ ದಿನನಿತ್ಯದ ಬೇಡಿಕೆಗಳಿಗೆ ಮೇಲ್ಮೈ ಪ್ರಜ್ಞೆ ಸ್ಪಂದಿಸುತ್ತಿರುತ್ತದೆ. ಆದರೆ ಆಂತರಿಕ ಬೇಡಿಕೆಗಳಿಗೆ  ಸ್ಪಂದಿಸಲು ಸಾಧ್ಯವಾಗುವುದಿಲ್ಲ . ಯುಂಗನ ಪ್ರಕಾರ ನಾವು ನಮ್ಮ ಮಿಥ್ಗಳನ್ನು ಸರಿಯಾಗಿ ‘ಓದಿಕೊಂಡಾಗ’ ಮಾತ್ರ ಅವು ನಮ್ಮ ಸುಪ್ತ ಪ್ರಜೆಯನ್ನು ಮರಳಿ ಮೇಲ್ಮೈಗೆ ತರಬಲ್ಲವು. ಆದರೆ ಸಾಮಾನ್ಯ ಭಾಷೆಯಂತಿರುವುದಿಲ್ಲ . ಅದು ಸಂಕೇತ ಮತ್ತು ರೂಪಕಗಳಿಂದ ಕೂಡಿರುತ್ತದೆ. ಮಿಥ್ ನಮ್ಮ ಮನಸ್ಸಿನ ಶಕ್ತಿಯನ್ನು ಉದ್ಬ್ಹೊದಿಸಿ , ಗುರುತಿಸಿ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವಂತೆ ಮಾಡುತ್ತದೆ. ಈ ಪ್ರಜ್ಞೆ ಆದಿಮಾನವನಿಂದ ಇಂದಿನ ಆಧುನಿಕ ಮನುಷ್ಯನವರೆವಿಗೂ ಸಹಸ್ರಾರು ವರ್ಷಗಳಿಂದ ಕೆಲಸ ಮಾಡುತ್ತಿವೆ . ಈ ಪ್ರಜ್ಞೆಯನ್ನು ಯಾವ ವಿಜ್ಞಾನವೂ ಸ್ಥಾನಪಲ್ಲಟಗೊಳಿಸಲಾರದು . ಮಿಥ್ ಗಳ ಅಧ್ಯಯನದ ಮೂಲಕ ನಮ್ಮ ಒಳಗಿನ ತನ್ನತನವನ್ನು ಕಂಡುಕೊಳ್ಳಬಹುದು. “ಜೋ ಇದನ್ನು ಕಂಡುಕೊಂಡು ಪ್ರಪಂಚದ ನಾನಾ ಕಡೆಯಾ ಮಿಥ್ ಗಳನ್ನೂ ಸಂಗ್ರಹಿಸಿ ಅಭ್ಯಾಸಮಾಡತೊಡಗಿದ.

ಇದಕ್ಕೆ ಪುರಾತತ್ವಶಾಸ್ತ್ರದ ಹೊಸ ಉತ್ಖನನಗಳ ಬಗೆಗೆ ಅಧ್ಯಯನ ನಡೆಸಿದ. ತನ್ನ ಮಿಥ್ ನ ಅಧ್ಯಯನಕ್ಕೆ ವಿವಿಧ ಶಾಸ್ತ್ರಗಳ ಪೂರ್ಣದೃಷ್ಟಿಯನ್ನು ತೊಡಿಸಿದ. ಈ ಪುಸ್ತಕಗಳನ್ನೆಲ್ಲ ಪಡೆಯಲು ಜೋನಲ್ಲಿ ಹಣವಿರಲಿಲ್ಲ. ಆದರೆ ಆ ಪುಸ್ತಕಗಳನ್ನು ಕೇಳಿದಾಗ ಪುಸ್ತಕ ಅಂಗಡಿಯನ್ನು ತಪ್ಪದೆ ಕಳುಹಿಸುತ್ತಿದ್ದ. ಹಣದ ಬಗ್ಗೆ ಚಕಾರವೆತ್ತದೆ. ೧೯೩೪ ರಲ್ಲಿ ಈತನ ಅಧ್ಯಾಪಕ ಸಾರಾಲಾರೆನ್ಸ್ ಕಾಲೇಜಿನಲ್ಲಿ ಇವನಿಗೆ ಒಂದು ಕಾಲೇಜಿನಲ್ಲಿ ಉಪನ್ಯಾಸಕನ ಹುದ್ದೆಯನ್ನು ಕೊಡಿಸಿದ. ಆಗ ಆ ಪುಸ್ತಕಗಳ ಸಾಲವನ್ನು ತೀರಿಸಿದ.

ಜೋ ಒಬ್ಬ ಉತ್ತಮ ಅಧ್ಯಾಪಕನಾಗುವುದರ ಜೊತೆಗೆ ತನ್ನ ಅಧ್ಯಯನವನ್ನು ಮುಂದುವರಿಸಿದ . ಸ್ವಾಮಿ ನಿಖಿಲಾನಂದರ ಜೊತೆ ಸೇರಿ ಒಂದು ಸಾವಿರ ಪುಟಗಳ ;’ದಿ ಗಾಸ್ಪೆಲ್ ಆಫ್ ರಾಮಕೃಷ್ಣ’ ಎಂಬ ಪುಸ್ತಕವನ್ನು ಇಂಗ್ಲೀಷ್ ಗೆ ಭಾಷಾಂತರಿಸಿದ. ಅಲ್ಲದೆ ತನ್ನ ಗುರು ಎಂದು ಪರಿಗಣಿಸಿದ್ದ ಹೆನ್ರಿಕ್ ಚಿಮ್ಮರ್ ನ ‘ಫಿಲಾಸಫೀಸ್ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಸಂಪಾದಿಸಿದ. ಅಲ್ಲದೆ ಅವನದೇ ‘ದಿ ಆರ್ಟ್ ಆಫ್ ಇಂಡಿಯನ್ ಏಷ್ಯಾ ‘ ಎಂಬ ಎರಡು ಸಂಪುಟಗಳನ್ನು ಸಂಪಾದಿಸಿದ. ‘tolingan ಫೌಂಡೇಶನ್ ‘ ಪ್ರಕಾಶನಕ್ಕೆ ಯುಂಗನ ಪುಸ್ತಕಗಳನ್ನು ಸಂಪಾದಿಸಿದ.

ಅನಂತರ ನಾಲ್ಕು ವರ್ಷಗಳ ಕಾಲ ತನ ಮೊದಲ ಕೃತಿ “ದಿ ಹೀರೋ ವಿಥ್ ಥೌಸಂಡ್ ಫೇಸಸ್” ಅನ್ನು ರಚಿಸಿದ. ೧೯೪೮ ರಲ್ಲಿ ರಚಿಸಿದ ಈ ಕೃತಿಯಲ್ಲಿ ಇಡೀ ಪ್ರಪಂಚದ ಮೂಲೆ ಮೂಲೆಗಳಿಂದ ಸಂಗ್ರಹಿಸಿದ ಪುರಾಣಗಳನ್ನು ಒಟ್ಟಿಗೆ ತಂದು ಅದರಲ್ಲಿರುವ ಸಂಕೇತಗಳು ಮತ್ತು ರೂಪಕಗಳು ತಮ್ಮಷ್ಟಕ್ಕೆ ತಾವೇ ಬಿಚ್ಚಿಕೊಳ್ಳುವಂತೆ ವಿಶ್ಲೇಷಿಸಿರುವ ಕೃತಿ. ಇದು ಸಹಸ್ರಾರು ವರ್ಷಗಳಿಂದ ಮನುಷ್ಯ ಕಂಡುಕೊಂಡ ಮೂಲ ಸತ್ಯಗಳು ಆಶ್ಚರ್ಯಕರ ರೀತಿಯಲ್ಲಿ ಒಂದೇ ತರಹ ಇರುವುದು. ಇದರಿಂದ ಪೌರಾತ್ಯ –ಪಾಶ್ಚಾತ್ಯ , ಹಳೆ-ಹೊಸ, ಸಾಂಪ್ರದಾಯಿಕ – ಆಧುನಿಕ ಎಂಬ ದ್ವಿವಾದವ್ರುತ್ತಿಯಿಂದ ಬಿಡುಗಡೆಗೊಳಿಸಿದಂತಾಗಿದೆ. ಈ ಮೂಲ ಮಾತೃಕೆ (archy) ಗಮನಿಸಿದಾಗ ಇಲ್ಲಿ ಜಾತಿ- ವರ್ಗ-ವರ್ಣ ಇತ್ಯಾದಿಗಳೆಲ್ಲ ಮಾಯವಾಗಿ ಮಾನವತ್ವ ಮಾತ್ರ ಮೈದುಂಬಿ ಬಂದಿರುವುದು ಗೊತ್ತಾಗುತ್ತದೆ. ಈ ನಾಯಕನ ಮಿಥ್ ನಲ್ಲಿ ನಾಯಕನು ಸಾಮಾನ್ಯ ಪ್ರಪಂಚದಿಂದ ಅಸಾಮಾನ್ಯ, ಆಶ್ಚರ್ಯಕರ , ನಿಗೂಢ ಪ್ರಪಂಚವನ್ನು ಪ್ರವೇಶಿಸುತ್ತಾನೆ . ಅಲ್ಲಿ ಅಸಾಮಾನ್ಯ ಬಲಗಳನ್ನು ಎದುರಿಸಿ ಗೆಲುವನ್ನು ಪಡೆಯುತ್ತಾನೆ. ಇಂಥಹ ನಿಗೂಢ ಪ್ರಪಂಚದಲ್ಲಿ ಸಾಹಸಮಾಡಿ ತನ್ನ ಸಮಾಜದ ಜನರಿಗೆ ಬೇಕಾದ ವರವನ್ನು ಕೊಡುವ ಶಕ್ತಿಯನ್ನು ಪಡೆದುಕೊಂಡು ಬರುತ್ತಾನೆ.

ಈ ಪುಸ್ತಕ ದೇಶ-ವಿದೇಶದ ಕಲಾಕಾರರು, ಸಂಗೀತಗಾರರು, ಚಲನಚಿತ್ರಕಾರರ ಮೇಲೆ ಪ್ರಭಾವ ಬೀರಿದೆ. ೧೯೪೮ರಲ್ಲಿ ಪ್ರಕಟವಾದ ಈ ಪುಸ್ತಕ ಆ ವರ್ಷದಲ್ಲಿ ಅಮೇರಿಕಾದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಕೃತಿ ಎಂಬ ಮನ್ನಣೆಗೆ ಪಾತ್ರವಾಯಿತು. ಅಲ್ಲದೆ ೧೯೭೭ರಲ್ಲಿ ಜಾರ್ಜ್ ಲೂಕಾಸ್ ಎಂಬ ಚಲನಚಿತ್ರ ನಿರ್ದೇಶಕ ‘ಸ್ಟಾರ್ ವಾರ್ಸ್ ‘ ಎಂಬ ಚಿತ್ರ ತ್ರಿವಳಿಯನ್ನು ತೆಗೆದು ಇಡೀ ಜಗತ್ತನ್ನೇ ದಂಗು ಬಡಿಸಿದ. ಈ ಚಿತ್ರಕ್ಕೆ ಪ್ರೇರಕನಾದ ಜೋ ನನ್ನು ಆತ ಸ್ಮರಿಸಿರುವುದೇ ಅಲ್ಲದೆ ಅವನಿಗೆ ಅದನ್ನು ಅರ್ಪಿಸಿ ಮೊದಲ ಪ್ರದರ್ಶನಕ್ಕೆ ಕ್ಯಾಲಿಫೋರ್ನಿಯಾಗೆ ಜೋನನ್ನು ಆಹ್ವಾನಿಸಿ ಗೌರವಿಸುತ್ತಾನೆ . ಪುರಾತನ ಪುರಾಣದ ವಸ್ತು ಮತ್ತು ಸಂಕೇತಗಳನ್ನು ಆಟ ಸಮಕಾಲೀನ ಪ್ರತಿಮೆಗಳಲ್ಲಿ ತೋರಿಸಿದ್ದ ಜೋ ಈ ಸಿನೆಮಾ ನೋಡಿ ಪುಳಕಗೊಂಡು ಅಭಿಜಾತ ಪೌರಾಣಿಕ ಕಥೆಯನ್ನು ಅತ್ಯಂತ ಶಕ್ತಿಯುತವಾಗಿ ಹೆಣೆದಿದ್ದಾನೆ. ಇದನ್ನೇ ಗೊಯತೆ ತನ್ನ ಫೌಸ್ಟ್ ಕೃತಿಯಲ್ಲಿ ಹೇಳಿದ್ದು.

ಪುರಾಣಗಳು ಮನುಷ್ಯ ಜೀವನದ ಅಧ್ಯಾತ್ಮಕ ಶಕ್ತಿಯನ್ನೂ ಪಡೆಯಲು ಇರುವ ಕೀಲಿಕೈ . ಪುರಾಣಗಳಿಂದ ಅರ್ಥ ಕಾಣುವುದು ಜೀವನದ ಗುರಿಯಲ್ಲ. ಅರ್ಥವನ್ನು ಅನುಭವಿಸುವುದು. ವಿಶ್ವಕ್ಕೆ ಏನು ಅರ್ಥವಿದೆ?ಅದರ ಪಾಡಿಗೆ ಅದು ಇದೆ. ನಾವು ಅರ್ಥವನ್ನು ಹಚ್ಚುತ್ತೇವೆ. ಪುರಾಣಗಳನ್ನು ಓದಬೇಕು. ಅವು ಹೇಗೆ ಮನಸ್ಸಿನ ಒಳಗೆ ಹೋಗುವುದು ಹೇಗೆ ಎಂದು ಹೇಳಿಕೊಡುತ್ತದೆ. ಅದು ಅನುಭವ ಎಂದರೇನು ಎಂದು ಹೇಳಿಕೊಡುತ್ತದೆ.

ಪುರಾಣಗಳು ಸಾಹಿತ್ಯ ಮತ್ತು ಕಲೆಗಳ ಹಿಂದೆ ಏನಿದೆ ಎಂದು ಹೇಳಿಕೊಡುತ್ತವೆ. ಪುರಾಣಗಳ ಜೀವನದ ವಿವಿದ ಘಟ್ಟಗಳನ್ನು ತಿಳಿಸಿಕೊಡುತ್ತದೆ. ಬಾಲ್ಯದಿಂದ ಯೌವನಕ್ಕೆ ಕಾಲಿಡುವಾಗಿನ ಆಚರಣೆಗಳು, ಮದುವೆಯೆಂಬ ಆಚರಣೆ- ಇದು ಜೀವನದ ಜವಾಬ್ದಾರಿಯನ್ನು ಹೊರುವ ಘಟ್ಟ. ಹುಟ್ಟು , ಬದುಕು – ಸಾವು ಇವುಗಳನ್ನು ಆಚರಿಸುವಂತೆ ಮಾಡುವುದೇ ಪುರಾಣ.

ಈ ಹೊಸಕಾಲದ ಮಾಧ್ಯಮಗಳ ಮೂಲಕ ಪುರಾಣಗಳು ಸೃಷ್ಟಿಯಾಗುತ್ತಿವೆಯೇ ಹೊಸಕಾಲದ ಯಂತ್ರಗಳನ್ನು ಪುರಾಣಗಳು ಒಳಗೊಳ್ಳುತ್ತಿವೆಯೇ ಎಂದು ಜೋನನ್ನು ಕೇಳಿದರೆ ಹೌದು ಎನ್ನುತ್ತಾನೆ. ಬಸ್ಸು, ಕಾರು ಇತ್ಯಾದಿಗಳು ಆಗಲೇ ಪುರಾಣದೊಳಗೆ ಬಂದಿವೆ, ಕನಸಿನೊಳಗೆ ಇಳಿದಿವೆ. ವಿಮಾನಗಳಂತೂ ಸರಿಯೋ ಸರಿ – ಈ ಭೂಮಿಯಿಂದ ಬಿಡುಗಡೆ ಪಡೆಯುವ ಹಕ್ಕಿಯನ್ನು ಸಂಕೇತಿಸುವುದೇ ವಿಮಾನ – ‘ ಲೋಹದ ಹಕ್ಕಿ’. ಅಂತೆಯೇ ಆಯುಧಗಳು ಕೂಡ. ಬಾಣದ ಪಾತ್ರವನ್ನು ಈಗ ಪಿಸ್ತೂಲು ತೆಗೆದು ಕೊಳ್ಳುತ್ತದೆ. ಪ್ರತಿಯೊಂದು ಪುರಾಣವು ಶಕ್ತಿ , ಅಧಿಕಾರ ಇತ್ಯಾದಿಗಳ ವಿರುದ್ದ ಹೋರಾಡುತ್ತವೆ. ಅಂತೆಯೇ ಹೊಸ ಕಾಲ ಕಥೆಯೂ ನಡೆಯುವುದು.

ಹೊಸಕಾಲಕ್ಕೆ ಬೇಕಾಗಿರುವ ಹೊಸ ಪುರಾಣವೆಂದರ ಒಬ್ಬ ವ್ಯಕ್ತಿ ಒಂದು ಜನಾಂಗದವರೊಡನೆ ಗುರುತಿಸಿಕೊಳ್ಳುವುದಲ್ಲ. ಇಡೀ ಗ್ರಹದ ಜೊತೆ ಗುರುತಿಸಿಕೊಳ್ಳುವ ಪುರಾಣ ಬೇಕಾಗುತ್ತದೆ. ಹೀಗೆ ಮನುಷ್ಯ ಈಗ ‘ವಿಶ್ವಮಾನವ’ನಾಗಬೇಕಾಗಿದೆ.

ಪುರಾಣಗಳು ನಮ್ಮ ಎಚ್ಚರಗೊಳ್ಳುತ್ತಿರುವ ಪ್ರಜ್ಞೆಗೆ ವಿಶ್ವದ ನಿಗೂಢತೆಯೊಡನೆ ಸಂಪರ್ಕ ಸೃಷ್ಟಿಸುತ್ತದೆ. ವಿಶ್ವದ ಒಂದು ಚಿತ್ರವನ್ನು ಕೊಡುತ್ತದೆ. ಪ್ರಕೃತಿಯೊಡನೆ ಮನುಷ್ಯನ ಸಂಬಂಧವನ್ನೂ ತಿಳಿಸುತ್ತದೆ. ಅಂತೆಯೇ ಕೆಲವು ಸಾಮಾಜಿಕ ಮತ್ತು

ನೈತಿಕ ಕ್ರಮವನ್ನು ಪ್ರತಿಪಾದಿಸುತ್ತವೆ. ಹುಟ್ಟಿನಿಂದ ಸಾವಿನವರೆಗೂ ಹಾಡು ಹೋಗುವ ಘಟ್ಟಗಳನ್ನು ತಿಳಿಸುತ್ತವೆ. ಇದನ್ನು ತನ್ನ ಮತ್ತೊಂದು ಕೃತಿ ‘ Transformations of Myths Through Time‘ ಎಂಬ ಕೃತಿಯಲ್ಲಿಜೋ ತೋರಿಸಿಕೊಟ್ಟಿದ್ದಾನೆ.

ಈ ಬಹುಮುಖಿ ಸಂಸ್ಕೃತಿಯ ಪ್ರಪಂಚದಲ್ಲಿ ಸಾವಿರಾರು ದೈವಗಳಿವೆ. ಆದ್ದರಿಂದ ದೈವಗಳಿಗೆ ನಾನಾ ಮುಖವಾಡಗಳಿವೆ . ಈ ಮುಖವಾಡಗಳು ಅನೇಕ ನಿಗೂಢತೆಯನ್ನು ಮುಚ್ಚಿಕೊಳ್ಳುತ್ತವೆ. ಇನ್ನು ಅನೇಕವನ್ನು ಬಿಚ್ಚಿಡುತ್ತವೆ. ಇವೆಲ್ಲವೂ ವ್ಯಕ್ತಗೊಳ್ಳುವುದು ಈ ದೇವರ ಮುಖವಾಡಗಳಿಂದ. ಈ ತತ್ವವನ್ನು ಆಧಾರವಾಗಿಟ್ಟುಕೊಂಡು ನಾಲ್ಕು ಪ್ರಮುಖ ಕೃತಿಗಳನ್ನು ಜೋ ರಚಿಸಿದ್ದಾನೆ. ೧.ಆದಿಮಾನವ ಪುರಾಣ ೨.ಪೌರಾತ್ಯ ಪುರಾಣ ೩.ಪಾಶ್ಚಾತ್ಯ ಪುರಾಣ ೪.ಸಾಹಿತ್ಯದಲ್ಲಿ ಪುರಾಣ ಎಂಬ ಕೃತಿಗಳು.

೧೯೫೩ ರಲ್ಲಿ ಭಾರತಕ್ಕೆ ಪ್ರಧಾನಿ ನೆಹರೂರವರ ಅತಿಥಿಯಾಗಿ ಬಂದು ಹಿಂದುಧರ್ಮ ಮತ್ತು ಬೌಧ್ಧರ್ಮಗಳನ್ನು ಕಡು ಹಿಂದಿರುಗಿದ್ದ ಜೋಸೆಫ್ ಕ್ಯಾಂಬೆಲ್ ಇಡೀ ವಿಶ್ವದ ಮಿತ್ರನಾಗಿದ್ದಾನೆ . ತನ್ನ ಮಿಥ್ ಗಳ ಅಧ್ಯಯನದ ಮೂಲಕ.

ಮಾನವತಾವಾದಿ ಮಾನವ ಶಾಸ್ತ್ರಜ್ಞ – ಕ್ಲಾಡ್ ಲೆವಿ ಸ್ಟ್ರಾಸ್

ಮಾನವತಾವಾದಿ ಮಾನವ ಶಾಸ್ತ್ರಜ್ಞ – ಕ್ಲಾಡ್ ಲೆವಿ ಸ್ಟ್ರಾಸ್

Tingalu – June 2009

5೨೦ ನೇ ಶತಮಾನದ ಬುದ್ದಿಜೀವಿಗಳಲ್ಲಿ ಅತ್ಯಂತ ಪ್ರಮುಖನೆಂದು ಪರಿಗಣಿಸಲ್ಪಟ್ಟವನು ಕ್ಲಾಡ್ ಲೆವಿ ಸ್ಟ್ರಾಸ್. ಹೋದ ವರ್ಷ ತನ್ನ ನೂರನೇ ಜನ್ಮದಿನವನ್ನು ಆಚರಸಿಕೊಂಡ. ಇಡೀ ಜಗತ್ತಿನ ಚಿಂತಕರು ಇವನ ನೂರನೇ ಹುಟ್ಟುಹಬ್ಬವನ್ನು ಅತ್ಯಂತ ವಿಜ್ರುಂಭಣೆಯಿಂದ ಆಚರಿಸಿದರು. ಫ್ರಾನ್ಸ್ನಲ್ಲಿ ಇಡೀ ವರ್ಷವನ್ನು ಆತನ ಶತಮಾನೋತ್ಸವ ವರ್ಷವೆಂದು ಪರಿಗಣಿಸಿ ೧೯೮ ವಿದ್ವಾಂಸರಿಂದ ಅವನ ಜೀವನ ಮತ್ತು ಕೃತಿಗಳ ಮೇಲೆ ಲೇಖನಗಳನ್ನು ಬರೆಸಿದರು . ಕೇವಲ ಆರು ವಾರಗಳಲ್ಲಿ ಈ ಪುಸ್ತಕದ ಇಪ್ಪತ್ತು ಸಾವಿರ ಪ್ರತಿಗಳು ಮಾರಾಟವಾದವು. ಫ್ರಾನ್ಸಿನ ಪ್ರತಿಷ್ಠಿತ ಪ್ರಕಾಶನ ಇನ್ನು ಬದುಕಿರುವ ವಿದ್ವಾಂಸನೊಬ್ಬನ ಬಗ್ಗೆ ಪ್ರಕಟಿಸಿದ ಮೊದಲ ಕೃತಿಯಿದು. ಹೀಗೆ ಈತನು ಬದುಕಿರುವಾಗಲೇ ದಂತಕತೆಯಾಗಿದ್ದಾನೆ. ಬೌದ್ದಧರ್ಮದ ಮೇಲೆ ಅಪಾರ ನಂಬಿಕೆ ಇಟ್ಟಿರುವ ಈತ ಭಾರತದ ಎಲ್ಲೋರಾ ಮತ್ತು ಅಜಂತಾ ದೇವಾಲಯಗಳಿಗೆ ೧೯೫೦ರ ದಶಕದಲ್ಲಿ ಭೇಟಿ ನೀಡಿದ್ದನು . ಇವನು ಬೌದ್ದಧರ್ಮದ ಕಲೆಯ ಕುರಿತು ಲೇಖನವನ್ನು ಬರೆದಿದ್ದಾನೆ .
ಲೆವಿ ಸ್ಟ್ರಾಸ್ ಫ್ರಾನ್ಸ್ ದೇಶದ ಕಲಾಕಾರನ ಮಗನಾಗಿ ೨೮-೧೧-೧೯೦೮ ರಂದು ಜನಿಸಿದನು. ೧೯೩೫ರಿಂದ ೧೯೩೯ರ ತನಕ ಪ್ಯಾರಿಸ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಮತ್ತು ದರ್ಶನಶಾಸ್ತ್ರ್ಗಳ ಅಭ್ಯಾಸ ಮಾಡಿದನು. ಅವನಿಗೆ ಸಾಹಿತ್ಯದ ಮೇರು ಕೃತಿಗಳ ಓದು ಮತ್ತು ಶಾಸ್ತ್ರಿಯ ಸಂಗೀತದಲ್ಲಿ ಅಪಾರ ಆಸಕ್ತಿ . ಈತನ ಬರಹಗಳೆಲ್ಲ ಕಾವ್ಯಮಯ ವಿಜ್ಞಾನದಂತೆ ಓದಿಕೊಂಡು ಹೋಗುತ್ತವೆ. ಫ್ರಾನ್ಸ್ನಿನ ಸಾಹಿತ್ಯ ಅಕಾಡೆಮಿ ಈತನ ‘tristas tropics’ ಎಂಬ ಅಮೆಜಾನ್ ನ ಬುಡಕಟ್ಟು ಜನಾಂಗದ ಬಗ್ಗೆ ಬರೆದು ಪುಸ್ತಕವನ್ನು ‘ಸಾಹಿತ್ಯ ಕೃತಿ’ ಎಂಬ ಪರಿಗಣಿಸಿ ಬಹುಮಾನವನ್ನು ಕೊಡಲು ತೀರ್ಮಾನಿಸಿತು. ಕೊನಗೆ ಕೊಡಲಾಗದೆ ಸಂತಾಪ ವ್ಯಕ್ತಪಡಿಸಿತು. ನಮ್ಮ ದೇಶದಲ್ಲಿ, ಬಿ.ಜಿ.ಎಲ್.ಸ್ವಾಮಿಯವರು ಸಸ್ಯಶಾಸ್ತ್ರದ ಬಗ್ಗೆ ಬರದ ‘ಹಸಿರು ಹೊನ್ನು’ ಕೃತಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಗಳಿಸಿದ್ದು ಇಲ್ಲಿ ಗಮನಾರ್ಹ.
ಲೆವಿ ಸ್ಟ್ರಾಸ್ ಮಾನವಶಾಸ್ತ್ರದ ಅಧ್ಯಯನದಲ್ಲಿ ಅರಿವಿನ ಸ್ಪೋಟವನ್ನು ಉಂಟು ಮಾಡಿದವನು.ಇಡೀ ಪ್ರಪಂಚದಲ್ಲಿ ಬಿಳಿಯರು ಮಾತ್ರ ಶ್ರೇಷ್ಠಮಾನವರೆಂದೂ ಉಳಿದವರೆಲ್ಲಾ ಅವರಿಗಿಂತ ‘ಕಿಂಚಿದೂನ’ ಎಂದು ತಿಳಿದು, ಪ್ರಪಂಚದ ಎಲ್ಲಾ ಜನಾಂಗಗಳನ್ನು ಕೀಳಾಗಿ ಪರಿಭಾವಿಸುತ್ತಿದ್ದ ಕಾಲವೊಂದಿತ್ತು. ಬಿಳಿಯರು ಬರೆಯುತ್ತಿದ್ದ ಚರಿತ್ರೆ, ಜನಾಂಗೀಯ ಅಧ್ಯಯನ , ಸಾಹಿತ್ಯ, ಸಾಂಸ್ಕೃತಿಕ ಅಧ್ಯಯನ ಎಲ್ಲದರಲ್ಲೂ ಸ್ವತಃ ಅವರೇ ಮಾದರಿಯಾಗಿರುತ್ತಿದ್ದರು. ಉದಾಹರಣೆಗೆ ಮುಸುಕುಧಾರಿ ಫ್ಯಾಂಟಮ್ ನನ್ನೇ ತೆಗೆದುಕೊಳ್ಳಬಹುದು. ಅವನು ಎಲ್ಲರಿಗಿಂತಲೂ ಬಲಶಾಲಿಯೂ, ಬುದ್ದಿವಂತನೂ ಆಗಿರುತ್ತಾನೆ.ಅವನ ಜೊತೆ ಬರುವ ಪಾತ್ರಗಳು ಮಾತ್ರ ಕರಿಯರು, ಪಿಗ್ಮಿಗಳು ಆಗಿರುತ್ತಾರೆ . ಅವರು ತಮ್ಮ ಬಿಡುಗಡೆಗಾಗಿ ಫ್ಯಾಂಟಮ್ ನ ಸಹಾಯಕ್ಕೆ ಕಾದಿರುತಾರೆ.ಅವನೋ ಅಪದ್ಭಾಂದವನಂತೆ ಬಂದು ಅವರನ್ನು ರಕ್ಷಿಸುತಾನೆ . ನಿಜವಾಗಿ ಅವನ ಮುಸುಕನ್ನು ತೆರೆದು ನೋಡಿದರೆ ಅವನು ಬಿಳಿಯನಾಗಿರುತ್ತಾನೆ.ಅಷ್ಟೇ ಏಕೆ ವಸಾಹತುಶಾಹಿ ಸಾಹಿತ್ಯವು ಸಹ , ಇದೆ ವಸಾಹತುಕರಣಗೊಂಡವರ ಸಂಸ್ಕೃತಿಯನ್ನು ಬಿಂಬಿಸುವಾಗ ಅಪ್ರಜ್ಞಾಪೂರ್ವಕವಾಗಿ ತಳೆಯುತ್ತಿದ್ದ ನಿಲುವೆಂದರೆ ತಮ್ಮ ಉತ್ತಮಿಕೆಯ ಅಹಂ. ಉದಾಹರಣೆಗೆ, ‘ನಿಗರ್ ಆಫ್ ದಿ ನಾರಿಸ್ಸಿಸ್’, ‘ ಪ್ಯಾಸೇಜ್ ಟು ಇಂಡಿಯಾ’ ಮುಂತಾದ ಕೃತಿಗಳನ್ನೇ ನೋಡಬಹುದು. ಇದೆ ರೀತಿಯಲ್ಲಿ ಬಿಳಿಯರು ತಾವು ಮಾತ್ರ ಅಮೂರ್ತ ಪರಿಕಲ್ಪನೆಯಲ್ಲಿ ಯೋಚಿಸಬಲ್ಲೆವು, ಉಳಿದವರ ಜ್ಞಾನ ಅಷ್ಟು ತೀಕ್ಷ್ಣವಲ್ಲದ್ದರಿಂದ ಕೇವಲ ಮೂರ್ತ ರೀತಿಯಲ್ಲಿ ಮಾತ್ರ ಯೋಚಿಸಬಲ್ಲರು ಎಂದು ನಂಬಿದ್ದರು. ಲೆವಿ ಸ್ಟ್ರಾಸ್ ಈ ಯೋಚನೆಗಳನ್ನೆಲ್ಲಾ ತಲೆಕೆಳಗು ಮಾಡುವಂತೆ ಬುಡಕಟ್ಟು ಜನಾಂಗದ ಅಧ್ಯಯನವನ್ನು ನಡೆಸಿ ವಿಶ್ಲೇಷಣೆ ಮಾಡಿ ‘ಮಾನವರೆಲ್ಲರೂ ಒಂದೇ ರೀತಿ ಆಲೋಚಿಸಬಲ್ಲರು, ಎಲ್ಲರ ಮನಸ್ಸುಗಳೂ ಮೂರ್ತ ಮತ್ತು ಅಮೂರ್ತ ಯೋಚನೆಗಳಲ್ಲಿ ಒಂದೇ ರೀತಿಯಲ್ಲಿ ಕ್ರಿಯಾಶೀಲವಾಗಿರುತ್ತವೆ’ ಎಂದು ಸಾರಿದನು.
ಇದಕ್ಕಾಗಿ ಲೆವಿ ಸ್ಟ್ರಾಸ್ ೧೯೩೫ ರಿಂದ ೧೯೩೯ ರ ತನಕ ಬ್ರಜಿಲ್ ದೇಶಕ್ಕೆ ಮತ್ತೆ ಮತ್ತೆ ಹೋಗಿ, ಅಲ್ಲಿಯ ಬುಡಕಟ್ಟು ಜನರ ಜೊತೆಯೇ ಬದುಕಿ ಜನಾಂಗೀಯ ಅಧ್ಯಯನವನ್ನು ನಡೆಸಿದನು. ಈ ಅಧ್ಯಯನದ ಫಲವೇ ಅವನ ಮೊದಲ ಮೇರು ಕೃತಿಯಾದ ‘ tristas tropics. ಇದೆ ಕಾಲದಲ್ಲಿ ಎರಡನೇ ಪ್ರಪಂಚ ಯುದ್ದ ಮೊದಲಾಗಿ ಫ್ರಾನ್ಸ್ ದೇಶ ಇವನನ್ನು ವಾಪಸ್ಸು ಕರೆಸಿಕೊಂಡಿತು. ಯುದ್ದ ಕಾಲದಲ್ಲಿ ಗುಪ್ತ ಏಜೆಂಟ್ ಆಗಿ ಕೆಲಸ ಮಾಡಲ ಹಚ್ಚಿತು. ಸ್ವಲ್ಪ ದಿನದಲ್ಲೇ ಯಹೂದಿ ಎಂಬ ಕಾರಣ ಕೊಟ್ಟು ಇವನನ್ನು ಆ ಕೆಲಸದಿಂದ ತೆಗೆದುಹಾಕಿತು. ಅವನು ದೇಶಭ್ರಷ್ಟನಾಗಿ ದಕ್ಷಿಣ ಅಮೆರಿಕಾಗೆ ಮತ್ತೆ ಯಾನವನ್ನು ಕೈಗೊಂಡನು. ತನ್ನ ಅರ್ಧ ನಿಂತ ಬುಡಕಟ್ಟು ಅಧ್ಯಯನವನ್ನು ಮುಂದುವರೆಸಲು ಇಚ್ಚಿಸಿದನು. ಆದರೆ ಇವನನ್ನು ಕಸ್ಟಮ್ ಏಜಂಟರು ಪರಿಶೀಲಿಸಿದಾಗ ಇವನ ಹತ್ತಿರ ಒಂದು ಜರ್ಮನ್ ಭಾಷೆಯ ಪತ್ರ ಕಂಡು ಬಂದಿತು.
6ಈ ಏಜಂಟರು ಇವನನ್ನು ಬಂಧಿಸಲು ಆಲೋಚಿಸುತ್ತಿದ್ದಾಗ, ಲಂಗರು ತೆಗೆದು ಹೊರಡಲು ಸಿದ್ದವಿದ್ದ ಅಮೆರಿಕಾದ ಹಡಗೊಂದನ್ನು ಏರಿಕೊಂಡ. ಆ ಹಡಗಿನಲ್ಲಿ ಖೈದಿಗಳು, ಯುದ್ದಖೈದಿಗಳು ಮತ್ತ್ತು ಕೊಲೆಗಡುಕರು ಮಾತ್ರ ಇದ್ದರು. ಇವರ ಜೊತೆಯಲ್ಲಿ, ಹಡಗಿನ ತಳದಲ್ಲಿ ಬೆಳಕಿಂದ ಕಿರಣವೂ ಇಲ್ಲದ ಗಬ್ಬುನಾತವುಳ್ಳ ಜಾಗದಲ್ಲಿ ಅನಾಮಧೇಯನಾಗಿ ಉಳಿದು ಅಮೆರಿಕೆಗೆ ಪ್ರಯಾಣ ಬೆಳೆಸಿದ. ಅಲ್ಲಿ ಇವನನ್ನು ದೇಶಭ್ರಷ್ಟರಿಗಾಗಿ ನಡೆಸುತ್ತಿದ್ದ ವಿಶ್ವವಿದ್ಯಾನಿಲಯದಲ್ಲಿ ಪಾಠ ಮಾಡಲು ಹಚ್ಚಿದರು. ಎರಡನೇ ಮಹಾಯುದ್ದದ ನಂತರ ಇವನಿಗೆ ವಾಷಿಂಗ್ಟನ್ ನಲ್ಲಿ ಫ್ರೆಂಚ್ ರಾಯಭಾರಿಯ ಕಚೇರಿಯಲ್ಲಿ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕೆಲಸ ಮಾಡಲು ಹಚ್ಚಿದರು. ೧೯೪೮ರಲ್ಲಿ ಈತನನ್ನು ಪ್ಯಾರಿಸ್ ಗೆ ವಾಪಸ್ಸು ಕರೆಸಿಕೊಳ್ಳಲಾಯಿತು. ಈ ಅವಧಿಯಲ್ಲಿ ಈತ ‘ಭಾಂದವ್ಯದ ಮೂಲ ರಚನೆಗಳು’ (The Elementary Structures of Kinship ) ಎಂಬ ಅತ್ಯಂತ ಪ್ರಮುಖ ಮಾನವಶಾಸ್ತ್ರ ಕೃತಿಯನ್ನು ರಚಿಸಿದನು. ಇದನ್ನು ಆ ಕಾಲದ ಅತ್ಯಂತ ಪ್ರಭಾವಶಾಲಿ ಚಿಂತಕಿಯಾದ ಸೈಮನ್ ದಿ ಬೋವಾ ವಿಮರ್ಶೆ ಮಾಡಿ ಪಾಶ್ಚಾತ್ಯ ಸಂಸ್ಕೃತಿಯ , ಆಚೆಗಿರುವ ಮಹಿಳೆಯರ ಅತ್ಯಂತ ಪ್ರಮುಖವಾದ ವಿಶ್ಲೇಷಣೆ ಎಂದು ಸಾರಿದಳು. ಇದರ ಪ್ರಭಾವದಿಂದ ಈತ ಫ್ರಾನ್ಸ್ ನಲ್ಲಿ ಪ್ರಮುಖ ಬುದ್ದಜೀವಿಯೆಂದು ಪರಿಗಣಿಸಲ್ಪಟ್ಟ. ಇವನಿಗಾಗಿಯೇ ‘Comparative Religion of Non-Literate Peoples‘ ಎಂಬ ಪೀಠವನ್ನು ಸ್ತಾಪಿಸಿ ಇವನನ್ನು ಅದರ ನಿರ್ದೇಶಕನನ್ನಾಗಿ ನೇಮಿಸಲಾಯಿತು.
ಲೆವಿ ಸ್ಟ್ರಾಸ್ ಒಬ್ಬ ಮಹಾಮೌನಿ, ತೀಕ್ಷ್ಣಮತಿ ಮತ್ತು ಸಂತ. ತನ್ನ ವೈಯಕ್ಥಿಕವಾದ ವಿಷಯವನ್ನು ಆತ ನೇರವಾಗಿ ಎಲ್ಲೂ ದಾಖಲಿಸಲಿಲ್ಲ. ಸುಮಾರು ೩೦ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳ ಅಧ್ಯಯನ ನಡೆಸಿದರೂ ತನ್ನ ಅಧ್ಯಯನಕ್ಕೆ ಸಂಬಂಧಪಟ್ಟ ವಿಷಯದ ಜೊತೆ ಆ ಬುಡಕಟ್ಟುಗಳ ಮಾಹಿತಿ ಸಂಗ್ರಹಿಸುವಾಗ ಆತ ಕಂಡುಕೊಂಡ ವಿಷಯವನ್ನು ಮಾತ್ರ ತನ್ನ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಬುಡಕಟ್ಟು ಜನಾಂಗದ ಗುಡಿಸಿಲಿನಲ್ಲಿ ಈತನ ವಾಸ. ಅವರು ತಿನ್ನುತ್ತಿದ್ದ ಅಡಿಗೆಯಲ್ಲಿ ಇವನಿಗೂ ಒಂದು ಪಾಲು. ಊಟ ಮಾಡುವಾಗಲು ಈತ ಆ ಊಟದ ಹಿಂದಿನ ಸಾಂಸ್ಕೃತಿಕ ಹಿನ್ನಲೆಯನ್ನು ಮನದಲ್ಲಿ ವಿಶ್ಲೆಶಿಸಿಕೊಳ್ಳುತ್ತಿದ್ದ. ಇದರ ಪರಿಣಾಮವಾಗಿ ಈತ ರಚಿಸಿದ ಮಹತ್ತರ ಪುಸ್ತಕವೆಂದರೆ ‘ ದೇ ರಾ ಅಂಡ್ ದಿ ಕುಕ್ದ್’. ಅಮೆಜಾನ ಕಾಡುಗಳಲ್ಲಿ ಹಾಡಿಯ ಪಕ್ಕದ ಮರದ ಕೆಳಗೆ ಕುಳಿತು ಇಡೀ ಸಮಾಜ ಬೆಳಗಿನಿಂದ ಸಾಯಂಕಾಲದವರೆಗೂ ಹೇಗೆ ತನ್ನ ಕೆಲಸಗಳಲ್ಲಿ ನಿರತವಾಗಿರುತ್ತದೆ ಎಂಬುದನ್ನು ಗಮನಿಸುತ್ತಿದ್ದನು. ಅದರಲ್ಲೂ ಹೆಂಗಸರ ಕಾರ್ಯಕ್ರಮಗಳನ್ನು ವೀಕ್ಷಿಸಿ ಆಯಾ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನವೇನು ಎಂದು ತೀರ್ಮಾನಿಸುತ್ತಿದ್ದನು. ಇದರ ಫಲವಾಗಿಯೇ ಆತ ಕಂಡುಕೊಂಡಿದ್ದು ಹೆಣ್ಣು ನಾಣ್ಯವಿದ್ದಂತೆ. ಆಕೆಯು ತನ್ನ ತವರುಮನೆಯಿಂದ ಗಂಡನ ಮನೆಗೆ ಹೋಗುವುದೆಂದರೆ ನಾಣ್ಯದ ಚಲಾವಣೆಇದ್ದಂತೆ ಎಂದು ಅವನು ವಿಶ್ಲೇಶಿಸಿದನು.
ಈತನ ಸಹಚಿಂತಕರೆಂದರೆ ಆಗಿನ ಕಾಲದ ದಾರ್ಶನಿಕರಾದ ಸಾರ್ತ್ರ ಮತ್ತು ಮಾರ್ಲೋಪೊಂಟಿ. ಲೆವಿಸ್ತ್ರಾಸ್ ಸಾರ್ತ್ರನ ಅಸ್ತಿತ್ವವಾದವನ್ನು ತದ್ವಿರುದ್ದವಾದ ದಿಕ್ಕಿನೆಡೆಗೆ ಕೊಂಡೊಯ್ದವನು ಮತ್ತು ಬದುಕು ಒಂದು ಆಟ ಎಂದು ತೋರಿಸಿಕೊಟ್ಟವನು. ಈತನ ಶಿಷ್ಯನಾದ, ಮುಂದೆ ಬಹಳ ಹೆಸರುವಾಸಿಯಾದ ಸಾಂಸ್ಕೃತಿಕ ಅಧ್ಯಯನಕಾರ ರೋಲಾಂ ಬಾರ್ತ್ ಇವನ್ನು ಸಂಧಿಸಲು ದಿನಗಟ್ಟಲೆ ಕಾಯುತ್ತಿದ್ದ.
ಲೆವಿ ಸ್ಟ್ರಾಸ್ ಕಟ್ಟಾ ಸಂರಚನಾವಾದಿ, ಮಾನವಶಾಸ್ತ್ರದ ಅಧ್ಯಯನವೆಂದರೆ ಬರೇ ಒಂದೊಂದು ಸಮುದಾಯವನ್ನಾಗಲಿ ಅಥವಾ ಜನಾಂಗವನ್ನಾಗಲಿ ಬಿಡಿಬಿಡಿಯಾಗಿ ಅಧ್ಯಯನ ಮಾಡುವುದಲ್ಲ. ಅಧ್ಯಯನಕ್ಕೆ ಒಳಪಟ್ಟ ಸಾಂಸ್ಕೃತಿಕ ಪಠ್ಯಗಳ ಸಾರ್ವರ್ತಿಕ ಗುಣಗಳನ್ನು ಪರಿಶೀಲಿಸಿ ವಿಶ್ಲೇಷಿಸಬೇಕು. ಆಗ ಮಾತ್ರ ಆ ಪಠ್ಯಗಳನ್ನು ಸೃಜಿಸಿದ ಮನಸ್ಸು ತಿಳಿಯುತ್ತದೆ ಎಂದು ಅವನು ಪ್ರತಿಪಾದಿಸಿದನು. ಇದನ್ನು ಬುಡಕಟ್ಟು ಜನಾಂಗದ ಅಧ್ಯಯನಕ್ಕೆ ಅನ್ವಯಿಸಿ ಅವನು ‘ರಾಚನಿಕ ಮಾನವಶಾಸ್ತ್ರ’ (structural anthropology) ಎಂಬ ಮೇರು ಕೃತಿಯನ್ನು ರಚಿಸಿದನು . ಇದು ಐದು ಸಂಪುಟಗಳಲ್ಲಿ ಪ್ರಕಟವಾಗಿದೆ.
ಲೆವಿ ಸ್ಟ್ರಾಸ್ ಗಿಂತ ಮುಂಚೆ ಮಾನವಶಾಸ್ತ್ರಜ್ಞರು ತಮ್ಮ ಅದ್ಯಯನಕ್ಕೆ ಒಂದೊಂದೇ ಸಮಾಜವನ್ನು ಒಳಪಡಿಸಿ ವರ್ಗೀಕರಿಸಿ ಅನಂತರ ಸಾಮಾನ್ಯೀಕರಣವನ್ನು ಮಾಡುತ್ತಿದ್ದರು. ಮನುಷ್ಯನ ಹುಟ್ಟು, ಮದುವೆ, ಲೈಂಗಿಕತೆ , ಕ್ರಿಯಾವಿಧಿಗಳು, ಸಾವು ಇವುಗಳನ್ನು ಸುತ್ತ ವಿವರಣಾತ್ಮಕವಾಗಿ ನೋಡುತ್ತಾ ತಮ್ಮ ಕೃತಿಗಳನ್ನು ರಚಿಸುತ್ತಿದರು. ಇದಕ್ಕೆ ಬದಲಾಗಿ ಲೇವಿ ಸ್ಟ್ರಾಸ್ ಈ ಸಾಂಸ್ಕೃತಿಕ ಪಠ್ಯಗಳನ್ನು ಸೃಷ್ಟಿಸುವ ಮನುಷ್ಯನ/ಸಮಾಜದ ಮನಸ್ಸು ಹೇಗೆ ಸಾರ್ವತ್ರಿಕವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಗ್ರಹಿಸಲು ಪ್ರಯತ್ನಿಸಿದನು. ಈ ಪಠ್ಯಗಳು ಮೇಲ್ಮೆಯ್ಮಟ್ಟದಲ್ಲಿ ಮತ್ತು ವಿವರಣೆಯಲ್ಲಿ ಭಿನ್ನವಾಗಿ ಕಂಡರೂ ಆಳದಲ್ಲಿ ಅವೆಲ್ಲ ಒಂದೇ ರೀತಿಯ ರಚನೆಗಳನ್ನು ಹೊಂದಿರುತ್ತವೆ ಎಂಬುದನ್ನು ವಿಶ್ಲೇಷಿಸಿ ತೋರಿಸಿದನು. ಇದರ ಮೂಲಕ ಪ್ರತಿಯೊಂದು ಸಮಾಜವೂ ಮನುಷ್ಯನ ಬೌದ್ಹಿಕ ಸಮಗ್ರತೆಯನ್ನು ಸೃಷ್ಟ್ಯಿಸಿಕೊಳ್ಳುತ್ತದೆ ಎಂದು ತೋರಿಸಿದ. ‘tristas tropics’ ೧೯೫೫ ಒಂದು ರೀತಿಯಲ್ಲಿ ಆತನ ಮಾನವಶಾಸ್ತ್ರ ಅಧ್ಯಯನದ ದಾರ್ಶನಿಕ ಆತ್ಮಕತೆ. ಇದರಲ್ಲಿ ಮತ್ತು ‘ ರಾಚನಿಕ ಮಾನವಶಾಸ್ತ್ರ’ ಗಳಲ್ಲಿ ರಾಚನಿಕ ‘ ವಿಧಾನಗಳನ್ನು ಅನ್ವಯಿಸಿ ಅದಕ್ಕೆ ನಿದರ್ಶನಗಳನ್ನು ಕೊಟ್ಟು , ರಚನವಾದವನ್ನು ಹುಟ್ಟು ಹಾಕಿದ. ಪ್ರತಿಯೊಂದು ಸಂಕಥನವೂ ಎರಡು ರೀತಿಯಲ್ಲಿ ಸಂಯೋಜಿತವಾಗಿರುತ್ತದೆ ಇವುಗಳನ್ನು ಘಟಕಗಳಾಗಿ ಒಡೆದು ನೋಡುವುದು ಒಂದು ರೀತಿಯ ಸಂಯೋಜನೆಯಾದರೆ, ಅದೇ ಸಂಕಥನದಲ್ಲಿ ಅನೇಕ ಘಟಕಗಳನ್ನು ಬೇರೆ ಬೇರೆ ರೂಪದಲ್ಲಿ ಪುನರಾವರ್ತನೆಯಾಗಿರುತ್ತದೆ. ಈ ಗುಣವು ಮೌಖಿಕ ಸಂಕಥನ ಮತ್ತು ಸೃಜನಶೀಲ ಸಂಕಥನಗಳಲ್ಲಿ ಒಂದೇ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತವೆ ಎಂದು ಅವನು ವಿಶ್ಲೇಷಿಸಿ ತೋರಿಸಿದ. ಯಾವುದೇ ಕಥಾನಕದಲ್ಲಿ ಹೊಸ ಅರ್ಥ ಸೃಷ್ಟಿಯಾಗುವುದು ಈ ವೈರುಧ್ಯಗಳು ಸಂಧಿಸುವ ಜಾಗದಲ್ಲಿ, ಒಂದು ಸಾಂಸ್ಕೃತಿಕ ಪಠ್ಯದ ಅರ್ಥವನ್ನು ಗ್ರಹಿಸಬೇಕಾದರೆ ಈ ಸಾರ್ವರ್ಥಿಕ ಗುಣವನ್ನು ಓದುಗ ಕಂಡುಕೊಳ್ಳುವುದೇ ಆಗಿದೆ. ಇದು ಮೌಖಿಕ ಮತ್ತು ಲಿಖಿತ ಸಾಂಸ್ಕೃತಿಕ ಪಠ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶ. ಹೀಗೆ ಪ್ರತಿಯೊಂದು ಪಠ್ಯವನ್ನುಸೃಜಿಸುವ ಮನಸ್ಸು, ಅದು ಬುಡಕಟ್ಟು ಜನಾಂಗದವರದ್ದೆ ಆಗಿರಲಿ, ಮೌಖಿಕ ಸಂಪದ್ರಾಯದ ಸಮಾಜದ್ದೆ ಆಗಲಿ ಅಥವಾ ಹೆಚ್ಚು ಅಮೂರ್ತ ಚಿಂತನೆಯ ಸಮಾಜವೇ ಆಗಲಿ ಅಷ್ಟೇ ಮೂರ್ತವೂ, ಅಮೂರ್ತವೂ ಆದ ಆಲೋಚನಾಕ್ರಮಗಳನ್ನು ಹೊಂದಿರುತ್ತದೆ. ‘ದ ಸಾವೆಜ್ ಮೈಂಡ್’ (೧೯೬೨ ) ಎನ್ನುವ ಪುಸ್ತಕದಲ್ಲಿ ಈ ಪರಿಕಲ್ಪನೆಯನ್ನು ವಿಶ್ಲೇಷಿಸಲಾಗಿದೆ.
ಹೇಗೆ ಲೆವಿ ಸ್ಟ್ರಾಸ್ ನ ಸಂರಚನಾವಾದವು ಅನಂತ ಸಾಂಸ್ಕೃತಿಕ ಪಠ್ಯಗಳನ್ನು ಒಂದು ನಿರ್ಧಿಷ್ಟವಾದ ಆಲೋಚನಾಕ್ರಮಕ್ಕೆ ಒಳಪಡಿಸುತ್ತ ಸಾಂಸ್ಕೃತಿಕ ಪಠ್ಯಗಳು, ಹೇಗೆ ಒಂದು ಸಾಮಾಜಿಕ ವ್ಯವಸ್ತೆಯ ಸಂವಹನ ವಿಧಾನವಾಗಿರುತ್ತದೆ ಎಂಬುದನ್ನು ತೋರಿಸಿಕೊಡುವುದೇ, ವಿಶ್ಲೇಷಕನ ಕಾರ್ಯವೆಂದು ಅವನು ಹೇಳಿದನು.
7ಲೆವಿ ಸ್ತ್ರಾಸನು ಸೃಷ್ಟಿಪುರಣದ ಬಗ್ಗೆ ವಿಶ್ಲೇಷಿಸುತ್ತಾ ಎನ್ನುವುದು ಒಂದು ರೀತಿಯ ಭಾಷೆ, ಇದು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳು ಸಂಮ್ಮಿಲನಗೊಂದು ವ್ಯಕ್ತಪಡಿಸುವ ಆಲೋಚನಾಕ್ರಮ. ಇದು ಸಂಗೀತದಂತೆ ಕಾಲಾತೀತವಾಗಿ ಕೆಲಸ ಮಾಡುತ್ತಿರುತ್ತದೆ” ಎಂದು ನಿರೂಪಿಸಿದನು. ಸೃಷ್ಟಿಪುರಾಣಗಳೆಲ್ಲವೂ ಬೇರೆ ಬೇರೆಯಾದಂತೆ ಕಂಡರೂ ಅಂತರ್ಗತವಾಗಿ ಒಂದೇ ರೀತಿಯ ರಚನೆಯನ್ನು ಹೊಂದಿರುತ್ತವೆ ಎಂದು ತೋರಿಸಿಕೊಟ್ಟ. ಸೃಷ್ಟಿಪುರಾಣದ ಮುಖ್ಯ ಕಾರ್ಯವೆಂದರೆ ಸಮಾಜವನ್ನು ಒಂದು ವ್ಯವಸ್ಥೆಗೆ ಒಳಪಡಿಸುವುದು ಮತ್ತು ಆ ವ್ಯವಸ್ತೆಯನ್ನು ಮುಂದುವರೆಸಿಕೊಂಡು ಹೋಗುವುದು. ಈ ಸೃಷ್ಟಿಪುರಾಣಗಳು ಕಾಲದಿಂದ ಕಾಲಕ್ಕೆ ಆಂತರಿಕವಾಗಿ ಬದಲಾಗುತ್ತಿರುತ್ತವೆ. ಹಳೆಯ ಆಲೋಚನಾಕ್ರಮ ಬಿಟ್ಟು ಹೊಸ ಆಲೋಚನಾಕ್ರಮ ಸೇರಿಕೊಳ್ಳಬಹುದು. ಇಷ್ಟಾದರೂ ಆಂತರಿಕವಾಗಿ ಸಾಂಕೇತಿಕತೆ ಅಚಲವಾಗಿ ಉಳಿದಿರುತ್ತದೆ ಎಂದು ಅವನು ತನ್ನ “ಮಿಥ್” ಎಂಬ ಹೊತ್ತಿಗೆಯಲ್ಲಿ ತೋರಿಸಿಕೊಟ್ಟಿದ್ದಾನೆ. ಸೃಷ್ಟಿಪುರಾಣವು ವೈರುಧ್ಯದ ಆಲೋಚನಕ್ರಮದಿಂದ ಹೊರಟು ಆ ವೈರುಧ್ಯವನ್ನು ಬಿಡಿಸಿಕೊಳ್ಳುವ ಕಡೆಗೆ ದುಡಿಯುತ್ತದೆ ಎಂದು ತೋರಿಸಿಕೊಟ್ಟ. ಅಲ್ಲದೆ ಸೃಸ್ತಿಪುರಾಣದಲ್ಲಿ ಒಂದು ಅಧಿಕೃತವಾದ ಪಠ್ಎಂಬುದಿಲ್ಲ. ಇವು ಪಾಠಾಂತರಗಳಲ್ಲಿ ಅವತಾರವೆತ್ತುತ್ತಿರುತ್ತವೆ ಎಂದು ತೋರಿಸಿಕೊಟ್ಟ.Mythologiques I – IV(1965)
ಇವನ ಮತ್ತೊಂದು ಪ್ರಭಾವಶಾಲಿ ಕೃತಿಯೆಂದರೆ “ಬಂಧುತ್ವದ ಅಧ್ಯಯನ”. ಇವನ ವಿಶ್ಲೇಷಣೆ ಬರುವವರೆಗೂ ಮಾನವಶಾಸ್ತ್ರಜ್ಞರು ಬಂದುತ್ವದ ಅಧ್ಯಯನ ಎಂದರೆ ಕುಟುಂಬದ ಅಧ್ಯಯನ ಎಂದು ಭಾವಿಸಿದ್ದರು. ಆದರೆ ಈತ ಬಂಧುತ್ವಕ್ಕು , ಮದುವೆ ನಿಯಮಗಳಿಗೂ, ಸಂಪತ್ತಿನ ವರ್ಗಾವಣೆ ಮತ್ತು ಕುಟುಂಬದ ಗುಂಪುಗಗಳು ಹೇಗೆ ಘಟಕಗಳಾಗಿರುತ್ತವೆ ಎನ್ನುವುದರ ಮೇಲೆ ಒತ್ತುಕೊಟ್ಟ. ಅಲ್ಲದೆ ಈ ಕೃತಿಯು ಹೆಣ್ಣು ಒಂದು ಕುಟುಂಬದಿಂದ ಇನ್ನೊಂದು ಕುಟುಂಬಕ್ಕೆ ಬದಲಾಗುತ್ತ ಹೋಗುವ ಸಂಬಂಧವನ್ನು ವಿವರಿಸುವ ಪಠ್ಯದಂತೆ ಕೆಲಸ ಮಾಡುತ್ತದೆ. ಈ ಬದಲಾಗುವ ಸಂದರ್ಭದಲ್ಲಿ ಹೆಣ್ಣು ಪಡುವ ಪಾಡು ಎಂಥದು ಎಂಬ ವಿಶ್ಲೇಷಣೆ ಈ ಪುಸ್ತಕದಲ್ಲಿ ದೊರೆಯುತ್ತದೆ. ಇದರ ವಿಸ್ತೃತವಾದ ಅದ್ಯಯನವನ್ನು ‘ಯುಗಾಂತ’ ಖ್ಯಾತಿಯ ಮಾನವಶಾಸ್ತ್ರಜ್ಞೆ, ಇರಾವತಿ ಕರ್ವೆ ಭಾರತದ ಸಂಧರ್ಭದಲ್ಲಿ ಅನ್ವಯಿಸಿ ಆಳವಾದ ವಿಶ್ಲೇಷಣೆಯನ್ನು ಮಾಡಿದ್ದಾರೆ. ಈ ವಿಶ್ಲೇಷಣೆಯು ಒಂದು ಪ್ರಮುಖವಾದ ಅಂಶವನ್ನು ಹೊರಗೆಡವಿದೆ. ಪಶ್ಚಿಮ ಭಾರತದಲ್ಲಿರುವ ಆರ್ಯ ಸಮುದಾಯಗಳ ಮೇಲೆ ದ್ರಾವಿಡ ಸಂಸ್ಕೃತಿಯ ಬಂಧುತ್ವ ಸಂರಚನೆಯು ಪ್ರಭಾವ ಬೀರಿರುವದನ್ನು ತೋರಿಸುತ್ತದೆ.
ಹೀಗೆ ಲೆವಿ ಸ್ಟ್ರಾಸ್ ನು ಭಾಷಾಶಾಸ್ತ್ರದಿಂದ ಪ್ರಭಾವಿತನಾಗಿ ಸಂರಚನಾವಾದವನ್ನು ಮಾನವಶಾಸ್ತ್ರದ ಅಧ್ಯಯನಕ್ಕೆ ಅನ್ವಯಿಸಿದನು. ಭಾಷಾಶಾಸ್ತ್ರವು ಹೇಗೆ ಒಂದು ಪದದ ಅರ್ಥವನ್ನು ಹುಡುಕದೆ ಪದಗಳು ತಮ್ಮ ಜೋಡಣೆಯಲ್ಲಿ ಸೃಷ್ಟಿಸುವ ವಿನ್ಯಾಸವನ್ನು ಕಂಡುಕೊಳ್ಳುತ್ತದೋ, ಅಂತೆಯೇ ಮಾನವಶಾಸ್ತ್ರದ ಪಠ್ಯಗಳು ಒಂದು ಘಟಕದ ಅರ್ಥವನ್ನು ಮಾತ್ರ ಗ್ರಹಿಸದೆ ಆ ಘಟಕಗಳ ಸಂಯೋಜನೆಯನ್ನು ಅಭ್ಯಯಿಸುತ್ತದೆ. ಈ ಮೂಲಕ ಮನುಷ್ಯನ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬದನ್ನು ಅರ್ಥ ಮಾಡಿಕೊಳ್ಳಲು ಅನುವಾಗುವಂತಹ ಸಿದ್ದಾಂತವನ್ನು ಲೆವಿ ಸ್ಟ್ರಾಸ್ ಕೊಟ್ಟ. ಮನುಷ್ಯನು ಪ್ರಕೃತಿಯನ್ನೂ ಸಂಸ್ಕ್ರುತಿಯನ್ನಾಗಿ ಮಾರ್ಪಡಿಸಿಕೊಳ್ಳುವ ರೀತಿಯನ್ನು ಅರಿಯುವುದು ಹೇಗೆ ಎಂದು ತನ್ನ ಬರಹಗಳಲ್ಲಿ ವಿಶ್ಲೇಷಿಸಿದನು. ಅವರ ಉಳಿದ ಪ್ರಮುಖ ಪುಸ್ತಕಗಳೆಂದರೆ :”The Raw and the Cooked”.
8ಲೆವಿ ಸ್ಟ್ರಾಸ್ ತನ್ನ ಬದುಕಿನ ನೂರೊಂದು ವರ್ಷಗಳಲ್ಲಿ ೩೫ ವರ್ಷಗಳಷ್ಟು ದೀರ್ಘಕಾಲ ಬುಡಕಟ್ಟು ಜನಾಂಗದ ಅಧ್ಯಯನವನ್ನು ನಡೆಸಿದ. ಇವನ ಬರಹಗಳ ಪ್ರಭಾವ ಸಾಹಿತ್ಯ ಪಠ್ಯಗಳನ್ನು ವಿಶ್ಲೇಷಿಸುವುದರ ಮೇಲೂ ಆಗಿದೆ. ತೊದರೋವ್ ಬರೆದ ‘’, (೧೯೨೪) ಇದಕ್ಕೆ ಒಳ್ಳೆಯ ಉದಾಹರಣೆ. ಲೆವಿ ಸ್ಟ್ರಾಸ್ ಮೌಖಿಕ ಪರಂಪರೆ ಮತ್ತು ಲಿಖಿತ ಪರಂಪರೆಗೆ ಇದ್ದ ಅಂತರವನ್ನು ಕಡಿದು ಹಾಕಿದನು. ೧೯೯೦ ರ ದಶಕ ನಂತರ ಬರುತ್ತಿರುವ ಸಾಂಸ್ಕೃತಿಕ ಅಧ್ಯಯನದ ಹಿಂದೆ ಲೆವಿ ಸ್ಟ್ರಾಸ್ ಅಚ್ಚಳಿಯದೆ ನಿಂತಿದ್ದಾನೆ. ಇವನ ಈ ವಿಶ್ಲೇಷಣಾ ವಿಧಾನವನ್ನು ಜಗತ್ತಿನ ಅನೇಕ ವಿಶ್ವವಿದ್ಯಾನಿಲಯಗಳು ‘ತೌಲನಿಕ ಸಾಹಿತ್ಯ’ ಎಂಬ ಹೆಸರಿನಲ್ಲಿ ಬೋಧಿಸುತ್ತಿವೆ ಮತ್ತು ಸಂಶೋಧನೆಯನ್ನು ನಡೆಸುತ್ತಿವೆ.
ಈತನ ಸಂಶೋಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವನನ್ನು ಗೌರವಿಸಿವೆ. ಪ್ರಮುಖವಾಗಿ ೧೯೬೬ ರಲ್ಲಿ ವೆನರ್ ಗ್ರೇನ್ ಫೌಂಡೇಶನ್, ವೈಕಿಂಗ್ ಫಂಡ್ ಮೆಡಲ್ ಅನ್ನು ಕೊಟ್ಟು ಗೌರವಿಸಿತು. ೧೯೭೦ರಲ್ಲಿ ಇರಾಸ್ಮಸ್ ಬಹುಮಾನ ಇವನ್ದಾಯಿತು. ಈತನಿಗೆ ಆಕ್ಸ್ಫರ್ಡ್,ಏಲ್, ಹಾರ್ವಡ್ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ಗಳನ್ನೂ ಕೊಟ್ಟು ಗೌರವಿಸಿವೆ. ಅನೇಕ ಸಂಶೋಧನಾ ಸಂಸ್ಥೆಗಳು ಇವನಿಗೆ ಗೌರವ ಸದಸ್ಯತ್ವವನ್ನು ಕೊಟ್ಟಿವೆ. ಅವುಗಳಲ್ಲಿ ಮುಖ್ಯವಾದವು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ದಿ ಅಮೇರಿಕನ್ ಅಕಾಡೆಮಿ ಅಂಡ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್, ದಿ ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ದಿ ಅಮೆರಿಕನ್ ಫಿಲಾಸಫಿಕಲ್ ಸೊಸೈಟಿ. ಹೀಗೆ ನೂರು ಮೊಂಬತ್ತಿಗಳನ್ನೂ ಹಚ್ಚಿಸಿ ತನ್ನ ನೂರನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಲೆವಿ ಸ್ಟ್ರಾಸ್ ನಿಂದ ಇನ್ನು ಏನನ್ನು ನಿರೀಕ್ಷಿಸೋಣ!?

ಅಮೆಜಾನ್ ಕಾಡಿನಲೊಬ್ಬ ಮಹಾ ಮಾಂತ್ರಿಕ ‘ಗುಡ್ಡ’

ಅಮೆಜಾನ್ ಕಾಡಿನಲೊಬ್ಬ ಮಹಾ ಮಾಂತ್ರಿಕ ‘ಗುಡ್ಡ’

Tingalu – June 2009

11ನೂರಕ್ಕೆ ತೊಂಬತ್ತು ಭಾಗ ಔಷದಿ ಸಸ್ಯಗಳು ನಮ್ಮ ಬುಡಕಟ್ಟು ಜನಾಂಗಗಳು ವಾಸಿಸುವ ಕಾಡುಗಳಲ್ಲಿ ಸಿಗುವಂತವು. ಆದರೆ ಅಧುನಿಕ ಬದುಕಿನ ದಾಪುಗಾಲಿಗೆ ಸಿಕ್ಕಿ ಬಹುಪಾಲು ಕಾಡುಗಳು ನಾಶವಾಗುತ್ತಿವೆ. ಕಾಡಿನ ಮೂಲ ಜ್ಞಾನವಿರುವುದು ಬುಡಕಟ್ಟು ಜನಾಂಗಗಳಲ್ಲಿ. ಸಾವಿರಾರು ವರ್ಷಗಳಿಂದ ಇವರು ಕಾಡಿನಲ್ಲಿ ಬದುಕುತ್ತ , ತಮಗೆ ಬರುತ್ತಿರುವ ಅನೇಕ ಖಾಯಿಲೆಗಳನ್ನು ವಾಸಿಮಾಡಲು ಈ ಕಾಡಿನ ಸಸ್ಯಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇತ್ತೀಚಿನ ವರದಿಯ ಪ್ರಕಾರ ಪ್ರಪಂಚದಲ್ಲಿ ಒಂದು ನಿಮಿಷಕ್ಕೆ ೧೦೦ ಎಕರೆಯಷ್ಟು ಅರಣ್ಯ ನಾಶವಾಗುತ್ತಿದೆ . ಪ್ರಪಂಚದಲ್ಲಿರುವ ಸಸ್ಯದಲ್ಲಿ ಶೇ .೧೦ ನಿರ್ನಾಮವಾಗುತ್ತಿವೆ. ಕಾಡಿನಲ್ಲಿದ್ದ ಬುಡಕಟ್ಟು ಜನಾಂಗದವರನ್ನು  ಕಾಡಿನಿಂದ ಹೊರಗೆ ಹಾಕುವುದರ ಮೂಲಕ ಅವರಿಗಿದ್ದ ಜಾನಪದ ವೈದ್ಯ ಜ್ಞಾನವನ್ನು ನಾಶ ಮಾಡಲಾಗುತ್ತಿದೆ. ಈ ಜ್ಞಾನಪದ್ಧತಿಯನ್ನು ಕಾಪಾಡಿಕೊಂಡು ಬರುತ್ತಿರುವವರು ಮುಖ್ಯವಾಗಿ ಬುಡಕಟ್ಟು ಜನಾಂಗದ  ‘ದೇವರಗುಡ್ಡರು’ (ಶಮಣರು). ಆದರೆ ಇವರು ಕಾಡನ್ನೇ ಪ್ರವೇಶಿಸದಂತೆ ತಡೆಯಲಾಗುತ್ತಿರುವ ಕಾರಣ ಈ ಶಮಣರು ತಮ್ಮ ವೈದ್ಯ ಪದ್ಧತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ .

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಜನಾಂಗೀಯ ಔಷಧಿ ಪದ್ದತಿಯನ್ನು, ಅದನ್ನು ಪೊರೆದುಕೊಂಡು ಬರುತ್ತಿರುವ ದೇವರಗುಡ್ಡರನ್ನು ದಕ್ಷಿಣ ಅಮೇರಿಕಾದ ಅಮೆಜಾನ್ ಕಾಡುಗಳಲ್ಲಿ ಭೇಟಿ ಮಾಡಿದ ಧೀರ  – ಮಾರ್ಕ್ .ಜೆ .ಪ್ಲಾಟ್ಕಿನ್ . ಈತ ಅವರ ವಿಷದ ಬಾಣಗಳಿಂದ ಬದುಕುಳಿದಿದ್ದೆ ಒಂದು ಪವಾಡ. ಹಾಗೆ ಬದುಕುಳಿದು ಅವರಲ್ಲೇ ಒಬ್ಬನಾಗಿ ಸುಮಾರು ೩೫ ವರ್ಷಗಳಿಂದ ಗುಡ್ಡರ ಶಿಷ್ಯನಾಗಿ ಸುಮಾರು ೩೦೦ಕ್ಕೂ  ಹೊಸ ಔಷಧೀಯ ಸಸ್ಯಗಳನ್ನು ಕಂಡುಹಿಡಿದ ಸಾಹಸ ಈತನದು.

ಪ್ಲಾಟ್ಕಿನ್ ಹುಟ್ಟಿದ್ದು – ಮೇ ೨೧,೧೯೫೫ ರಲ್ಲಿ. ಅಮೆರಿಕಾದ  ನ್ಯೂ ಒರ್ಲೆಯಾನ್ಸ್ ನಲ್ಲಿ. ಹದಿಹರೆಯದ ಹುಡುಗನಾಗಿದ್ದಾಗಲೇ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರದಲ್ಲಿ  ವಿಶೇಷ ಆಸಕ್ತಿಯನ್ನು  ತಳೆದ ಈರ ೧೬ನೇ ವಯಸ್ಸಿನಲ್ಲೇ  ತಂದೆ, ತಾಯಿಯನ್ನು ಕಳೆದುಕೊಂಡು, ಓದನ್ನು ಮುಂದುವರಿಸಲಾಗದೆ ಶಾಲೆಗೆ ಶರಣು  ಹೊಡೆದ . ಬದುಕಿಗಾಗಿ ಅಲ್ಲಿ ಇಲ್ಲಿ ಕೆಲಸ ಮಾಡಿದ. ಅನೇಕ ಕನಸುಗಳನ್ನು ಹೊತ್ತು ತಿರುಗಿದ. ಹದಿ ವಯಸ್ಸಿನ ಹುಡುಗರು ಕಾರು ಡ್ರೈವಿಂಗ್ , ಆಲ್ಕೋಹಾಲ್ , ಹುಡುಗಿಯರೊಡನೆ ಡೇಟಿಂಗ್ ಗಳಲ್ಲಿ ಮುಳುಗಿದಾಗ ಈತ ಕಾಡಿನ ಪ್ರಾಣಿಗಳು, ಸಸ್ಯಗಳು , ಕಾಡಿನ ತಿರುಗಾಟಗಳ ಕನಸು ಕಾಣುತ್ತಿದ್ದ . ಈ ಕನಸುಗಳಲ್ಲಿಯೇ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ (ತಾನೇ ಗಳಿಸಿದ ಹಣವನ್ನು ತೆತ್ತು) ಕಾಲೇಜಿಗೆ ಸೇರಿದನು. ಅಲ್ಲಿ ನಾಲ್ಕು ಗೋಡೆಗಳ ಮಧ್ಯೆ ಶೂನ್ಯದಲ್ಲಿ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರಗಳ ಭೋಧನೆ ನಡೆಯುತಿತ್ತು. ಇದರಿಂದ ಬೇಸತ್ತು ಮಧ್ಯದಲ್ಲೇ  ಕಾಲೇಜನ್ನು ಬಿಟ್ಟು , ಗಳಿಸಿದ್ದ  ಹಣವನ್ನು ಕಳೆದುಕೊಂಡು , ಬೀದಿಗೆ ಬಿದ್ದ . ಹೀಗೆ ಅಲೆದಾಡುತ್ತಿದ್ದಾಗ  ಅವನಿಗೆ ಯಾರೋ ಪ್ರ್ರಾಣಿಶಾಸ್ತ್ರದ ಮ್ಯೂಸಿಯಂನಲ್ಲಿ ಒಂದು ದಿನಗೂಲಿ ಕೆಲಸವನ್ನು ಕೊಡಿಸಿದರು . ಅಲ್ಲಿ ಆತ ಪ್ರಾಣಿಗಳ ಅವಶೇಷಗಳನ್ನೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು , ಬದುಕಿರುವ ಪ್ರಾಣಿಗಳ ಮೈತೊಳೆದು ಆಹಾರ ಕೊಟ್ಟು, ಅವುಗಳ ಮಲ, ಮೂತ್ರವನ್ನು  ತೊಳೆದು ಸ್ವಚ್ಛಪಡಿಸುವ ಕೆಲಸವನ್ನು ಮಾಡಬೇಕಿತ್ತು . ಒಂದಲ್ಲಾ ಒಂದು ದಿನ ಯಾರಾದರೊಬ್ಬರು ತನ್ನನ್ನು ಮಳೆ ಕಾಡಿಗೆ ಅದರಲ್ಲೂ ಅಮೆಜಾನ್ ಕಾಡಿಗೆ ಕರೆದೊಯ್ಯಬಹುದೇ ಎಂಬ ಕನಸನ್ನು ಮುಂದುವರಿಸಿಯೇ ಇದ್ದ. ಇವನು ಗೀಳನ್ನು ಅರಿತ ಸಹ ಕೆಲಸಗಾರನೊಬ್ಬ ರಾತ್ರಿ ಶಾಲೆ ಸೇರಿ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರದಲ್ಲಿ ಪದವಿಯನ್ನಲ್ಲದಿದ್ದರು  ಒಂದು ಸೆಮಿಸ್ಟರ್ ಕೋರ್ಸ್ ಮಾಡಬಹುದೆಂದು  ಸಲಹೆ ಮಾಡಿದನು. ಈ ವಿಷಯದಲ್ಲಿ ಈ ರೀತಿಯ ಕೋರ್ಸ್ ಇದ್ದದ್ದು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ  ಮಾತ್ರ. ಈಗ ಇಲ್ಲದಿದ್ದರೆ ಮುಂದೆ ಸಾಧ್ಯವೇ ಇಲ್ಲ ಎಂಬ ಸಂಧರ್ಭ ಅದು. ಅಲ್ಲದೆ ಜೀವನ್ ಪರ್ಯಂತ ಈ ಕಾರಣಕ್ಕಾಗಿ ಪರಿತಪಿಸುತ್ತೇನೆ ಎಂದುಕೂಂಡು ಹಾರ್ವರ್ಡ್ ವಿಶ್ವವಿದ್ಯಾನಿಲಯದತ್ತ ಮುಖ ಮಾಡಿದ, ಪ್ಲಾಟ್ಕಿನ್.

12ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪರಿಸರ ಇವನ ಕನಸಿಗೆ ಗುರಿಮೂಡಿಸಿತು. ವಿಶ್ವಮಾನ್ಯ ಪ್ರೊ.ಶುಲ್ಫ್ಸ್ ಎಂಬ ಸಸ್ಯಶಾಸ್ತ್ರಜ್ಞ. ಇವನಿಗೆ ಹೊಸ ಪ್ರಪಂಚವನ್ನೇ ತೆರೆದು ತೋರಿಸಿದರು. ಅವರು ದಕ್ಷಿಣ ಅಮೆರಿಕಾದ ಅಮಜಾನ್ ಮಳೆಯ ಕಾಡು. ಅದರ ಪರ್ಯಾವರಣ, ಮೂಲ ನಿವಾಸಿಗಳು ಅವರ ಬದುಕು, ಅವರು ಉಪಯೋಗಿಸುವ ಔಷಧೀಯ ಸಸ್ಯಗಳು, ಕೋಕಾ ಮತ್ತು ಕೊಕೈನ್ ಮತ್ತು ಮೆಕ್ಷಿಕೊದ ಅಣಬೆ ಸುತ್ತ ನಡೆಸುವ ಕ್ರಿಯಾವಿಧಿಗಳು, ಮಾದಕ ದ್ರವ್ಯಗಳು ಇವುಗಳಲೆಲ್ಲದರ ಚಿತ್ರಗಳನ್ನು ತೋರಿಸಿದರು. ಔಷಧಿಗೆ ಬಳಸುವ ಸುಮಾರು ೨೦೦೦ ಸಸ್ಯವರ್ಗಗಳನ್ನು ತೋರಿಸದರು. ಇದಕ್ಕಾಗಿ ಅವರು ೧೪ ವರ್ಷ ಅಮಜಾನ್ ಕಾಡಿನಲ್ಲಿ (೧೯೫೦ರ ದಶಕದಲ್ಲಿ) ಕಳೆದಿದ್ದರು. ಇದನೆಲ್ಲ ನೋಡಿ ಪ್ಲಾಟ್ಕಿನ್ಗೆ ಆಕಾಶವೇ ಕೈಗೆಟುಕಿದಂತಾಯಿತು. ಇಂತಹ ಮಳೆಯ ಕಾಡುಗಳು ಇಡೀ ಪ್ರಪಂಚದಲ್ಲಿ ಏಷ್ಯಾ, ಆಫ್ರಿಕಾ ಬಿಟ್ಟರೆ ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡುಗಳಲ್ಲಿ ಮಾತ್ರಾ ಕಂಡು ಬರುತ್ತವೆ. ಈ ಅಮೆಜಾನ ಕಾಡಿನಲ್ಲಿ ಪ್ರಪಂಚದಲ್ಲಿ ಕಂಡುಬರುವ ಸುಮಾರು ೬೦ ಸಾವಿರ ಸಸ್ಯಗಳಲ್ಲಿ ೨೫,೦೦೦ ಸಾವಿರ ಸಸ್ಯಗಳು ಬೆಳೆಯುತ್ತವೆ. ಇವುಗಳಲ್ಲಿ ಇನ್ನು ಎಷ್ಟೋ ಯಾರ ಕಣ್ಣಿಗೂ ಬಿದ್ದಿಲ್ಲ. ಅಧ್ಯಯನಕ್ಕೂ ಒಳಪಟ್ಟಿಲ್ಲ. ಈ ಪ್ರಪಂಚದಲ್ಲಿರುವ ಕೀಟಗಳಲ್ಲಿ ಸುಮಾರು ಶೇ.೮೦ರಷ್ಟು ಕೀಟಗಳು ಅಮೆಜಾನ್ ಕಾಡಿನಲ್ಲೇ ಇವೆ. ಅಲೆಕ್ಷ್ಗಾನ್ದರ್ ದಿ ಗ್ರೇಟ್, ಆಲಿವರ್ ಕ್ರಾಂವೆಲ್ ಅಲ್ಲದೆ  ಇನ್ನು ಲಕ್ಷಾಂತರ ಹೆಸರಿಲ್ಲದ ಜನರನ್ನು ಕೊಂದ ಮಲೇರಿಯಾ ಖಾಯಿಲೆಗೆ ಔಷಧಿ ಸಿಕ್ಕಿದ್ದು ಈ ಅಮೆಜಾನ್ ಕಾಡಿನಲ್ಲೇ. ಇದನ್ನು ತಲತಲಾ೦ತರದಿಂದ ಅಮೆಜಾನ್ ಕಾಡಿನ ಬುಡಕಟ್ಟು ಜನಾಂಗದವರು ಮಲೇರಿಯಾಕ್ಕೆ ಔಷಧಿಯಾಗಿ ಬಳಸುತ್ತಿದ್ದರು. ಇದೇ ಸಿಂಕೋನ.

ಒಂದು ದಿನ ಪ್ಲಾಟ್ಕಿನ್ ತರಗತಿಯನ್ನು ಮುಗಿಸಿ ಲಿಫ್ಟಿನಲ್ಲಿ ಇಳಿಯುತ್ತ್ತಿದ್ದಾಗ ಅಚಾನಕ್ಕಾಗಿ ಒಬ್ಬ ಪ್ರೊಫೆಸರ್ ಸಿಕ್ಕಿ ಅಮೆಜಾನ ಕಾಡಿನಲ್ಲಿರುವ ಪ್ರಾಣಿಗಳ ಅಧ್ಯಯನಕ್ಕೆ ಹೊಗಿತ್ತಿದ್ದೇನೆ , ಸಹಾಯಕನಾಗಿ ಬರುತ್ತಿಯಾ ಅಂತ ಕೇಳಿದರು. ಪ್ಲಾಟ್ಕಿನ್ಗೆ ಸ್ವರ್ಗ ಸಿಕ್ಕಿದಂತಾಗಿ ತಕ್ಷಣ ಒಪ್ಪಿಕೊಂಡುಬಿಟ್ಟ. ಅಲ್ಲಿಂದ ಶುರುವಾಯಿತು ಅವನ ಅಮೆಜಾನ ಕಾಡಿನ ಅಧ್ಯಯನ.

ಅಮೆಜಾನ್ ಕಾಡೆಂದರೆ ಮರಗಳು ಪೈಪೋಟಿಯ ಮೇಲೆ ನೂರಾರು ಅಡಿ ಎತ್ತರ ಬೆಳೆದು ನೆಲೆಕ್ಕೆ ಸೂರ್ಯನ ಬೆಳಕೇ ಬೀಳದಂತೆ ಚಪ್ಪರ ಕಟ್ಟಿರುತ್ತವೆ. ಪ್ರಾಣಿಶಾಸ್ತ್ರದ ಅಧ್ಯಯನಕ್ಕೆ ಸಹಾಯಕನಾಗಿ ದುಡುಯುತ್ತಿದ್ದಾಗಲೆ ಸಸ್ಯದ ಬಗ್ಗೆ ಮತ್ತು ಅದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ತಿಳಿದುಕೊಳ್ಳತೊಡಗಿದ. ಕೆಲವರಿಗೆ ಕೆಲವು ಔಷಧೀಯ ಸಸ್ಯಗಳು ಗೊತ್ತಿರಬಹುದು ಆದರೆ ಅದರ ಪೂರ್ಣ ಪ್ರಮಾಣದ ಜ್ಞಾನ ಇರುವುದು ಬುಡಕಟ್ಟು ಜನಾಂಗದ ದೇವರಗುಡ್ಡವರಿಗೆ ಮಾತ್ರ ಎಂಬುದು ಅವನ ಅರಿವಿಗೆ ಬಂತು. ಆರು ತಿಂಗಳು ಅಧ್ಯಯನದ ನಂತರ ಮತ್ತೆ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಹೋಗಿ ತಾನೊಬ್ಬನೇ ಔಷಧೀಯ ಸಸ್ಯಗಳ ಅಧ್ಯಯನಕ್ಕೆ ಮತ್ತೆ ಅಮೆಜಾನ್ ಕಾಡಿಗೆ ಹೊರಟ. ಅಲ್ಲಿ ಹೋದಾಗ ಅವನಿಗೆ ಅರಿವಿಗೆ ಬಂದಿದ್ದು ಅಮೇರಿಕಾ ದೇಶವೊಂದೇ  ಮೂಲಿಕೆ ಮೂಲದ ೧೨೦ ರೀತಿಯ ಔಷದಗಳನ್ನು ತಯಾರು ಮಾಡುತ್ತವೆ. ಇದರಿಂದ ಔಷಧಿ ಕಂಪನಿಗಳು ಒಂದು ವರ್ಷಕ್ಕೆ ಆರು ಇಲಿಯನ್ ಡಾಲರ್ ಗಳಿಸುತ್ತವೆ ಎಂದು ತಿಳಿಯಿತು. ಈ ಭೂಮಿಯ ಮೇಲೆ ನಾಶವಾಗಿಯೇ ಹೋಗಿದೆ ಎಂದು ತಿಳಿದಿದ್ದ ಸಿಂಕ್ಗೋ ಎಂಬ ಮರ ಉಳಿದಿರುವುದು ಇಲ್ಲೇ ಎಂದು ಕಂಡುಹಿಡಿದ.ಗರ್ಭಕೋಶದ ಕ್ಯಾನ್ಸರ್ ಅನ್ನು ಗುಣಪಡಿಸುವುದಕ್ಕೆ ಟ್ಯಾಕ್ಸೋಲ್ ಎಂಬ ಮರದ ಚಕ್ಕೆಯನ್ನು ಉಪಯೋಗಿಸಬಹುದು ಎಂಬುದನ್ನು ೧೯೯೨ ರಲ್ಲಿ ಕಂಡುಹಿಡಿದನು.ಅಲ್ಲದೆ ಈ ಬುಡಕಟ್ಟುಜನಾಂಗದ ಗುಡ್ಡರು ಲೈಂಗಿಕ ರೋಗಗಳನ್ನು ‘ಯೂ’ ಮರದ ಚಕ್ಕೆಯನ್ನು ಅರೆದು ಹಚ್ಚುವುದರಿಂದ ವಾಸಿಮಾಡಬಹುದೆಂದು ತೋರಿಸಿಕೊಟ್ಟರು. ಈಗ ಅದು ವಿಶ್ಲೇಷಣೆಯ ಹಾದಿಯಲ್ಲಿದೆ. ಸಾವಿರಾರು ವರ್ಷಗಳಿಂದ ಬುಡಕಟ್ಟು ಜನಾಂಗವು ಈ ರೀತಿ ಒಂದು ಜ್ನಾನಶಾಖೆಯನ್ನೇ ತೆರೆದಿಟ್ಟಿದೆ. ಪ್ಲಾಟ್ಕಿನ್ ಹೇಳುವ ಪ್ರಕಾರ “ಒಬ್ಬ ದೇವರ ಗುಡ್ಡ ಸತ್ತರೆ ಒಂದು ಲೈಬರಿಯೇ ಸುಟ್ಟುಹೋದಂತೆ”.

ಪಾಶ್ಚಾತ್ಯರು ಔಷಧೀಯ ಸಸ್ಯಗಳನ್ನು ಅಮೆಜಾನ್ ಬುಡಕಟ್ಟು ಜನಾಂಗದಿಂದ ಕಲಿತು ಕೊಟ್ಯಅಂತರ ಡಾಲರುಗಳ ವಹಿವಾಟುಗಳನ್ನು ನಡೆಸುತ್ತಲೇ ಇದ್ದಾರೆ . ಅದರ ಜೊತೆಗೆ ಅಮೆಜಾನ್ ಕಾಡುಗಳನ್ನೇ ಸೂರೆಗೊಳ್ಳುತ್ತಿದ್ದಾರೆ – ಬುಡಕಟ್ಟು ಜನರ ಹೆಸರನ್ನು ಹೇಳದೆ.

13ತನ್ನ ಕ್ಷೇತ್ರ ಕಾರ್ಯದ ಸಮಯದಲ್ಲಿ  ಪ್ಲಾಟ್ಕಿನ್ ಗೆ ಇದರ ಅರಿವು ಚೆನ್ನಾಗಿಯೇ ಆಯಿತು . ಆಟಗಾರರು ಯುವಕರು ಇಂದು ಜಗಿಯುವ ಚಿಕ್ಲೆಟ್ ಮತ್ತು ಚ್ಯುಯಿಂಗ್ ಗಂ  ಬಂದಿದ್ದು ಸಹ ಮೆಕ್ಸಿಕನ್ ಜನರು ತಮಗೆ ಆಯಾಸವಾಗಿದ್ದಾಗ ಅಗಿಯುತ್ತಿದ್ದ ಚಿಕಲ್ ಎಂಬ ಮರದ ಹಾಲಿನಿಂದ. ಈಗ ಅದನ್ನು ಉಪಯೋಗಿಸಿ ಚ್ಯುಯಿಂಗ್ ಗಮ್ ಮಾಡುವ ಕಾರ್ಖಾನೆಯೇ ಶುರುವಾಗಿದೆ. ಅಲ್ಲದೆ ಕೋಟ್ಯಾಂತರ ಡಾಲರುಗಳನ್ನು ಗಳಿಸುವ ಕಾರ್ಖಾನೆಯೂ ಆಗಿದೆ. ಹುಳುಕು ಹಲ್ಲಾದರೆ ಅಥವಾ ಹಲ್ಲುಕುಳಿಯಾದರೆ ಈ ಬುಡಕಟ್ಟು ಜನಾಂಗ ಲ್ಯಾಟಿಕ್ಸ್ ಎಂಬ ಮರದ ಹಾಲನ್ನು ಹಲ್ಲಿನ ಕುಳಿಗೆ ತುಂಬುತ್ತಿದ್ದರು. ಇಲ್ಲಿಯವರೆಗೂ  ಈ ಹಾಲನ್ನೇ ವೈದ್ಯರುಗಳು ಬಳಸುತ್ತಿದ್ದರು. ಇತ್ತೀಚಿಗೆ ಸಿಂಥೆಟಿಕ್ ನಲ್ಲಿ ಮಾಡಿದ ವಸ್ತುವನ್ನು ಹಲ್ಲಿನ ಕುಳಿ ತುಂಬಲು ಉಪಯೋಗಿಸುತ್ತಿದ್ದಾರೆ . ಆದರೆ ಈ ಸಿಂಥೆಟಿಕ್ ವಸ್ತುವು ಆರು ತಿಂಗಳು ಅಥವಾ ಒಂದು ವರ್ಷ ಮಾತ್ರ ಬಾಳಿಕೆ ಬರುತ್ತದೆ. ಆದರೆ ಈ ಲ್ಯಾಟಿಕ್ಸ್ ತುಂಬಿದ ಹಲ್ಲುಕುಳಿ ತಾನಾಗಿಯೇ ಬೀಳುವುವರೆಗೂ  ಅಥವಾ ಮನುಷ್ಯ ಬದುಕಿರುವವರೆಗೂ ಬಾಳಿಕೆ ಬರುತ್ತದೆ. ಅಲ್ಲದೆ ಇದರಿಂದ ಯಾವ ದಂತ ಕ್ರಿಮಿಗಳು ಮುತ್ತುವುದಿಲ್ಲ .

ಅತ್ತಿಮರದ ಭಾಗಗಳನ್ನು ಅನೇಕ ಖಾಯಿಲೆಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ . ವಸಡಿನಲ್ಲಿ ರಕ್ತ ಸುರಿಯುವುದನ್ನು ನಿಲ್ಲಿಸಲು ಮತ್ತು ಹೃದಯ ಸಂಭಂದಿ ಖಾಯಿಲೆಗಳಿಗೆ ಇದರಿಂದ ಔಷಧಿಗಳನ್ನು ತಯಾರಿಸುತ್ತಾರೆ . ಚರ್ಮರೋಗಗಳಿಗೂ ಸಹ ಇದರ ಔಷಧಿಯನ್ನು ಬಳಸುತ್ತಾರೆ . ಒಂದೇ ಔಷಧೀಯ ವಸ್ತುವನ್ನು ಬೇರೆ ಬೇರೆ ಪ್ರಮಾಣದಲ್ಲಿ ತಯಾರು ಮಾಡುವುದರಿಂದ ಬೇರೆ ಬೇರೆ ಖಾಯಿಲೆಗಳನ್ನು ಸಹ ವಾಸಿ ಮಾಡಬಹುದು ಎಂಬುದನ್ನು ಪ್ಲಾಟ್ಕಿನ್ ಅರಿತುಕೊಂಡ . ಹುಳಕಡ್ಡಿ ಮುಂತಾದ ಚರ್ಮ ರೋಗಗಳನ್ನು ಸಂಪೂರ್ಣವಾಗಿ ಗುಣಪಡಿಸಲು ಇನ್ನೂ ಪಾಶ್ಚಾತ್ಯರಿಗೆ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದರೆ ಇವರು ಉಪಯೋಗಿಸುವ ‘ಮನಿಬಲ್ಲಿ’ ಎಂಬ ಮರದ ಹಾಲಿನಿಂದ ಈ ರೋಗಗಳನ್ನು ಸಂಪೂರ್ಣವಾಗಿ ವಾಸಿ ಮಾಡಬಹುದು ಎಂದು ಪ್ಲಾಟ್ಕಿನ್ ಅರಿತ .

ನಾವು ಈಗ ಉಪಯೋಗಿಸುತ್ತಿರುವ ಆಸ್ಪಿರಿನ್ ನೋವನ್ನು ಕೊಲ್ಲುವುದಕ್ಕಾಗಿ ಮಾತ್ರ. ಆದರೆ ಬುಡಕಟ್ಟು ಜನಾಂಗದವರು ಜ್ವರ, ಮೈ ಕೈ ಊತ , ಹೃದಯಾಘಾತ ಮತ್ತು ಲಕ್ವಾಗಳನ್ನು ವಾಸಿ ಮಾಡಲು ಉಪಯೋಗಿಸುತ್ತಾರೆ. ಅಲ್ಲದೆ ರಕ್ತ ಹೆಪ್ಪುಗಟ್ಟುವಿಕೆ, ರಕ್ತನಾಳಗಳಲ್ಲಿ ರಕ್ತ ಸರಿಯಾಗಿ ಹರಿಯುವಂತೆ ಮಾಡಲು , ಅಸ್ತಮಾ ಖಾಯಿಲೆಯನ್ನು ವಾಸಿ ಮಾಡಲು ಉಪಯೋಗಿಸುತ್ತಾರೆ. ಹೀಗೆ ಪ್ಲಾಟ್ಕಿನ್ ಸುಮಾರು ೩೦೦ ಹೊಸ ಔಷಧ ಸಸ್ಯಗಳನ್ನು ಕಂಡುಹಿಡಿದಿದ್ದಾನೆ . ೩೬ ವರ್ಷಗಳಿಂದ ಅಮೆಜಾನ್ ಕಾಡಿನ ಜೀವನಾಡಿಯನ್ನೇ ಹಿಡಿದಿದ್ದಾನೆ . ಇದಕ್ಕಾಗಿ ಈತ ಬುಡಕ್ಕಟ್ಟು ಜನರ ಗುಡ್ಡರ ಶಿಷ್ಯನಾಗೆ ಕೆಲಸ ಮಾಡುತ್ತಾ ಅವರಿಂದ ಕಲಿಯುತ್ತಲೇ ಇದ್ದಾನೆ.

ಇವೆಲ್ಲವನ್ನೂ ಕ್ರೂಢೀಕರಿಸಿ ಈತ ಟೇಲ್ಸ್ ಆಫ್ ಆ ಶಮನ್ಸ್ ಅಪ್ರೆಂಟಿಸ್ ಎಂಬ ಅತ್ಯಾಕರ್ಷಕ ಪುಸ್ತಕವನ್ನು ರಚಿಸಿದ್ದಾನೆ . ಈ ಪುಸ್ತಕ ಬರೀ ಔಷಧಿ ಸಸ್ಯಗಳ ಪಟ್ಟಿಯಲ್ಲ. ಈ ಪುಸ್ತಕ ಔಷಧೀಯ ಹಿಂದೆ ಇರುವ ಬುಡಕಟ್ಟು ಜನಾಂಗದ ಸಾವಿರಾರು ವರ್ಷಗಳ ಚರಿತ್ರೆಯನ್ನು ಬಿಚ್ಚಿಡುತ್ತದೆ. ಗುಡ್ಡರು ಸಾಮಾನ್ಯವಾಗಿ ಔಷಧಿಯನ್ನು ನೇರವಾಗಿ ರೋಗಿಗಳಿಗೆ ಕೊಡುವುದಿಲ್ಲ . ಔಷಧಿ ಸೇವನೆ ರೋಗಿಗೆ ಮತ್ತು ಗುಡ್ಡನಿಗೆ ಒಂದು ಕ್ರಿಯಾವಿಧಿಯ ರೂಪದಲ್ಲಿರುತ್ತದೆ. ಇದಕ್ಕೊಂದು ಸಾಂಸ್ಕೃತಿಕ ಮಹತ್ವ ಒಂದಿರುತ್ತದೆ. ಇದನ್ನು ಮನಗಂಡ ಪ್ಲಾಟ್ಕಿನ್ ವಿಧೇಯ ವಿದ್ಯಾರ್ಥಿಯಂತೆ ಇಂದೂ ಗುಡ್ಡರಿಂದ ಕಲಿಯುತ್ತಲೇ ಇದ್ದಾನೆ. ಇವನ ಕಲಿಕೆಯನ್ನು ಕಂಡು ಪರೀಕ್ಷೆ ಬರೆಯದೆ ಹಾರ್ವರ್ಡ್ ವಿಶ್ವವಿದ್ಯಾನಿಲಯವು ಇವನಿಗೆ ಪದವಿಯನ್ನು ಕೊಟ್ಟಿತು. ಟಿಫ್ಟ್  ವಿಶ್ವವಿದ್ಯಾನಿಲಯ ಈತನ ಕೆಲಸಕ್ಕಾಗಿ ಡಾಕ್ಟರೇಟ್ ಡಿಗ್ರಿಯನ್ನು ಕೊಟ್ಟಿತು. ತಿರಿಯೋ ಎಂಬ ಬುಡಕಟ್ಟು ಜನಾಂಗದ ಭಾಷೆಯಲ್ಲಿ ಇರುವ ಪುಸ್ತಕಗಳು (ಪ್ರಪಂಚದಲ್ಲಿ) ಎರಡೇ ಎರಡು . ಒಂದು ಬೈಬಲ್ , ಇನ್ನೊಂದು ಈತ ಬರೆದ ಔಷಧೀಯ ಸಸ್ಯಗಳ ಪುಸ್ತಕ.

ಪ್ಲಾಟ್ಕಿನ್ ಔಷಧೀಯ  ಸಂಗ್ರಹಣೆ ಅಷ್ಟು ಸುಲಭದ್ದಾಗಿರಲಿಲ್ಲ ಈತ ಬ್ರೆಜಿಲ್ , ಫ್ರೆಂಚ್ ಗಯಾನ , ಸುರಿನಾಮೆ ಮತ್ತು ವೆನಿಜುಲಾ ದೇಶಗಳ ಬುಡಕಟ್ಟು ಜನಾಂಗದವರೊಡನೆ ಕೆಲಸ ಮಾಡುತ್ತಿದ್ದಾಗ ಅನೇಕ ಕಷ್ಟಗಳನ್ನು ಅನುಭವಿಸಿದನು ಮೊದಲ ಬಾರಿಗೆ ಈತ ಫ್ರಂಚ್ ಗಯಾನಕ್ಕೆ ಹೋದಾಗ ಹಾದಿಯ ಹೊರಗಿನ ಗುಡಿಸಿನಲ್ಲಿ ರಾತ್ರಿ ಮಲಗಿರುತ್ತಾನೆ . ಕಡುಕಪ್ಪು ರಾತ್ರಿಯಲ್ಲಿ ಹೊಳೆವ ಎರಡು ಕಣ್ಣುಗಳು ಗುಡಿಸಿಲಿನ ಬಿದುರಿನ ಕಂಡಿಯಲ್ಲಿ ಕಾಣುತ್ತವೆ . ಅದೊಂದು ಜಾಗ್ವಾರ್ ಪ್ರಾಣಿಯಾಗಿರುತ್ತದೆ. ಗುಡಿಸಿಲಿನ ಸುತ್ತಾ ಸುತ್ತು ಹಾಕುತ್ತಿರುತ್ತದೆ. ಈತನಿಗೆ ಜಂಘಾಬಲವೇ  ಉಡುಗಿಹೋಗುತ್ತದೆ .ಬೆವೆತು ಎದ್ದು ಕುಳಿತು ಬಿಡುತ್ತಾನೆ. ಇದು ಕನಸೋ , ನನಸೋ  ಎಂಬ ಭ್ರಮೆಗೆ ಒಳಗಾಗುತ್ತಾನೆ . ತನ್ನ ಸಹಾಯಕನ ಬರುವಿಗಾಗಿ ಬೆಳಗಾಗುವುದನ್ನೇ ಕಾಯುತ್ತಾ  ಕುಳಿತಿರುತ್ತಾನೆ . ಆಗ ದೇವರ ಗುಡ್ಡನೆ  ಬರುತ್ತಾನೆ . ಆತನನ್ನು ಕೇಳಿದಾಗ ಈ ಜಾಗ್ವಾರ್ ನಾನೇ ಎಂದು ಹೇಳುತ್ತಾನೆ. ಅವನು ಪ್ಲಾಟಿಕಿನ್ ಗೆ  ಧೈರ್ಯ ತುಂಬಲು ಹಾಗೆ ಹೇಳಿದನೋ ,ಅಥವಾ ….. ಪ್ಲಾಟಿಕಿನ್ ಗೆ ಸತ್ಯ ಏನಂಬುದು ಇಂದಿಗೂ ತಿಳಿದಿಲ್ಲ.

ಬುಡಕಟ್ಟು ಜನರು ಹೊಸದಾಗಿ  ಬಂದ ತಮ್ಮ ಅತಿಥಿಗಳನ್ನು ಸತ್ಕಾರ ಮಾಡಲು ಸಂಭ್ರಮಿಸುತ್ತಾರೆ . ದೇವರ ಗುಡ್ಡ  ಸೊರೆ ಬುರುಡೆಯಂಥ ಬುರುಡೆಯ  ಬಿರುಡೆ ತೆಗೆದು ಅತಿಥಿಯ ಅಂಗೈ  ಮೇಲೆ ಕರಿ ದ್ರವವನ್ನು ಸುರಿಯುತ್ತಾನೆ . ಅದನ್ನು ದೇವರಗುಡ್ಡ  ತಾನು ಮೂಸಿ ಅತಿಥಿಯೂ  ಮೂಸುವಂತೆ ತೋರಿಸುತ್ತಾನೆ . ಪ್ಲಾಟ್ಕಿನ್  ಮೂಸುತ್ತಾನೆ . ಮೂಸಿದ ತಕ್ಷಣ ಅವನ ನರ ನಾಡಿಗಳೆಲ್ಲ ಬಿಗಿದುಕೊಂಡು, ಒಡೆದು ರಕ್ತವೆಲ್ಲಾ ಸುರಿದು ಹೋಗುವ ಅನುಭವವಾಗುತ್ತದೆ. ಅವನು ಎದ್ದಿದ್ದು ಮರುದಿನ ಬೆಳಗ್ಗೆ ಹತ್ತು ಗಂಟೆಗೆ .

ಈತ ಇನ್ನೊಮ್ಮೆ ಸೆಖೆಯನ್ನು ತಾಳಲಾರದೆ ಹೊಳೆಯಲ್ಲಿ ಸ್ನಾನಕ್ಕೆ ಇಳಿದು ಮುಂದೆ ಈಜುವಷ್ಟರಲ್ಲಿ ಅವನಿಗೆ ಕಂಡದ್ದು ತೊಡೆ ಗಾತ್ರದ ಆರು ಅಡಿ ಉದ್ದದ ‘ವಿದ್ಯುತ್ ಈಲ್ ‘ ಎಂಬ ಜಲಚರ ಪ್ರ್ರಾಣಿ. ಅದು ಇವನೆಡೆಗೆ  ಶರವೇಗದಲ್ಲಿ ಬರುತ್ತಿರುತ್ತದೆ. ಆಗ ತನ್ನ ಶಕ್ತಿಯನ್ನೆಲ್ಲಾ ಬಿಟ್ಟು ಈಜಿ ದಡ ಸೇರುತ್ತಾನೆ. ವಿದ್ಯುತ್ ಈಲ್ ಎಂಬ ಜಲಚರ ಪ್ರಾಣಿ ಮನುಷ್ಯ ಜೀವಕ್ಕೆ ಅತ್ಯಂತ ಮಾರಕವಾದುದ್ದು . ಇದು ತನ್ನ ಆಹಾರಕ್ಕೆ ಬಾಯಿ ಮತ್ತು ಬಾಲದಿಂದ ಒಮ್ಮೆಗೆ ಹೊಡೆಯುತ್ತದೆ. ಹೀಗೆ ಹೊಡೆದಾಗ ಮೈಗೆ ವಿದ್ಯುತ್ ಶಾಕ್ ಹೊಡೆದಂತಾಗುತ್ತದೆ . ಬದುಕುಳಿದರೆ ಮೂಳೆ ಮೂಳೆಗಳ ಸಂದುಗಳಲ್ಲೂ ಭರಿಸಲಾಗದ ನೋವುಂಟಾಗುತ್ತದೆ. ಹೆಚ್ಚಿಲಿನ ವೇಳೆ ಸಾವು ಸನ್ನಿಹಿತವಾದಂತಯೇ .

ಮತ್ತೊಮ್ಮೆ ಸುರಿನಾಮೆ ದ್ವೀಪಕ್ಕೆ ವಿಮಾನದಲ್ಲಿ ಬಂದಿಳಿದಿದ್ದೆ ತಡ ಅಲ್ಲಿ ಅವನಿಗೆ ಕಂಡಿದ್ದು ಭೀಕರ ಆಂತರಿಕ ಯುದ್ಧ. ಹಗಲಿನಲ್ಲಿ ಒಂದು ನೊಣವೂ ಬೀದಿಯಲ್ಲಿ ಸುಳಿಯುತ್ತಿರಲಿಲ್ಲ. ರಾತ್ರಿಯೆಲ್ಲಾ ಬಂದೂಕಿನ ಶಬ್ದದಿಂದ ತುಂಬಿ ಹೋಗುತ್ತಿತ್ತು. ಶಸ್ತ್ರಾತ್ರ ತುಂಬಿದ ವಾಹನಗಳ ಭರಾಟೆ, ಜನಗಳ ಕೂಗಾಟ, ಚೀರಾಟ, ಮನೆಯಿಂದ ಬುಡಕಟ್ಟು ಜನರನ್ನು ಎಳೆದೆಳೆದು ಕೊಳ್ಳುವ ದೃಶ್ಯ. ಇದು ಎಡಪಂಥೀಯ ಮತ್ತು ಬಲಪಂಥೀಯರ ನಡುವಿನ ಸಮರ. ಇದಕ್ಕಾಗಿ ಕ್ಯೂಬಾದ ಬಾಡಿಗೆ ಸೈನಿಕರು ಮುತ್ತಿದ್ದರು. ಪ್ಲಾಟಿಕಿನ್ ಇವೆಲ್ಲವನ್ನೂ  ಗಮನಿಸುತ್ತಾ ಗುಡಿಸಿಲೊಂದರಲ್ಲಿ ಅವಿತು ಕುಳಿತಿದ್ದ . ಕೊನೆಗೆ ಬಿಳಿ ಬಾವುಟದ ಪುಟ್ಟ ವಿಮಾನವೊಂದು ಬಂದಿತು. ಅದರಲ್ಲಿ ಈತ ಹಾರಿ ತಪ್ಪಿಸಿಕೊಂಡ. ನಾಲ್ಕು ದಿವಸ ಉಪವಾಸವನ್ನು ಮಾಡಿದ್ದ .

ಮತ್ತೊಮ್ಮೆ ವಿಷಬಾಣದ ಪ್ರಯೋಗ ನೋಡಲು ಮತ್ತು ಅದನ್ನು ತಯಾರಿಸುವ ವಿಷ ಸಸ್ಯಗಳನ್ನು ಅರಿಯಲು ಒಬ್ಬ ಗುಡ್ಡನ ಜೊತೆ ಕಾಡಿಗೆ ಹೋಗುತ್ತಾನೆ . ಅಲ್ಲಿ ಆ ಗುಡ್ಡ ಬಿಟ್ಟ ಬಾಣ  ಮರದ ಮೇಲೆ ಕುಳಿತ ಪಕ್ಷಿಯೊಂದಕ್ಕೆ ಹೊಡೆದು ಕೆಳಗೆ ಬೀಳುತ್ತದೆ. ಬೀಳುವಾಗ ಆ ಬಾಣ ಆ ಗುಡ್ಡನ ಕೈಗೆ ತರಚಿಕೊಂಡು ಕೆಳಗೆ ಬೀಳುತ್ತದೆ . ಒಂದು ನಿಮಿಷದಲ್ಲಿ ಆ ಗುಡ್ಡ ನೆಲಕ್ಕೆ ಬಿದ್ದು ಹೊರಳಾಡಿ ಪ್ರಾಣ ಬಿಡುವುದನ್ನು ಕಣ್ಣಾರೆ ಕಂಡು ವಿಚಲಿತನಾದನು. ಸ್ವಲ್ಪದರಲ್ಲಿಯೇ ಆ ಬಾಣ ತಗಲುವುದರಿಂದ ಬಚಾವಾಗುತ್ತಾನೆ.ಹೀಗೆ ಅನೇಕ ಬಾರಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡ ಪ್ಲಾಟ್ಕಿನ್ ಇಂದೂ ಬಟಾಬಯಲಾಗುತ್ತಿರುವ ಅಮೆಜಾನ್ ಕಾಡನ್ನುಉಳಿಸುವುದರಲ್ಲಿ ಮತ್ತು ಬುಡಕಟ್ಟು ಜನಾಂಗದ ಗುಡ್ದರಿಗೆ ಔಷಧಿ ತಯಾರಿಕೆಯನ್ನು ಕಲಿಸುತ್ತಾ ಹೊಸ ಗುಡ್ದರನ್ನು ತಯಾರು ಮಾಡುತ್ತಿದ್ದಾನೆ.

ಅತ್ಯಂತ ವೇಗವಾಗಿ ನಾಶಗೊಳ್ಳುತ್ತಿರುವ ಅಮೆಜಾನ್ ಕಾಡಿನ ಗುಡ್ದರ ಪಾರಂಪಾರಿಕ ಜ್ಞಾನ, ವಿವೇಕಾ ಮತ್ತು ಸಂಸ್ಕೃತಿಯನ್ನು ಉಳಿಸಲು ಈತ ಹಗಲಿರುಳು ದುಡಿಯುತ್ತಿದಾನೆ. ಇಂತಹ ಗುಡ್ದರ ಜ್ಞಾನ ಸಂಪತ್ತು ಕಾಡಿನಂತಯೇ ನಶಿಸಿಹೊಗುತ್ತಿರುವುದನ್ನು ತಡೆಗಟ್ಟಲು ಬುಡಕಟ್ಟು ಜನಾಂಗದ ಯುವಕರಿಗೆ ಅವರದೇ ಜ್ಞಾನವನ್ನು ವಾಪಸ್ಸು ಕೊಡುತ್ತಿದ್ದಾನೆ. ಪ್ಲಾಟ್ಕಿನ್ ಅಮೆಜಾನ್ ಕನ್ಸರ್ವೇಷನ್ ಟೀಂ ನ ಅಧ್ಯಕ್ಷನಾಗಿ ಜೀವ ವೈವಿಧ್ಯತೆಯನ್ನು , ಆರೋಗ್ಯವನ್ನು, ಸಂಸ್ಕೃತಿಯನ್ನು ಉಳಿಸಲು ಕೆಲಸ ಮಾಡುತ್ತಿದ್ದಾನೆ. ಇವನ ಟೇಲ್ಸ್ ಆಫ್ ಎ ಶಮನ್ಸ್, ಅಪ್ರೆಂಟಿಸ್ ಮತ್ತು ಮೆಡಿಸಿನ್ ಕ್ವೆಸ್ಟ್ ಎಂಬ ಪುಸ್ತಕಗಳಿಗೆ ಟೈಮ್ ಮ್ಯಾಗಜಿನ್ ಹೀರೋ ಫಾರ್ ದಿ ಪ್ಲಾನೆಟ್ ಎಂಬ ಬಿರುದನ್ನೂ ಕೊಟ್ಟಿತು. ಈ ಬುಡಕಟ್ಟು ಜನಾಂಗಗಳನ್ನು ಕಾಡಿನಿಂದ ಕಿತ್ತೆಸೆಯದೆ ಅವರ ಜ್ನಾನಭಂಡಾರವನ್ನು ಉಪಯೋಗಿಸಿಕೊಂಡು ಅವರಿಗೆ ಅಲ್ಲೇ ಕೆಲಸಗಳನ್ನು ಕೊಡುವುದರ ಮೂಲಕ ಕಾಡಿನಲ್ಲೇ ಉಳಿಸಿಕೊಳ್ಳಬಹುದು ಎಂದು ನಂಬಿದ್ದಾನೆ. ಈತನು ಸುರಿನಾಮೆ, ಕೊಲಂಬಿಯಾ, ಬ್ರಜಿಲ್ ದೇಶದ ಜ್ಞಾನ ಸಂಪತ್ತನ್ನು ಉಳಿಸಲು ಶ್ರಮಿಸುತ್ತಿದ್ದಾನೆ. ಬುಡಕಟ್ಟು ಜನರ “ಬೌದ್ದಿಕ ಸಂಪತ್ತಿನ ಹಕ್ಕಿಗಾಗಿ” ಹೋರಾಟ ನಡೆಸುತ್ತಲೇ ಇದ್ದಾನೆ.

ಪ್ಲಾಟ್ಕಿನ್ ಅನ್ನು ಅರಸಿ ಅನೇಕ ಪ್ರಶಸ್ತಿಗಳು ಬಂದಿವೆ. ಈತ ವರ್ಲ್ಡ್ ವೈಲ್ಡ್ ಲೈಫ್ ಫಂಡ್ ನ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾನೆ. ಸ್ಮಿತ್ ಸೋನಿಯನ್ ಇನ್ಸ್ಟಿಟ್ಯೂಟ್ ನಲ್ಲಿ ಸಂಶೋಧಕನಾಗಿಯೂ ಕೆಲಸ ಮಾಡಿದ್ದಾನೆ. ಪ.ಬಿ. ಎಸ್ ನೋವಾ ಎಂಬ ಕಂಪನಿಯು ಇವನ ಮೇಲೆ ಒಂದು ಡಾಕ್ಯುಮೆಂಟರಿ ಚಿತ್ರವನ್ನು ಸಹ ಮಾಡಿದೆ. ಅಮೆಜಾನ್ ಎನ್ನುವ ಸಿನೆಮಾದಲ್ಲಿ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಹೀಗೆ ಬೀದಿ ಅಲೆಯುತ್ತಿದ್ದ ಹುಡುಗನೊಬ್ಬನ ಕನಸು ಅವನ ನಿಷ್ಠೆಯಿಂದ ನನಸಾಗಿದೆ.

ಈ ಹಿನ್ನಲೆಯಲ್ಲಿ ನಮ್ಮ ದೇಶದಲ್ಲಿ ಇರುವ ಕಾಡುಗಳು ಮತ್ತು ಅಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರ ವೈದ್ಯಕೀಯ ಜ್ಞಾನವನ್ನು ಗುರುತಿಸಿ, ವೈಜ್ಞಾನಿಕವಾಗಿ ವಿಶ್ಲೇಷಿಸಿ ಅನೇಕ ಔಷಧೀಯ ಸಸ್ಯಗಳನ್ನು, ಅವುಗಳ ಉಪಯೋಗವನ್ನು ಕಂಡುಹಿಡಿದುಕೊಳ್ಳುವ ಪಾಠವಾಗಿ ನಾವು ನೋಡಬೇಕಾಗಿದೆ. ಇಡೀ ಬುಡಕಟ್ಟು ಜನಾಂಗವಲ್ಲದೆ ಇತರರೂ ಆಶ್ಚರ್ಯಪಡುವಂತೆ ಖಾಯಿಲೆಗಳನ್ನು ವಾಸಿಮಾಡುವ ಕರ್ನಾಟಕದ ಬುಡಕಟ್ಟು ಜನಾಂಗಗಳಾದ ಜೇನುಕುರುಬ, ಬೆಟ್ಟಕುರುಬ, ಇರುಳ, ಪಣಿಯ ಮುಂತಾದ ಜನಾಂಗಗಳ ದೇವರಗುಡ್ಡಗಳನ್ನು ನಮ್ಮ ಗುರುಗಳೆಂದು ಭಾವಿಸಿ ಅವರ ಅಪಾರ ಜನನ ಸಂಪತ್ತನ್ನು , ಕಾಡಿನ ಉಳಿವನ್ನು, ಪರ್ಯಾವರಣವನ್ನು ರಕ್ಷಿಸುವ ಕಲೆಯನ್ನು ನಾವು ಪ್ಲಾಟ್ಕಿನ್ನಂತವರಿಂದ ಕಲಿಯಬೇಕಾಗಿದೆ. ಅಲ್ಲದೆ ಈ ಜಾಗತೀಕರಣದ ಹೊತ್ತಿನಲ್ಲಿ ಏಕ ಮಾದರಿಯ ಜ್ನಾನಸ್ವಾಮ್ಯವನ್ನು ಬೆಳೆಸಿ ಪರ್ಯಾಯ ಆಲೋಚನಾಕ್ರಮವನ್ನು ಹುಟ್ಟುಹಾಕುವ ಕಾಲ ನಮಗೆ ಎದುರಾಗಿದೆ.