Title : Bhudakattu Samskrithi
Year : 2011
ಸಂಪಾದಕರ ನುಡಿ (ಕಿಕ್ಕೇರಿ ನಾರಾಯಣ)
ಒಂದಾನೊಂದು ಕಾಡು ಆ ಕಾಡಲ್ಲಿ ಒಂದು ಹಾಡಿ. ಆ ಹಾಡಿಯಲ್ಲಿ ಜನ ಸುಖ-ಸಂತೋಷದಿಂದ ಬಾಳುತ್ತಿದ್ದರು. ಕಾಡು ಹಸಿರು ತುಂಬಿ ಹಣ್ಣು , ಕಾಯಿ, ಜೇನು ಮುಂತಾದುವುಗಳಿಂದ ತುಂಬಿ ತುಳುಕುತ್ತಿತ್ತು. ಪ್ರತಿ ವರ್ಷ ವಸಂತಕಾಲದಲ್ಲಿ ಆ ಹಾಡಿಗೆ ಒಂದು ಹಕ್ಕಿ ಬಂದು, ಮರದ ಮೇಲೆ ಕುಳಿತು ಸುಂದರವಾಗಿ ಹಾಡುತ್ತಿತ್ತು. ಆ ಹಾಡಿಯ ಜನ ಆ ಹಕ್ಕಿಯ ಬರುವಿಗಾಗಿ ಕಾಯುತ್ತಿದ್ದರು. ಆ ಹಕ್ಕಿಯ ಹಾಡನ್ನು ಕೇಳಿದ ತಕ್ಷಣ ಅವರು ತಮ್ಮ ಹಬ್ಬವನ್ನು ಆಚರಿಸುತ್ತಿದ್ದರು, ಹಾಡುತ್ತಿದ್ದರು , ಕುಣಿಯುತ್ತಿದ್ದರು. ಒಮ್ಮೆ ಆ ಹಕ್ಕಿ ಬರಲೇ ಇಲ್ಲ. ಕಾದು ಕಾದು ಸಾಕಾಗಿ ಹಬ್ಬ ನಡೆಯಲೇ ಇಲ್ಲ. ಹಾಡು ಹಾಡಲೇ ಇಲ್ಲ. ಹಣ್ಣು, ಕಾಯಿ, ಹೂ, ಜೇನು ಏನೂ ಸಿಕ್ಕಲಿಲ್ಲ. ನಿರಾಶರಾಗಿ ಹಕ್ಕಿಯ ಬರುವಿಗೆ ಕಾಯ್ದೇ ಕಾದರು. ತಾವಿದ್ದ ಕಾಡು ಹಾಳಾಯಿತು.
ಆ ಹಕ್ಕಿಯನು ಒಬ್ಬ ರಾಜಕುಮಾರ ಅದರ ಕಾಡಿಗೆ, ಸೌಂದರ್ಯಕ್ಕೆ ಮರುಳಾಗಿ ಅದನ್ನು ತನ್ನ ಪ್ರಿಯತಮೆಗೆ ತೆಗೆದುಕೊಂಡು ಹೋಗಿ ಪಂಜರದೊಳಗೆ ಬಂಧಿಸಿಟ್ಟಿದ್ದ.
ಹಕ್ಕಿಯ ಹಾಡು ನಿಂತುಹೋಯಿತು. ಹಾಡಿನಿಂದ ಹಬ್ಬ ನಿಂತು ಹೋಯಿತು. ಹಬ್ಬ ನಿಂತು ಹೋದ್ದರಿಂದ ಅವರ ಸೃಷ್ಟಿಪುರಾಣ ನಿಂತು ಹೋಯಿತು. ಆದ್ದರಿಂದ ಇಡೀ ಬುಡಕಟ್ಟಿನ ಬದುಕೇ ಸತ್ತು ಹೋಯಿತು.
ಈಗ ನಮ್ಮ ಕೆಲಸ ಆ ಹಾಡಿಯ ಜನರನ್ನ ಹುಡುಕಿಕೊಂಡು ಹೋಗಬೇಕು.ಆ ಹಕ್ಕಿಯನ್ನು ತರಬೇಕು. ಹಾಡನ್ನು ಹಾಡಿಸಬೇಕು . ಇಲ್ಲದಿದ್ದರೆ ನಮ್ಮ ದೇಶದಲ್ಲಿರುವ ಇಡೀ ನೂರಾರು ಬುಡಕಟ್ಟುಗಳ ಬಾಳ್ವೆಯನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ.
ಇದಕ್ಕಾಗಿ ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ಅನೇಕ ಸಿದ್ದಾಂತಗಳು ಮುನ್ನೆಲೆಗೆ ಬರುತ್ತಿವೆ. ಈ ಸಿದ್ಧಾಂತಗಳು ಬುಡಕಟ್ಟು ಸಮಾಜದ ಸಾಮಾಜಿಕ, ಸಾಂಸ್ಕೃತಿಕ , ರಾಜಕೀಯ ಭಾಷೆಯನ್ನೂ ಹೊಸರೀತಿಯಿಂದ ವ್ಯಾಖ್ಯಾನ ಮಾಡಬೇಕಾಗಿದೆ. ಇದಕ್ಕಾಗಿ ಪಾಶ್ಚಿಮಾತ್ಯ ಸಿದ್ದಾಂತಗಳನ್ನು ಸ್ವದೇಶಿಯಾಗಿ ಮಾಡಿಕೊಳ್ಳಲು ಪಳಗಿಸಲು ಪ್ರಯತ್ನ ನಡೆಯುತ್ತಿದೆ. ಅಲ್ಲದೆ ಈ ಪಠ್ಯಗಳನ್ನು ಎಡಪಂಥೀಯರು, ಬಲಪಂಥೀಯರು, ಮಾರಕಿಸ್ಟರು, ಸಮಾಜವಾದಿಗಳು ಈ ಸಾಂಸ್ಕೃತಿಕ ಚರಿತ್ರೆಗಳನ್ನು ತಮ್ಮದೇ ವಿಧಾನದಲ್ಲಿ ನೋಡಲು ಪ್ರಯತ್ನಿಸುತ್ತಿದ್ದಾರೆ . ಅಲ್ಲದೆ ಅಲ್ಪ ಸಂಖ್ಯಾತರ, ವಸಾಹತುಶಾಹಿಗಳ, ವಸಾಹತೋತ್ತರ ದೃಷ್ಟಿಗಳಿಂದಲೂ ಸಹ ಈ ಚರಿತ್ರೆಯನ್ನು ವ್ಯಾಖ್ಯಾನ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಈ ಅಧ್ಯಯನಕ್ಕಾಗಿ ಮಹಾಪರಂಪರೆ (great tradition) – ಪುಟ್ಟ ಪರಂಪರೆ, ಮಾರ್ಗ – ದೇಸಿ, ಸಂಸ್ಕ್ರುತಕರಣ-ಪಾಶ್ಚಾತಿಕರಣ ಈ ಎಲ್ಲಾ ದೃಷ್ಟಿಗಳಿಂದಲೂ ಸಹ ಬುಡಕಟ್ಟು ಜನಾಂಗದ ಅಸ್ತಿತ್ವ , ಸಂಸ್ಕೃತಿ, ಭಾಷೆ, ರಾಜಕೀಯ ಇವುಗಳನ್ನು ಮುನ್ನೆಲೆಗೆ ತಂದು ಕೇವಲ ಮೌಖಿಕ ಸಂಪ್ರದಾಯದ ಮೇಲೆ ಇಂದೂ ಬದುಕುತ್ತಿರುವ ಜನಾಂಗಗಳ ಮನಸನ್ನು ಪುನರಸೃಷ್ಟಿಸುವ ಅವಶ್ಯಕತೆ ಹೆಚ್ಚಾಗಿದೆ.
ನಮ್ಮ ಭಾರತ ದೇಶದ ಸಾಂಸ್ಕೃತಿಕ ಸಮಗ್ರತೆ ಭಾಷಾಭಿನ್ನತೆಯ ಮೇಲೆ ನಿಂತಿದೆ. ಅಲ್ಲವೇ ಸಾಮಾಜಿಕ-ಸಾಂಸ್ಕೃತಿಕ, ಧಾರ್ಮಿಕ , ಜನಾಂಗೀಯ ಬಹುಳತೆಗಳು ಸೇರಿ ಇವೆಲ್ಲವೂ ಒಟ್ಟಾಗಿ ಬದುಕುತ್ತಿವೆ.ಇದು ಈ ದೇಶದ ಅನನ್ಯತೆ ಎಂದು ಭಾವಿಸಬಹುದು. ಪಾಶ್ಚಾತ್ಯರಲ್ಲಿ ಈ ವೈವಿಧ್ಯತೆಗಳು ಅಭಿವೃದ್ದಿಗೆ ಮಾರಕ ಎಂದು ಭಾವಿಸಲಾಗಿದೆ. ಆದರೆ ನಮ್ಮ ದೇಶದಲ್ಲಿ ವೈವಿಧ್ಯತೆಯು ಚಾರಿತ್ರಿಕವಾಗಿಯು ಒಂದು ಶಕ್ತಿಯೆಂದು ಭಾವಿಸಿಕೊಂಡು ಬರಲಾಗಿದೆ. ಈ ವೈವಿಧ್ಯತೆಗಳು ಭಾರತೀಯ ಸಾಂಸ್ಕೃತಿಕ ಪಠ್ಯಗಳನ್ನು ಪುನರ್ ಸೃಷ್ಟಿಸಲು ಆಧಾರಗಳಾಗಿವೆ. ಹೀಗೆ ನಮ್ಮ ಸಮಾಜವೂ ಅನೇಕ ಸಂಸ್ಕೃತಿಗಳ ಅಗರವಾಗಿರುವುದರಿಂದ ಇದಕ್ಕೆ ಒಂದು ಕೇಂದ್ರ ಎಂಬುದಿಲ್ಲ. ಆದ್ದರಿಂದ ಇದು ಅನೇಕ ಕೇಂದ್ರಗಳನ್ನೊಳಗೊಂಡ ಸಾಂಸ್ಕೃತಿಕ ಮಹಾಪಠ್ಯ. ಈ ಸಾಂಸ್ಕೃತಿಕ ಮಹಾಪಠ್ಯಗಳನ್ನು ಬಹುಕೇಂದ್ರಿತ ನೆಲೆಯಲ್ಲೇ ನೋಡಬೇಕಾಗಿದೆ.
ವಸಾಹತುಷಾಹಿಯನ್ನು ಎದುರಿಸುವಾಗ ನಮ್ಮ ಚರಿತ್ರೆಯನ್ನು ಪುನರಸೃಷ್ಟಿ ಮಾಡುವಾಗ ಕೆಲವು ಬ್ರಾಹ್ಮಣಶಾಹಿ ದೃಷ್ಟಿಕೋನ ಮುನ್ನೆಲೆಗೆ ಬಂದಿತು. ಇದರಿಂದ ವೈದಿಕಶಾಹಿ ಚಾರಿತ್ರ್ಯ ಪುನರಸೃಷ್ಟಿಯಾಯಿತು. ಇದರಿಂದ ಈ ದೇಶದ ಬಹುಜನರ ವೈವಿದ್ಯಮಯ ಚರಿತ್ರೆ ಹಿನ್ನೆಲೆಯಲ್ಲೇ ಉಳಿಯಿತು. ‘ಪವಿತ್ರ ಪಠ್ಯಗಳು’ ಮಾತ್ರ ಚರಿತ್ರೆಯ ಪುನರ್ ರಚನೆಯ ಭಾಗವಾಗಿ ಬಂದವು. ಇದನ್ನೆ ರಾಷ್ಟ್ರೀಯ ಚರಿತ್ರೆಯೆಂದು ಕರೆಯಲಾಯಿತು. ಪ್ರಾಯಶಃ ಗಾಂಧೀಜಿ ಒಬ್ಬರೇ ಈ ಬ್ರಾಹ್ಮಣಶಾಹಿ ಮೌಲ್ಯಗಳನ್ನು ಬಿಟ್ಟುಕೊಟ್ಟು ಜಾನಪದ ಪರಂಪರೆಯ ಸಮಾಜವನ್ನು ಮತ್ತು ಮೌಲ್ಯವನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದರು . ಗಾಂಧೀ ಈ ಸಮಾಜದಲ್ಲಿ ಬಡವರ, ಹೆಣ್ಣುಮಕ್ಕಳ ಆದಿಮತೆಯ ಚರಿತ್ರೆಯನ್ನು ಈ ರಾಷ್ಟ್ರದ ಶಕ್ತಿಯೆಂದು ಗಮನಿಸಿ ಈ ಸಮಾಜಗಳನ್ನು ಎತ್ತಿಹಿಡಿಯಲು ಪ್ರಯತ್ನಿಸಿದರು.
ಈಗಿನ ನಮ್ಮ ಅರಿವಿನ ಪ್ರಕಾರ ಚರಿತ್ರಯೆಂದರೆ ಕೇವಲ ರಾಜರ, ಅವರ ಯುದ್ದಗಳ , ಸೋಲು –ಗೆಲುವಿನ ಚರಿತ್ರೆ ಆಗಿದೆ. ಈ ಚರಿತ್ರೆಯು ಸಹ ಬರೆದವರ ದೃಷ್ಟಿಕೋನವನ್ನು ಮಾತ್ರ ಪ್ರತಿಫಲಿಸುತ್ತದೆ. ಸೋತವರ ಚರಿತ್ರೆ ನಮಗೆ ಕಾಣುವುದೇ ಇಲ್ಲ. ಅಷ್ಟೇ ಏಕೆ ಸಾಮಾನ್ಯ ಜನರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಚರಿತ್ರೆ ನಮಗೆ ಗೊತ್ತೇ ಇಲ್ಲ. ಆದರೆ ಚರಿತ್ರೆ ಎಂಬುದು ಸಾಮ್ರಾಜಯಶಾಹಿ ದೃಷ್ಟಿಕೋನದಿಂದ ಮಾತ್ರ ರಚಿತವಾಗಿರುವ ಚರಿತ್ರೆಯೆಂದು ನಂಬಲಾಗಿತ್ತು . ಅಂತಹ ಚರಿತ್ರೆ ಸಂಪೂರ್ಣ ಚರಿತ್ರೆಯಲ್ಲ, ಒಂದು ದೃಷ್ಟಿಕೋನದ ಚರಿತ್ರೆ. ಬುಡಕಟ್ಟು ಜನಾಂಗದ ಚರಿತ್ರೆ ಇನ್ನು ಅವ್ಯ್ಕ್ತವಾಗೆ ಉಳಿದಿದೆ. ಈ ಚರಿತ್ರೆಗಳೆಲ್ಲಾ ಬುಡಕಟ್ಟು ಜನಾಂಗದ ಲೋಕದ್ರುಷ್ಟಿಯನ್ನು ಸಾದರ ಪಡಿಸುವ ಚರಿತ್ರಯೇ ಆಗಿರುತ್ತದೆ. ಇದನ್ನು ನಾವು ಪುನರಸೃಷ್ಟಿಸಲು ಬುಡಕಟ್ಟು ಜನಾಂಗಗಳ ಮಿಥ್ ಗಳು , ದಂತಕಥೆಗಳು ಇತ್ಯಾದಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಬೇಕಾಗಿದೆ. ಮೌಖಿಕ ಸಂಪ್ರದಾಯದಲ್ಲಿ ಇಂಥಹ ಪಠ್ಯಗಳು ರೂಪಕಾತ್ಮಕವಾಗಿ ಮೈದಾಳಿರುತ್ತವೆ. ಮೇಲ್ನೋಟಕ್ಕೆ ಮಿಥ್ಗಳು ಮತ್ತು ದಂತಕಥೆಗಳಿಗೆ ನಿಜದಲ್ಲಿ ನಡೆದಿರುವ ಕ್ರಿಯೆ ಎಂಬುದು ಗೊತ್ತಾಗದಿದ್ದರೂ ಅವುಗಳ ಆಶಯಗಳನ್ನು ವಿಶ್ಲೇಷಿಸಿದಾಗ ನಿಜ ಚರಿತ್ರೆ ಹೊರಬೀಳುತ್ತವೆ . ಇಷ್ಟಕ್ಕೂ ರಾಜರ ಚರಿತ್ರೆಗಳೂ ಸಹ ಒಂದು ದೃಷ್ಟಿಕೋನವನ್ನು ಮಾತ್ರ ಪ್ರತಿಫಲಿಸುತ್ತಿವೆ. ಆದ್ದರಿಂದ ಯಾವ ಚರಿತ್ರೆ ಸಹ ಪರಿಪೂರ್ಣ ಚರಿತ್ರೆ ಅಲ್ಲ. ಆದರಿಂದ ಚರಿತ್ರೆಗೆ ನಾನ ಸತ್ಯಗಳಿರುತ್ತವೆ.
ನಮ್ಮ ದೇಶದಲ್ಲಿ ಮುಖ್ಯ ಭಾಷೆಗಳೆಂದು ಭಾವಿಸಿರುವ ಅದಕ್ಕಿಂತ ಅಮುಖ್ಯವೆಂದು ಭಾವಿಸಿರುವ ಭಾಷೆಗಳೇ ಹೆಚ್ಚಿನ ಸಂಖೆಯಲ್ಲಿವೆ. ಇವುಗಳಲ್ಲಿ ಮುಖ್ಯವಾಗಿ ಇರುವ ಭಾಷೆಗಳೆಂದರೆ ಬುಡಕಟ್ಟು ಜನಾಂಗಗಳ ಮಾತನಾಡುವ ಭಾಷೆ. ಇವುಗಳೇ ಈಗ ಸಾವಿನ ಅಂಚಿಗೆ ಬಂದು ನಿಂತಿರುವ ಭಾಷೆಗಳು. ಈ ಭಾಷೆಗಳು ಸತ್ತರೆ ಇಡೀ ಜನಾಂಗದ ಆಚಾರ- ವಿಚಾರ, ಜ್ಞಾನ-ಶಿಸ್ತುಗಳು ಕಣ್ಮರೆಯಾಗುತ್ತವೆ . ಇಗ ನಾವು ಮುಖ್ಯವಾಗಿ ನಮ್ಮ ಅಧ್ಯಯನಗಳ ಮೂಲಕ ಕೇಂದ್ರಿಕರಿಸಬೇಕಾಗಿರುವುದು ಈ ಮೌಖಿಕ ಭಾಷೆಗಳ ಜ್ಞಾನಶಿಸ್ತುಗಳ, ಚರಿತ್ರೆಯ ಅಧ್ಯಯನವನ್ನು ನಡೆಸಬೇಕಾಗಿದೆ. ಇದು ಕೇವಲ ಬುಡಕಟ್ಟು ಜನರಿಗೆ ಮಾತ್ರವಲ್ಲ ಅವರಿಂದ ಉಳಿದವರು ಸಹ ತಿಳಿದುಕೊಳ್ಳಬಹುದಾದ ಅಂಶಗಳಿವೆ ಎಂಬ ವಿನಮ್ರತೆಯಿಂದ ಅಧ್ಯಯನಗಳನ್ನು ನಡೆಸಬೇಕಾಗಿದೆ. ಈ ಚರಿತ್ರೆಯ ಪುನರ್ ಅವಲೋಕನಕ್ಕೆ ಇಲ್ಲಿನ ಹೆಚ್ಚಿನ ಲೇಖನಗಳು ಪ್ರಯತ್ನಿಸುತ್ತದೆ . ಇಲ್ಲಿಯ ಚರ್ಚೆ ಓದುಗರನ್ನು ಚಿಂತನೆಗೆ ಹಚ್ಚುತ್ತವೆ ಎಂದು ನಂಬಿಕೆಯಿದೆ , ಜಾಗತೀಕರಣದ ಕಾರಣದಿಂದ ಭಾಷೆಯ ಅವಸಾನ ಶೀಘ್ರವಾಗಿ ನಡೆಯುತ್ತಿದೆ.
ಅನೇಕ ಆರ್ಥಿಕ , ಸಾಮಾಜಿಕ ಕಾರಣಗಳಿಂದ ಅನೇಕ ಬುಡಕಟ್ಟು ಭಾಷೆಗಳನ್ನು ಮಾತನಾಡುವ ಜನರು ಮುಖ್ಯ ರೂಪಾಂತರಗೊಳ್ಳುತ್ತಿದ್ದಾರೆ. ಇಂತಹ ಭಾಷೆಗಳ ಉಳಿಸುವ, ಬೆಳೆಸುವ ಪ್ರಯತ್ನಗಳು ನಡೆಯಬೇಕಾಗುತ್ತದೆ. ಈ ಸಂಚಿಕೆಯಲ್ಲಿ ಕೆಲವು ಲೇಖನಗಳು ಈ ಬಗ್ಗೆ ಚರ್ಚೆಗೆ ಹಚ್ಚುತ್ತವೆ .
ಬುಡಕಟ್ಟು ಜನಾಂಗಗಳ ಮುಖ್ಯ ಲಕ್ಷಣಗಳೆಂದರೆ :-
೧.ಭೂಮಿಯ ಮೇಲಿನ ಯಾವ ವಸ್ತುಗಳ ಮೇಲೆಯೂ ಮಾಲೀಕತ್ವವನ್ನು ಹೊಂದದೆ ಇರುವುದು.
೨.ಇವರೆಲ್ಲರೂ ತಮ್ಮ ಪುರಾತನರನ್ನು ಪೂಜಿಸುವುದು.
೩.ಸಾಮಗ್ರಿಗಳನ್ನು ಸಂಗ್ರಹಿಸಿ ಇಡದೆ ಇರುವುದು.
೪.ಇದ್ದದ್ದನು ಸಮುದಾಯಕ್ಕೆ ಹಂಚಿ ತಿನ್ನುವುದು.
ಈ ನಾಲ್ಕು ಮುಖ್ಯವಾಗಿ ಬುಡಕಟ್ಟು ಜನಾಂಗದ ಪ್ರಮುಖ ಲಕ್ಷಣಗಳು .
ಬುಡಕಟ್ಟು ಜನಾಂಗದ ಜ್ನಾನಶಿಸ್ತುಗಳಾದ ವೈದ್ಯ, ದೈಹಿಕ ಮತ್ತು ಮಾನಸಿಕ ಕಾಯಿಲೆಗಳನ್ನು ವಾಸಿಮಾಡುವುದು , ಪ್ರಕೃತಿಯೊಡನೆ ಇವರ ಸಂಬಂಧ ಮತ್ತು ಪ್ರಕೃತಿಯನ್ನು ತಮ ಆದಿ ಅಯ್ಯನ ಆವಾಸಸ್ಥಾನ ಎಂದು ನಂಬಿರುತ್ತಾರೆ . ಇವುಗಳ ಅರಿವನ್ನು ಗಮನಿಸದಿದ್ದರೆ ನಮ್ಮ ಅರಿವು ಸಂಪೂರ್ಣವಾಗುವುದಿಲ್ಲ.
ಅಮೇರಿಕಾದಲ್ಲಿ ವಾಷಿಂಗ್ಟನ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಸಿಯಾಟಲ್ ಎಂಬ ಬುಡಕಟ್ಟು ಜನಾಂಗದ ಮುಖ್ಯಸ್ಥನನ್ನು ಭೇಟಿಮಾಡಿ ನಿಮ್ಮ ಕಾಡನ್ನು ತಾನು ಕೊಳ್ಳುತ್ತೆನೆಂದು ಅದಕ್ಕೆ ಎಷ್ಟಾದರೂ ಹಣವನ್ನು ಕೊಡುತ್ತೇನೆಂದು ಹೇಳುತ್ತಾನೆ. ಆಗ ಆ ಬುಡಕಟ್ಟು ಜನಾಂಗದ ನಾಯಕ ಹೇಳುತ್ತಾನೆ. ಈ ನೆಲ, ಜಲ, ಗಾಳಿ, ಮರ, ಇವೆಲ್ಲವನ್ನೂ ನಾವು ದೇವರೆಂದು ಭಾವಿಸುತ್ತೇವೆ, ಅವನೇ ಇವನೆಲ್ಲಾ ಕೊಟ್ಟವನು. ನಾವು ಇದನ್ನು ಕೊಂಡುಕೊಂಡಿಲ್ಲ. ಆದ್ದರಿಂದ ನಾವು ಇದನ್ನು ಮಾರುವುದಿಲ್ಲ ಎಂದು ಹೇಳುತ್ತಾನೆ
ಇಲ್ಲಿಯ ಲೇಖನಗಳು ಕೇವಲ ಸಿದ್ದಾಂತಗಳನ್ನು ಮಾತ್ರ ಹೇಳುವುದಿಲ್ಲ. ಸಿದ್ದಾಂತಗಳ ಜೊತೆಗೆ ದೃಷ್ಟಾಂತಗಳು ಕೂಡ ಸೇರಿವೆ. ಈ ಲೇಖನಗಳನ್ನು ಉದಾಹರಣೆಗಳೆಂದು ಪರಿಗಣಿಸಿ ಮೌಖಿಕ ಸಂಪ್ರದಾಯದ ಮೇಲೆ ಸಂಶೋಧನೆ ಮಾಡುವವರು ಇದನ್ನು ಇನ್ನು ಬೆಳೆಸಬಹುದು ಎಂದು ನಂಬಿದ್ದೇವೆ.
ಬುಡಕಟ್ಟು ಜನಾಂಗದ ಬಗ್ಗೆ ಈ ಸಂಚಿಕೆಯನ್ನು ಆಗುಮಾಡಿದ ವಿದ್ವಾಂಸರುಗಳಿಗೆ ಮತ್ತು ಇದರಲ್ಲಿ ಕೆಲವು ಲೇಖನಗಳನ್ನು ಬಳಸಿಕೊಳ್ಳಲು ಅನುಮತಿಯಿತ್ತ ಎಲ್ಲರಿಗೂ , ಭಾಷಾಂತರ ಮಾಡಿಕೊಟ್ಟ ವಿದ್ವಾಂಸರಿಗೂ ವಂದನೆಗಳನ್ನು ಅರ್ಪಿಸುತ್ತೇನೆ.