‘ಸಾಹಿತ್ಯ ಮತ್ತು ಭಾಷೆ ಕುರಿತು’ – ಪುಸ್ತಕಲೋಕ

‘ಸಾಹಿತ್ಯ ಮತ್ತು ಭಾಷೆ ಕುರಿತು’ – ಪುಸ್ತಕಲೋಕ

ಸಾಹಿತ್ಯ ಮತ್ತು ಭಾಷೆ (೧೯೮೦) ಶಾಂತಿನಾಥ ದೇಸಾಯಿ , ಬೆಂಗಳೂರು ವಿಶ್ವವಿದ್ಯಾಲಯ , ಬೆಂಗಳೂರು

ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಮ್ಮ ಮಾತಾಪಿತೃಗಳ ನೆನಪಿಗಾಗಿ ‘ಮಾಸ್ತಿ ರಾಮಸ್ವಾಮಿ ತಿರುಮಲಮ್ಮ” ದತ್ತಿ ಉಪನ್ಯಾಸ ಮಾಲೆಯಲ್ಲಿ, ಶಾಂತಿನಾಥ ದೇಸಾಯರು ಕೊಟ್ಟ ಎರಡು ಉಪನ್ಯಾಸಗಳ ಪುಸ್ತಕರೂಪ ‘ಸಾಹಿತ್ಯ ಮತ್ತು ಭಾಷೆ’. ಎರಡು ವಿಭಾಗಗಳನ್ನು ಹೊಂದಿರುವ ಈ ಕಿರುಹೊತ್ತಿಗೆ ಬಳಸಿ (೪೯ ಪುಟಗಳು) ಇಪ್ಪತ್ತನೆ ಶತಮಾನದಲ್ಲಿ ಭಾಷಾಶಾಸ್ತ್ರದ ಶಿಸ್ತಿನಿಂದ ಸಾಹಿತ್ಯವನ್ನು ಅಭ್ಯಯಿಸುವ ಕ್ರಮವನ್ನು ಪರಿಚಯಿಸುತ್ತದೆ. ಸಾಹಿತ್ಯ ಭಾಷೆಯಲ್ಲೇ ಘಟಿಸುವ ಕ್ರಿಯೆಯಾದ್ದರಿಂದ ಭಾಷೆಯ ಸಾಧ್ಯ್ದತೆ, ಮತಿ ಎರಡೂ ಹೇಗೆ ಸಾಹಿತ್ಯವನ್ನು ಸೃಜಿಸುವಲ್ಲಿ ತಮ್ಮ ಅನನ್ಯತೆಯನ್ನು ಪಡೆದುಕೊಳ್ಳುತ್ತವೆ ಎಂಬುದು ಈ ಪುಸ್ತಕದ ವಸ್ತು. ಸಾಹಿತ್ಯವೆಂದರೆ ಭಾಷೆಯ ವಿಶಿಷ್ಟರೂಪ ಎಂಬ ನಿಲುವಿನಿಂದ ಶೈಲಿಶಾಸ್ತ್ರಾ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ನೆರವಾಗುತ್ತದೆಂದು ದೇಸಾಯರು ತೋರಿಸಲು ಪ್ರಯತ್ನಿಸಿದ್ದಾರೆ . ಸಾಹಿತ್ಯವೆಂಬುದು ಭಾಷಾಶಾಸ್ತ್ರದ ಅಧ್ಯಯನದ ಭಾಗವಾಗಬೇಕೆಂದು ಪ್ರತಿಪಾದಿಸುತ್ತಾರೆ.

ಕಾವ್ಯಾಭ್ಯಾಸದಲ್ಲಿ ಧ್ವನಿಪಾತಳಿ , ವ್ಯಾಕರಣಪಾತಳಿ, ಅರ್ಥಪಾತಳಿ , ಬರಹಪಾತಳಿಗಳು ಹೇಗೆ ಕವನಗಳ ಧ್ವನಿಯಲ್ಲಿ ಹಿಡಿಯುವ ಸಹಾಯ ಮಾಡುತ್ತದೆಂಬುದನ್ನು ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಎ.ಕೆ.ರಾಮಾನುಜನ್ ಇವರ ಪದ್ಯಗಳನ್ನು ವಿಶ್ಲೇಷಿಸಿ ತೋರಿಸಿದ್ದಾರೆ. ಕೊನೆಯಲ್ಲಿ ಯು.ಆರ್.ಅನಂತಮೂರ್ತಿ ಸಂಸ್ಕಾರ ಕಾದಂಬರಿಯ ಕೆಲುವು ತುಣುಕುಗಳನ್ನು ವಿಶ್ಲೇಷಿಸಿದ್ದಾರೆ.

ಎರಡನೇ ಉಪನ್ಯಾಸದಲ್ಲಿ ಲೇಖಕ-ಭಾಷೆ, ವಿಶ್ವಪ್ರಕೃತಿ-ಭಾಷೆ, ಐತಿಹಾಸಿಕ ಪ್ರತಿಕ್ರಿಯೆ ಭಾಷೆ ಈ ಎಲ್ಲಾ ಸಂದರ್ಭದಲ್ಲಿ ಸಾಹಿತ್ಯದ ಭಾಷೆಯನ್ನೂ ಪರೀಕ್ಷಿಸುವ ಯತ್ನ ನಡೆದಿದೆ.

ಮೊದಲ ಉಪನ್ಯಾಸದಲ್ಲಿ ಶೈಲಿಶಾಸ್ತ್ರವನ್ನು ಪರಿಚಯಿಸುವುದರಲ್ಲಿ ಆಗಿರುವ ಮೊದಲ ಲೋಪವೆಂದರೆ ಶೈಲಿಶಾಸ್ತ್ರದ ಮೂಲ ತತ್ವಗಳನ್ನು ಇಟ್ಟುಕೊಂಡು ಸಂಪೂರ್ಣವಾದ ಒಂದು ಪರಿಕಲ್ಪನೆಯನ್ನು ಕೊಡುವುದರಲ್ಲಿ ದೇಸಾಯರು ಸೋತಿರುವುದು . ಶೈಲಿಶಾಸ್ತ್ರದ ಮೊದಲು ರೂಪವಾದಿ ಸಿದ್ದಾಂತ (formalist – theory) ದ ಆಧಾರದ ಮೇಲೆ ಪ್ರಾರಂಭವಾಯಿತು.ಇದರ ಮೂಲತತ್ವ ಸಸ್ಯೂರನ ಭಾಷಾ ಸಿದ್ದಾಂತದ ತತ್ವವನ್ನು ಆಧರಿಸಿದೆ. ಭಾಷೆಯ ರೂಪವನ್ನು (form) ವಿಶ್ಲೇಷಿಸಿದರೆ ತನಗೆ ತಾನೇ ಅರ್ಥವನ್ನು ವಿಶ್ಲೇಷಿಸಿದಂತಾಗುತ್ತದೆ . ಕಾವ್ಯಭಾಷೆಯು ಅಷ್ಟೇ. ಅದರ ರೂಪವನ್ನುವಿಶ್ಲೇಷಿಸಿದರೆ ಅರ್ಥವನ್ನು ವಿಶ್ಲೇಷಿಸಿದಂತೆ ಎಂಬ ತಿಳುವಳಿಕೆ. ಕಾವ್ಯ, ಭಾಷೆಗೆ ದ್ರವ್ಯ ಆಡುಭಾಷೆಯಾದ್ದರಿಂದ ಕವಿ ಈ ಆಡುಭಾಷೆಯ ನಿಯಮವನ್ನು ಧ್ವನಿ, ಪದ, ವಾಕ್ಯ ಎಲ್ಲಾ ಸ್ಥರಗಳಲ್ಲಾಗಲಿ ಅಥವಾ ಒಂದೊಂದು ಸ್ಥರದಲ್ಲಾಗಲಿ ಮುರಿದು ಕೆಲವು ಗುಣಗಳನ್ನು ಮುನ್ನೆಲೆಗೆ (foregrounding) ತಂದು ಸಾಮಾನ್ಯ ಭಾಷೆಯಲ್ಲಿ ಸಾಧಾರಣವಾಗಿ ಕಾಣುವುದನ್ನು ಕಾವ್ಯಭಾಷೆಯಲ್ಲಿ ಅಸಾಧಾರಣವಾಗಿ (defermitionization) ಮಾಡುತ್ತಾನೆ. ಸಾಮಾನ್ಯ ಭಾಷಾನಿಯಮವನ್ನು ಕವಿ ಮುರಿದು ಹೊಸತನ್ನು ಸೃಷ್ಟಿಸುತ್ತಾನೆ. ಇದು ಕಾವ್ಯಭಾಷೆ ಪ್ರಮುಖ ಗುಣಗಳೆಂದು ಈ ರೂಪವಾದೀ ಭಾಷಾಶಾಸ್ತ್ರಾದ – ಶೈಲಿಶಾಸ್ತ್ರದ ಸಿದ್ದಾಂತ. ಇದನ್ನು ದೇಸಾಯರು ಎಲ್ಲೂ ವಿಶ್ಲೇಷಿಸಿ ತೋರಿಸುವುದಿಲ್ಲ.

ಅಂತೆಯೇ ಶೈಲಿಶಸ್ತ್ರದ ಮತ್ತೊಂದು ಕಾಣಿಕೆ ಎಂದರೆ ಕವಿಯು ತಮ್ಮ ನಿರ್ಮಿತಿಯಲ್ಲಿ ರೂಪಿಸುವ ಪದಗಳ ಆಯ್ಕೆ ಮತ್ತು ಸಂಯೋಜನೆ(selection and combination )ಯಾ ಕ್ರಿಯೆ. ಸಾಮಾನ್ಯ ಭಾಷೆಯಲ್ಲಿ ಸಂದೇಶ ಮುಖ್ಯವಾದರೆ ಕಾವ್ಯ ಭಾಷೆಯಲ್ಲಿ ಸಂದೇಶ ಗೌಣವಾಗಿ ಕಾವ್ಯಕ್ರಿಯೇ (poetic function) ಮುಖ್ಯವಾಗುವುದು.

ದೇಸಾಯರು ಆಯ್ಕೆ ಮಾಡಿಕೊಂಡಿರುವ ಪಾತಳಿಗಳನ್ನು ಶೈಲಿಶಾಸ್ತ್ರಗ್ನರಲ್ಲದವರು ತಮ್ಮ ವಿಶ್ಲೇಷಣೆಗಳಲ್ಲಿ ಬಳಸಿಕೊಂಡಿರುವುದನ್ನು ಕಾಣಬಹುದು. ಶ್ಲೇಷಾರ್ಥಗಳುಳ್ಳ ‘ನಾನು ಬಡವಿ’, ‘ಭೂತ’ ಕವನಗಳನ್ನು ಆಯ್ದುಕೊಂಡು ವಿಶ್ಲೇಷಿಸಿದ್ದಾರೆ. ಆ ಕವನದಲ್ಲೇ ಇರುವ ವಾಕ್ಯರಚನಾ ವಿಶೇಷಗಳ ಆಂತರಿಕ ವಿಶ್ಲೇಷಣೆಗೆ ಅವರು ಗಮನ ಕೊಡುವುದಿಲ್ಲ.

ಸಾಮಾನ್ಯವಾಗಿ ಒಂದು ಸಿದ್ದಾಂತವನ್ನು ಮಂಡಿಸುವಾಗ ಆ ಸಿದ್ದಾಂತದ ಮೂಲದಿಂದ ಅದರ ಶಕ್ತಿಯನ್ನು ತೋರಿಸಿಕೊಡುವುದರ ಮೂಲಕ ಸಾದರಪಡಿಸಬೇಕಾಗುತ್ತದೆ. ಹೀಗೆ ಮಾಡಿದಾಗ ಆ ಸಿದ್ದಾಂತದ ದೌರ್ಬಲ್ಯವನ್ನು ತೋರಿಸಬಹುದು. ಆದರೆ ದೇಸಾಯರು ಶೈಲಿಶಾಸ್ತ್ರದ ಸಿದ್ದಾಂತದಲ್ಲಿ ಶೈಲಿಶಾಸ್ತ್ರದ ಪಂಗಡಕ್ಕೆ ಸೇರದ ಸಿದ್ದಾಂತವನ್ನು ಬೆರೆಸಿಬಿಡುತ್ತಾರೆ .

ಶೈಲಿಶಾಸ್ತ್ರದ ಮತ್ತೊಂದು ಪ್ರಮುಖ ಕೊಡುಗೆಯೆಂದರೆ ಕಾದಂಬರಿ(ಕಥಾನಕ) ವಿಶ್ಲೇಷಣೆಗೆ ಇದು ಕೊಟ್ಟ ಒಟ್ಟು. ಇದರ ಪ್ರಕಾರ ಕಥಾನಕವೆಂದರೆ ಅದೊಂದು ‘ಮಹಾವ್ಯ’ ವಿದ್ದಂತೆ. ವಾಕ್ಯದಲ್ಲಿ ಯಾವ ಯಾವ ಗುಣಗಳಿರುತ್ತವೋ ಅವೆಲ್ಲ ಕಥಾನಕದಲ್ಲೂ ಇರುತ್ತದೆ ಎಂಬುದು.  ವಾಕ್ಯದಲ್ಲಿ ಏನನ್ನು ಕಾಣಲು ಸಾಧ್ಯವಿಲ್ಲವೋ ಅದನ್ನು ಕಥಾನಕಗಳಲ್ಲೂ ಕಾಣಲು ಸಾಧ್ಯವಿಲ್ಲ. ಕಥಾನಕದ ವ್ಯಾಕರಣ (Grammar of Narratives )ವನ್ನು ಶೈಲಿಶಾಸ್ತ್ರ ಅತ್ಯಂತ ಪ್ರಭಾವಿಯಾಗಿ ಮಂಡಿಸಿದೆ.

ಇದನ್ನೆಲ್ಲಾ ಸಂಕ್ಷಿಪ್ತವಾಗಿ ಸೂಚಿಸುತ್ತಿರುವೆದೇಕೆಂದರೆ ದೇಸಾಯರು ಈ ಉಪನ್ಯಾಸ ಕೊಡುವ ಹೊತ್ತಿಗೆ (೧೯೮೦) ಈ ಶೈಲಿ ಶಾಸ್ತ್ರ ಮತ್ತೊಂದು ಮಜಲಿಗಾಗಲೇ ದಾಟಿತ್ತು.

ಇನ್ನೊಂದು ಅಂಶವೆಂದರೆ ಶೈಲಿಶಾಸ್ತ್ರಗ್ನಲ್ಲದವನೂ ಈ ವಿಷಯವನ್ನು ಗಮನಿಸಿರುತ್ತಾನೆ. ಆದರೆ ಶೈಲಿಶಾಸ್ತ್ರಜ್ಞ ಕೇಳಲ ಆ ಪರಿಕಲ್ಪನೆಗಳಿಗೆ ‘ಗುರುತಿನ ಚೀಟಿ’(Label) ಹಚ್ಚುತ್ತಾನೆ ಎಂಬಂತಾಗದಿರಲಿ ಎಂಬುದರಿಂದ.

ಕನ್ನಡ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಶಾಂತಿನಾಥ ದೇಸಾಯರು ಈ ಶೈಲಿಶಾಸ್ತ್ರಕ್ಕೆ ಮುನ್ನುಡಿಯಾಗಿ ಕೊಟ್ಟ ಉಪನ್ಯಾಸ ಇಷ್ಟನ್ನು (ಇನ್ನೂ) ಹೇಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ.

Leave a Reply

Your email address will not be published. Required fields are marked *